ಓದೋ ಸುಖದ ಮರುನೆನಕೆ
ಅಕ್ಷರ ಕಲಿತವರೆಲ್ಲ ಓದಿಯೇ ಓದುತ್ತಾರೆ. ಬಸ್ ನಿಲ್ದಾಣದಲ್ಲಿ ಬಸ್ಸು ಯಾವ ಊರಿಗೆ ಹೋಗುವುದು ಎನ್ನುವುದನ್ನು ತಿಳಿಯುವುದಕ್ಕಾದರೂ ಓದಿಯೇ ಓದುತ್ತಾರೆ. ಪ್ರತಿಯೊಬ್ಬ ಓದುಗನಿಗೂ ಒಂದು ಉದ್ದೇಶವಿರುತ್ತದೆ. ನಿರುದ್ದಿಶ್ಯವಾಗಿ ಯಾರೂ ಓದುವುದಿಲ್ಲ. ನಮ್ಮ ನಡುವಿನ ಹಿರಿಯ ಸಾಹಿತಿ, ಚಿಂತಕ ಕೆ. ಸತ್ಯನಾರಾಯಣ ಅವರು ಓದಿನ ಕುರಿತೇ ಒಂದು ಕೃತಿಯನ್ನು ಹೊರತಂದಿದ್ದಾರೆ. ಅವರ 'ಸುಮ್ಮನೆ ಓದೋಣ' ಕೃತಿಯು ಸುಮಾರು ಕಾಲು ಶತಮಾನದ ಅವಧಿಯಲ್ಲಿ ಬರೆದ ಹದಿನೇಳು ಲೇಖನಗಳನ್ನು ಒಳಗೊಂಡಿದೆ.
ಓದುವುದು ಕೂಡ ಪ್ರಾರ್ಥನೆಯಂತೆ ಎನ್ನುವ ಸತ್ಯನಾರಾಯಣರು, ಓದುಗನಾಗಿ ನಾನು ಎಲ್ಲ ಕಾಲದ ಮನುಷ್ಯರ ಭಾಗವಾಗಿರುತ್ತೇನೆ. ನನಗೆ ಹಿಂದಿನ, ಈವತ್ತಿನ, ನಾಳೆಯ ಅನುಭವ, ಕನಸುಗಳೆಲ್ಲ ಬೇಕು. ಅದಕ್ಕಾಗಿ ನಾನು ಯಾವ ಸಾಹಿತಿಗಳ ಅಥವಾ ಸಾಹಿತ್ಯ ಚಳವಳಿಗಳ ವಕ್ತಾರರ ಮಾತು ಕೇಳದೆ ನನ್ನ ಆಸಕ್ತಿ- ಮನೋಧರ್ಮಕ್ಕನುಗುಣವಾಗಿ ಪುಸ್ತಕಗಳನ್ನು ಓದುತ್ತಾ ಹೋಗುತ್ತೇನೆ. ಇದರ ವರದಿಯನ್ನು ನಾನು ಯಾರಿಗೂ ಕೊಡಬೇಕಾಗಿಲ್ಲ. ಯಾರ ಶಹಭಾಷ್ಗಿರಿಯನ್ನೂ ಪಡೆಯಬೇಕಾಗಿಲ್ಲ. ಓದುಗನಾಗಿ ನಾನೊಬ್ಬ ಸಾರ್ವಭೌಮ ದೊರೆ ಎನ್ನುತ್ತಾರೆ.
ತಮ್ಮ ಮೂಲಕ ಓದುಗರನ್ನು ಪ್ರತಿನಿಧಿಸುವ ಅವರು ಕೃತಿಯುದ್ದಕ್ಕೂ ಹಲವು ಒಳನೋಟಗಳನ್ನು ನೀಡಿದ್ದಾರೆ. ಅವರ ಓದಿನ ವಿಸ್ತಾರ ಬೆರಗು ಮೂಡಿಸುತ್ತದೆ. ಲೇಖಕ ಬೇರೆ ಲೇಖಕರ ಕೃತಿಗಳನ್ನು ಓದುವುದಿಲ್ಲ (ಆ ಬಗ್ಗೆ ಇದರಲ್ಲಿ ಒಂದು ಲೇಖನವೂ ಇದೆ) ಎಂಬುದಕ್ಕೆ ಸತ್ಯನಾರಾಯಣ ಅಪವಾದವಾಗಿದ್ದಾರೆ.
ಲೇಖಕ, ಪ್ರಕಾಶಕ, ವಿಮರ್ಶಕ, ಸಂಪಾದಕ ಇವರಿಗೆಲ್ಲ ಓದುಗ ಒಬ್ಬ ಓಲೈಸಲೇ ಬೇಕಾಗಿರುವ ಗ್ರಾಹಕ ಎಂಬ ಮಾತನ್ನು ಅವರು ಹೇಳುತ್ತಾರೆ. ಓದೆಂದರೆ ಒಂದು ಸಂಸ್ಕೃತಿಯ ಅನುಸಂಧಾನ. ಒಂದು ಸಂಸ್ಕೃತಿಯ ದೊಡ್ಡ ಕೃತಿಗಳು ಯಾವಾಗಲೂ ಓದುಗನ ಏಕಾಂತದೊಡನೆ ನಿರಂತರವಾಗಿ ಸಂವಾದಿಸುತ್ತಿರುತ್ತವೆ. ಲೇಖಕ ತಟ್ಟಬೇಕಾದುದು ಈ ಓದುಗನ ಏಕಾಂತ. ಒಂದು ಕೃತಿಯ ಓದೆಂದರೆ ನಮ್ಮ ವ್ಯಕ್ತಿತ್ವದ ಓದು. ಹೀಗೆ ಸೂತ್ರರೂಪದ ಮಾತುಗಳನ್ನು ಹೇಳುತ್ತಾರೆ.
ಓದಿನ ಬಗ್ಗೆ ಹೇಳುತ್ತಲೇ ಬರೆಹಗಾರನ ಸವಾಲುಗಳ ಬಗ್ಗೆಯೂ ಅವರು ಪ್ರಸ್ತಾಪಿಸುತ್ತಾರೆ. ಪ್ರತಿಯೊಂದು ಹೊಸ ಕೃತಿ ರಚಿಸಿದಾಗಲೂ ಲೇಖಕನು ತನ್ನ ಓದುಗನನ್ನು ಕಳೆದುಕೊಳ್ಳುವ ಸಾಧ್ಯತೆಗಳಿರುತ್ತವೆ. ಏಕೆಂದರೆ ಒಬ್ಬ ಲೇಖಕನಿಂದ ಒಂದು ಪ್ರಕಾರದ ಬರೆಹವನ್ನು ಮಾತ್ರ ಓದುಗ ನಿರೀಕ್ಷಿಸುತ್ತಿರುತ್ತಾನೆ. ಅದಕ್ಕೆ ಭಿನ್ನವಾಗಿ ಆತ ಬರೆದರೆ ಓದುಗ ಆತನನ್ನು ನಿರಾಕರಿಸಬಹುದು ಎಂಬ ಮಾತನ್ನೂ ಅವರು ಹೇಳುತ್ತಾರೆ.
'ಓದುವ ಜನರು' ಹಾಗೂ 'ಓದದ ಪುಸ್ತಕಗಳು' ಎಂಬ ಎರಡು ಲೇಖನಗಳು ಇದರಲ್ಲಿವೆ. ಓದುವ ಜನರು ಯಾವ ಯಾವ ರೀತಿಯಲ್ಲಿರುತ್ತಾರೆ. ಅವರ ಲಹರಿಗಳೇನು ಎಂಬಿತ್ಯಾದಿಯನ್ನು ಸತ್ಯನಾರಾಯಣ ಅವರು ಸ್ವಾರಸ್ಯಕರವಾಗಿ ವಿವರಿಸುತ್ತಾರೆ. ಕೆಲವರು ಇತರರಿಗೆ ತೋರಿಸುವುದಕ್ಕಾಗಿಯೇ ಪುಸ್ತಕಗಳನ್ನು ಪೇರಿಸಿ ಇಟ್ಟಿರುತ್ತಾರೆ ಎಂಬುದನ್ನೂ ಅವರು ಹೇಳುತ್ತಾರೆ. ಯಾರಾದರೂ ವ್ಯಾಸನನ್ನೋ ಶೇಕ್ಸ್ಪಿಯರ್ನನ್ನೋ ಸಮಗ್ರವಾಗಿ ಓದಿದ್ದೇನೆಂದು ಹೇಳಿಕೊಂಡರೂ ನಾನು ನಂಬುವುದಿಲ್ಲ ಎಂಬ ಮಾತನ್ನು ಹೇಳುತ್ತಾರೆ.
ಒಬ್ಬ ವ್ಯಕ್ತಿಯ ಓದಿನ, ಗ್ರಹಿಕೆಯ ಮೂಲಕವೇ ಆತನ ವ್ಯಕ್ತಿತ್ವವನ್ನು ಹಿಡಿದಿಡುವ ಸತ್ಯನಾರಾಯಣ ಅವರ ರೀತಿ ವಿಶಿಷ್ಟವಾದದ್ದು. 'ಕಿರಂ ಓದುವ ಗತ್ತು' ಲೇಖನದಲ್ಲಿ, ಕುಮಾರವ್ಯಾಸಭಾರತದ ದ್ರೌಪದಿ- ಸತ್ಯಭಾಮೆಯವರ ಸಂವಾದ ಪ್ರಸಂಗವನ್ನು ಎತ್ತಿಕೊಂಡು ಕಿರಂ ಅವರು ವಿವರಿಸುವುದು, ಆ ಸಂದರ್ಭದಲ್ಲಿ ಲಾರೆನ್ಸ್ ಮತ್ತು ಸ್ತ್ರೀವಾದಿಗಳನ್ನು ತರಾಟೆಗೆ ತೆಗೆದುಕೊಂಡ ರೀತಿಯನ್ನು ಹೇಳುತ್ತ, 'ಮೇಲಿನ ಪ್ರಸಂಗ ನಡೆದ ಭಾನುವಾರದ ಹಿಂದಿನ ದಿವಸ ಕಿರಂ ಲಾರೆನ್ಸ್ನ್ನಾಗಲಿ, ಸ್ತ್ರೀವಾದಿಗಳನ್ನಾಗಲೀ ಖಂಡಿತ ಭೇಟಿ ಮಾಡಿರುವುದಿಲ್ಲ. ಹಾಗೆ ಭೇಟಿ ಇಲ್ಲದೆಯೂ ಕಿರಂ ಮನಸ್ಸಿನಲ್ಲಿಯೇ ಪೂರ್ವಪಕ್ಷವೊಂದು ನಿರ್ಮಾಣವಾಗಿರುತ್ತದೆ. ಆ ಕಾಲ್ಪನಿಕ ಪೂರ್ವಪಕ್ಷದ ಎದುರಿನಲ್ಲೇ, ಒತ್ತಾಸೆಯಲ್ಲೇ ಕಿರಂ ಓದು, ಗ್ರಹಿಕೆ, ತೀವ್ರತೆ, ವ್ಯಾಖ್ಯಾನ ಕಿಜ್ಠಜ್ಟ್ಠಿಟಛಟ್ಛಿಜ ಎಲ್ಲವೂ ನಿರ್ಮಾಣಗೊಳ್ಳುತ್ತದೆ. ಇಂಥದ್ದೊಂದು ಪೂರ್ವಪಕ್ಷ ನಮ್ಮೆದುರಿಗೇ ಇದೆಯೆಂದು, ಇದರ ಅಪಾಯ ಉಪಾಯಗಳನ್ನು ಮನದಟ್ಟಾಗುವಂತೆ ಕಿರಂ ಮಾಡಿಬಿಡುತ್ತಾರೆ. ಪೂರ್ವಪಕ್ಷದ ಮನೋಭೂಮಿಕೆಯಿಲ್ಲದೆ ಯಾವ ಓದೂ ನಡೆಯಲಾರದು. ಹೀಗೆ ತನಗೆ ಬೇಕಾದಾಗ ಬೇಕಾದ ರೀತಿಯಲ್ಲಿ ಪೂರ್ವಪಕ್ಷವನ್ನು ನಿರ್ಮಾಣಮಾಡಿಕೊಂಡು ತನಗೂ, ತನ್ನ ಜೊತೆಯವರಿಗೂ ಓದು-ಗ್ರಹಿಕೆಗಳ ತೀವ್ರತೆಯನ್ನು ಮನದಟ್ಟು ಮಾಡಿಕೊಡುವವರಲ್ಲಿ ಕಿರಂಗೆ ಸಾಟಿಯಾಗಿರುವವರನ್ನು ನಾನು ಕಂಡಿಲ್ಲ. ಹೀಗಾಗಿ ಕಿರಂ ನಮ್ಮ ಸಾಂಸ್ಕೃತಿಕ ಲೋಕದ ಪೂರ್ವಪಕ್ಷ ಪ್ರವೀಣರು' ಎಂದು ವಿವರಿಸುವರು.
ಇದೊಂದು ರೀತಿಯಲ್ಲಿ ವ್ಯಕ್ತಿಚಿತ್ರವನ್ನು ಕಟ್ಟಿಕೊಡುವ ಹೊಸ ಸಾಧ್ಯತೆ. ಕಿರಂ ಪಠ್ಯವೊಂದನ್ನು ಮತ್ತೆ ಮತ್ತೆ ಓದುವಾಗ ಹಿಂದೆ ಓದಿದ್ದನ್ನು ಮರೆತು ಹೊಸದಾಗಿ ಓದುತ್ತಿರುವಂತೆ ಓದುತ್ತಿದ್ದುದರಿಂದ ಅವರಿಗೆ ಹೊಸಹೊಸ ಕಾಣ್ಕೆಗಳು ಸಾಧ್ಯವಾಗುತ್ತಿತ್ತು ಎಂಬ ಮಹತ್ವದ ಮಾತನ್ನು ಇಲ್ಲಿ ಹೇಳಿದ್ದಾರೆ. ಇದು ಒಬ್ಬ ಓದುಗನಿಗೆ ಇರಬೇಕಾದ ಶಿಸ್ತನ್ನೂ ಹೇಳುತ್ತದೆ. ಕಿರಂ ಏಕೆ ಹೆಚ್ಚಿಗೆ ಬರೆಯಲಿಲ್ಲ ಎಂಬುದಕ್ಕೂ ಸತ್ಯನಾರಾಯಣ ಅವರಲ್ಲಿ ಉತ್ತರವಿದೆ. ಕಿರಂ ಮೌಖಿಕ ಸಂಸ್ಕೃತಿಯ ಕಡೆಗೆ ಒಲವುಳ್ಳವರಾಗಿದ್ದರು. ವಿಚಾರವೊಂದು ಬರೆವಣಿಗೆಗೆ ಇಳಿದಾಗ ಅದು ದಾಖಲಾಗಿಬಿಡುತ್ತದೆ. ಅಲ್ಲಿಗೆ ಅದಕ್ಕೊಂದು ನಿರ್ದಿಷ್ಟ ರೂಪ ಬರುತ್ತದೆ. ಯಾವುದೇ ವಿಚಾರವೂ ನಿರ್ದಿಷ್ಟವೂ ಅಂತಿಮವೂ ಅಲ್ಲದಿರುವ ಕಾರಣ ಜಾನಪದರ ಮೌಖಿಕ ಪರಂಪರೆಯಂತೆ ಕಿರಂ ಇದ್ದರು.
ಪುಸ್ತಕಗಳ ಪುನರ್ಜನ್ಮದ ಬಗ್ಗೆ ಬರೆಯುತ್ತ '... ಪ್ರಸಿದ್ಧವಾಗದ ಎಷ್ಟೋ ಕೃತಿಗಳು ಕೂಡ ಒಬ್ಬ ಓದುಗನಿಂದ ಪುನರ್ಜನ್ಮ ಪಡೆಯಬಹುದು. ನಿಖರವಾಗಿ ಹೇಳಬೇಕೆಂದರೆ ಪ್ರಸಿದ್ಧವಾದ ಕೃತಿಗಳ ಪುನರ್ಜನ್ಮಕ್ಕೆ ಸಾಂಸ್ಕೃತಿಕ ವಾತಾವರಣದಲ್ಲೆ ನಾನಾ ರೀತಿಯ ಪರಿಕರಗಳಿರುತ್ತವೆ. ಪುರಾಣಗಳ ಪಾರಾಯಣವಾಗಬಹುದು, ಪಠ್ಯಪುಸ್ತಕಗಳ ಮೂಲಕವಾಗಬಹುದು, ಸಂಘಸಂಸ್ಥೆಗಳಿಂದ ಪುನರ್ಮುದ್ರಣದ ಅವಕಾಶವಾಗಬಹುದು, ಹೇಗೋ ಅವು ನಮ್ಮನ್ನು ತಲುಪಿಬಿಡುತ್ತವೆ. ನಮ್ಮ ಆಸಕ್ತಿಯಿರುವುದು ಅಂತಹ ಕೃತಿಗಳ ಪುನರ್ಜನ್ಮದಲ್ಲಲ್ಲ. ಮನುಷ್ಯರಾಗಿ, ಓದುಗರಾಗಿ ನಾವೇ ಖುದ್ದಾಗಿ ಆಯ್ಕೆಮಾಡಿ, ಪುನರ್ಜನ್ಮ ಕೊಟ್ಟ ಕೃತಿಗಳಲ್ಲಿ.' ಹೀಗೆ ಹೇಳುತ್ತ, ಅವು ಪುಸ್ತಕಗಳ ಮರುಜನ್ಮವಷ್ಟೇ ಅಲ್ಲ, ನಾವೂ ನಮ್ಮ ಅನುಭವ ಚಿಂತನೆಗಳೂ ಪುನರ್ಜನ್ಮ ಪಡೆಯುತ್ತವೆ ಎಂದು ಹೇಳುತ್ತಾರೆ.
ಗಾಂಧೀಜಿಯ ಓದಿನ ಬಗ್ಗೆ ಬರೆಯುತ್ತ, ಗಾಂಧೀಜಿಯವರು ಸೃಜನ ಸಾಹಿತ್ಯ ಕೃತಿಗಳಿಗಿಂತ ಸೃಜನೇತರ ಬರೆಹಗಳನ್ನು ಹೆಚ್ಚು ಓದುತ್ತಿದ್ದರು ಎಂಬ ಮಾತನ್ನು ಹೇಳುತ್ತಾರೆ. ಗಾಂಧೀಜಿಯವರು ಮೆಚ್ಚಿದ್ದ ಟಾಲ್ಸ್ಟಾಯ್ ಅವರ ಆರು ಕೃತಿಗಳಲ್ಲಿ ಆತನ ಪ್ರಸಿದ್ಧ ಕಾದಂಬರಿಗಳಿಲ್ಲ ಎಂಬುದನ್ನು ಸತ್ಯನಾರಾಯಣ ಅವರು ಗುರುತಿಸಿದ್ದಾರೆ. ಆತ್ಮರತಿ ಮತ್ತು ಸ್ವೇಚ್ಛಾ ಮನೋಭಾವವನ್ನು ಪ್ರೇರೇಪಿಸುವ ಪಶ್ಚಿಮದ ಸಾಹಿತ್ಯವನ್ನು ಯುವಕರು ಓದಬಾರದು, ಸಂಯಮ ಮತ್ತು ಚಾರಿತ್ರ್ಯವನ್ನು ಬೋಧಿಸುವ ಟಾಲ್ಸ್ಟಾಯ್ನ ನೀತಿಪರ, ಧಾರ್ಮಿಕ ಸಾಹಿತ್ಯವನ್ನು ಓದಬೇಕೆಂದು ಗಾಂಧಿ ಕರೆಕೊಟ್ಟಿದ್ದರು ಎಂಬುದನ್ನು ಗಮನಕ್ಕೆ ತರುತ್ತಾರೆ.
ಚರಿತ್ರೆಗಿಂತ ನಾಗರಿಕತೆಯ ಕಲ್ಪನೆಗೆ ಹೆಚ್ಚು ಒತ್ತುಕೊಡುತ್ತಿದ್ದ ಗಾಂಧಿ ಕ್ಷಣಕ್ಷಣವೂ ಬದುಕಿದವರು, ಬದಲಾದವರು. ಇಂಥವರ ಒಳಜೀವನದ ವಿವರಗಳು ಯಾವುದೇ ರೀತಿಯ ಓದು ಮತ್ತು ಬರೆವಣಿಗೆಯಲ್ಲೂ ಸಮಗ್ರವಾಗಿ ದಾಖಲಾಗುವುದು ಕಷ್ಟವೇ ಸರಿ. ಏಕೆಂದರೆ ಗಾಂಧಿಗೆ ಬದುಕಿನಲ್ಲಿ ನಿರರ್ಥಕ ಕ್ಷಣವೆಂಬುದೆ ಇರಲಿಲ್ಲ ಎಂಬ ಮಹತ್ವದ ಮಾತನ್ನು ಹೇಳುತ್ತಾರೆ.
ಲೋಹಿಯಾ ಪುಸ್ತಕ ಸಮೀಕ್ಷೆಯ ಬಗ್ಗೆ ಬರೆಯುವ ಸತ್ಯನಾರಾಯಣ ಅವರು, ಲೋಹಿಯಾ ಸಮೀಕ್ಷೆಗಳ ವೈಶಿಷ್ಟ್ಯವೆಂದರೆ ಪಂಡಿತರಂಜಕತೆಯಿಂದ ಪೂರ್ತಿ ತಪ್ಪಿಸಿಕೊಂಡಿರುವುದು. ಎಲ್ಲೂ ಎಡಬಿಡಂಗಿ ನಿಲುವುಗಳನ್ನು ಅಡ್ಡಗೋಡೆಯ ಮೇಲೆ ದೀಪವಿಡುವ ಪ್ರವೃತ್ತಿಯೂ ಇಲ್ಲ. ಭಾಷೆ ಕೂಡ ನೇರ, ಹರಿತ, ಸರಳ ಮತ್ತು ನಿರ್ದಿಷ್ಟ ಎಂದಿದ್ದಾರೆ. ಲೋಹಿಯಾ ಅವರು ಸರ್ ಎಂ. ವಿಶ್ವೇಶ್ವರಯ್ಯನವರ ವೃತ್ತಿಜೀವನದ ನೆನಪುಗಳ ಸಮೀಕ್ಷೆಯನ್ನು ಬರೆದಿದ್ದರು. ಅದರ ಕನ್ನಡಾನುವಾದವನ್ನು ಈ ಲೇಖನದ ಜೊತೆ ಲಗತ್ತಿಸಿ ಉಪಕಾರ ಮಾಡಿದ್ದಾರೆ. ಸರ್ ಎಂ.ವಿ.ಯವರಿಗೆ 96 ವರ್ಷ ಆಗಿದ್ದಾಗ ಬರೆದ ಸಮೀಕ್ಷೆ ಇದು. ಇದರ ಕೊನೆಯಲ್ಲಿ ಲೋಹಿಯಾ ಹೀಗೆ ಬರೆದಿದ್ದಾರೆ- ದಕ್ಷಿಣ ಇಂಡಿಯಾದ ಎಲ್ಲ ಸಮರ್ಥ ತರುಣರೂ, ಅದರಲ್ಲೂ ಮುಖ್ಯವಾಗಿ ಬಡವರ್ಗಗಳಿಗೆ ಸೇರಿದಂಥವರು, ಇತ್ತೀಚಿನ ಇತಿಹಾಸದ ಈ ಘಟನೆಗಳನ್ನು ಕುರಿತು ತೀವ್ರ ಆಲೋಚಿಸಬೇಕು ಮತ್ತು ಬೌದ್ಧಿಕತೆಯ ವೇದಿಕೆಯ ಮೇಲೆ ಕ್ರಿಯಾಶೀಲತೆ ಬಲಿಯಾಗಿ ಹೋಗದಂಥ ಸಂಭಾವಿತ ಜೀವನ ಕ್ರಮವನ್ನು ರೂಪಿಸಿಕೊಳ್ಳಬೇಕು.- ದೇಶ ಕಟ್ಟುವ ನಾಯಕನ ಆದರ್ಶ ಈ ಸಾಲುಗಳಲ್ಲಿವೆ.
'ಕುವೆಂಪು ಓದಿನ ರೀತಿ' ಬಗ್ಗೆ ಬರೆಯುತ್ತ, ಅವರ ಓದು ಒಂಟಿ ಸಲಗದ ಯಾತ್ರೆಯ ಸ್ವರೂಪದ್ದು. ಸ್ವಯಂಭೂ ರೀತಿಯದು. ಓದುತ್ತಿದ್ದುದು ಪರೀಕ್ಷೆಗಲ್ಲ, ವ್ಯಕ್ತಿಗಲ್ಲ, ಅಧ್ಯಾತ್ಮದ ಹಸಿವಿಗಾಗಿ. ತನ್ನ ಮತ್ತು ಸುತ್ತಲಿನ ಕ್ಷುದ್ರತೆಯನ್ನು ಮೀರುವುದಕ್ಕಾಗಿ ಎಂದಿದ್ದಾರೆ. ಕುವೆಂಪು ವ್ಯಕ್ತಿತ್ವದ ಒಂದು ಚಿತ್ರಣ ನಮಗೆ ಇದರಲ್ಲಿ ಸಿಗುತ್ತದೆ.
ಭಾರತೀಯ ಕಾವ್ಯಮೀಮಾಂಸೆಯಲ್ಲಿ ಈ ಓದುಗನನ್ನು ಸಹೃದಯ ಎಂದು ಕರೆಯಲಾಗಿದೆ. ಇಂಥ ಸಹೃದಯರ ಬೆಂಬಲ ಇಲ್ಲದೆ ಹೋದರೆ ಕವಿ ಪ್ರತಿಭೆ ಎಂಬುದು ಮಾಲೆಗಾರನ ಪೊಸ ಬಾಸಿಗಂ ಮುಡಿವ ಭೋಗಿಗಳಿಲ್ಲದೆ ಬಾಡಿ ಪೋಗದೆ ಎಂಬಂತೆ ಆಗುತ್ತಿತ್ತು. ಬರೆಹಗಾರನಿಗೆ ಓದುಗನೇ ಆಸ್ತಿ. ಆದರೆ, ಎಲ್ಲ ಓದುಗರೂ ಜೀವನದಲ್ಲಿ ಓದುವುದು ಒಂದೇ ಪುಸ್ತಕವನ್ನು ಆದರೆ ಹಲವು ಪುಸ್ತಕಗಳ ಮೂಲಕ ಎಂಬ ಓದುಗ ಮೀಮಾಂಸೆಯನ್ನು ಹೇಳಲು ಸತ್ಯನಾರಾಯಣ ಅವರು ಮರೆಯುವುದಿಲ್ಲ.
ಕೃತಿ: ಸುಮ್ಮನೆ ಓದೋಣ
ಪ್ರಕಾರ: ಲೇಖನಗಳು
ಏಕೆ ಓದಬೇಕು?: ಓದಿನ ರಹಸ್ಯ ಅರಿಯಲು
ಪ್ರ: ಐಬಿಎಚ್ ಪ್ರಕಾಶನ, ಬೆಂಗಳೂರು,
ಪುಟಗಳು 134 ಬೆಲೆ ರು. 95
ಕನ್ನಡದ ಮೂಲಕ ಇಂಗ್ಲಿಷ್
ಹಲವು ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕಬ್ಬಿಣದ ಕಡಲೆ. ಇಂಗ್ಲಿಷ್ ವ್ಯಾಕರಣವು ಕನ್ನಡ ವ್ಯಾಕರಣದಿಂದ ಭಿನ್ನವಾದದ್ದು. ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕಲಿಕೆ ಸುಲಭವಾಗುವಂತೆ ಡಾ.ಬಿ. ಜನಾರ್ದನ ಭಟ್ ಅವರು 'ಕನ್ನಡದ ಮೂಲಕ ಇಂಗ್ಲಿಷ್' ಎಂಬ ಕೃತಿಯನ್ನು ರಚಿಸಿದ್ದಾರೆ. ಇದು ಇಂಗ್ಲಿಷನ್ನು ಸುಲಭವಾಗಿ ಕಲಿಯುವುದಕ್ಕೆ ನೆರವಾಗುತ್ತದೆ. ಹಾಗೆ ನೋಡಿದರೆ ಭಾಷೆಯೊಂದನ್ನು ಕಲಿಯುವುದಕ್ಕೆ ವ್ಯಾಕರಣದ ಅಗತ್ಯವೇನಿಲ್ಲ. ಪುಟ್ಟ ಮಗು ಭಾಷೆಯನ್ನು ಕಲಿಯುವ ರೀತಿಯಲ್ಲಿಯೇ ಒಂದು ಭಾಷೆಯನ್ನು ಮಾತನಾಡುವ ಜನರ ನಡುವೆ ಕೆಲವು ಕಾಲ ವಾಸಿಸಿ ಅದನ್ನು ಕಲಿಯಬಹುದು. ಅದೇ ರೀತಿ ಕೆಲವು ಭಾಷಾಬೋಧಕರು ವ್ಯಾಕರಣ ನಿಯಮಗಳನ್ನು ಹೇಳದೆಯೇ ಭಾಷೆಯನ್ನು ಕಲಿಸುವ ವಿಧಾನಗಳನ್ನು ಅನುಸರಿಸುತ್ತಾರೆ. ಈ ಕೃತಿಯಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಪ್ರಯೋಜನಕಾರಿಯಾಗಲು ದ್ವಿಭಾಷಾ ವ್ಯಾಕರಣ ಮಾರ್ಗವನ್ನು ಅನುಸರಿಸಲಾಗಿದೆ. ಇಂಗ್ಲಿಷ್ ಕರಗತ ಮಾಡಿಕೊಳ್ಳಲು ನಾವಾಗಿಯೇ ರೂಢಿಸಿಕೊಳ್ಳಬೇಕಾದ ಹಲವು ಸಂಗತಿಗಳುಂಟು. ನಮ್ಮ ಮನಸ್ಸಿನಲ್ಲಿಯೇ ಇಂಗ್ಲಿಷ್ನಲ್ಲಿ ವಾಕ್ಯಗಳನ್ನು ರಚಿಸುತ್ತ ಹೋಗುವುದು, ಬಿಡುವಿನಲ್ಲಿ ವಾಕ್ಯಗಳನ್ನು ರಚಿಸಿ ಒಂದು ಪುಸ್ತಕದಲ್ಲಿ ಬರೆದಿಡುವುದು, ಇಂಗ್ಲಿಷ್ ಕತೆ, ಕಾದಂಬರಿಗಳನ್ನು ಓದುವಾಗ ಅಲ್ಲಿರುವ ವಾಕ್ಯಗಳು ಯಾವ ಕಾಲದಲ್ಲಿವೆ ಎಂಬುದನ್ನು ಗಮನಿಸುವುದು, ಟಿವಿಗಳಲ್ಲಿ ಬರುವ ವಾರ್ತೆ, ಚರ್ಚೆ, ಕಾಮೆಂಟರಿಗಳನ್ನು ಕೇಳುತ್ತ ಸ್ಪೋಕನ್ ಇಂಗ್ಲಿಷ್ ರೂಢಿಸಿಕೊಳ್ಳುವುದು, ಕೆಲವು ಪಾಠಗಳನ್ನು ಗಟ್ಟಿಯಾಗಿ ಓದುವುದು... ಹೀಗೆ ಹಲವು ಸಲಹೆಗಳನ್ನು ಜನಾರ್ದನ ಭಟ್ ಇದರಲ್ಲಿ ನೀಡಿದ್ದಾರೆ. ವಿದ್ಯಾರ್ಥಿಗಳಂತೆ ಶಿಕ್ಷಕರಿಗೂ ಈ ಕೃತಿ ಒಂದು ಉತ್ತಮ ಕೈಪಿಡಿ.
ಕೃತಿ: ಕನ್ನಡದ ಮೂಲಕ ಇಂಗ್ಲಿಷ್
ಪ್ರಕಾರ: ಭಾಷಾಭ್ಯಾಸ
ಏಕೆ ಓದಬೇಕು?: ಇಂಗ್ಲಿಷ್ ಕಲಿಯಲು
ಪ್ರ: ಸೀತಾ ಬುಕ್ ಸೆಂಟರ್, ಉಡುಪಿ, ಪುಟಗಳು 168 ಬೆಲೆ ರು. 100
- ಡಾ. ವಾಸುದೇವ ಶೆಟ್ಟಿ