ದಲಿತ ಜಗತ್ತಿನ ನಿಗೂಢಗಳಿಗೆ ಹಿಡಿದ ಕನ್ನಡಿ 'ಗೂಡೆ'
ಕನ್ನಡದ ದಲಿತ ಚಿಂತಕರಲ್ಲಿ ಲಕ್ಷ್ಮಣ್ ಅವರ ಹೆಸರು ಮೊದಲ ಸಾಲಿನಲ್ಲಿಯೇ ಬರುವುದು. ತಮ್ಮ ಆತ್ಮಕಥನ 'ಸಂಬೋಳಿ' ಮೂಲಕ ದಲಿತ ಜಗತ್ತಿನ ನೋವಿನ ಅನಾವರಣ ಮಾಡಿದ್ದ ಅವರು ನಂತರ ಮಾದಿಗ ಜನಾಂಗದ ಸಾಂಸ್ಕೃತಿಕ ಕಥನವಾದ 'ಪರಂಪರೆಯ ನಕ್ಷತ್ರಗಳು' ಎಂಬ ಕೃತಿಯನ್ನು ಸಂಪಾದಿಸಿದ್ದರು. ಈ ಮೂಲಕ ದಲಿತ ಚಿಂತನೆಗೆ ಒಂದು ಗಟ್ಟಿಯಾದ ಚೌಕಟ್ಟನ್ನು ಒದಗಿಸಿಕೊಟ್ಟಿದ್ದರು. ಇದೀಗ ಬಂದಿರುವ 'ಗೂಡೆ' ಎಂಬುದು ಅವರ ಲೇಖನಗಳ ಸಂಕಲನ.
'ಗೂಡೆ' ಪದವು ದಲಿತ ಬದುಕಿಗೆ ಒಂದು ಪ್ರತಿಮೆ ಇದ್ದಂತೆ. 'ಈ ಗೂಡೆ ಅಸಮಾನತೆಯ, ಜಾತೀಯತೆಯ, ಅಸ್ಪೃಶ್ಯತೆಯ ಸಂಕೇತ' ಎಂದು ಲಕ್ಷ್ಮಣ ಹೇಳಿದ್ದಾರೆ. ಗೂಡೆ ಇದು ತಲೆಯ ಮೇಲೆ ಹೊತ್ತೊಯ್ಯುವ ದೊಡ್ಡ ಹೆಡಿಗೆ ಬುಟ್ಟಿಯ ಹಾಗೆ ಇರುತ್ತದೆ. ದಲಿತರು ಮೇಲ್ವರ್ಗದವರ ಮನೆಯಲ್ಲಿ ವಿಶೇಷ ಕಾರ್ಯಗಳು ನಡೆದಾಗ ಅವರು ನೀಡುವ ಕೂಳನ್ನು ತುಂಬಿಕೊಂಡು ಬರಲು ಈ ಗೂಡೆಯಲ್ಲಿ ಮಡಿಕೆ ಕುಡಿಕೆಗಳನ್ನು ಇಟ್ಟುಕೊಂಡು ಹೋಗುತ್ತಿದ್ದರು.
ಒಂದು ಕಡೆ ಹೊಟ್ಟೆ ತುಂಬಿಸುವುದಕ್ಕೆ ಸಂಕೇತವಾಗುತ್ತಿದ್ದ ಗೂಡೆ ಇನ್ನೊಂದೆಡೆ ದಲಿತ ಸಂಸ್ಕೃತಿಯ ಪ್ರದರ್ಶನಕ್ಕೂ ಸಂಕೇತವಾಗುತ್ತಿತ್ತು. ಅದು ಹೇಗೆಂದರೆ, ದಲಿತರ ಮದುವೆಗಳಲ್ಲಿ ಮುಹೂರ್ತಕ್ಕೆ ಬೇಕಾದ ಬಾಸಿಂಗ, ಕನ್ನಡಿ, ಅಕ್ಕಿ, ಬೆಲ್ಲ, ಹೂವು, ಅರಿಶಿನ, ಕುಂಕುಮ, ಕಡ್ಡಿ, ಕರ್ಪೂರ, ಕಾಯಿ, ಬಾಳೆಹಣ್ಣು, ಹೊಸಬಟ್ಟೆ ಇತ್ಯಾದಿಗಳನ್ನೆಲ್ಲ ಇದೇ ಗೂಡೆಯಲ್ಲಿ ಇಡುತ್ತಿದ್ದರು.
'ಗೌಡರುಗಳು ಊಟ ಮುಗಿಸಿ ಎಲೆ-ಅಡಕೆ ಜಗಿಯುತ್ತಾ ತೇಗುತ್ತಾ ಓಡಾಡುತ್ತಿದ್ದರೆ, ನಮ್ಮಟ್ಟಿಯ ಜನಗಳು ಆ ತಿಥಿಕಾರ್ಯ ನಡೆಯುವ ಜಾಗದಿಂದ ಅಷ್ಟು ದೂರ ಮನೆಗೆ ಒಂದರಂತೆ 'ಗೂಡೆ'ಗಳನ್ನು ಮಡಗಿಕೊಂಡು ಕುಂತುಕೊಳ್ಳುತ್ತಿದ್ದರು. ಬೆಳಗಿನಿಂದ ಸಂಜೆಯವರೆಗೂ ದುಡಿದ ಆಯಾಸದಿಂದಲೋ, ಹಸಿವಿನ ಬಳಲಿಕೆಯಿಂದಲೋ, ನಮ್ಮಟ್ಟಿ ಜನಗಳಿಗೆ ಆಕಳಿಕೆ ತೂಕಡಿಗೆ ಬಂದುಬಿಡುತ್ತಿತ್ತು...'
ಹೀಗೆ ತಮ್ಮ ಸಮುದಾಯದ ಈ ದೀನತೆಯ ಕ್ರೌರ್ಯವನ್ನು ತಣ್ಣಗಿನ ಮಾತಿನಲ್ಲಿ ಎದೆಗೆ ಇರಿಯುವಂತೆ ಹೇಳುವ ಶಕ್ತಿ ಲಕ್ಷ್ಮಣ ಅವರಿಗಿದೆ. ಯಾವ 'ಗೂಡೆ' ನಮ್ಮಯ ಹಸಿವು, ಅಸಮಾನತೆಯ ಸಂಕೇತವೋ ಇದು ಈ ದೇಶದಲ್ಲಿ ಇನ್ನೂ ಉಳಿದಿದೆ. ಬೆಳೆಯುತ್ತಲೇ ಇದೆ. ಇಂಥ ವಿಚಾರಗಳ ಸುತ್ತ ನಡೆದಿರುವ- ನಡೆಯುತ್ತಿರುವ ವಿಚಾರಗಳು ಇಲ್ಲಿಯ ಲೇಖನಗಳ ಚರ್ಚೆಯ ವಿಷಯ ಎಂದು ಅವರು ಹೇಳಿದ್ದಾರೆ.
'ಗೂಡೆ'ಯಲ್ಲಿ ಒಟ್ಟೂ 87 ಲೇಖನಗಳಿವೆ. 'ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿಗೊಂದು ಪತ್ರ'ದ ಮೂಲಕ ಲೇಖನಗಳು ಆರಂಭಗೊಂಡು 'ಗುಡಿಗಳು ಶೋಷಣೆಯ ಕೇಂದ್ರಗಳು' ಎಂಬಲ್ಲಿಯ ವರೆಗೆ ಮುಂದುವರಿಯುತ್ತವೆ. 'ನಾವೆಲ್ಲ ಒಂದು ನಾವೆಲ್ಲ ಹಿಂದೂಗಳೇ ಆಗಿದ್ದರೆ ಯಾಕೆ ಸ್ವಾಮಿ ಪ್ರತಿದಿನವೂ, ಪ್ರತಿ ಕ್ಷಣವೂ ಇಷ್ಟೊಂದು ಅನ್ಯಾಯ, ಅಪಮಾನಗಳು ಹಿಂದೂಗಳ ನಡುವೆಯೇ ನಡೆಯುತ್ತಿವೆ?' ಎಂದು ಪ್ರಶ್ನಿಸುವ ಲಕ್ಷ್ಮಣ್ ಮೇಲ್ವರ್ಗದವರ ಎಡಬಿಡಂಗಿ ಧೋರಣೆಯನ್ನು ಈ ಕೃತಿಯ ಉದ್ದಕ್ಕೂ ಲೇವಡಿ ಮಾಡುತ್ತಾರೆ.
ಲಕ್ಷ್ಮಣ್ ಅವರ ಸೊಗಸಾದ ಭಾಷೆಗೆ ಚಿಕ್ಕದೊಂದು ಉದಾಹರಣೆ ನೋಡಿ- 'ಆ ಯಶೋದಮ್ಮ ಗಂಡ ಮಕ್ಕಳು ಆ ಬಾಳೆ ಗಿಡ್ದ ಬುಡ್ದಲ್ಲಿನ ಮಣ್ಣಿನ ತ್ಯಾವ ರವದಷ್ಟು ಕಡ್ಮೆಯಾದ್ರೆ ಪರೀಕ್ಷಿಸಿ ತಪ್ದೇ ನಿರುಯ್ತಿದ್ರು. ಆ ಬಾಳೆ ಸಸಿ ನಾಳಿಕೆ ಬೆಳೆ ಅಂದ್ರೆ ಇವತ್ತೇ ಬೆಳಿತ್ತೀನಿ ಅಂತ ನೋಡ್ ನೋಡ್ತಿದ್ದಂಗೆ ಹತ್ತಾರು ಎಲೆಗಳ್ನಾ ಬಿಟ್ಟು ಸುತ್ತಾಮುತ್ತಲ ಮನೆಯ ಜನ್ಗಳು ರಸ್ತೆಯಲ್ಲಿ ಓಡಾಡುವವರ ಮನಸ್ಸುಗಳನಾ ಸೆಳೆದ್ಬುಟ್ಟಿತ್ತು.'
ಮಾಂಸಾಹಾರವೋ ಮಾನವೀಯತೆಯೋ? ಮೀಸಲಾತಿ ಜಾರಿ ಮಾಡಿದ ಸಾಹು ಮಹಾರಾಜ, ಭವಿಷ್ಯವಿಲ್ಲದ ಬಂಡಾಯ ಸಾಹಿತ್ಯ ಸಂಘಟನೆ, ಅಸ್ಪೃಶ್ಯತೆ ಮತ್ತು ಜಾಗತೀಕರಣ, ಬ್ರಾಹ್ಮಣ ಮತ್ತು ಬ್ರಾಹ್ಮಣವಾದ, ಕೆರ ಮುಟ್ಟಿದರೆ ಕೆರದಂಡ!, ಗೋಹತ್ಯೆ ನಿಷೇಧದ ಸುತ್ತಮುತ್ತ, ಬ್ರಾಹ್ಮಣರಿಗೆ ಪ್ರತ್ಯೇಕ ರಾಜ್ಯ?, ಉಸಿರಿದ್ರೂ ಹೆಣವಾದ್ರು- ಹೀಗೆ ಲೇಖನಗಳ ವಿಷಯ ವೈವಿಧ್ಯಮಯವಾಗಿದೆ. ಸಮಸ್ಯೆಯೊಂದನ್ನು ದಲಿತ ಹೇಗೆ ಪರಿಭಾವಿಸುತ್ತಾನೆ ಎಂಬುದು ಅವರ ಚಿಂತನೆಯ ತಳ. ಒಂದರ್ಥದಲ್ಲಿ ಇದು ದಲಿತ ಮೀಮಾಂಸೆ. ಹಲವು ತಾತ್ವಿಕ ಅಭಿಪ್ರಾಯಗಳ ಮಂಡನೆ ಈ ಕೃತಿಯಲ್ಲಿದೆ.
ಇವರದೇ ಇನ್ನೊಂದು ಕೃತಿ 'ಒಲವ ಋಣದ ಭಾರ'. ಶ್ರೀಲಂಕಾದ ದುಃಖದ ಸಂಕಥನ ಎಂದು ಇದಕ್ಕೆ ಉಪಶೀರ್ಷಿಕೆ ನೀಡಿದ್ದಾರೆ. ಆ ದೇಶಕ್ಕೆ ಹೋಗಿ ಅಲ್ಲಿಯ ಸರ್ಕಾರಿ ಸೇನೆಯಿಂದ ನಾಶವಾಗಿರುವ ತಮಿಳರು ಇರುವ ಪ್ರದೇಶಗಳಲ್ಲಿ ಸುತ್ತಾಡಿ, ಅಲ್ಲಿಯ ಜನರೊಂದಿಗೆ ಸಂಭಾಷಣೆ ನಡೆಸಿ, ಬೌದ್ಧರ ನೆಲೆಯಲ್ಲಿ ಹಿಂಸೆ ಹೇಗೆ ತಾಂಡವವಾಡಿದೆ ಎಂಬುದನ್ನು ವಿವರಿಸುತ್ತಾರೆ. ಇಲ್ಲಿಯೂ ಅವರ ದಲಿತ ದೃಷ್ಟಿಕೋನವನ್ನು ನಾವು ಕಾಣಬಹುದು. 'ಭಗವಾನ್ ಬುದ್ಧ ಗುರುವಿನ ದೇಶದಲ್ಲಿ ಇಷ್ಟೆಲ್ಲಾ ಕ್ರೌರ್ಯ ನಡೆಯಲು ಇಂಡಿಯಾದಿಂದ ವಲಸೆಹೋಗಿರುವ ಹಿಂದೂ ಪುರೋಹಿತರು ಕಾರಣವೆಂದು ನನಗೆ ಅನ್ನಿಸುತ್ತಿದೆ' ಎಂದು ಒಂದೆಡೆ ಬರೆದಿದ್ದಾರೆ.ಶ್ರೀಲಂಕಾ ಎದುರಿಸುತ್ತಿರುವ ಜನಾಂಗೀಯ ಸಮಸ್ಯೆಯ ಹಲವು ಒಳನೋಟಗಳು ನಮಗೆ ಇಲ್ಲಿ ಸಿಗುತ್ತವೆ.
ಅಂದಹಾಗೆ ಲಕ್ಷ್ಮಣ್ ಅವರ ಆತ್ಮಕಥನ 'ಸಂಬೋಳಿ' ಕನ್ನಡದಲ್ಲಿ ಮೂರು ಮುದ್ರಣಗಳನ್ನು ಕಂಡಿದೆ. ತಮಿಳು ಭಾಷೆಯಲ್ಲಿ ಅನುವಾದಗೊಂಡು ಎರಡು ಮುದ್ರಣ ಕಂಡಿದೆ.
ಕೃತಿ: ಗೂಡೆ
ಪ್ರಕಾರ: ವೈಚಾರಿಕ ಲೇಖನಗಳು
ಏಕೆ ಓದಬೇಕು?: ದಲಿತ ಚಿಂತನೆ ಅರಿಯಲು
ಪ್ರ: ನಿರಂತರ, ಬೆಂಗಳೂರು,, ಪುಟಗಳು 336, ಬೆಲೆ ರು. 250
ಮೋಹನ ಶೈಲಿಯ ಬರೆಹ
ಮೋಹನ ಕಳಸದ ಅವರ ಬರೆಹಗಳನ್ನು ಓದುವುದೆಂದರೆ ಒಂದು ಖುಷಿ. ಈಗಾಗಲೆ 'ಬೆಳಗಾವಿ ಬೆಲ್ಲ' ಮತ್ತು 'ಕಣ್ಣ ಹಿಂದಿನ ಕಣ್ಣು' ಕೃತಿಗಳನ್ನು ರಚಿಸಿರುವ ಅವರು ಇದೀಗ 'ಆಡು ಪಾಡು' ಕೃತಿಯನ್ನು ಹೊರತಂದಿದ್ದಾರೆ. ಇದು ಹಾಸ್ಯ ಲೇಖನಗಳು ಎಂದು ಅವರು ಹೇಳಿಕೊಂಡಿದ್ದಾರೆ. ಆದರೆ ಹಾಸ್ಯ ಲೇಖನಗಳ ಪರಿಣಾಮದ ಸೀಮಿತ ವ್ಯಾಪ್ತಿಯನ್ನು ಮೀರಿ ಇಲ್ಲಿಯ ಲೇಖನಗಳು ಅರ್ಥವನ್ನು ಸಂವಹನಿಸುತ್ತವೆ. ಒಂದು ಕತೆಯ ಹಾಗೆ, ಒಂದು ವೃತ್ತಾಂತದ ವಿವರಣೆಯ ಹಾಗೆ, ಯಾವುದೋ ಕೊರತೆಯೊಂದರ ಹಳಹಳಿಕೆಯ ಹಾಗೆ, ಯಾವುದೋ ಆದರ್ಶವೊಂದರ ಕನಸಿನ ಹಾಗೆ ಕಳಸದ ಅವರು ತಮ್ಮ ಬರೆಹವನ್ನು ಮಂಡಿಸುತ್ತಾರೆ. ಬೆಳಗಾವಿಯ ಭಾಷೆ ಈ ಕೃತಿಯ ಸತ್ವವನ್ನು ಇನ್ನಷ್ಟು ಗಟ್ಟಿಗೊಳಿಸಿದೆ. ಒಟ್ಟೂ 16 ಲೇಖನಗಳಲ್ಲಿ ಮೊದಲಿನದು ಮತ್ತು ಕೊನೆಯದು ತುಸು ದೀರ್ಘವಾಗಿವೆ. ಸಾಹಿತ್ಯ ಪ್ರಕಾರದ ಯಾವುದೇ ಹಣೆಪಟ್ಟಿಯಿಲ್ಲದೆ ಇವುಗಳನ್ನು ಓದಿ ಸುಖಿಸಬಹುದು. ಅಂಥ ಆಪ್ತತೆ ಇಲ್ಲಿ ಸಿಗುತ್ತದೆ. ಕಳಸದ ಇನ್ನಷ್ಟು ಬರೆಯಲಿ.
ಕೃತಿ: ಆಡು ಪಾಡು, ಪ್ರಕಾರ: ಹಾಸ್ಯ ಬರೆಹ, ಏಕೆ ಓದಬೇಕು?: ಓದುವ ಖುಷಿಗೆ
ಪ್ರ: ಆದಿತ್ಯ ಪಬ್ಲಿಕೇಷನ್, ಬೆಳಗಾವಿ,, ಪುಟಗಳು 196 ಬೆಲೆ ರು. 130
ಅಕ್ಕನ ಬೆಳಗು
ಆಧುನಿಕ ಕನ್ನಡ ಚಿಂತಕರನ್ನು ಬಹುವಾಗಿ ಕಾಡಿದವರಲ್ಲಿ ಅಕ್ಕಮಹಾದೇವಿ ಒಬ್ಬಳು. ಹನ್ನೆರಡನೇ ಶತಮಾನದ ರಾಜಕೀಯ, ಸಾಮಾಜಿಕ ಹಾಗೂ ಧಾರ್ಮಿಕ ಸಂದರ್ಭಗಳ ಹಿನ್ನೆಲೆಯಲ್ಲಿ ಅಕ್ಕನನ್ನು ನಿರ್ವಚಿಸಬೇಕಾಗುತ್ತದೆ. ಹನ್ನೆರಡನೇ ಶತಮಾನಕ್ಕೆ ಪ್ರಸ್ತುತಳಾದ ಅಕ್ಕ ಈ ಇಪ್ಪತ್ತೊಂದನೇ ಶತಮಾನಕ್ಕೂ ಹೇಗೆ ಪ್ರಸ್ತುತಳಾಗುತ್ತಾಳೆ ಎಂಬ ಕುತೂಹಲ ಉಳಿದೇ ಉಳಿಯುತ್ತದೆ. ಆ ಕೂತೂಹಲವೇ ಅಕ್ಕನ ಬೆನ್ನುಹತ್ತಲು ಕಾರಣ. ವೀಣಾ ಬನ್ನಂಜೆಯವರು ಅಕ್ಕನನ್ನು ತಮ್ಮಲ್ಲಿ ಆವಾಹಿಸಿಕೊಂಡಿದ್ದಾರೆ. ಈ ಮೊದಲು ಅವರು 'ಅಕ್ಕನ ಹಾದಿ' ಎಂಬ ಕವನ ಸಂಕಲನ ಪ್ರಕಟಿಸಿದ್ದರು. ಇದೀಗ 'ಅಕ್ಕಮಹಾದೇವಿಯ ದ್ವೈತ' ಎಂಬ ಕೃತಿಯನ್ನು ತಂದಿದ್ದಾರೆ. ಅಕ್ಕ ಲೌಕಿಕ ಲೋಕದ ನಿರಾಕರಣೆಯ ಸಂಕ್ರಮಣ ಸ್ಥಿತಿಯನ್ನು ದಾಟಿದ ಬಳಿಕ ಅಲೌಕಿಕವನ್ನು ದೃಢಚಿತ್ತದಿಂದ ಸ್ವೀಕರಿಸಿದ್ದಾಳೆ. ಆ ಮೂಲಕ ಬಸವ, ಅಲ್ಲಮರಿಗಿಂತ ಭಿನ್ನವಾಗುತ್ತಾಳೆ ಎನ್ನುವ ವೀಣಾ, ಅಕ್ಕನ ಈ ಅಲೌಕಿಕವನ್ನು ಅಪ್ಪುವ ಕ್ರಿಯೆಯೇ ಲೌಕಿಕಕ್ಕೆ ಆಕೆಯ ಮೊದಲ ಪ್ರತಿಭಟನೆ ಎನ್ನುತ್ತಾರೆ. ಇಂಥ ಹಲವು ಆಲೋಚನೆಗಳು ಈ ಕೃತಿಯಲ್ಲಿವೆ.
ಕೃತಿ: ಅಕ್ಕಮಹಾದೇವಿಯ ದ್ವೈತ, ಪ್ರಕಾರ: ಸಂಶೋಧನೆ, ಏಕೆ ಓದಬೇಕು?: ಅಕ್ಕನನ್ನು ಅರಿಯಲು, ಪ್ರ: ರವೀಂದ್ರ ಪುಸ್ತಕಾಲಯ, ಸಾಗರ, ಪುಟಗಳು 144 ಬೆಲೆ ರು. 90
ಶ್ರೀರಾಘವೇಂದ್ರ ದರ್ಶನ
ಜಾಗೃತ ನೆಲೆ ಎಂದು ಹೆಸರಾಗಿರುವ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮೀಜಿಯ ಚರಿತ್ರೆ, ಸ್ಥಳಪುರಾಣ, ಅವರ ಪವಾಡಗಳು, ಅವರಿಗೆ ಸಂಬಂಧಿಸಿದ ಸಾಹಿತ್ಯ ಇತ್ಯಾದಿಗಳನ್ನು ಪರಿಚಯಿಸುವ ಗ್ರಂಥವನ್ನು ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯ ಅವರು 'ಶ್ರೀ ರಾಘವೇಂದ್ರ ದರ್ಶನ' ಹೆಸರಿನಲ್ಲಿ ಪ್ರಕಟಿಸಿದ್ದಾರೆ. ಇದು ಪರಿಷ್ಕೃತ ಎಂಟನೇ ಮುದ್ರಣ. ಈ ಕೃತಿ ಅವರ ದೃಷ್ಟಿಯಲ್ಲಿ ಶ್ರೀರಾಘವೇಂದ್ರ ವಿಜಯ, ಮತ್ತೊಂದು ದೃಷ್ಟಿಯಲ್ಲಿ ಶ್ರೀಹರಿಭಕ್ತ ವಿಜಯ. ಇನ್ನೂ ವಿಚಾರ ಮಾಡಿದರೆ ವೈದಿಕ ಸಿದ್ಧಾಂತದ ವಿಜಯ; ಅದನ್ನು ಪ್ರತಿಷ್ಠಾಪಿಸಿದ ಶ್ರೀಮಧ್ವಾಚಾರ್ಯರ ವಿಜಯ. ಒಟ್ಟಾಗಿ ಅವರೆಲ್ಲರ ಆರಾಧ್ಯ ದೇವತೆಯೂ, ಸರ್ವೋತ್ತಮನೂ ಆದ ಶ್ರೀಹರಿಯ ವಿಜಯ. ರಾಘವೇಂದ್ರರ ಭಕ್ತರಿಗೆ ಇದೊಂದು ಸಂಗ್ರಹಯೋಗ್ಯ ಕೃತಿಯಾಗಿದೆ. 11 ಪರಿಶಿಷ್ಟಗಳಲ್ಲಿ ವಿಶೇಷ ಮಾಹಿತಿಗಳಿವೆ. ಎಲ್ಲವನ್ನೂ ಮುಗಂ ಆಗಿ ಹೇಳದೆ ಹೇಳಿಕೆಗೆ ಆಧಾರವಾಗಿ ಸುದೀರ್ಘವಾದ ಅಡಿಟಿಪ್ಪಣಿಗಳನ್ನು ಕೃತಿಯುದ್ದಕ್ಕೂ ನೀಡಲಾಗಿದೆ. ಇದು ಕೃತಿಕಾರರ ಸಂಶೋಧನ ಶ್ರಮವನ್ನು ಹೇಳುತ್ತದೆ.
ಕೃತಿ: ಶ್ರೀರಾಘವೇಂದ್ರ ದರ್ಶನ, ಪ್ರಕಾರ: ಚರಿತ್ರೆ
ಏಕೆ ಓದಬೇಕು?: ಶ್ರೀರಾಘವೇಂದ್ರರನ್ನು ಅರಿಯಲು
ಪ್ರ: ಐತರೇಯ ಪ್ರಕಾಶನ ವ್ಯಾಸನಕೆರೆ, ಬೆಂಗಳೂರು. ಪುಟಗಳು 162 ಬೆಲೆ ರು. 60
-ಡಾ. ವಾಸುದೇವ ಶೆಟ್ಟಿ