ಎಲ್ಲಿಗೆ ಪಯಣ?
ಕಾರ್ಮೋಡಗಳು ಆಗಸದಲ್ಲಿ ಚಲಿಸುತ್ತಿವೆ. ಅದೊಂದು ನೀರಿನಿಂದೊಡಗೂಡಿದ ಅನಿಲ ರಾಶಿಯೇ? ಒಮ್ಮೆ ಹರಡಿದಂತೆ ಕಂಡು ಮತ್ತೆ ಗುಂಪಾಗಿ ಚಲಿಸುವಂತೆ. ವೇಗವಾಗಿ ಎತ್ತಲೋ ಚಲಿಸುತ್ತಿರುವಂತೆ ಕಾಣುತ್ತಿವೆ! ಮೋಡಗಳು ಏಕೆ ಚಲಿಸುತ್ತವೆ? ನಿಂದಲ್ಲೇ ನಿಂತು ವರ್ಷಧಾರೆಯ ಸುರಿಸಿದರೆ ಭುವಿಯ ತಲುಪಿ, ಜೀವರಾಶಿಗಳಿಗೆ ಜೀವ ಜಲವ ನೀಡಿ ದಾಹ ತಣಿಸಿದಂತಾಗುವುದಿಲ್ಲವೇ?
ಸಕಾರಣವಿಲ್ಲದೆ ಪ್ರಕೃತಿಯಲ್ಲಿ ಏನೂ ನಡೆಯಲಾರದು. ಕರ್ಮಗಳಿಗೆ ನಾವೇ ಕಾರಣೀಭೂತರು. ಅದರ ಫಲವನ್ನು ಮಾತ್ರ ಅನುಭವಿಸಬೇಕು. ಬೀಸುತ್ತಿರುವ ಬಿರುಗಾಳಿಗೆ ಸಸ್ಯ-ವೃಕ್ಷಗಳೆಲ್ಲಾ ಓಲಾಡಿ, ಕವಿಯುತ್ತಿರುವ ಕತ್ತಲನ್ನು ಕಗ್ಗತ್ತಲಾಗಿಸಿದೆ. ಗಾಳಿಗೆ, ಎಂತಹುದನ್ನೂ ಓಲಾಡಿಸಿ, ತೇಲಾಡಿಸಿ, ಓಲೈಸುವ ಶಕ್ತಿಯಿದೆಯೇನೋ?
ಮರಗಿಡಗಳಲ್ಲಿ ಒಣಗಿದೆಲೆಗಳು, ರೆಂಬೆ- ಕೊಂಬೆಗಳಿಂದ ಬೇರ್ಪಟ್ಟು, ಗಾಳಿಯ ರಭಸಕ್ಕೆ ಸಿಲುಕಿ, ಎತ್ತರಕ್ಕೆ ಒಯ್ಯಲ್ಪಟ್ಟು, ಮತ್ತೆಲ್ಲೋ ಬೀಳುತ್ತಿವೆ. ಬೆಳೆದದ್ದು ಈ ಮರದ ರೆಂಬೆಯಲ್ಲಿ, ಬಿದ್ದದ್ದು ಎಲ್ಲೋ. ಕೊಂಬೆಯ ಆಶ್ರಯ ಪಡೆದು ಬೆಳದದ್ದು, ಒಣಗಿದ ಮೇಲೆ, ಮರದ ಬುಡದ ಸುತ್ತ ಏಕೆ ಬೀಳಲಿಲ್ಲ?
ಎಲೆಗಳು ಒಣಗಿ ಹಗುರವಾಗಿರಬಹುದು, ಆದರೆ ಅವು, ಢಂಗುರ ಸಾರದೆ, ಗಾಳಿಯೊಡನೆ ಪಯಣ ಬೆಳೆಸಿವೆಯೇ? ಪಯಣ, ಅಲ್ಪ ಸಮಯ ಮೇಲೇರಿ ಕೆಳಗಿಳಿದು, ಮಣ್ಣಲ್ಲಿ ಬೆರೆತು, ಮಳೆಯ ಜೊತೆಗೂಡಿ ಗೊಬ್ಬರವಾಗುವ ತನಕ. ಗೊಬ್ಬರ- ಆಹಾರ- ಮರಕ್ಕೆ ಪುನರ್ಮಿಲನದಂತೆ.
ಗಾಳಿಯ ರಭಸ ಕಡಿಮೆಯಾಯಿತೇನೋ, ನೆಲದ ಮೇಲೆ ಬಿದ್ದ ಒಣ ಎಲೆಗಳು, ಮರದ ಬುಡದಲ್ಲಿ ಓಡುತ್ತಿವೆ, ಅಕ್ಕ-ಪಕ್ಕ ಚಲಿಸಿ ಮಲಗುತ್ತಿವೆ. ಕೆಲವು ನಿಂತಿವೆ, ಕೆಲವು ಕುಳಿತಿವೆಯಷ್ಟೆ. ಮರದ ಬುಡದ ಸುತ್ತ-ಮುತ್ತ ಸಮೀಪದಲ್ಲೇ.
ಒಂದು ಹುಟ್ಟಬೇಕಾದರೆ, ಮತ್ತೊಂದು ಸಾಯಲೇ ಬೇಕು. ಇದು ವಿಧಿ- ಋಣಸಂಚಯ. ಆದರೆ, ಗಾಳಿಯ ರಭಸ, ಅಂತಹ ಚಿಗುರಿದೆಲೆಗಳನ್ನೂ, ರೆಂಬೆ- ಕೊಂಬೆಗಳನ್ನೂ ಬಿಡದು. ಹಸಿರ ಎಲೆಗಳು ಗಾಳಿಗೆ ಬೀಸಣಿಗೆಯಂತೆ ಕಂಪಿಸುತ್ತಿದೆ.
ಮಳೆ ಸುರಿಯುತ್ತಿದೆ! ಮೊದ-ಮೊದಲು ಸಣ್ಣ- ಸಣ್ಣ ಹನಿಗಳು ಅಲ್ಲಲ್ಲಿ, ನಂತರ, ನಿರಂತರ ಸಣ್ಣ ವರ್ಷಧಾರೆ. ಎಷ್ಟು ಸಮಯವೋ ತಿಳಿಯದು. ಆದರೆ, ಗಿಡದ- ಮರದ ಬುಡ ತುಂಬಿ ಹರಿದು ಸಣ್ಣ ತೊರೆಯಾಗಿ ಹರಿಯುತ್ತಿದೆ. ಮಣ್ಣು, ನೀರ ಹನಿಯ ಹೀರಿ- ಇಂಗಿಸಿ, ಮಿಕ್ಕಿದ್ದು ಹರಿದಿದೆ. ಅದರ ಪಯಣ, ಮೇಲಿಂದ ಕೆಳಗಿನ ಹಳ್ಳಕ್ಕೆ- ಒಳ್ಳೆಯದೇ. ಅದು ಜೀವರಾಶಿಗಳಿಗೆ ಸಿಗುವ, ಕಾದಿರಿಸಿದ ಅಮೂಲ್ಯ ಶೇಖರಣೆ ಎಂದು ತಿಳಿಯಬಹುದೇನೋ. ಅದೇನಾಗಿದ್ದರೂ, ಮತ್ತೆ ಸೂರ್ಯ ನೆತ್ತಿಗೇರಿದ ಮೇಲೆ, ನೀರು ಆವಿಯಾಗುವುದು, ಮಣ್ಣು ಒಣಗಿದ ನಂತರ ಮತ್ತೆ ಇಂಗುವುದು, ಅಂತರ್ಜಲವಾಗಿ ಮಾರ್ಪಡುವುದು ಇದ್ದೇ ಇದೆ. ಅದೊಂದು ಜೀವ-ಜಲ-ಚಕ್ರ.
ಸೂರ್ಯನಿಲ್ಲದೆ ಜೀವ ಜಗತ್ತು ಸಾಗದು. ಚಳಿ ತಡೆಯಲಾಗದು. ನಿರಂತರ ಮಳೆ ಸಹಿಸಲಾಗದು. ಪ್ರತಿಯೊಂದಕ್ಕೂ ಕಾಲವೇ ನಿಯಮ, ಅದೊಂದು ಸಂಯಮದೊಂದಡಗೂಡಿದ ಸೃಷ್ಟಿಯ ಕ್ರಿಯೆ, ಪ್ರಕ್ರಿಯೆ. ವೈವಿಧ್ಯಮಯ ಜೀವರಾಶಿಗಳಿಗೆ, ಸೃಷ್ಟಿಯ ಕ್ರಿಯಾಶೀಲ ಚಟುವಟಿಕೆಯೇ ಆಸರೆ. ಜೀವಕ್ಕೆ ಜೀವವೇ ಆಸರೆ. ಭೂಮಿಯೇ ಇಲ್ಲದೆ ಮಣ್ಣು, ನೀರೇ? ಹಸಿರು ಸಸ್ಯ ಸಂಕುಲವೇ? ಮಣ್ಣಿಲ್ಲದೇ- ನೀರಿಲ್ಲದೆ ಬೇರು ಬದುಕುವುದೇ? ಅದು ಮರವಾಗುವುದೇ? ಜೀವರಾಶಿಗಳೇ ಇಲ್ಲದೆ ಜೀವನವಿಲ್ಲ. ಸಂಸ್ಕಾರವಿಲ್ಲದೆ ಸಂಸಾರವಿಲ್ಲ.
ಮರವೇ ಇಲ್ಲದೆ ಬಳ್ಳಿಯೆ? ಬಳ್ಳಿಯೇ ಇಲ್ಲದೆ ಹೂವೇ? ಮಳೆಹನಿಗೆ ಮೋಡವೇ ಆಸರೆ. ಗಿಡ-ಮರಗಳಿಗೆ ಮಣ್ಣೇ ಆಸರೆ. ಸೂರ್ಯನಿಲ್ಲದೆ ನದಿ- ತೊರೆಗಳಿಂದ ನೀರು ಆವಿಯಾಗದು, ಆವಿಯಾಗದ ಮೋಟ ಕಟ್ಟದು. ಮೋಡವಿಲ್ಲದೆ ಮಳೆ ಹನಿಯೇ? ಗುರುವಿಲ್ಲದೆ ಗುರುಕುಲವೇ? ಗುರುಕುಲವಿಲ್ಲದೆ ಶಿಕ್ಷಣವೇ. ಅವಲಂಬನೆ ಇಲ್ಲದೆ ಯಾರೂ ಬದುಕಲಾರರು ಬಾಳಲಾರರು. ಸತ್ಪ್ರಜೆಗಳಿಲ್ಲದೆ ದೇಶವು ಅಭಿವೃದ್ಧಿ ಹೊಂದಲಾರದು.
ಜೀವರಾಶಿಗಳಿಲ್ಲದೆ ಭುವಿಯೊಂದು ಬರಪೀಡಿತ ರಾಶಿ. ತೊರೆದ ಬೀದಿಗಳು, ಊರಲ್ಲಿ, ಎಂದೂ ಬೆಳಗವು. ನಿರ್ಜೀವ, ನಿರ್ಜನ! ಅದೊಂದು ಮಸಣದ ಹಾದಿ. ದಿಕ್ಕು ತಪ್ಪಿದ ಹಾದಿ. ದಿಕ್ಕೇ ಕಾಣದ ಗಾಢ ಗಾದಿ! ಅಂತಹ ಪಯಣ ಬೇಕೇ?
-ವಿ. ಬದರಿನಾರಾಯಣ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.