ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ತಮ್ಮ ಬರಹ ಮತ್ತು ಬದುಕಿನ ಬಗ್ಗೆ ಖ್ಯಾತನಾಮ...

Vishwanath S
Updated On : 14 Sept 2013, 3:42 am

ತಮ್ಮ ಬರಹ ಮತ್ತು ಬದುಕಿನ ಬಗ್ಗೆ ಖ್ಯಾತನಾಮ ಬರಹಗಾರರು ಏನು ಹೇಳುತ್ತಾರೆ ಎಂಬುದನ್ನು ಓದುವುದೊಂದು ಸೊಗಸು. ಅಂಥ ಕೆಲವರ ಮಾತುಗಳು ಇಲ್ಲಿವೆ.

ಆಲ್ಬರ್ಟ್ ಕಮು
ಕ್ಲಿಷ್ಟಕರವಾದ ಕರ್ತವ್ಯಗಳಿಂದ ಬರಹಗಾರ ತಪ್ಪಿಸಿಕೊಳ್ಳಲಾರ. ಇತಿಹಾಸವನ್ನು ಸೃಷ್ಟಿಸುವವರ ಸೇವೆಯಲ್ಲಿ ಆತ ತೊಡಗಿಸಿಕೊಳ್ಳಕೂಡದು. ಇತಿಹಾಸದಡಿಯಲ್ಲಿ ನರಳುವವರ ಸೇವೆ ಆತನದಾಗಿರಬೇಕು. ಇಲ್ಲದಿದ್ದರೆ ಆತ ಏಕಾಂಗಿಯಾಗಿ, ತನ್ನ ಕಲೆಯ ಭಾರಕ್ಕೆ ತಾನೇ ಕುಸಿಯಬೇಕಾಗುತ್ತದೆ.
ಚಿನುವ ಅಚಿಬೆ
ನಾನು ನನ್ನ ಮಕ್ಕಳು ಸಣ್ಣವರಿದ್ದಾಗ ಅವರಿಗೆ ಮಲಗುವ ಮುನ್ನ ಕತೆ ಹೇಳುತ್ತಿದ್ದೆ. ನಾನು ಕತೆ ಹೇಳುವಾಗ ಮತ್ತು ಕತೆ ಓದಿ ಹೇಳುವಾಗ, ಅವರ ಕಣ್ಣ ಮಿಂಚಿನಲ್ಲಿ ವ್ಯತ್ಯಾಸವಿರುತ್ತಿತ್ತು. ಕತೆ ಹೇಳುವುದನ್ನು ಕೇಳಲು ಮಕ್ಕಳಿಗೆ ಹೆಚ್ಚು ಇಷ್ಟ ಎನ್ನುವುದರಲ್ಲಿ ಅನುಮಾನವಿಲ್ಲ. ನಾವು ಮೌಖಿಕದಿಂದ ಲಿಖಿತಕ್ಕೆ ಎಲ್ಲವೂ ಬದಲಾಗುವ ಕಾಲಘಟ್ಟದಲ್ಲಿದ್ದೇವೆ.
ಸೂಸನ್ ಸೊಂಟಾಗ್
ಸಾಮಾನ್ಯವಾಗಿ, ಬರೆಯುವಿಕೆಯನ್ನು ಓದುವಿಕೆ ಹತ್ತಿಕ್ಕುತ್ತದೆ. ಓದುವ ಪ್ರೀತಿಯೇ ನಿಮ್ಮನ್ನು ಬರಹಗಾರನಾಗಿಸುವ ಕನಸಿಗೆ ದೂಡುತ್ತದೆ. ಆದರೆ ಓದುವಿಕೆಯಿಂದ ಬರೆಯುವ ಚಟವೂ ಕೆಲವೊಮ್ಮೆ ಸತ್ತುಹೋಗುತ್ತದೆ. ನೀವು ಬರಹಗಾರನಾಗಿ ಸ್ಥಾಪಿತರಾಗಿಬಿಟ್ಟ ಮೇಲಂತೂ, ಇನ್ನೊಬ್ಬರು ಬರೆದದ್ದನ್ನು ಓದುವುದು ಹಾಗೂ ಕ್ಲಾಸಿಕ್‌ಗಳನ್ನು ಮರಳಿ ಓದುವುದು ಒಂದು ಹಿಂಸೆ, ಯಾತನೆ... ಹಾಗೆಯೇ- ಸ್ಫೂರ್ತಿ.
ಜುಂಪಾ ಲಾಹಿರಿ
ಒಂದು ವಾಕ್ಯವನ್ನು ಕಟ್ಟುವುದೆಂದರೆ ಪೋಲರಾಯ್ಡ್ ಕ್ಯಾಮೆರಾ ಸ್ನಾಪ್ ತೆಗೆದಂತೆ. ಬಟನ್ ಒತ್ತಿ, ಅದೇನೋ ಹೊರಬರುತ್ತದೆಂದು ಕಾಯುವುದು. ಬರೆಯುವುದೆಂದರೆ ದಾಖಲಿಸುವುದು, ಹಾಗೇ ಅದರ ಬೆಳವಣಿಗೆಯನ್ನು ಗಮನಿಸುವುದು. ಎಲ್ಲ ವಾಕ್ಯಗಳೂ ಕಾದಂಬರಿ ಅಥವಾ ಕಥೆಯಾಗಿ ಪರಿಣಮಿಸುವುದಿಲ್ಲ. ಆದರೆ ಕಾದಂಬರಿ ಅಥವಾ ಕಥೆಯಲ್ಲಿ ವಾಕ್ಯಗಳು ಬಿಟ್ಟರೆ ಬೇರೇನೂ ಇರುವುದಿಲ್ಲ. ವಾಕ್ಯಗಳೇ ಇಟ್ಟಿಗೆ, ಹಾಗೇ ಅವನ್ನು ಬಂಧಿಸುವ ಲೇಪ; ಅದು ಯಂತ್ರವೂ, ಹಾಗೇ ಅದರ ಇಂಧನವೂ. ಚೀಲವೂ ಅದರ ಹೊಲಿಗೆಯೂ.
ಮಾಯಾ ಏಂಜೆಲೋ
ನನ್ನ ಓದುಗ, ನಾನು ಏನು ಹೇಳುತ್ತಿದ್ದಾನೋ ಅದರಿಂದ ಆಚೆಗೆ ಯೋಚಿಸುವವನಾಗಿರುತ್ತಾನೆ. ಹಾಗಾಗಿ ನಾನು ಬರೆಯುವುದು ನನಗಾಗಿ ಮತ್ತು ನನ್ನಂಥವರಿಗಾಗಿ. ಅದು ಘಾನಾದ ನಾಣ್ಣುಡಿಯಂತೆ 'ಆಳದ ಮಾತು'. ನನ್ನ ಬರಹ ಸೊಗಸಾಗಿದೆ, ಮೆಚ್ಚುವಂತಿದೆ ಅನ್ನಿಸಿದರೆ ಇನ್ನೊಮ್ಮೆ ಓದುವುದೇ ಅದನ್ನರಿಯಲು ಇರುವ ಮಾರ್ಗ. 
ಎಡುವರ್ಡೋ ಗೆಲಿಯಾನೊ
ವಾಸ್ತವವೆಲ್ಲ ಮಾಂತ್ರಿಕತೆಯೇ. ಜಗತ್ತಿನೆಲ್ಲೆಡೆಯೂ ಅದು ಹಾಗೇ. ನಾವದಕ್ಕೆ ಕುರುಡರಾಗಿದ್ದರೂ, ಅದರೊಳಗೆ ಅಚ್ಚರಿ, ನಿಗೂಢಗಳಿವೆ. ಬರೆಯುವುದರ ಮೂಲಕ ಅದನ್ನು ಸ್ವಲ್ಪವಾದರೂ ಹಿಡಿಯಬಹುದೇನೋ.
ಮಾರಿಯೋ ವರ್ಗಾಸ್ ಲೋಸಾ
ಉತ್ತಮ ಸಾಹಿತ್ಯ ವಿಭಿನ್ನ ಜನರ ನಡುವೆ ಸಂಬಂಧ ಬೆಸೆಯುತ್ತದೆ. ಖುಷಿ, ಯಾತನೆ, ಅಚ್ಚರಿಗಳ ಮೂಲಕ ಭಾಷೆಯಾಚೆಗೆ, ನಂಬಿಕೆ, ರೂಢಿ, ಕಾಯಿದೆಗಳಾಚೆಗೆ ನಮ್ಮನ್ನು ಜೋಡಿಸುತ್ತದೆ. ಬೇಜವಾಬ್ದಾರಿ, ಸಿದ್ಧಾಂತ, ಮತ, ಭಾಷೆ, ಮೂರ್ಖತನಗಳಿಂದಾಗಿ ಮಾನವರ ನಡುವೆ ಎದ್ದ ಬೇಲಿಗಳನ್ನು ಒಡೆದುಹಾಕುತ್ತದೆ.


- ಕೇರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement