ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ಬಚ್ಚಲಲ್ಲಿ ಬಾಲಮುರಳಿ ಸಂತೆಯಲ್ಲಿ ಬೇಂದ್ರೆ

Vishwanath S
Updated On : 14 Sept 2013, 6:34 am

ನನ್ನ ಅನೇಕ ಕವಿತೆಗಳು (ಉದಾ: 'ಗೋಪಿ ಮತ್ತು ಗಾಂಡಲೀನ', 'ಫೋಟೋಗ್ರಾಫರ್‌', 'ಟುವಟಾರ'), ಭಾವಗೀತೆಗಳು (ಉದಾ: 'ಜಾಲಿಬಾರಿನಲ್ಲಿ', 'ನಿಂಬೆಗಿಡ', 'ಅಮ್ಮ ನಿನ್ನ ಎದೆಯಾಳದಲ್ಲಿ') ನನಗೆ ಅಪಾರ ಜನಪ್ರಿಯತೆ ತಂದುಕೊಟ್ಟಿವೆ. ಆದರೆ, ಒಬ್ಬ ಗಂಭೀರ ಸೃಜನಶೀಲ ಕವಿಯಾಗಿ ನನಗೆ ತೃಪ್ತಿ ಮತ್ತು ಧನ್ಯತೆ ನೀಡಿದ, ನನಗೆ ವೈಯಕ್ತಿಕವಾಗಿ ತುಂಬ ಇಷ್ಟವಾದ ನನ್ನ ರಚನೆಯೆಂದರೆ 'ಗುಂಡಪ್ಪ ವಿಶ್ವನಾಥ್‌' ಎಂಬ ನನ್ನ ಕವಿತೆ.
ಸಾಹಿತ್ಯ ಬಿಟ್ಟರೆ ನನಗೆ ಅತ್ಯಂತ ಆಸಕ್ತಿಯ ಸಂಗತಿಗಳು ಸಂಗೀತ ಮತ್ತು ಕ್ರಿಕೆಟ್. ಕವಿಯಾಗುವ ಮೊದಲು ನಾನು ಚಿಕ್ಕಂದಿನಿಂದಲೂ ಗಾಯಕನಾಗಿದ್ದೆ. ತಕ್ಕ ಮಟ್ಟಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತದ ಅಭ್ಯಾಸ ಸಹ ಮಾಡಿದ್ದೆ. ಆದರೆ ಕ್ರಿಕೆಟ್ ಬಗ್ಗೆ ನನಗೆ ವಿದ್ಯಾರ್ಥಿ ದೆಸೆಯಲ್ಲಿ ಅಂಥ ಆಸಕ್ತಿಯೇನೂ ಇರಲಿಲ್ಲ. ಆಸಕ್ತಿ ಶುರುವಾದದ್ದು ನಾನು 1967ರಲ್ಲಿ ಬಿ.ಎ. ಪದವಿ ಮುಗಿಸಿ, ಉಪಾಧ್ಯಾಯನಾಗಿ ನನ್ನೂರಾದ ಚಿಂತಾಮಣಿಯಲ್ಲಿ ಕೆಲಸಕ್ಕೆ ಸೇರಿದ ನಂತರ. ಅದಕ್ಕೆ ಮುಖ್ಯ ಕಾರಣ ಆಗಷ್ಟೇ ಟೆಸ್ಟ್ ಕ್ರಿಕೆಟ್ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ್ದ, ಕರ್ನಾಟಕದವನೇ ಆದ ತರುಣ ವಾಮನಮೂರ್ತಿ ಜಿ.ಆರ್. ವಿಶ್ವನಾಥ್ ಅರ್ಥಾತ್ ಗುಂಡಪ್ಪ ವಿಶ್ವನಾಥ್. ತನ್ನ ಚೊಚ್ಚಲ ಟೆಸ್ಟ್ ಕ್ರಿಕೆಟಟ್ ಪಂದ್ಯದಲ್ಲೇ ದೈತ್ಯ ಆಸ್ಟ್ರೇಲಿಯ ತಂಡದ ವಿರುದ್ಧ ಶತಕ ಗಳಿಸಿದ ವಿಶ್ವನಾಥನ ಆಟಕ್ಕೆ ರೇಡಿಯೊ ಕಾಮೆಂಟರಿ ಕೇಳಿಯೇ ನಾನು ಮಾರುಹೋಗಿದ್ದೆ. ನಂತರ ಅವನ ಕಲಾತ್ಮಕ ಆಟವನ್ನು ಕಣ್ಣಾರೆ ನೋಡಲೆಂದೇ ನಾನು ಬೆಂಗಳೂರು ಹಾಗೂ ದೂರದ ಪೂನಾ, ಮದ್ರಾಸಿಗೆ ಹೋಗಿಬಂದೆ. ಅವನ ಕೋಟ್ಯಂತರ ಆರಾಧಕರಲ್ಲಿ ನಾನೂ ಒಬ್ಬನಾದೆ.
ಕ್ರಮೇಣ ವಿಶ್ವನಾಥನಿಗೆ ವಯಸ್ಸಾಯಿತು. ಅವನ ಕಲಾಕೌಶಲ ಮಂಕಾಯಿತು. ಅವನು ಕ್ರಿಕೆಟ್ಟಿನಿಂದ ನಿವೃತ್ತನಾದ. ಆದರೆ ವಯಸ್ಸಾಗುವುದು ಕಲಾವಿದನಿಗಷ್ಟೇ ಹೊರತು ಕಲೆಗಲ್ಲವಲ್ಲ! ಅದು ನಿತ್ಯವಿನೂತನ, ನಿತ್ಯ ನಿರಂತರ. ಅವನ ಖಾಲಿಯಾದ ಜಾಗವನ್ನು ಪ್ರತಿಭಾವಂತ ಹೊಸ ಯುವಕರು ತುಂಬಿದರು. ಕಲಾವಿದನನ್ನು ಹಿಂದಿಕ್ಕಿ ಕಲೆ ಮುಂದುವರಿಯಿತು. ಇದು ಕಲಾವಿದನ ಮಟ್ಟಿಗೆ ವೈಯಕ್ತಿಕ ಅನಿವಾರ್ಯ ದುರಂತವಾದರೂ ಕಲೆಯ ಮಟ್ಟಿಗೆ ನಿತ್ಯ ವಿಜಯ. ಈ ಮಾತು ಒಬ್ಬ ಕ್ರೀಡಾಪಟುವಿನಂತೆಯೇ ಕವಿ, ಸಂಗೀತಗಾರ, ಶಿಲ್ಪಿ, ವರ್ಣಚಿತ್ರಕಾರ- ಹೀಗೆ ಎಲ್ಲ ಸೃಜನಶೀಲರಿಗೂ ಅನ್ವಯಿಸುವ ಸಂಗತಿಯಲ್ಲವೇ, ಅನ್ನಿಸಿ ಈ ಬಗ್ಗೆ ಒಂದು ಕವಿತೆ ಬರೆಯಬೇಕನ್ನಿಸಿತು. ಹೀಗೆ ಬೀಜಾಂಕುರವಾದ ಕವಿತೆ: 'ಗುಂಡಪ್ಪ ವಿಶ್ವನಾಥ್‌'.
ಆ ಕವಿತೆಯನ್ನು ನಾನು ಬರೆಯಲು ಪ್ರಾರಂಭಿಸಿದ್ದು 16-4-1983ರಲ್ಲಿ, ಬೇಸಿಗೆ ರಜಕ್ಕೆ ಸಕುಟುಂಬ ಶಿವಮೊಗ್ಗದ ಮಾವನ ಮನೆಗೆ ಹೋಗಿದ್ದಾಗ. ಅದು 33 ಸಾಲುಗಳ ಚಿಕ್ಕ ಕವಿತೆಯಾದರೂ ಅದನ್ನು ತಿದ್ದಿ ತೀಡಿ ಪೂರೈಸಲು ನನಗೆ ಸುಮಾರು ಒಂದು ತಿಂಗಳು ಬೇಕಾಯಿತು. ನಂತರ ಕೂಡಲೇ ಅದನ್ನು ನನ್ನ ನೆಚ್ಚಿನ ಗೆಳೆಯ, ಖ್ಯಾತ ಕವಿ ಎಚ್.ಎಸ್. ವೆಂಕಟೇಶಮೂರ್ತಿಗೆ ಅಂಚೆಯಲ್ಲಿ ಕಳಿಸಿಕೊಟ್ಟೆ. ಅವನಿಂದ ಅತಿ ಶೀಘ್ರದಲ್ಲೇ ಮಾರೋಲೆ ಬಂತು. 'ಯು ಡಿಡ್ ಇಟ್ ಇದು ಈವರೆಗಿನ ನಿನ್ನ ಅತ್ಯುತ್ತಮ ಕವಿತೆ' ಎಂದು ಮೆಚ್ಚಿದ್ದ. ಇದರಿಂದ ಉತ್ತೇಜಿತನಾಗಿ ನಾನು ಕವಿತೆಯ ಪ್ರತಿಯನ್ನು ಹಲವು ಹಿರಿಯ ಕವಿಗಳಿಗೆ ಹಾಗೂ ಕವಿಮಿತ್ರರಿಗೆ ಕಳಿಸಿಕೊಟ್ಟೆ. ಬಹುಪಾಲು ಎಲ್ಲರಿಂದಲೂ ಉತ್ಸಾಹದ ಪ್ರತಿಕ್ರಿಯೆ ಬಂತು.
ಆ ವರ್ಷದ ದೀಪಾವಳಿ ವಿಶೇಷಾಂಕಕ್ಕೆ ಒಂದು ಪ್ರತಿಷ್ಠಿತ ಪತ್ರಿಕೆಯಿಂದ ನನ್ನ ಕವಿತೆಗಾಗಿ ಆಹ್ವಾನ ಬಂತು. 'ಗುಂಡಪ್ಪ ವಿಶ್ವನಾಥ್‌' ಕವಿತೆ ಕಳಿಸಿಕೊಟ್ಟೆ. ಅದು ಸಂಪಾದಕರ ಪತ್ರದೊಂದಿಗೆ ಹಿಂದಿರುಗಿ ಬಂತು. ಅವರು ಬರೆದಿದ್ದರು, 'ನಿಮ್ಮ ಕವಿತೆ ಕ್ಲಿಷ್ಟವಾಗಿದೆ. ನನಗೆ ಅರ್ಥವಾಗಲಿಲ್ಲ. ಸಾಮಾನ್ಯ ಓದುಗರಿಗೂ ಅರ್ಥವಾಗುವಂಥ ಬೇರೊಂದು ಕವಿತೆ ಕಳಿಸಿಕೊಡಿ'. ನನಗೆ ತುಂಬ ನಿರಾಸೆಯಾಯಿತು. ಜೊತೆಗೆ ಸಂಪಾದಕರ ಮಾತು ಸರಿಯೆಂದೂ ಅನ್ನಿಸಿತು. ಏಕೆಂದರೆ 'ಗುಂಡಪ್ಪ ವಿಶ್ವನಾಥ್‌' ಒಂದು ಸಂಕೀರ್ಣ ಹೆಣಿಗೆಯ ಪ್ರತಿಮಾತ್ಮಕ ಕವಿತೆ. ಪರಿಣತ ಕಾವ್ಯಾಭ್ಯಾಸಿಯ ಗಂಭೀರ ಓದನ್ನು ಬಯಸುವಂತಿತ್ತು ಅದರ ವಿನ್ಯಾಸ. ನಾನಾದರೂ ಏನು ಮಾಡಲು ಸಾಧ್ಯ? ಆ ಕವಿತೆ ತಾನಾಗಿ ರೂಪುಗೊಂಡಿದ್ದೇ ಹಾಗೆ. ಒಟ್ಟಾರೆ ಅದು ವಿದ್ವಜ್ಜನರ ಮನ್ನಣೆಗೆ ಪಾತ್ರವಾದದ್ದಂತೂ ನಿಜ. ಪದವಿ ಪರೀಕ್ಷೆಯ ವಿದ್ಯಾರ್ಥಿಗಳಿಗೆ ಪಠ್ಯವಾಗುವ ಗೌರವಕ್ಕೂ ಅದು ಪಾತ್ರವಾಯಿತು.
ಇನ್ನೊಂದು ಸ್ಮರಣೀಯ ಸಂಗತಿಯೆಂದರೆ, ಆ ಕವಿತೆಯನ್ನು ನಾನು ನನ್ನ ಯೌವನ ಕಾಲದ ಕ್ರಿಕೆಟ್ ಹೀರೊ ಗುಂಡಪ್ಪ ವಿಶ್ವನಾಥರಿಗೆ ಖುದ್ದಾಗಿ ಓದಿ ತೋರಿಸುವ ಅವಕಾಶವಾದದ್ದು. ಅದು ಕೈಗೂಡಿದ್ದು ಹೀಗೆ: ಖ್ಯಾತ ನಾಯಕ ನಟ, ಪ್ರಣಯರಾಜನೆಂದು ಬಿರುದಾಂಕಿತರಾದ ಶ್ರೀನಾಥ್ ನನ್ನ ಭಾವಗೀತೆಗಳ ಅಭಿಮಾನಿ ಹಾಗೂ ಆ ಮೂಲಕ ನನ್ನ ಆತ್ಮೀಯ ಮಿತ್ರರಾದವರು. ಒಮ್ಮೆ ಅವರೆದುರು 'ಗುಂಡಪ್ಪ ವಿಶ್ವನಾಥ್‌' ಕವಿತೆಯನ್ನು ನಾನು ಓದಿದೆ. ವಿಶ್ವನಾಥ್, ಶ್ರೀನಾಥರ ಖಾಸಾ ಗೆಳೆಯ. ಹೀಗಾಗಿ ವಿಶ್ವನಾಥ್ ಅವರಿಗೆ ಆ ಕವಿತೆಯನ್ನು ಕೇಳಿಸಬೇಕೆಂದು ಶ್ರೀನಾಥ್ ಬಯಸಿದರು. ಅದಕ್ಕೆಂದೇ ಸೆಂಚುರಿ ಕ್ಲಬ್ಬಿನಲ್ಲಿ ಒಂದು ಸಂಜೆ ನಮ್ಮನ್ನೆಲ್ಲ (ಎಚ್ಚೆಸ್ವಿ, ಎಂ.ಎನ್. ವ್ಯಾಸರಾವ್, ವಿಶ್ವನಾಥ್ ಮತ್ತು ನಾನು) ಒಟ್ಟುಗೂಡಿಸಿದರು. ಕವಿತೆಯನ್ನು ನಾನು ವಿಶ್ವನಾಥ್ ಅವರಿಗೆ ಓದಿ ಹೇಳಿದೆ. ಎಚ್ಚೆಸ್ವಿ ವಿಶ್ಲೇಷಣೆ ಮಾಡಿ ಅದರ ಸ್ವಾರಸ್ಯವನ್ನು ಎಳೆ ಎಳೆಯಾಗಿ ಬಿಡಿಸಿ ತೋರಿಸಿದ. ಕನ್ನಡ ಸಾರಸ್ವತ ಲೋಕಕ್ಕೂ ತಾನು ಈ ಮೂಲಕ ತಲುಪಿದ್ದಕ್ಕಾಗಿ ವಿಶ್ವನಾಥ್ ತುಂಬ ಸಂತೋಷ ಮತ್ತು ಮೆಚ್ಚುಗೆ ವ್ಯಕ್ತಪಡಿಸಿದರು. ನನ್ನ ಹೃದಯ ಅಂದು ಅವರ್ಣನೀಯ ಆನಂದ ಮತ್ತು ಧನ್ಯತೆಯಿಂದ ತುಂಬಿ ತುಳುಕಿತು.

ಗುಂಡಪ್ಪ ವಿಶ್ವನಾಥ್
1
ಬಿಟ್ಟ ಕಣ್ಣು ನೆಟ್ಟ ನೋಟ ಹಿಗ್ಗಲಿಸಿದ ರೆಪ್ಪೆ
ನಿಶ್ಶಬ್ದ ಸಿಡಿದ ಗುಂಡು ಕುಸಿದುಬಿತ್ತೆ ಕೋಟೆ?
ಹೊಳೆದ ಮಿಂಚು ಸುಳಿದ ನಗೆ ವಾಹ್ ವಾ! ಚಪ್ಪಾಳೆ
 
ಆಡಿದಂತೆ ಕುಶಲ ಕುಂಚ ಪಟ್ಟಕದಲಿ ಕಿರಣ
ಕುಲುಕು ನೀಲಿ ಬಳುಕು ಪಚ್ಚೆ ತೊನೆಯುವ ತೆನೆ ಚಿನ್ನ
ಹಿತ ಗುಲಾಬಿ ಸ್ಪರ್ಶ ಪುಳಕ ತುಳುಕು ಪ್ರೇಮಗಾನ
 
ತಾರಕಸ್ತರದೇರು ಲೀಲಾಜಾಲ ಮೇರುಧ್ವನಿ
ಮಧ್ಯಮ ಜನಸಾಮಾನ್ಯರ ದೈನಂದಿನ ಬನಿ
ಮಂದ್ರದೋಂಕಾರದಲ್ಲಿ ಒಳಕ್ಕಿಳಿದ ಮುನಿ
 
ನಗರದ ದಟ್ಟಡವಿಯಲ್ಲಿ ಅಪರೂಪದ ದೃಶ್ಯ
ಏಕಾಗ್ರ ಧ್ಯಾನ ಏಕಾಂತ ಏಕಲವ್ಯ
ಪ್ರತಿಭೆ ಅನಾಯಾಸ ಕಡೆದ ಸಹಜಸ್ಫೂರ್ತ ಕಾವ್ಯ
 
2
ಪಂಚತಾರಾ ಮಂಚದಲ್ಲಿ ಏದುಸುರಿನ ಬೊಜ್ಜು
ರೇಡಿಯೊ ಟೀವಿ ಪತ್ರಿಕೆ ಸಾಲು ನಿಂತು ಸಜ್ಜು
ಪೋಸುಗಳ ಗಮ್ಮತ್ತಿನಲ್ಲಿ ಮುಗ್ಧ ನಜ್ಜುಗುಜ್ಜು
 
ಗುಮ್ಮಟ ದುಪ್ಪಟ್ಟು ಕಟೌಟ್ ಕ್ಯಾಲೆಂಡರ್ ನಟಿ
ಯಾಹೂ ಲುಬಲುಬ ಡಿಸ್ಕೋ ಗಣಕ ಗಾನರತಿ
ಹೊಸೆಯುವ ಮೈಮಸೆಯುವ ತತ್ತರಿಸುವ ಕ್ಯಾಬರಿ
 
ನಾದ ಗೆಜ್ಜೆ ಕುಂಚ ಉಳಿ ಬಂದಳಿಕೆಯ ತೀಟೆ
ಹಸಿವೆಗೆ ಅಳು ನಾದ, ಗೆಜ್ಜೆ ಸೂಳೆಯ ಹುಸಿ ಲಜ್ಜೆ
ಕನ್ನಕೆ ಉಳಿ, ಚೂರಿ ಕುಂಚ, ಹಚ್ಚೆ ಕೆಂಪು ನಕ್ಷೆ
 
3
ಜೋಪಡಿಯಲಿ ಜೋಗುಳ ಅಂಗಳದಲಿ ಹೂಹಸೆ
ಚಿಂದಿಯಲ್ಲಿ ಹಿಗ್ಗು ಹರೆಯ ಉಬ್ಬು ನಿಗುರು ಸೊನೆ
ಹಟ್ಟಿಯಲ್ಲಿ ಗಬ್ಬ ಹಬ್ಬ ಅಜ್ಜ ಮಾಗುನಗೆ
 
ಶಾಲೆ ದೊಡ್ಡಿ ಮಂಪರಲ್ಲಿ ಚೂಪುಗಣ್ಣ ಹಸುಳೆ
ಬಚ್ಚಲಲ್ಲಿ ಬಾಲಮುರಳಿ ಸಂತೆಯಲ್ಲಿ ಬೇಂದ್ರೆ
ಹಿತ್ತಿಲಲ್ಲಿ ಕ್ರಿಕೆಟ್ ಛಿದ್ರ ಹೆಂಚು ಊದುಗೆನ್ನೆ
 
ಅಂಡಾಣು ಪ್ರತಿಭೆ ಲಕ್ಷ ವೀರ್ಯಾಣು ಪರಿಶ್ರಮ
ಹುಟ್ಟಿದ ಕಲೆ ವಾಮನ ಬೆಳೆಬೆಳೆದಂತೆ ತ್ರಿವಿಕ್ರಮ
ವಾಟ್ ಎ ಶಾಟ್! ವಾಟ್ ಗ್ರೇಸ್!
ವಿಸ್ಮಯ ಖುಷಿ ಸಂಭ್ರಮ
 
4
ವೈಭವಗಳ ಹಂಪೆಯಲ್ಲಿ ಅಂಡಲೆಯುವ ಭೂತ
ಸವೆದ ಸ್ಪರ್ಶಮಣಿ, ಕಂಟ ಕುಂಚ ಉಳಿ ಅನಾಥ
ಕೃತಜ್ಞತೆ, ಸಹಾನುಭೂತಿ, ಗೆಳೆಯ ವಿಶ್ವನಾಥ

ಮೂರ್ತಿ ಕಂಡಂತೆ  ಕವಿತೆ
ಕೇವಲ ಒಂದು ವ್ಯಕ್ತಿಚಿತ್ರದಂತೆ ತೊಡಗುವ 'ಗುಂಡಪ್ಪ ವಿಶ್ವನಾಥ್‌' ಕವಿತೆ ತನ್ನ ಹವಣನ್ನೂ ಮೀರಿ ಬೆಳೆಯುತ್ತದೆ. ಇಲ್ಲಿ ಮಾತು ಕಮ್ಮಿ, ಶಿಲ್ಪ ಬಿಗಿ, ಒಳ ಹೆಣಿಗೆಗಳು ದಟ್ಟ. ಕವಿತೆಯ ನಡೆ ಹೇಳುವ ಸಂಗತಿಯೊಂದಿಗೆ ತಾದಾತ್ಮ್ಯ ಪಡೆಯುತ್ತದೆ.
ವಿಶ್ವನಾಥರ ಆಟದ ಕಲಾತ್ಮಕತೆಯನ್ನು ಪ್ರತಿಮೆಗಳ ಸಂಯೋಜನೆಗಳ ಮೂಲಕವೇ ಮೊದಲ ಭಾಗದಲ್ಲಿ ಕಟ್ಟಿಕೊಡಲಾಗುತ್ತದೆ. ಚಿತ್ರಕಲೆ, ಸಂಗೀತ ಮತ್ತು ಕ್ರೀಡೆಗೆ ಸಂಬಂಧಿಸಿದ ಪ್ರತಿಮೆಗಳು ಅಲ್ಲಿ ತಳುಕು ಹಾಕಿಕೊಳ್ಳುವ ಬಗೆ ರೋಚಕವಾಗಿದೆ. ಮೊದಲ ಚರಣದ ಪ್ರಿಯವಾದ ಆಕ್ರಮಣದೊಂದಿಗೆ ಈ ಪ್ರತಿಮಾ ನಿರ್ಮಾಣವನ್ನು ಯೋಜಿಸಲಾಗಿದೆ. ಈ ಪ್ರತಿಮೆಗಳಲ್ಲಿ ಕಾಣುವ ಆಟದ, ಏಕಾಗ್ರತೆಯ ಮತ್ತು ಅಂತರ್ಮುಖತೆಯ ನಿಲುವುಗಳು ಒಟ್ಟು ಗ್ರಹಿಕೆಯನ್ನು ಸಂಪದ್ಭರಿತಗೊಳಿಸುತ್ತವೆ.
ಇದು ಮೊದಲ ಘಟ್ಟ. ಪ್ರತಿಭೆಯ ಮಂತ್ರದಂಡ ಕೈ ಜಾರಿದ ದುರಂತದ ಘಟ್ಟ ಎರಡನೆಯದು. ಬೊಜ್ಜು, ಪ್ರಸಿದ್ಧಿ, ಕುಗ್ಗುವ ಇಂದ್ರಿಯ ಪಾಟವ, ಪರಿಶ್ರಮದಿಂದ ಮೊಂಡುತನದಿಂದ ಹಿಂದಿನ ಪ್ರತಿಭೆಯನ್ನು ಗೆಲ್ಲುವ ಯತ್ನ, ಆಗ ಉಂಟಾಗುವ ಸೋಲಿನಿಂದ ಪಡಬೇಕಾಗುವ ಯಾತನೆ- ಈ ಎಲ್ಲವೂ ಎರಡನೆಯ ಘಟ್ಟದಲ್ಲಿ ಮತ್ತೆ ಸೂಕ್ತ ಪ್ರತಿಮೆಗಳಾಗಿ ಮೈದಾಳುತ್ತವೆ. ಮೊದಲ ಭಾಗದ ವಿಡಂಬನೆಯಂತೆ ಬರುವ ಈ ಪ್ರತಿಮೆಗಳು ಪರಿವರ್ತನೆಯ ದುರಂತವನ್ನು ಕನಿಕರ ಬರುವಂತೆ ನಟಿಸತೊಡಗುತ್ತವೆ. ಮತ್ತೆ ಅದೇ ಸಂಗೀತ, ಅದೇ ಚಿತ್ರ, ಅದೇ ನರ್ತನ ಸ್ಥೂಲನೆಲೆಗೆ ಬಂದು ಜಡಗೊಳ್ಳುತ್ತಾ ಹೋಗುವುದು ಅನುಕಂಪೆಯನ್ನು ಕಡೆಯುತ್ತದೆ.
ಮೂರನೆಯ ಘಟ್ಟದಲ್ಲಿ ಒಮ್ಮೆಗೇ ಕಲಾವಿದನ ಭೂತ ಮತ್ತು ಕಲೆಯ ಭವಿಷ್ಯ ಎರಡನ್ನೂ ಧ್ವನಿಸುವಂತೆ ಮಾಡಲಾಗಿದೆ. ಒಂದು ಸಾಮಾನ್ಯ ವಾತಾವರಣದಿಂದ ಒಬ್ಬ ಕಲಾವಿದ ಅವತರಿಸಿದನಲ್ಲ ಎಂಬುದು ಒಂದು ನೆಲೆ. ಈ ಕಲಾವಿದ ಮುಗಿದನಲ್ಲ! ಆದರೆ ಮುಗಿದನೆ? ಇವನದೇ ಸ್ಫೂರ್ತಿ ಇನ್ನೊಂದು ಮನೆಯಂಗಳದಲ್ಲಿ ಇನ್ನೊಬ್ಬ ಬಾಲಕಲಾವಿದನನ್ನು ಹುಟ್ಟುಹಾಕುತ್ತಿಲ್ಲವೇ? ಹೀಗೆ ಕಲೆ ನಿರಂತರವಾದುದೆಂದೇ ನಾವು ಸಾಂತ್ವನ ಪಡೆಯಬೇಕೇ? ನಿರಂತರವಾದ ಕಲೆಯನ್ನು ಕೈಯಿಂದ ಕೈಯಿಗೆ ದಾಟಿಸುವುದಷ್ಟೇ ಶತಮಾನಗಳಿಂದ ಕಲಾವಿದರು ವಹಿಸುತ್ತಾ ಬಂದಿರುವ ಪಾತ್ರವೇ?
ಕೊನೆಯ ಘಟ್ಟ ಮೂರೇ ಸಾಲುಗಳದ್ದು. ಇಲ್ಲಿ ವಿಶ್ವನಾಥರೊಂದಿಗೆ ಕವಿ 'ಸಹಾನುಭೂತಿ' ವ್ಯಕ್ತಪಡಿಸುವಲ್ಲಿ ಕವಿತೆಯನ್ನು ವೈಯಕ್ತಿಕ ನೆಲೆಯಿಂದ ವಿಶಾಲ ಬದುಕಿನ ನೆಲೆಗೆ ಬಿಡಿಸಿಕೊಳ್ಳಲು ಸಾಧ್ಯವಾಗುತ್ತದೆ. ವ್ಯಕ್ತಿಯನ್ನು ಹೀಗೆ ಸಾರ್ವತ್ರಿಕ ಅರ್ಥ ನೀಡಬಲ್ಲ ಪ್ರತಿಮೆಯಾಗಿ ರೂಪಾಂತರಿಸಿದಾಗ ಮಾತ್ರ ವ್ಯಕ್ತಿಚಿತ್ರ ಕಾವ್ಯವಾಗಿ ಸಫಲವಾಗುವುದಷ್ಟೇ?
ಇದು ಲಕ್ಷ್ಮಣರಾವ್ ಪ್ರತಿಮಾ ಮಾರ್ಗದಲ್ಲಿ ಮಾಡಿದ ಅತ್ಯುತ್ತಮ ಕೃತಿ ಎಂದು ನಾನು ಭಾವಿಸುತ್ತೇನೆ. ಅವರ 'ಟುವಟಾರ', 'ವಾ-ನರಗೀತೆ', 'ಸಂವಾದ', 'ಕೊಲಂಬಸ್‌' ಮುಂತಾದ ಕವಿತೆಗಳ ಮಹತ್ವಾಕಾಂಕ್ಷೆ ಇಲ್ಲಿ ಇರದಿರಬಹುದು. ಆದರೆ, ಇಲ್ಲಿ ಕಾಣುವ ಸ್ವಂತವಾದ ಏರುವಿಕೆ ಮಹತ್ವದ್ದು. ಅದಕ್ಕಾಗಿ ಅವರನ್ನು ಅಭಿನಂದಿಸಬೇಕಾಗಿದೆ.

- ಎಚ್.ಎಸ್. ವೆಂಕಟೇಶಮೂರ್ತಿ
('ಕೊಲಂಬಸ್‌' ಸಂಕಲನದ ಮುನ್ನುಡಿಯಿಂದ)



- ಬಿ.ಆರ್. ಲಕ್ಷ್ಮಣ್‌ರಾವ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement