ಪುಣ್ಯ ಬೇಕು ಇಂಥ ಗುರು ಸಿಗಲು!
ಜೈಪುರ್-ಅತ್ರೋಲಿ ಘರಾಣೆ ಹೀಗೆ ಬೆಳೆಯುತ್ತ ಬೆಳೆಯುತ್ತ ಹಲವಾರು ಅಪ್ರತಿಮ ಕಲಾವಿದರನ್ನು ಹುಟ್ಟಿಸಿತು. ಈ ಘರಾಣೆಯ ಇನ್ನೋರ್ವ ಶ್ರೇಷ್ಠ ಕಲಾವಿದೆ ಎಂದರೆ ಶ್ರೀಮತಿ ಮೂಗುಬಾಯಿ ಕುರ್ಡಿಕರ್. ಕೊಲ್ಹಾಪುರದಲ್ಲಿ ದಾರಿಯಲ್ಲಿ ನಡೆದು ಹೋಗುತ್ತಿದ್ದ ಉಸ್ತಾದ್ ಅಲ್ಲಾದಿಯಾ ಖಾನ್, ಮೂಗುಬಾಯಿಯವರ ರಿಯಾಝ್ ಕೇಳಿ, ಒಳ ಹೋಗಿ ತಮ್ಮ ಪರಿಚಯ ಮಾಡಿಕೊಂಡು 'ಬಾ, ನಾನು ನಿನಗೆ ಕಲಿಸುತ್ತೇನೆ' ಎಂದು ಅವರನ್ನು ಕರೆತಂದಂತಹ ಪ್ರತಿಭಾವಂತೆ ಅವರು. ಆದರೆ ಉಸ್ತಾದರ ಕೆಲವು ಶ್ರೀಮಂತ ಶಿಷ್ಯರಿಗೆ ಇದನ್ನು ಸಹಿಸಲಾಗದೆ ಉಸ್ತಾದರ ಮೇಲೆ ಅವರಿಗೆ ಕಲಿಸದಂತೆ ಒತ್ತಡ ಹೇರತೊಡಗಿದರು. ಹೀಗಾಗಿ ಮೂಗುಬಾಯಿಯವರು ಸ್ವಲ್ಪ ಕಾಲ ಉಸ್ತಾದರ ತಮ್ಮನ ಬಳಿ ಕಲಿಯಬೇಕಾಯಿತು. ಇದಕ್ಕೂ ಅವರಿಗೆ ತೊಂದರೆ ಉಂಟಾಗತೊಡಗಿದಾಗ ಮೂಗುಬಾಯಿಯವರು ಎಲ್ಲವನ್ನು ಬಿಟ್ಟು ತಮ್ಮ ಪಾಡಿಗೆ ತಾವು ರಿಯಾಝ್ ಮಾಡುತ್ತ ಎಲ್ಲವನ್ನೂ ಆ ಭಗವಂತನಿಗೆ ಅರ್ಪಿಸಿ ಇದ್ದುಬಿಟ್ಟರು. ಹೀಗೆ ಸುಮಾರು ವರ್ಷಗಳು ಕಳೆದ ಮೇಲೆ, ಇವರ ಅಪ್ರತಿಮ ಯೋಗ್ಯತೆಯನ್ನರಿತಿದ್ದ ಉಸ್ತಾದರು ಮತ್ತೆ ಮರಳಿ ಬಂದು ಇವರಿಗೆ ತಮ್ಮ ವಿದ್ಯೆಯನ್ನೆಲ್ಲ ಧಾರೆಯೆರೆದು, ಅವರನ್ನು ಮಹಾನ್ ಕಲಾವಿದೆಯನ್ನಾಗಿಸಿದರು. ಮೂಗುಬಾಯಿಯವರ ಮಗಳು ಹಾಗೂ ಶಿಷ್ಯೆಯೇ ಇಂದು ಜಗತ್ಪ್ರಸಿದ್ಧರ ಸಾಲಿಗೆ ಸೇರುವ ಅದ್ಭುತ ಗಾಯಕಿ ಕಿಶೋರಿ ಆಮುಂಕರ್.
ಪಂಡಿತ್ ನಿವೃತ್ತಿ ಬುವಾ ಸರನಾಯಕ್ ಕೂಡ ಅಲ್ಲದಿಯಾ ಖಾನರ ಶಿಷ್ಯೋತ್ತಮರು. ಉಸ್ತಾದರ ಶಿಷ್ಯಪ್ರೇಮವೇ ಹಾಗಿತ್ತು. ಶಿಷ್ಯರಿಗೆ ಸಮಸಮನಾಗಿ ಅಥವಾ ಒಂದು ಪಟ್ಟು ಹೆಚ್ಚೇ ಅವರ ಏಳ್ಗೆಗಾಗಿ ಶ್ರಮಿಸುವ ಇಂಥ ಗುರುವರ್ಯರು ಸಿಗುವುದು ಕಠಿಣವೇ. ಒಬ್ಬನು ಉತ್ತಮ ಕಲಾವಿದನಾಗಬೇಕಾದರೆ ಮೂರು ವಿಷಯಗಳು ಅವನ ಭಾಗ್ಯದಲ್ಲಿ ಇರಬೇಕಂತೆ- ಮೊದಲನೆಯದು, ಅಂತಹ ತಂದೆ,ತಾಯಿ- ಎಂದರೆ ಸಂಗೀತದ ಸಂಸ್ಕಾರವಿರುವ ಕುಟುಂಬದಲ್ಲಿ ಜನನ. ಎರಡನೆಯದು - ಜನ್ಮದಿಂದಲೇ ಬರುವ ಸಂಗೀತಕ್ಕೆ ಅಗತ್ಯವಿರುವ ಪ್ರತಿಭೆಯ ಅಂಶ. ಮೂರನೆಯದು ಹಾಗೂ ಎಲ್ಲಕ್ಕೂ ಮುಖ್ಯವಾಗಿ 'ಗುರು'. ಇದರಲ್ಲೂ ಕೆಲವೊಮ್ಮೆ ಸಂಗೀತಕ್ಕೆ ವ್ಯತಿರಿಕ್ತ ಕುಟುಂಬದಲ್ಲಿ ಜನಿಸಿಯೂ ಅವರ ಪೂರ್ವಸಂಸ್ಕಾರವೆಂಬಂತೆ ಮಹಾನ್ ಕಲಾವಿದರಾದವರಿದ್ದಾರೆ. ಪ್ರತಿಭೆ ಕಡಿಮೆ ಇದ್ದರೂ ಅದನ್ನು ಸಾಧಿಸಿಕೊಂಡವರಿದ್ದಾರೆ. ಆದರೆ 'ಗುರು' ಮಾತ್ರ ಬೇಕೇಬೇಕು. ಇದು ಶ್ರವಣ ವಿದ್ಯೆ ಆದ್ದರಿಂದ, ಈಗಂತೂ ಸಿ.ಡಿ ಕೆಸೆಟ್ಗಳು ಲಭ್ಯವಿರುವುದರಿಂದ ಕೇಳಿ ಹಾಡಬಹುದಲ್ಲ ಎನ್ನಬಹುದು. ಹೌದು, ಹಾಡಬಹುದು. ಅದು ಕೇವಲ ಹಾಡಿದಂತಿರುತ್ತದೆಯೇ ಹೊರತು ಅದರಲ್ಲಿ ಆ 'ಗುರು'ಮುಖೇನ ದೊರೆಯುವ ಅಂತದೃಷ್ಟಿ, ಅರ್ಥ, ಪರಿಪೂರ್ಣತೆ ಇವೆಲ್ಲದರ ಕೊರತೆ ಇರುತ್ತದೆ.
ಉಸ್ತಾದರ ಕುಟುಂಬದಲ್ಲಿ ಅವರ ತಮ್ಮ ಉಸ್ತಾದ್ ಹೈದರ್ ಖಾನ್, ಅವರ ಇಬ್ಬರು ಮಕ್ಕಳು - ಉಸ್ತಾದ್ ಮಂಜೀ ಖಾನ್ ಹಾಗೂ ಉಸ್ತದ್ ಬುರ್ಜೀಖಾನ್ ಕೂಡ ಅನನ್ಯ ಗಾಯಕರೇ. ಮಂಜೀ ಖಾನರ ನಿಜ ನಾಮಧೇಯ 'ಬದ್ರುದ್ದೀನ್' ಎಂದು. ಆದರೆ ಅವರು ಉಸ್ತಾದರ 'ಮಂಝಲಾ'- ಅಂದರೆ 'ಮಧ್ಯದ' ಮಗನಾಗಿದ್ದುದರಿಂದ ಅವರಿಗೆ 'ಮಂಜೀ' ಎಂದು ಕರೆದು ಅದೇ ಹೆಸರು ಜನಪ್ರಿಯವಾಗಿಬಿಟ್ಟಿತು. 'ಬುರ್ಜೀ' ಎಂಬುದೂ ಹೆಸರಲ್ಲ. ಅವರ ಮೂರನೇಯ, ಕೊನೆಯ ಮಗ ಎಂದು ಅವರನ್ನು 'ಬುರ್ಜೀ' ಎನ್ನುತ್ತಿದ್ದರು. ಅವರ ನಿಜ ನಾಮಧೇಯ ಉಸ್ತಾದ್ 'ಶಂಶುದ್ದೀನ್ ಖಾನ್'.
ತಮ್ಮ ತಂದೆಯಿಂದ ವಿದ್ಯೆ, ತಾಲೀಮು ಹಾಗೂ ಬೆಣ್ಣೆಯಂತೆ ನಯವಾದ, ಭಾವಪೂರಿತ ಅಪೂರ್ವ ಕಂಠವನ್ನು ಹೊಂದಿದ್ದ ಉಸ್ತಾದ್ ಮಂಜೀ ಖಾನರನ್ನು ಒಂದು ರೀತಿಯ 'ರೆಬೆಲಿಯನ್ ಗಾಯಕ' ಎನ್ನಲಾಗುತ್ತದೆ. ಅಂದರೆ ಕಿರಾಣಾ ಘರಾಣೆಯ ಉಸ್ತಾದ್ ಅಬ್ದುಲ್ ಕರೀಂ ಅವರಿಗಾಗಲೀ, ಆಗ್ರಾ ಘರಾಣೆಯ ಉಸ್ತಾದ್ ಫಯಾಜ್ ಖಾನರಾಗಲಿ ಹೇಗೆ ತಮ್ಮ ಘರಾಣೆಗೆ ಒಂದು ಹೊಸ ರೂಪವನ್ನೇ ತಂದಿಟ್ಟರೋ, ಹಾಗೆ ಮಂಜೀ ಖಾನರು ತಮ್ಮ ತಂದೆಯ ಘರಾಣೆಯ ಎಲ್ಲ ಅಂಶಗಳನ್ನೂ ತಮ್ಮದಾಗಿಸಿಕೊಂಡು ಅದಕ್ಕೆ ತಮ್ಮದೇ ಆದ ಹೊಸ ಹೊಸ ರೂಪವನ್ನು - ದೃಷ್ಟಿಯನ್ನು ಕೊಟ್ಟ ದೃಷ್ಟಾರರು. ತಮ್ಮ ಹೊಸ ಹೊಸ ಆವಿಷ್ಕಾರಗಳಿಂದ ಅವರು ಕೆಲವೊಮ್ಮೆ ಸಂಪ್ರದಾಯವಾದಿ ಅಲ್ಲಾದಿಯಾ ಖಾನರ ಕೆಂಗಣ್ಣಿಗೆ ಗುರಿಯಾಗಿದ್ದೂ ಇದೆ. ಆದರೆ ಸಂಗೀತ ರಸಿಕರ ದುರಾದೃಷ್ಟ, ಮಂಜೀ ಖಾನರು ಬಹು ಬೇಗ - ತಮ್ಮ 49ನೇ ವಯಸ್ಸಿನಲ್ಲೇ ಬೆನ್ನುಹುರಿಯಲ್ಲಿ ನೀರು ತುಂಬಿಕೊಳ್ಳುವ ಒಂದು ವ್ಯಾಧಿಯಿಂದ ಅಕಾಲ ವಿಧಿವಶರಾದರು. ಬಹುಶಃ ಇದು ಜೈಪುರ್-ಅತ್ರೌಲಿ ಘರಾಣೆಗೇ ತುಂಬಿಸಲಾಗದ ಒಂದು ನಷ್ಟ. ಬುರ್ಜೀ ಖಾನ್ ಕೂಡ ಚಿಕ್ಕಂದಿನಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದು ನಂತರ ಚೇತರಿಸಿಕೊಂಡು ಹಲವಾರು ದಶಕಗಳ ಕಾಲ ಸಂಗೀತ ಸೇವೆ ಮಾಡಿ ತಮ್ಮ 62ನೇ ವಯಸ್ಸಿನಲ್ಲಿ ತೀರಿಕೊಂಡರು. ಬುರ್ಜೀ ಖಾನರ ಮಗ - ಅಜೀಜುದ್ದೀನ್ ಖಾನ್ ಬಾಬಾ ಕೂಡ ತಮ್ಮ ಅಜ್ಜನ ಬಳಿ, ತಂದೆಯ ಬಳಿ ಕಲಿತು ಮೊನ್ನೆಮೊನ್ನೆ ಎಂದರೆ 2011ರವರೆಗೆ ಕೊಲ್ಹಾಪುರದಲ್ಲಿ ವಾಸವಾಗಿದ್ದು ಸಂಗೀತ ಸೇವೆ ಮಾಡಿ ಕೊನೆಯುಸಿರೆಳೆದರು.
ಮಂಜೀ ಹಾಗೂ ಬುರ್ಜೀ ಖಾನರ ಶಿಷ್ಯ ಪರಂಪರೆಯಲ್ಲಿ ಅತ್ಯಂತ ಪ್ರಸಿದ್ಧರಾದವರೇ ಸಂಗೀತ ಲೋಕದ ಇನ್ನೊಂದು ಧ್ರುವ ತಾರೆ, ಕರ್ನಾಟಕದ ಪಂ.ಮಲ್ಲಿಕಾರ್ಜುನ ಮನ್ಸೂರ್. ಇದೇ ಘರಾಣೆಯಲ್ಲಿ ಶ್ರೀಮತಿ ಧೋಂಡುತಾಯಿ ಕುಲಕರ್ಣಿ, ಪಂ.ವಾಮನರಾವ್ ಸಾಡೋಲಿಕರ್, ಶ್ರುತಿ ಸಾಡೋಲಿಕರ್, ಪದ್ಮಾವತಿ ಸಾಲಿಗ್ರಾಮ್, ಡಾ.ಬಬನ್ರಾವ್ ಹಳದನ್ಕರ್, ಪದ್ಮಾ ತಲವಾಲ್ಕರ್... ಹೀಗೆ ಹೆಸರಾಂತ ಕಲಾವಿದರ ಪಟ್ಟಿಯೇ ಸಿಗುತ್ತದೆ.
- ಶ್ರುತಿ ಭಟ್
shrutikbhat@gmail.com