ಖಳ ಹೃದಯ ಗಾನ
ವಯೋಲಿನ್ ನುಡಿಸಲು ಬಳಸುವ ಚಿಕ್ಕ ಬಿಲ್ಲಿನಂತಹ 'ಬೋ' ಅನ್ನು ಕಂಡುಹಿಡಿದವನು ಯಾರು ಗೊತ್ತೇ? ರಾಮಾಯಣದ ಖಳನಾಯಕ ರಾವಣನಂತೆ! ರಾವಣ ಒಬ್ಬ ಮಹಾನ್ ...
ವಯೋಲಿನ್ ನುಡಿಸಲು ಬಳಸುವ ಚಿಕ್ಕ ಬಿಲ್ಲಿನಂತಹ 'ಬೋ' ಅನ್ನು ಕಂಡುಹಿಡಿದವನು ಯಾರು ಗೊತ್ತೇ? ರಾಮಾಯಣದ ಖಳನಾಯಕ ರಾವಣನಂತೆ! ರಾವಣ ಒಬ್ಬ ಮಹಾನ್ ಸಂಗೀತಗಾರನಾಗಿದ್ದ. ಅದ್ಭುತ ವೀಣಾ ವಾದಕ ಅವನು. ಶಿವನನ್ನು ಕುರಿತು ತಪಸ್ಸು ಮಾಡುವಾಗ ತನ್ನ ದೇಹವನ್ನೇ ವೀಣೆಯಾಗಿಸಿ ನರನರಗಳನ್ನು ತಂತಿಯಂತೆ ಬಳಸಿ ಆ ನಾದದಿಂದ ಶಿವನನ್ನು ಪೂಜಿಸಿದ ನಾದ ತಪಸ್ವಿ ಆತ. ಇಷ್ಟೆಲ್ಲ ಓದಿದರೂ ರಾವಣ ಹಾಗೂ ಸಂಗೀತ ಎಂದರೆ ಮನಸ್ಸಿಗೆ ಸ್ವಲ್ಪ ಕಸಿವಿಸಿಯಾಗುತ್ತದೆ. ಏಕೆಂದರೆ ದುಷ್ಟತನ, ಖಳನಾಯಕ ವ್ಯಕ್ತಿತ್ವ ಹಾಗೂ ಸಂಗೀತವನ್ನು ಒಟ್ಟೊಟ್ಟಿಗೆ ನೋಡುವುದು ನಮ್ಮ ಮನಸ್ಸಿಗೆ ಸ್ವಲ್ಪ ಕಷ್ಟವೇ. ನಮ್ಮ ಯಾವ ಸಿನೆಮಾಗಳಲ್ಲಾದರೂ ನೋಡಿ. ವಿಲನ್ ಆದವನು ಅದ್ಭುತವಾಗಿ ಹಾಡಿದ್ದನ್ನು ನೋಡಿದ್ದೆವೆಯೇ? ಎಂದೂ ಇಲ್ಲ. ಅದೇನಿದ್ದರೂ ಹೀರೋ ಮಾತ್ರ. ಹಾಡುವುದು, ಮರ ಸುತ್ತುವುದು, ಅದ್ಭುತವಾಗಿ ಗಿಟಾರ್ ನುಡಿಸುವುದು, ಸಕಲ ಕಲೆಗಳಲ್ಲಿ ಪ್ರಾವೀಣ್ಯತೆ ಇರುವುದು ಹೀರೋಗೆ ಮಾತ್ರವೇ. ನಮ್ಮ ಕನ್ನಡದ ಪ್ರಖ್ಯಾತ ಖಳನಾಯಕ ವಜ್ರಮುನಿಯೋ ಅಥವಾ ಹಿಂದಿಯ ಪ್ರಾಣ್, ಅಮರೀಶ್ ಪುರಿ ಕಣ್ಣನ್ನು ಕೆಂಡದಂತೆ ಮಾಡಿ ಕ್ರೌರ್ಯವನ್ನು ತೋರಿಸಿ ಹಾಗೆಯೇ ಇತ್ತ ಕುಳಿತು ವೀಣೆಯೋ, ಗಿಟಾರನ್ನೋ ನುಡಿಸುವುದನ್ನೋ ಅಥವಾ ಹಾಡು ಹಾಡುವುದನ್ನೋ ನಾವು ಕಲ್ಪಿಸಿಕೊಳ್ಳಲೂ ಕಷ್ಟ. ಆದರೆ ರಾಮಾಯಣದಲ್ಲಿ ವಿರುದ್ಧ. ರಾವಣ ವೀಣಾ ವಾದಕ- ಸಂಗೀತಗಾರ. ಆದರೆ ಅವನು ಹೀರೋ ಅಲ್ಲ. ಪರಸ್ತ್ರೀ ಅಪಹರಣ ಮಾಡುವ ರಾಕ್ಷಸ. ರಾಮಾಯಣ ಓದಿದಾಗ ಹೀಗನ್ನಿಸಿದ್ದಂತೂ ನಿಜ. ಆದರೆ ಇತಿಹಾಸದಲ್ಲಿನ ಅನೇಕ ಕಲಾವಿದರ ಜೀವನವನ್ನು ಅವಲೋಕಿಸಿದಾಗ ಅದ್ಭುತ ಕಲಾವಿದನಾದರೂ ಮಾನವತೆಯಿಂದ ಅಧಮ ರಾಕ್ಷಸೀ ಪ್ರವ್ರತ್ತಿಗೆ ಇಳಿದು ನಾಶಗೊಂಡ ಅನೇಕ ಕಲಾವಿದರ ಉದಾಹರಣೆಗಳಿವೆ. ಏಕೆಂದರೆ ಸಂಗೀತ ಎಂಬ ಸಿದ್ಧಿಯನ್ನು ಕಷ್ಟಪಟ್ಟು ಗಳಿಸಿಕೊಂಡಾದ ಮೇಲೆ ಅದನ್ನು ಬಳಸುವಾಗ ಒಳಗಿನ ಹಮ್ಮು, ರಾಕ್ಷಸೀ ಪ್ರವೃತ್ತಿ ಮೇಲೆದ್ದು ಬಂದು ಕ್ರಮೇಣ ಅದು ಅವನನ್ನೇ ನಾಶಮಾಡಿದೆ. ಯಾವ ಸಿದ್ಧಿಯ ವಿಷಯದಲ್ಲಾದರೂ ಇದು ಹೀಗೆ ಅಲ್ಲವೇ? ಸಂಗೀತ ಹೃದಯದ ವಿಷಯ. ಆದರೆ 'ಪ್ರೀತಿ' ಹೇಗೆ ಹೃದಯದ ಅವಿನಾಭಾವ ಅಂಶವೋ 'ದ್ವೇಷ'ವೂ ಅದರ ಭಾಗವೇ. ಒಳ್ಳೆಯ ಹಾಗೂ ಕೆಟ್ಟ ಎಂಬ ಎರಡೂ ಭಾವನೆಗಳೂ ಹುಟ್ಟುವುದು ಅಲ್ಲೇ. ಶೃಂಗಾರ, ಹಾಸ್ಯ, ಕರುಣದಂತೆ ಭೀಭತ್ಸ, ಭಯಾನಕ ಇವೂ ರಸಗಳೇ.
ಈ ಎಲ್ಲ ಕಾರಣದಿಂದಲೋ ಏನೋ ವೇದ ಕಾಲದಲ್ಲಿ ಸಂಗೀತ ಕೇವಲ ಪೂಜೆ, ಯಜ್ಞದ ಅಂದರೆ ವರ್ಣ್ಣಾಶ್ರಮಗಳಲ್ಲಿ ಬ್ರಾಹ್ಮಣರ ಸ್ವತ್ತಾಗಿತ್ತು. ಕೇವಲ ಭಗವಂತನ ಆರಾಧನೆಗಾಗಿ ಬಳಸಲ್ಪಡುತ್ತಿತ್ತು. ರಾಮಾಯಣ ಕಾಲದಲ್ಲೂ ಹೀಗೆಯೇ. ರಾಮಾಯಣದಲ್ಲಿ ರಾವಣನಂತೆ ಸುಗ್ರೀವನೂ ಮಹಾನ್ ಸಂಗೀತಗಾರನಾಗಿದ್ದ. ರಾಮಾಯಣ ಕಾಲದಲ್ಲಿ ಸಂಗೀತ ಅಪಾರ ಸಾಧನೆಯ, ಸಿದ್ಧಿಯ ಅಂಶವಾಗಿತ್ತು.
(ಮುಂದುವರಿಯುವುದು)
- ಶ್ರುತಿ ಭಟ್
shrutikbhat@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.