ಕಪ್ಪೆಕಾಣಿಕೆ
ವಟವಟಾ ಅನ್ನುವವರಿದ್ದರೆ ತಕ್ಷಣ ನೆನಪಿಗೆ ಬರುವುದು ಕಪ್ಪೆಗಳು. ಕಪ್ಪೆಗಳ ಗುಟುರು ಹಾಕುವಿಕೆ ಮಳೆಗಾಲದ ಪ್ರಾರಂಭದ ಹಂತದಲ್ಲಿ ಜೋರು. ಮಳೆಯನ್ನು ಭೂಮಿಗೆ ಕರೆಯೋ ಜವರಾಯ ಎಂಬ ಮಾತಿದೆ. ಬಾವಿ ಒಳಗಿರುವ ಕಪ್ಪೆಯಂತೆ ಆಡಬೇಡ ಎಂಬ ಹಿತವಾಕ್ಯವೂ ಇದೆ. ಕಪ್ಪೆ ನೋಡಿ ಕಿಟಾರನೆ ಕಿರಿಚಿಕೊಳ್ಳುವ ಹೆಣ್ಮಕ್ಕಳು ಇದ್ದಾರೆ. ಇಲ್ಲಿ ಗಂಭೀರ ವಿಷಯವೆಂದರೆ ಇಂತಹ ಆಡುಮಾತುಗಳು ಮುಂದಿನ ಪೀಳಿಗೆಗೂ ಲಭ್ಯವೇ? ಎಂಬುದಾಗಿದೆ.
ಕಪ್ಪೆಗಳು ಸುಮಾರು 265 ಮಿಲಿಯನ್ ವರ್ಷಗಳಿಂದಲೂ ಅಸ್ತಿತ್ವ ಉಳಿಸಿಕೊಂಡು ಬಂದಿವೆ. ಆದರೆ ಇದೀಗ ಅಳಿವಿನಂಚಿಗೆ ಸಿಲುಕುವ ಮುನ್ಸೂಚನೆಗಳು ಕಾಣಿಸುತ್ತಿವೆ. ನೀರಲ್ಲೂ, ಭೂಮಿಯಲ್ಲೂ ಬದುಕುವ ಅವಕಾಶ ಹೊಂದಿರುವ ಪುಟ್ಟ ಪ್ರಾಣಿ. ಹಾವುಗಳ ನೆಚ್ಚಿನ ಆಹಾರವಾದರು ಕೆಲವೆಡೆ ಹಾವನ್ನೇ ನುಂಗಿ ಅಚ್ಚರಿ ತೋರುತ್ತ ಬಂದಿರುವ ವಿಶಿಷ್ಟ ಜೀವಿ. ಬಣ್ಣಗಳಿಗೆ ಅನುಗುಣವಾಗಿ, ಜೀವಿಸುವ ಪರಿಗೆ ಅನುಚಿತವಾಗಿ ಆಡುಭಾಷೆಗಳಲ್ಲಿ ಹಲವಾರು ಹೆಸರುಗಳಿಂದ ಕರೆಯಲ್ಪಟ್ಟಿವೆ. ಮರಕಪ್ಪೆ, ಹಸಿರು ಕಪ್ಪೆ, ಡೊಂಕರು ಕಪ್ಪೆ ಇತ್ಯಾದಿ ಕಪ್ಪೆಗಳ ವಿಶಿಷ್ಟ ಬಣ್ಣಗಳು ಆಕರಗಳು ಬಹಳಷ್ಟು ವೈಚಿತ್ರಮಯವಾಗಿದ್ದು, ಪ್ರಕೃತಿಯ ಕೊಡುಗೆ ಬಗೆ ಅಚ್ಚರಿ ಮೂಡುತ್ತವೆ.
ಮಡಗಾಸ್ಕರ್ನ ಟ್ರಿಯಾಸಿಕ್ ಎಂಬಲ್ಲಿ ಪ್ರೊಟೊ ಕಪ್ಪೆ ಮೊದಲ ಬಾರಿಗೆ ಕಾಣಸಿಕ್ಕಿತು ಎಂದು ಹೇಳುತ್ತಾರೆ. 250 ಮಿಲಿಯನ್ ವರ್ಷಗಳಿಗೂ ಮುಂಚೆ ಭೂಮಿಯಲ್ಲಿ ಕಪ್ಪೆಗಳಿದ್ದವು ಎಂಬುದನ್ನು ವಿಜ್ಞಾನ ಲೋಕ ತಿಳಿಸುತ್ತದೆ. ಹೆಚ್ಚು ಮಳೆ ಬರುವ ಪ್ರದೇಶಗಳಲ್ಲಿ ಹೆಚ್ಚಾಗಿ ಕಪ್ಪೆಗಳು ಕಂಡುಬರುತ್ತವೆ. ಸುಮಾರು 4800ಕ್ಕೂ ಅಧಿಕ ಜಾತಿಯ ಕಪ್ಪೆಗಳು ಭೂಮಂಡಲದಲ್ಲಿವೆ. ಇತಿಹಾಸ ಹೇಗೆ ಇರಲಿ, ಕಪ್ಪೆಗಳಿಂದ ರೈತನಿಗೆ ಮಾತ್ರ ಬಹು ಉಪಕಾರಿ. ಮಿಡತೆ, ಕ್ರಿಮಿಕೀಟಗಳು, ಮೀನು, ಜೇಡ ಇತ್ಯಾದಿಗಳನ್ನು ತಿನ್ನುವುದರಿಂದ ಹೊಲಗದ್ದೆಗಳಲ್ಲಿ ಹುಳು-ಹುಪ್ಪಟೆಗಳ ಹಾವಳಿಯನ್ನು ತಗ್ಗಿಸುತ್ತವೆ.
ಇಂದು ಕಪ್ಪೆಗಳ ಸಂಖ್ಯೆ ಕ್ಷೀಣಿಸುತ್ತಿದೆ. ಕಾರಣ ನಗರೀಕರಣ. ಮನುಷ್ಯನ ಹಾವಳಿ ಕಪ್ಪೆ ಸಂತತಿ ಮೇಲೆ ಪ್ರಬಲ ಹೊಡೆತ ಬೀಳುತ್ತಿದೆ. ತನಗೆ ಉಪಕಾರಿಯಾದ ಕಪ್ಪೆಗಳನ್ನು ರೈತ ವಿಷವಿಕ್ಕಿ ಕೊಲ್ಲುತ್ತಿದ್ದಾನೆ. ಪ್ರವಾಹ ಬರಗಾಲಗಳಂಥ ಪ್ರಕೃತಿ ವಿಕೋಪಗಳು, ರೈತನ ಎಲ್ಲೆ ಮೀರಿದ ರಾಸಾಯನಿಕಗಳ ಬಳಕೆ, ಕೀಟನಾಶಕ ಸಿಂಪಡಣೆ, ಡ್ಯಾಮ್ ನಿರ್ಮಾಣ ಇತ್ಯಾದಿ ಚಟುವಟಿಕೆಗಳಿಂದ ಕಪ್ಪೆಗಳ ಸಂಖ್ಯೆಯನ್ನು ಕಡಿಮೆಗೊಳಿಸುತ್ತಿದೆ. ವಿಜ್ಞಾನ, ವೈದ್ಯಕೀಯ ವಿಭಾಗಗಳಲ್ಲಿ ಪ್ರಯೋಗ ನಡೆಸುವುದು ಈ ಬಡಪಾಯಿ ಕಪ್ಪೆಗಳ ಮೇಲೆ. ವೈದ್ಯಕೀಯ ಶಿಕ್ಷಣಕ್ಕಾಗಿ ಅತಿ ಹೆಚ್ಚು ಕಪ್ಪೆಗಳು ಬಲಿಯಾಗುತ್ತಿವೆ.
ತೇವಾಂಶವಿರುವ ಕಡೆ, ನೀರಲ್ಲಿ ಮೊಟ್ಟೆಗಳನ್ನಿಡುತ್ತವೆ ಇವು. ಕೀಟನಾಶಕಗಳ ಡಬ್ಬಿಗಳನ್ನು ನೀರೊಳಗೆ ಎಸೆಯುವುದರಿಂದ ಮೊಟ್ಟೆಗಳು ಬಿರಿಯುತ್ತಿಲ್ಲ. ಬಿರಿದರೂ ಸತ್ತು ಹೊರಬರುತ್ತವೆ. ಕಪ್ಪೆಗಳ ಮೇಲೆ ತೋರುವ ದಿವ್ಯ ನಿರ್ಲಕ್ಷ್ಯ ಮುಂದೊಂದು ದಿನದಲ್ಲಿ ಅಳಿವಿನಂಚಿನ ಅಪರೂಪದ ಜೀವಿಗಳಲ್ಲಿ ನೋಡಬೇಕಾದ ಪರಿಸ್ಥಿತಿ ಬರಬಹುದು. ಕಪ್ಪೆಗಳ ಕುರಿತು ಕನಿಕರ ತೋರಬೇಕಿದೆ.
- ಮಂಜುನಾಥ್ ಲಕ್ಷ್ಮೀಪುರ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.