ಗುಹೆ ಗಾನ
ಮಹಾರಾಷ್ಟ್ರದ ಮುಂಬೈ- ಪುಣೆ ಎಕ್ಸ್ಪ್ರೆಸ್ ಹೈವೆಯಲ್ಲಿರುವ ಖಂಡಾಲಾ ಘಾಟಿ ಬಹಳ ಜನಪ್ರಿಯ. ಈ ಘಾಟಿಯ ಸುಂದರ ದೃಶ್ಯಗಳು, ಸುರಂಗ ಮಾರ್ಗಗಳು ಹಾಗೂ ಅದಕ್ಕೆ ...
ಮಹಾರಾಷ್ಟ್ರದ ಮುಂಬೈ- ಪುಣೆ ಎಕ್ಸ್ಪ್ರೆಸ್ ಹೈವೆಯಲ್ಲಿರುವ ಖಂಡಾಲಾ ಘಾಟಿ ಬಹಳ ಜನಪ್ರಿಯ. ಈ ಘಾಟಿಯ ಸುಂದರ ದೃಶ್ಯಗಳು, ಸುರಂಗ ಮಾರ್ಗಗಳು ಹಾಗೂ ಅದಕ್ಕೆ ಸಂಬಂಧಿಸಿದಂತಿರುವ 'ಆತೀ ಕ್ಯಾ ಖಂಡಾಲಾ' ಎನ್ನುವ ಹಿಂದಿ ಹಾಡು, ಹಾಗೆಯೇ ರುಚಿಯಾದ ಲೋನಾವಾಲ ಚಿಕ್ಕಿ ಇತ್ಯಾದಿಗಳ ಬಗ್ಗೆ ಕೇಳದವರು ಕಡಿಮೆ. ಆದರೆ, ಖಂಡಾಲಾ ಘಾಟಿಯ ಲೋನಾವಾಲಾದ ಬಳಿ ಇರುವ ಕಾರ್ಲಾ- ಭಾಜಾ ಗುಹೆಗಳ ಬಗ್ಗೆ ನಾನಂತೂ ಕೇಳಿರಲಿಲ್ಲ. ಇತ್ತೀಚೆಗೆ ಆ ಭಾಗಕ್ಕೆ ಭೇಟಿ ಕೊಟ್ಟಾಗ ಅವನ್ನು ನೋಡುವ ಅವಕಾಶ ಸಿಕ್ಕಿತು. 2200 ವರ್ಷಗಳಷ್ಟು ಪುರಾತನ ಇತಿಹಾಸ ಈ ಗುಹೆಗಳದ್ದು.
ಪುಣೆಯಿಂದ 60 ಕಿ.ಮೀ., ಮುಂಬೈನಿಂದ 120 ಕಿ.ಮೀ ಹಾಗೂ ಲೋನಾವಾಲದಿಂದ 10 ಕಿ.ಮೀ ದೂರದಲ್ಲಿರುವ ಕಾರ್ಲಾ ಗುಹೆಗಳು ಕ್ರಿ.ಪೂ. 2ನೇ ಶತಮಾನದಲ್ಲಿ ಶಾತವಾಹನರ ಕಾಲದಲ್ಲಿ ನಿರ್ಮಾಣಗೊಂಡವು. ಇವು ಬೌದ್ಧರ ಗುಹಾಂತರ ದೇಗುಲಗಳು. ವ್ಯಾಪಾರ ಹಾಗೂ ಧರ್ಮ ಪ್ರಚಾರಕ್ಕಾಗಿ ದೇಶದ ಉದ್ದಗಲ ಸಂಚರಿಸುತ್ತಿದ್ದ ಬೌದ್ಧಭಿಕ್ಷುಗಳಿಗೆ ಈ ಸ್ಥಳ ತಂಗುದಾಣ ಹಾಗೂ ಧ್ಯಾನಕ್ಕಾಗಿ ಬಳಸುತ್ತಿದ್ದ ವಿಹಾರವಾಗಿತ್ತು.
ಕಾರ್ಲಾ ಗುಹೆಗಳನ್ನು ತಲುಪಲು ವಾಹನ ನಿಲುಗಡೆಯ ಜಾಗದಿಂದ ಕಡಿದಾದ ಬೆಟ್ಟವನ್ನೇರಿ 20 ನಿಮಿಷ ಕಾಲ್ನಡಿಗೆಯಲ್ಲಿ ಸಾಗಬೇಕು. ಮೆಟ್ಟಿಲುಗಳಿರುವುದರಿಂದ ಬೆಟ್ಟ ಏರುವುದು ಕಷ್ಟವೇನಲ್ಲ. ಬೃಹತ್ ಬೆಟ್ಟದ ಬಂಡೆಗಳನ್ನು ಕೊರೆದು ಇಲ್ಲಿನ ಗುಹಾಂತರ ದೇಗುಲಗಳನ್ನು ನಿರ್ಮಿಸಿಲಾಗಿದೆ. ಕಾರ್ಲಾ ಗುಹೆಗಳಲ್ಲಿ 45 ಮೀ. ಉದ್ದದ ಹಾಗೂ 14 ಮೀ. ಎತ್ತರದ ಪ್ರಾರ್ಥನಾ ಚೈತ್ಯಗೃಹವಿದೆ. ಇದಕ್ಕೆ 15 ಮೀ. ಎತ್ತರದ ಮಹಾಸ್ತಂಭಗಳ ಆಧಾರ ಒದಗಿಸಲಾಗಿದೆ. ಸಿಂಹಗಳಿರುವ ಆಸನವನ್ನೇರಿ ಧ್ಯಾನಸ್ಥ ಭಂಗಿಯಲ್ಲಿರುವ ಬುದ್ಧದೇವನ ಬೃಹದಾಕಾರದ ಶಿಲ್ಪ ಇಲ್ಲಿದೆ. ಮುಂಭಾಗದಲ್ಲಿ ಆನೆ, ಸಿಂಹ, ಪುರುಷ, ಮಹಿಳೆಯರ ಕೆತ್ತನೆಯ ಶಿಲ್ಪಗಳನ್ನು ಕಾಣಬಹುದು. ಚೈತ್ಯಗೃಹದ ಚಾವಣಿಗೆ ಕುದುರೆ ಲಾಳಾಕೃತಿಯ ಬೃಹತ್ ಮರದ ಕಮಾನುಗಳ ಆಧಾರ ಒದಗಿಸಲಾಗಿದೆ. ಹೊರಭಾಗದಲ್ಲಿರುವ ಎರಡು ಅಶೋಕ ಸ್ತಂಭಗಳಲ್ಲಿ ಒಂದನ್ನು ಮಾತ್ರ ಈಗ ನೋಡಬಹುದು. ಇನ್ನೊಂದರ ಜಾಗದಲ್ಲಿ ಏಕ ವೀರಾದೇವಿಯ ಮಂದಿರ ನಿರ್ಮಾಣವಾಗಿದೆ. ಈ ಮಂದಿರ ಅಲ್ಲಿನ ಕೋಲಿ ಜನಾಂಗದವರ ಪವಿತ್ರ ಯಾತ್ರಾ ಸ್ಥಳ.
ಕಾರ್ಲಾ ಗುಹೆಗಳಿಂದ ಕೇವಲ 7 ಕಿ.ಮೀ. ದೂರದಲ್ಲಿದೆ ಈ ಭಾಜಾ ಗವಿಗಳು. ಇಲ್ಲಿಯೂ 400 ಅಡಿಗಳ ಎತ್ತರದಲ್ಲಿ ಬೆಟ್ಟ ಕೊರೆದು ಚೈತ್ಯಗೃಹ ನಿರ್ಮಿಸಲಾಗಿದೆ. 250 ಮೆಟ್ಟಿಲುಗಳ ಸುಂದರ ಬೆಟ್ಟವನ್ನೇರಿದರೆ ಸಿಗುವ ಭಾಜಾ ಗುಹೆಗಳನ್ನೂ ಬೃಹತ್ ಬಂಡೆಗಳನ್ನು ಕೊರೆದು ನಿರ್ಮಿಸಲಾಗಿದೆ. ಇದೂ ಕ್ರಿ.ಪೂ. 2ನೇ ಶತಮಾನದಲ್ಲಿ ಹೀನಾಯಾನ ಬುದ್ಧರ ನಿರ್ಮಾಣ ಎಂದು ಇತಿಹಾಸ ಹೇಳುತ್ತದೆ. ಚೈತ್ಯಗೃಹದ ಒಳಗೆ 3.5 ಮೀಟರ್ ಎತ್ತರದ ಸ್ತೂಪವಿದೆ. ಇದೇ ರೀತಿಯ ಸ್ವಲ್ಪ ಚಿಕ್ಕ ಗಾತ್ರದ ಇನ್ನೂ 13 ಸ್ತೂಪಗಳು ಇಲ್ಲಿವೆ. ಇವು ಬೌದ್ಧ ಸನ್ಯಾಸಿಗಳ ಸಮಾಧಿಗಳು. ಈ ಸ್ತೂಪದ ಮೇಲ್ಭಾಗದಲ್ಲಿ ಆಯಾ ಬೌದ್ಧ ಸನ್ಯಾಸಿಗಳ ಚಿತಾ ಭಸ್ಮಗಳನ್ನು ಇಡಲಾಗುತ್ತಿತ್ತು. ಈಗಲೂ ಬೌದ್ಧರು ಇಲ್ಲಿ ಸ್ತೂಪಗಳನ್ನು ಪೂಜಿಸುತ್ತಾರೆ.
ಪ್ರಕೃತಿಮಾತೆಯ ಮಡಿಲಲ್ಲಿ, ಹಸಿರು ಬೆಟ್ಟಗಳ ಸಾನಿಧ್ಯವನ್ನು ಸವಿಯುತ್ತಾ, ಮೈಮನ ದಣಿಯುವಂತೆ ಚಾರಣ ಮಾಡಿ. 2200 ವರ್ಷಗಳ ಹಿಂದೆ ನಮ್ಮ ಸಾಹಸಿ ಪೂರ್ವಿಕರು ನಿರ್ಮಿಸಿದ ಕಾರ್ಲಾ-ಭಾಜಾ ಗುಹೆಗಳ ಭವ್ಯತೆಯನ್ನು ನೋಡಿ. ಇತಿಹಾಸದ ಪುಟಗಳನ್ನು ತಿರುವಿ ಹಾಕಿದಾಗ ರಜೆಯ ಮಜವು ನಿಜಕ್ಕೂ ಸ್ಮರಣೀಯವೆನಿಸುತ್ತದೆ.ಟಿ
- ಎಚ್.ಎಸ್. ನವೀನಕುಮಾರ್ ಹೊಸದುರ್ಗ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.