ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ವೈದ್ಯವೃತ್ತಿಗೇ ಶಸ್ತ್ರಚಿಕಿತ್ಸೆ

Rashmi Kasaragodu
Updated On : 26 Oct 2013, 5:32 am

ಮಹಾನಗರವೊಂದರ, ಅದು ಬೆಂಗಳೂರೂ ಆಗಿಬಹುದು, ವೈದ್ಯಕೀಯ ಕಾಲೇಜಿನಲ್ಲಿ ನಡೆಯುವ ಘಟನಾವಳಿಗಳನ್ನು ಹೊಂದಿರುವ 'ವೈದ್ಯ ಪಥದಲ್ಲಿ... ಮೊದಲ ಹೆಜ್ಜೆ' ಕಾದಂಬರಿಯನ್ನು ಬರೆದವರು ಸ್ವತಃ ವೈದ್ಯರೂ ಆಗಿರುವ ಡಾ. ಸಚ್ಚಿದಾನಂದ ಮೂರ್ತಿಯವರು. ವೈದ್ಯಕೀಯ ಕ್ಷೇತ್ರದಲ್ಲಿ ನಡೆಯುವ ವಸ್ತುವನ್ನು ಇಟ್ಟುಕೊಂಡು ಕನ್ನಡದಲ್ಲಿ ಬಂದಿರುವ ಕಾದಂಬರಿಗಳು ಕಡಿಮೆ. ವೈದ್ಯರೇ ಸಾಹಿತಿಗಳಾಗಿದ್ದವರು ಬರೆದ ವೈದ್ಯಕೀಯ ವಸ್ತುವನ್ನು ಹೊಂದಿರುವ ಕತೆ-ಕಾದಂಬರಿಗಳು ಬಂದಿದ್ದರೂ ಅವು ಯಾವುದೋ ಒಂದು ಕಾಯಿಲೆಯೋ, ಮಾನಸಿಕ ಸಮಸ್ಯೆಯನ್ನು ಕುರಿತೋ ಇರುತ್ತಿದ್ದುದೇ ಹೆಚ್ಚು. ಆದರೆ ಈ ಕಾದಂಬರಿಯು ವೈದ್ಯಕೀಯ ಕ್ಷೇತ್ರಕ್ಕೇ ಅಂಟಿದ ಕ್ಯಾನ್ಸರ್ ಕುರಿತು ಹೇಳುತ್ತದೆ.
ಹಾವೇರಿಯ ಕಡೆಯ ಹಳ್ಳಿಯಿಂದ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದ ಹುಡುಗ ಮೃತ್ಯುಂಜಯ ಎಂಬಿಬಿಎಸ್ ಮಾಡಲು ಆ ಮಹಾನಗರಿಯ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಸೇರ್ಪಡೆಯಾಗುತ್ತಾನೆ. ಆತನಿಗೆ ಸ್ನೇಹಿತೆಯಾಗಿ ಸಿಗುವವಳು ಆ ಕಾಲೇಜಿನ ಪ್ರಿನ್ಸಿಪಾಲೆಯ ಮಗಳಾದ ಮೃದುಲಾ. ಈ ಮೃದುಲಾಳನ್ನು ಪ್ರತಿಸ್ಪರ್ಧಿಯಂತೆ ಕಂಡು ದ್ವೇಷಿಸುವವಳು ನಮ್ರತಾ. ಈ ನಮ್ರತಾ ಸಿಗರೇಟು ಸೇದುವವಳು, ಮದ್ಯಪಾನ ಮಾಡುವವಳು, ಕೊನೆಗೆ ಡ್ರಗ್ಸ್ ಸೇವನೆಯ ಚಟಕ್ಕೆ ಬೀಳುವವಳು ಮತ್ತು ಸಲಿಂಗ ಕಾಮಿಯಾಗುವವಳು.
ಈ ಕಾಲೇಜಿನಲ್ಲಿ ಒಬ್ಬರ ಕಾಲನ್ನು ಒಬ್ಬರು ಎಳೆಯುವ ಪ್ರಾಧ್ಯಾಪಕರ ಗುಂಪೂ ಇದೆ. ವಿದ್ಯಾರ್ಥಿಗಳ ಹಿತ ಬಯಸುವ ಡಾ. ವಿಜಯಾದಿತ್ಯನಂಥ ಮತ್ತು ಡಾ. ಸೌಜನ್ಯಾಳಂಥ ಪ್ರಾಮಾಣಿಕ ಪ್ರೊಫೆಸರ್ ಕೂಡ ಇದ್ದಾರೆ. ಇಂಥವರನ್ನು ನಿಯಂತ್ರಿಸಿ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳಲು ಯತ್ನಿಸುವ ಆರೋಗ್ಯ ಸಚಿವ ಮಹೇಶ್ವರಪ್ಪ ಉಳ್ಳಾಗಡ್ಡಿ, ಶಾಸಕ ಷಡಕ್ಷರಪ್ಪ ಮಳವಳ್ಳಿ, ಮೇಲಿನ ಹುದ್ದೆಗೇರಲು ಏನುಬೇಕಾದರೂ ಮಾಡಲು ಸಿದ್ಧನಿದ್ದ ಡಾ. ಶಿವಬಸಪ್ಪ, ಹೆಣ್ಣಿನ ಹಿಂದೆ ಬೀಳುವ ವೈದ್ಯ ಡಾ. ಪ್ರದೀಪ್ ಮೊದಲಾದವರೂ ಅಲ್ಲಿದ್ದಾರೆ.
ಈ ಷಡಕ್ಷರಪ್ಪ ಎಂಥವನೆಂದರೆ ಅದೇ ಕಾಲೇಜಿನಲ್ಲಿ ಓದುತ್ತಿದ್ದ ತನ್ನ ಮಗನಿಗೇ ಪಿಂಪ್ ಆಗುವ ಮಟ್ಟಕ್ಕೂ ಇಳಿಯುವವನು. ಬೇರೆಯವರು ಪ್ರಶ್ನೆಪತ್ರಿಕೆ ಬರೆದೇ ಅವನು ಎಂಬಿಬಿಎಸ್ ಸೇರಿದ್ದು. ಕಾಲೇಜಿನ ಚುನಾವಣೆಯಲ್ಲಿ ಮಗನ ಪರವಾಗಿ ತಂತ್ರಗಳನ್ನು ಹೆಣೆಯುವವನು. ಅಷ್ಟಾಗಿಯೂ ಚುನಾವಣೆಯಲ್ಲಿ ಮಗನನ್ನು ಗೆಲ್ಲಿಸಲು ಅವನಿಗೆ ಆಗುವುದಿಲ್ಲ. ಹಾಸ್ಟೆಲ್‌ನಲ್ಲಿ ಅವನ ಮಗ ಸ್ನೇಹಿತರ ರೂಮು ಸೇರಿಕೊಂಡು ಗಾಂಜಾ ಸೇದುವುದು, ಕುಡಿಯುವುದು ಇತ್ಯಾದಿ ಮಾಡುತ್ತಿದ್ದ. ಕಾಲೇಜಿನಲ್ಲಿಯೇ ಸ್ತ್ರೀಸಂಗವನ್ನೂ ಮಾಡುವವನು. ಅದನ್ನು ನೋಡಿಯೂ ತಮ್ಮ ಸ್ಥಾನಕ್ಕೆ ಚ್ಯುತಿ ಬರುವುದೆಂದು ಸುಮ್ಮನಿರುವ ನೌಕರರು.
ಡಾ. ರಂಗರಾಜನ್ ಎಂಬವನು ತುಂಬ ಕಷ್ಟದಲ್ಲಿ ಓದಿ ಮೇಲೆ ಬಂದವನು. ವೈದ್ಯಕೀಯದಲ್ಲಿ ಪದವಿ ಪಡೆದು ಶ್ರೀಮಂತನ ಏಕೈಕ ಪುತ್ರಿಯನ್ನು ಮದುವೆಯಾಗಿ ಸ್ವಂತ ಆಸ್ಪತ್ರೆಯನ್ನು ಸ್ಥಾಪಿಸುವ ಕನಸು ನನಸು ಮಾಡಿಕೊಂಡವನು. ಅವನದು ಆರ್.ಕೆ. ನರ್ಸಿಂಗ್ ಹೋಂ. ಅವನ ಪತ್ನಿ ಕೂಡ ವೈದ್ಯೆ. ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಮಗಳೂ ವೈದ್ಯರು. ಅಳಿಯ ಮತ್ತು ಸೊಸೆಯಂದಿರೂ ವೈದ್ಯರೂ. ಅವರೆಲ್ಲ ವೈದ್ಯಕೀಯದ ಒಂದೊಂದು ವಿಷಯದಲ್ಲಿ ಪದವಿ ಪಡೆದವರು. ಸಾಯುತ್ತಿದ್ದ ರೋಗಿಯನ್ನು ಹಣ ಕಟ್ಟದ ಹೊರತು ಆಸ್ಪತ್ರೆಯ ಒಳಗೆ ಸೇರಿಸದಂಥ ಕಠಿಣ ಹೃದಯ ಡಾ. ರಂಗರಾಜನ್ ಅವರದು. ಈ ಪಾತ್ರದ ಮೂಲಕ ಖಾಸಗಿ ಆಸ್ಪತ್ರೆಗಳು ಹೇಗೆ ಜನರನ್ನು ಸುಲಿಯುತ್ತವೆ, ಅನಗತ್ಯವಾದ ಪರೀಕ್ಷೆಗಳನ್ನು ಮಾಡಿಸುತ್ತವೆ, ತಮ್ಮ ಆಸ್ಪತ್ರೆಗೆ ರೋಗಿಗಳನ್ನು ಸೆಳೆದುಕೊಳ್ಳಲು ಬೇರೆ ಆಸ್ಪತ್ರೆಗಳ ಸಿಬ್ಬಂದಿಯನ್ನೇ ಹೇಗೆ ಬಳಸಿಕೊಳ್ಳುತ್ತವೆ ಎಂಬುದನ್ನೆಲ್ಲ ಲೇಖಕರು ವಿವರಿಸಿದ್ದಾರೆ.
ಇನ್ನು ಈ ರಂಗರಾಜನ್ ಕಿರಿಯ ಸೊಸೆ ವಿದ್ಯಾಗೆ ಮಾವನ ಹಣದ ದುರಾಸೆ ಸೇರುವುದಿಲ್ಲ. ಇವರ ಆಸ್ಪತ್ರೆಯಲ್ಲಿ ಸೇರಿಸಿಕೊಳ್ಳದ ಹೃದಯಾಘಾತವಾದ ರೋಗಿ ಸರ್ಕಾರಿ ಆಸ್ಪತ್ರೆಯಲ್ಲಿ ಸೇರಿ ಚೇತರಿಸಿಕೊಳ್ಳುತ್ತಾನೆ. ಆ ಆಸ್ಪತ್ರೆಯಲ್ಲಿಯೇ ವಿದ್ಯಾ ಎಂ.ಡಿ. ಅಭ್ಯಾಸ ಮಾಡುತ್ತಿರುತ್ತಾಳೆ. ಡಾ. ವಿಜಯಾದಿತ್ಯ ಈ ಪ್ರಕರಣ ಬಗ್ಗೆ ಅವಳಲ್ಲಿ ವಿಚಾರಿಸುತ್ತಾನೆ. ಅವಳು ತಮ್ಮ ಮಾವನ ಹಣದ ದಾಹವನ್ನು ಹೇಳುತ್ತಾಳೆ. ತನಗೆ ಅದು ಇಷ್ಟವಾಗುವುದಿಲ್ಲ ಎಂದೂ ಹೇಳುತ್ತಾಳೆ. ಮನೆಯಲ್ಲಿ ಅವಳು ಮಾವನೊಂದಿಗೆ ಈ ವಿಷಯದಲ್ಲಿ ವಾದ ಮಾಡುತ್ತಾಳೆ. ತನ್ನ ಸೊಸೆ ತನ್ನ ವಿರುದ್ಧ ಆಡುವುದಕ್ಕೆ ವಿಜಯಾದಿತ್ಯನೇ ಕಾರಣ ಎಂದು ಅರಿತು ಆತನ ಯುನಿಟ್‌ನಲ್ಲಿದ್ದ ವಿದ್ಯಾಳನ್ನು ಡಾ. ಶಿವಬಸಪ್ಪನ ಯುನಿಟ್‌ಗೆ ಶಿಫ್ಟ್ ಮಾಡಿಸುತ್ತಾನೆ ರಂಗರಾಜನ್. ವಿದ್ಯಾ ಮತ್ತು ವಿಜಯಾದಿತ್ಯರ ನಡುವೆ ಅನೈತಿಕ ಸಂಬಂಧವಿದೆ ಎಂಬ ಆರೋಪವನ್ನೂ ಡಾ. ಶಿವಬಸಪ್ಪನ ಮೂಲಕ ರಂಗರಾಜನ್ ಮಾಡಿಸುತ್ತಾನೆ. ತನ್ನ ಇಷ್ಟದಂತೆ ಆಗಲು ಆತ ಯಾವ ಪಾತಾಳಕ್ಕೂ ಇಳಿಯಬಲ್ಲ. ಡಾ. ಶಿವಬಸಪ್ಪ ಅವರನ್ನು ಅಧೀಕ್ಷಕ ಹುದ್ದೆಗೆ ತರಲು ಆ ಹುದ್ದೆಯಲ್ಲಿದ್ದ ಪ್ರಾಮಾಣಿಕ ವೈದ್ಯ ಡಾ. ರಾಜಶೇಖರ ಪಾಟೀಲರ ಮೇಲೆ ಸುಳ್ಳೇ ಅಪವಾದ ಹೊರಿಸಿ ಲೋಕಾಯುಕ್ತರಿಂದ ದಾಳಿ ಮಾಡಿಸಿ ಜೈಲಿಗೂ ಕಳಿಸುತ್ತಾನೆ ಆತ. ವಿದ್ಯಾ ಇದೆಲ್ಲದರಿಂದ ನೊಂದು ಗಂಡನಿಗೆ ವಿಚ್ಛೇದನ ನೀಡಿ ವಿಜಯಾದಿತ್ಯನ ಬಳಿಗೆ ಹೋಗಬೇಕು ಎಂದು ಬಯಸುತ್ತಾಳೆ. ವಿಜಯಾದಿತ್ಯನ ಪತ್ನಿ ಮತ್ತು ಪುತ್ರಿ ಅಪಘಾತದಲ್ಲಿ ತೀರಿ ಹೋಗಿದ್ದರಿಂದ ಆತ ಒಂಟಿಯಾಗಿದ್ದ. ಆದರೆ ಆತ ವಿದ್ಯಾಳ ಯೋಚನೆಗಳಿಗೆ ಪ್ರೋತ್ಸಾಹ ನೀಡುವುದಿಲ್ಲ.
ಈ ಕಾದಂಬರಿಯ ಇನ್ನೊಂದು ಎಳೆ ಔಷಧ ಕಂಪನಿಗಳದ್ದು. ಭ್ರಷ್ಟ ವೈದ್ಯರ ಸಹಯೋಗದೊಂದಿಗೆ ಕಡಿಮೆ ಬೆಲೆಯ ಔಷಧಗಳ ಬದಲಿಗೆ ಹೆಚ್ಚಿನ ಬೆಲೆಯ ಔಷಧಗಳನ್ನು ಅವು ಹೇಗೆ ಮಾರುಕಟ್ಟೆಯಲ್ಲಿ ಮಾರುತ್ತವೆ ಎಂಬುದನ್ನೂ ಇಲ್ಲಿ ಹೇಳಿದ್ದಾರೆ. ಸೂಕ್ತ ಪರೀಕ್ಷೆಗೆ ಒಳಪಡಿಸದೆ ಔಷಧಗಳನ್ನು ಮನುಷ್ಯರ ಮೇಲೆ ಪ್ರಯೋಗಿಸುವುದರ ಅಪಾಯವನ್ನೂ ಲೇಖಕರು ಹೇಳಿದ್ದಾರೆ.
ಈ ಕಾದಂಬರಿಯಲ್ಲಿ ಓದುಗರಿಗೆ ಭಾರವಾಗದಂತೆ ಹಲವು ವೈದ್ಯಕೀಯ ವಿವರಗಳನ್ನು ಲೇಖಕರು ನೀಡಿದ್ದಾರೆ. ಕತೆಯೊಂದರ ಭಾಗವಾಗಿರುವುದರಿಂದ ಅವು ಬೋರ್ ಹೊಡೆಸುವುದಿಲ್ಲ. ವೈದ್ಯರೊಬ್ಬರು ಬರೆದಿರುವುದರಿಂದ ಅವೆಲ್ಲ ಕಲ್ಪನೆಗಳಾಗದೆ ವಾಸ್ತವವೇ ಆಗಿರುವದಿಂದ ಓದುಗರ ವೈದ್ಯಕೀಯ ಜ್ಞಾನವೂ ಹೆಚ್ಚುತ್ತದೆ. ಹಲವು ಕ್ರೂರ ತಿರುವುಗಳೂ ಇಲ್ಲಿವೆ. ಡಾ. ವಿಜಯಾದಿತ್ಯ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಯುತ್ತದೆ. ಕಾಲೇಜಿನಲ್ಲಿ ನಡೆಯುವ ರ್ಯಾಗಿಂಗ್ ಚಿತ್ರಣವಿದೆ. ಪ್ರೊಫೆಸರ್‌ಗಳ ಚಾರಿತ್ರ್ಯಹರಣ ಮಾಡುವ ಕುತಂತ್ರಗಳಿವೆ. ಜೊತೆಗೆ ಪರರ ಕಷ್ಟಕ್ಕೆ ಮರುಗುವ ಮನುಷ್ಯತ್ವ ಹೊಂದಿದ ವ್ಯಕ್ತಿಗಳೂ ಇದರಲ್ಲಿದ್ದಾರೆ. ಹೆಣ್ಣು-ಗಂಡಿನ ಸಂಬಂಧ ಕಾಮದ ನೆಲೆಯಲ್ಲಿಯೇ ಅರಳಬೇಕಾಗಿಲ್ಲ, ಸಹೋದರ ಸಹೋದರಿಯರ ನೆಲೆಯಲ್ಲೂ ಅರಳಬಹುದು ಎಂಬುದನ್ನು ನಿರೂಪಿಸುವ ಪಾತ್ರಗಳೂ ಇಲ್ಲಿವೆ.
ವೈದ್ಯೋ ನಾರಾಯಣೋ ಹರಿಃ ಎಂಬ ಮಾತಿದೆ. ಪ್ರಾಣ ಉಳಿಸುವ ವೈದ್ಯರು ದೇವರಿಗೆ ಸಮಾನ ಎಂಬುದು ಅದರ ಅರ್ಥ. ಆದರೆ ಈ ಪವಿತ್ರವಾದ ವೃತ್ತಿ ಹೇಗೆ ಕೆಟ್ಟುಹೋಗಿದೆ ಎಂಬುದನ್ನು ಹೇಳುತ್ತ ಅದರಲ್ಲಿಯ ಸತ್ವವನ್ನೂ ಮುಕ್ಕಾಗಿಸದೆ ಕಟ್ಟಿಕೊಟ್ಟಿರುವುದು ಈ ಕಾದಂಬರಿಯ ಹೆಗ್ಗಳಿಕೆ.
ಕೃತಿ: ವೈದ್ಯ ಪಥದಲ್ಲಿ ಮೊದಲ ಹೆಜ್ಜೆ
ಪ್ರಕಾರ: ಕಾದಂಬರಿ
ಏಕೆ ಓದಬೇಕು: ವೈದ್ಯಕೀಯ ಲೋಕ ಅರಿಯಲು
ಪ್ರ:ಸಂವಹನ, ಮೈಸೂರು, ಪುಟಗಳು 376, ಬೆಲೆ ರು. 250

===

ಚರಿತ್ರೆಯ ಮೇಲೊಂದು ಚಕ್ಷು
ತೆಲುಗು ಪತ್ರಿಕಾರಂಗದಲ್ಲಿ ಬಹಳ ವರ್ಷ ಸೇವೆ ಸಲ್ಲಿಸಿರುವ ಎಂ.ವಿ.ಆರ್. ಶಾಸ್ತ್ರಿಯವರು ತೆಲುಗಿನಲ್ಲಿ ಬರೆದ ಕೃತಿಯನ್ನು ಬಾಬು ಕೃಷ್ಣಮೂರ್ತಿಯವರು 'ಯಾವುದು ಚರಿತ್ರೆ?' ಎಂಬ ಹೆಸರಿನಲ್ಲಿ ಕನ್ನಡಕ್ಕೆ ತಂದಿರುವರು. ಭಾರತೀಯರಲ್ಲಿ ಇತಿಹಾಸ ಪ್ರಜ್ಞೆ ಕಡಿಮೆ. ಪುರಾಣವನ್ನೇ ಇತಿಹಾಸವೆಂದು ನಂಬುವವರು. ವಸ್ತುನಿಷ್ಠವಾಗಿ ಇತಿಹಾಸವನ್ನು ನಮ್ಮಲ್ಲಿ ದಾಖಲಿಸಿದ್ದು ಇಲ್ಲ. ನಮ್ಮನ್ನು ಆಳಿದ ಮತ್ತು ಆಧುನಿಕತೆಯನ್ನು ಪರಿಚಯಿಸಿದ ಬ್ರಿಟಿಷರು ತಮಗೆ ತೋಚಿದಂತೆ ಇತಿಹಾಸವನ್ನು ರಚಿಸಿದರು. ಅದನ್ನೇ ನಮ್ಮವರಿಗೆ ಬೋಧಿಸಿದರು. ಸ್ವಾತಂತ್ರ್ಯ ಬಂದ ಬಳಿಕ ಇತಿಹಾಸವನ್ನು ಮರಳಿ ರಚಿಸುವ ಕಾರ್ಯ ನಡೆಯಿತು. ಅನೇಕ ಇತಿಹಾಸಜ್ಞರು ಶ್ರಮಪಟ್ಟು ಮಾಹಿತಿಗಳನ್ನು ಕಲೆಹಾಕಿದರು. ಮಾಹಿತಿಗಳನ್ನು ಸಂಸ್ಕರಣಗೊಳಿಸಿ ಪಠ್ಯವನ್ನು ರಚಿಸುವಾಗ ತಮ್ಮ ತಮ್ಮ ಧೋರಣೆಗಳಿಗೆ ಅನುಗುಣವಾಗಿ ವ್ಯಾಖ್ಯಾನಿಸತೊಡಗಿದರು. ಎಡಪಂಥೀಯ ಇತಿಹಾಸ, ಬಲಪಂಥೀಯ ಇತಿಹಾಸ ಇತ್ಯಾದಿ ಹೇಳಿಕೆಗಳು ಪ್ರಚಲಿತಕ್ಕೆ ಬಂದವು. ಶಾಸ್ತ್ರಿಗಳ ಈ ಕೃತಿ ಕೂಡ ಬಲಪಂಥೀಯ ಇತಿಹಾಸದಂತೆ ಭಾಸವಾದರೆ ಅಚ್ಚರಿಯಿಲ್ಲ. ಕೃತಿ ರಚನೆಯಲ್ಲಿ ಅವರು ಪಟ್ಟ ಶ್ರಮ ಗೋಚರವಾಗುತ್ತದೆ.
ಕೃತಿ: ಯಾವುದು ಚರಿತ್ರೆ?,
ಪ್ರಕಾರ: ಇತಿಹಾಸ
ಏಕೆ ಓದಬೇಕು: ಇತಿಹಾಸದ ಇನ್ನೊಂದು ಮುಖ ಅರಿಯಲು,
ಪ್ರ: ವಸಂತ ಪ್ರಕಾಶನ, ಬೆಂಗಳೂರು, ಪುಟಗಳು 398, ಬೆಲೆ ರು. 250

===

ಪತ್ರ ಚರಿತ್ರೆ
ಹೆರಿಟೇಜ್ ವಿಲೇಜ್‌'ನ ವಿಜಯನಾಥ ಶೆಣೈ ಅವರು ಬರೆದ ಮತ್ತು ಅವರಿಗೆ ಬಂದಿರುವ ಪತ್ರಗಳನ್ನು 'ವಿಜಯನಾಥ ಶೆಣೈ ಪತ್ರವಾತ್ಸಲ್ಯ' ಹೆಸರಿನಲ್ಲಿ ಪೃಥ್ವಿರಾಜ ಕವತ್ತಾರು ಅವರು ಸಂಪಾದಿಸಿದ್ದಾರೆ. ಹಾಗೆ ನೋಡಿದರೆ ಕನ್ನಡದಲ್ಲಿ ಇಂಥದ್ದೊಂದು ಕೃತಿ ತೀರಾ ಕ್ವಚಿತ್. ಶೆಣೈ ಅವರ ಸಂಪರ್ಕ ಕ್ಷೇತ್ರ ಬಹುದೊಡ್ಡದು. ಅದರಲ್ಲಿ ಗಣ್ಯಮಾನ್ಯ ಸಾಹಿತಿಗಳಿದ್ದಾರೆ, ಸಂಗೀತಗಾರರಿದ್ದಾರೆ, ಅಧಿಕಾರಿಗಳಿದ್ದಾರೆ. ಸಾರ್ವಜನಿಕ ಕಾರ್ಯಗಳಿಗಾಗಿಯೇ ಬರೆದ ಪತ್ರಗಳು ಇವುಗಳಾಗಿರುವುದರಿಂದ ಅವು ಕನ್ನಡ ನಾಡಿನ ಚರಿತ್ರೆಯ ಭಾಗಗಳೂ ಆಗಿವೆ. ಸಾಂಸ್ಕೃತಿಕ ದಾಖಲೆಗಳೂ ಆಗಿವೆ. ಪತ್ರಗಳೆಲ್ಲ ಆಯಾಕಾಲದ ವರ್ತಮಾನದ ಸಂಗತಿಗಳು ಮತ್ತು ವೈಯಕ್ತಿಕ ನೆಲೆಯಲ್ಲಿ ವ್ಯಕ್ತಪಡಿಸಿದ ವಿಚಾರಗಳು, ಇವು ಮುದೆ ಯಾವುದೋ ಸಂಕಲನದಲ್ಲಿ ಸೇರುತ್ತವೆ ಎಂದು ಬರೆದುದಲ್ಲ. ಈ ಪತ್ರಗಳ ಮೂಲಕ ಆಯಾ ವ್ಯಕ್ತಿಗಳ ಸ್ವಭಾವಚಿತ್ರವನ್ನು ನಾವು ರೂಪಿಸಬಹುದು. ಇಂದು ಸಂವಹನದ ಸಾಧನಗಳು ಬದಲಾಗಿವೆ. ಮೊಬೈಲ್ ಫೋನ್‌ಗಳು, ಇ-ಮೇಲ್‌ಗಳೆಲ್ಲ ಬಂದು ಪತ್ರವನ್ನು ಬರೆಯುವ ಸಂದರ್ಭಗಳು ಅಪರೂಪವಾಗಿಬಿಟ್ಟಿವೆ. ಈ ಸಂಗ್ರಹವನ್ನು ನೋಡಿದಾಗ ನಾವು ಯಾವುದರಿಂದ ವಂಚಿತರಾಗಿದ್ದೇವೆ ಎಂಬುದರ ಅರಿವಾಗದೆ ಇರದು.
ಕೃತಿ: ವಿಜಯನಾಥ ಶೆಣೈ ಪತ್ರವಾತ್ಸಲ್ಯ,
ಪ್ರಕಾರ: ಪತ್ರಬರೆಹ
ಏಕೆ ಓದಬೇಕು: ಓದುವ ಖುಷಿಗೆ,
ಪ್ರ: ಅಭಿನವ, ಬೆಂಗಳೂರು, ಪುಟಗಳು 212, ಬೆಲೆ ರು. 150

===

ಬೆತ್ತಲಾಟ
ಇಟಲಿಯ ಪ್ರಸಿದ್ಧ ನಾಟಕಕಾರ ಮತ್ತು ನಟ ದಾರಿಯೋ ಫೋ ನೊಬೆಲ್ ಪ್ರಶಸ್ತಿ ಪಡೆದವನೂ ಹೌದು. ಆತನ 'ಒನ್ ವಾಸ್ ನ್ಯೂಡ್; ಒನ್ ಮೋರ್ ಟೇಲ್ಸ್‌' ನಾಟಕವನ್ನು ಪ್ರಕಾಶ ಗರುಡ ಅವರು ಕನ್ನಡಕ್ಕೆ ಭಾವಾನುವಾದ ಮಾಡಿದ್ದಾರೆ. ಪ್ರಸಿದ್ಧ ನಟ ಏಣಗಿ ಬಾಳಪ್ಪ ಅವರ ನಟನಾ ಕೌಶಲ್ಯವನ್ನು ಗಮನದಲ್ಲಿಟ್ಟುಕೊಂಡು ಈ ನಾಟಕ ರಚಿಸಲಾಗಿದೆ ಎಂದು ಲೇಖಕರು ಹೇಳಿಕೊಂಡಿದ್ದಾರೆ. ಪ್ರಸಿದ್ಧ ನಟರ ಸಾಮರ್ಥ್ಯವನ್ನು ಲಕ್ಷಿಸಿ ನಾಟಕ ಬರೆಯುವ ಪದ್ಧತಿ ಇತ್ತು ಎಂಬುದನ್ನು ಅರಿತಾಗ ಆಶ್ಚರ್ಯವಾಗದೆ ಇರದು. ನಾಟಕದ ವಸ್ತು ನಗರ ಸಂಸ್ಕೃತಿ ಸೃಷ್ಟಿಸುವ ಕಸದ ಸಮಸ್ಯೆ. ಕಸಕ್ಕೆ ಎರಡು ಮುಖಗಳಿವೆ. ಹಳ್ಳಿಯಲ್ಲಿ ಕಸವು ಗೊಬ್ಬರವಾದರೆ ಪಟ್ಟಣದಲ್ಲಿ ಅದು ದೊಡ್ಡ ಸಮಸ್ಯೆ. ಕಸದ ಸಮಸ್ಯೆಯನ್ನು ಪರಿಹರಿಸುವುದೂ ಅವಕಾಶವಾದಿಗಳಿಗೆ ಒಂದು ಉದ್ಯೋಗ. ಇಲ್ಲೂ ಒಂದು ಅಂತಹ ಪಾತ್ರವಿದೆ. ನಾಟಕದ ಒಟ್ಟೂ ತಿರುಳು ಅಂತರಂಗ ಮತ್ತು ಬಹಿರಂಗದ ಕೊಳೆಯನ್ನು ನಾವೇ ಸ್ವಚ್ಛಗೊಳಿಸಿಕೊಳ್ಳಬೇಕು ಎಂಬುದು. ಕನ್ನಡದ ಜಾಯಮಾನಕ್ಕೆ ಒಗ್ಗುವಂತೆ ಈ ಕೃತಿಯು ರೂಪಾಂತರದಲ್ಲಿ ರೂಹು ಪಡೆದದ್ದು ಇದರ ಹೆಚ್ಚುಗಾರಿಕೆ.
ಕೃತಿ: ಬೆತ್ತಲಾಟ,
ಪ್ರಕಾರ: ನಾಟಕ
ಏಕೆ ಓದಬೇಕು?:
ಲೋಕಾನುಭವಕ್ಕೆ
ಪ್ರ: ಮನೋಹರ ಗ್ರಂಥಮಾಲೆ, ಧಾರವಾಡ, ಪುಟಗಳು 68, ಬೆಲೆ ರು. 60



- ಡಾ. ವಾಸುದೇವ ಶೆಟ್ಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments