ನಿಮಗಿವತ್ತು ಇದು ಬೇಕೇ ಬೇಕಾ?
ಅವನನ್ನು ನೀವು 'ರಾಜಕಾರಣಿ' ಎಂದು ಕಲ್ಪಿಸಿಕೊಳ್ಳದಿದ್ದರೆ ಕಥೆಯ ಉದ್ದೇಶಕ್ಕೆ ಮುಕ್ತಿ ಸಿಗದು. ಆತನ ಭುಜವನ್ನೇ ನಿಲ್ದಾಣ ಮಾಡಿಕೊಂಡಿರುತ್ತದೆ ಒಂದು ಗಿಳಿ. ಅದರ ಕೊಕ್ಕು ಕೆಂಪಲ್ಲ, ಕಪ್ಪು. ದಿನಾ ಒಂದಲ್ಲ ಒಂದು ಹೊತ್ತಲ್ಲಿ ಅದು ಬಂದು ಭುಜವೇರಿ ಕುಳಿತು, ಅವನ ಕಿವಿಯಲ್ಲೇನೋ ಒದರುತ್ತದೆ. ಸುತ್ತಲಿದ್ದವರಿಗೆ ಅದರ ಚಡಪಡಿಕೆ ಗ್ರಹಿಕೆಗೂ ತಲುಪದು. ಆದರೆ, ಆತ ಮಾತ್ರ ಅದರ ಭಾಷೆಯನ್ನು ಅನುವಾದಿಸಿಕೊಳ್ಳಬಲ್ಲ. ಅದರ ಮಾತನ್ನೆಲ್ಲ ಕೇಳಿಸಿಕೊಂಡ ಮೇಲೆ, ಯಾವುದೋ ಖುಷಿ ಅವನನ್ನು ರಂಗೇರಿಸುತ್ತದೆ. ಗಹಗಹಿಸಿ ತೊಡೆ ತಟ್ಟಿಕೊಳ್ಳುತ್ತಾನೆ. ಗಿಳಿಗೆ ಪ್ರತಿಯಾಗಿ ತಂಬಾಕಿನ ದಪ್ಪನೆ ಪೈಪನ್ನು ಸೇದಲು ಕೊಟ್ಟು, ಅದರ ಪುಕ್ಕವನ್ನೆಲ್ಲ ನೇವರಿಸಿ ಕಿಟಕಿಯಿಂದ ಹಾರಿಬಿಡುತ್ತಾನೆ.
ಮತ್ತೆ ಒಂದು ಕ್ಷಣವೂ ಅವನು ಅಲ್ಲಿ ನಿಲ್ಲನು. ಒಬ್ಬಂಟಿಯಾಗಿ ಹೊರಟ. ಗಿಳಿ ಹೇಳಿದ ವಿಳಾಸ ತಲುಪಿದ. ಅಲ್ಲೊಬ್ಬಳು ಸುಂದರಿ ಇರುತ್ತಾಳೆ. ಅವಳ ಕೈ ಹಿಡಿದು, ಗೌಪ್ಯ ಕೋಣೆ ಸೇರಿ, ಸಾಕೆನ್ನುವಷ್ಟು ಅವಳನ್ನು ಸುಖಿಸಿ, ಒಂದಿಷ್ಟು ಐಶ್ವರ್ಯವನ್ನು ಅರ್ಪಿಸಿ ಮರಳುತ್ತಾನೆ. ಇದು ಅವನ ಎಂದಿನ ದಿನಚರಿ. ಅವನ ತಂಬಾಕಿನ ರುಚಿಗೆ ಗುಲಾಮನಾದ ಗಿಳಿ, ಸ್ಕಾಟ್ಲೆಂಡಿಗೆ ಬಂದ ಹೊಸ ಹೊಸ ವೇಶ್ಯೆಯ ಸುಳಿವನ್ನು ಹೀಗೆ ನೀಡಿ, ಅವನ ಯವ್ವನವನ್ನು ಪೋಷಿಸುತ್ತಲೇ ಇರುತ್ತದೆ.
ಒಂದು ದಿನ. ವೇಶ್ಯೆಯ ಮಡಿಲಲ್ಲಿ ಬಿದ್ದಿದ್ದ. ಅವಳದ್ದೋ... ಅವರ್ಣನೀಯ ದೇಹಸಿರಿ. ಬಿಡುವು ಕೊಡದಂತೆ ಅವಳನ್ನು ಭೋಗಿಸುತ್ತಿದ್ದ. ಅಷ್ಟರಲ್ಲೇ ಕಿಟಕಿಯಿಂದ ಹಾರಿಬಂದ ಆ ಗಿಳಿ, ಮಲಗಿದ್ದ ಅವನ ಇಳಿಜಾರು ಭುಜದ ಮೇಲೆ ಕಾಲೂರಿತು. 'ಇನ್ನೊಬ್ಬಳು ಹೊಸ ವೇಶ್ಯೆ ಬಂದಳು' ಎಂದು ಕಿವಿಯೂದಿತು. ಆದರೆ, ಅದನ್ನು ಕೇಳಿಸಿಕೊಳ್ಳುವಷ್ಟೂ ಬಿಡುವಿಲ್ಲದಂತೆ ವರ್ತಿಸಿದ ಆತ. 'ಈ ಅತಿಲೋಕ ವೇಶ್ಯೆಯನ್ನು ಸುಖಿಸುವುದಕ್ಕೂ ಬಿಡುವುದಿಲ್ಲ ನೀ' ಎಂದು ಗಿಳಿಯನ್ನು ಓಡಿಸಿದ. ಅದು ಮತ್ತೆ ಹಾರಿ ಬಂದು ಕೂತಿತು. ಮತ್ತೆ ಓಡಿಸಿದ. ಆದರೂ, ಅದು ಪದೇಪದೇ ಬಂದು ಕೂರುತ್ತಲೇ ಇತ್ತು. ಸಿಟ್ಟಿನಲ್ಲಿ ಅದನ್ನು ಗುಂಡಿಟ್ಟು ಕೊಂದ.
ಆ ಹೊತ್ತು ಸ್ಕಾಟ್ಲೆಂಡಿಗೆ ಸ್ಪೇನಿನಿಂದ ಬಂದ ದೊಡ್ಡ ಹಡಗು, ನೂರಾರು ವೇಶ್ಯೆಯರನ್ನು ಹೊತ್ತು ತಂದಿತ್ತು!
ರಾಜಕಾರಣಿಗಳ ಹಾದರವನ್ನು ರೂಪಕದಲ್ಲಿ ತೆರೆದಿಟ್ಟ ಡೇನಿಯಲ್ ಡೆಫೋನ ಸಣ್ಣಕಥೆ. ನಿರ್ಜನ ದ್ವೀಪದಲ್ಲಿ ಕ್ರೂಸೋನಿಂದ ನಾನಾ ಸಾಹಸ ಮಾಡಿಸಿ, ಅಲ್ಲೊಂದು ನಾಗರಿಕತೆ ಕಟ್ಟಿದ ಡೆಫೋ ಕೇವಲ 'ರಾಬಿನ್ಸನ್ ಕ್ರೂಸೋ'ದಿಂದ ಮಾತ್ರ ಖ್ಯಾತಿ ಪಡೆದವನಲ್ಲ. ಆ ಒಬ್ಬಂಟಿತನದ ದೃಶ್ಯವನ್ನು ಕಟ್ಟುವ ಮೊದಲೇ 'ದಿ ರಿವ್ಯೂ' ಎಂಬ ಪತ್ರಿಕೆ ತಂದು ಇಂಥ ಕಥೆಗಳಿಂದ ಇಂಗ್ಲೆಂಡಿನ ರಾಜಕಾರಣಿಗಳ ನಿದ್ದೆಗೆಡೆಸಿದ್ದ. ವ್ಯಾಪಾರಿಯಾಗಿ, ಗೂಢಚಾರಿಯಾಗಿ ನಿಗೂಢಗಳ ಒಳ ನುಗ್ಗಿ ರಾಜಮನೆತನಗಳ, ರಾಜಕಾರಣಿಗಳ ವ್ಯಭಿಚಾರಗಳನ್ನೆಲ್ಲ ವರದಿ, ಕಥೆಗಳ ಮೂಲಕ ಬೀದಿಪಾಲು ಮಾಡಿಬಿಟ್ಟ. ಡೆಫೋ, ಆಲ್ಬರ್ಟ್ ಕಮುವಿನಂತೆ ಭಂಡ ಸಾಹಸಿ.
ಅದಿರಲಿ. ಒಬ್ಬ ಉಳ್ಳವನಿಗೆ, ಅನುಭವಿಗೆ ಈ ವೇಶ್ಯೆ ಇರುವ ಜಾಗಗಳು ಗೊತ್ತಾಗಲು ನಾನಾ ಮೂಲಗಳ ನೆರವು ಚರಿತೆಯ ಉದ್ದಕ್ಕೂ ಇದ್ದಿದ್ದೇ. ಆದರೆ, ಹೊಸಾ ಹುಡುಗರಿಗೆ? ಆಗಷ್ಟೇ ತುಟಿ ಮೇಲೆ ಕಪ್ಪುಪಟ್ಟಿ ಬೆಳೆದ ಚಿಗುರು ಸಾಹಿತಿಗೆ? ಸುಳಿವಾದರೂ ಯಾರು ಕೊಟ್ಟಾರು ವೇಶ್ಯೆ ಎಲ್ಲಿರುವಳೆಂದು?
ಮೈಸೂರಿನಲ್ಲಿ ಓದುತ್ತಿದ್ದಾಗ ಪಿ. ಲಂಕೇಶ್ ಸ್ಥಿತಿಯೂ ಇಂಥ ಸಂಕಟಕ್ಕೆ ಸಿಲುಕಿತ್ತು. 'ವಯಸ್ಸು 23, ಊರು ಬೇಡ, ಹೆಸರು ಬೇಡ' ಎಂದು ಪತ್ರ ಬರೆದರೂ ಸಿಗುತ್ತಿದ್ದ ಸಮಾಧಾನ ಸುಮಾರು ದಿನಗಳ ನಂತರದ ಮಾತಾಗಿತ್ತು. ಮುಷ್ಠಿ ಮೈಥುನ ಕೊಡುತ್ತಿದ್ದ ಉಲ್ಲಾಸವೂ ಅಷ್ಟಕ್ಕಷ್ಟೇ ಅನ್ನಿಸಿದಾಗ ಯಾವುದಾದರೂ ಹೆಣ್ಣನ್ನು ಅನುಭವಿಸಬೇಕೆಂಬ ಒದ್ದಾಟಕ್ಕೆ ಬಿದ್ದರು ಲಂಕೇಶ್. ಡೆಫೋ ಸೃಷ್ಟಿಸಿದ ಗಿಳಿ ಬಿಡಿ. ಅದು ಕಥಾಲೋಕ. ಆದರೆ, ಲಂಕೇಶರನ್ನು ದಹಿಸುತ್ತಿರುವುದು ವಾಸ್ತವದ ಬೆಂಕಿ! ಆ ಹೊತ್ತು ಯವ್ವನದ ನಿಗಿನಿಗಿ ಕೆಂಡವಾಗಿದ್ದ ಲಂಕೇಶ್ ತಮ್ಮನ್ನು ಹೆಣ್ಣಿನ ಸಹವಾಸದಿಂದ ತಣಿಸಿಕೊಳ್ಳಲು ಒದ್ದಾಡಿದ್ದು ರೋಚಕವಾಗಿದೆ.
ಲಂಕೇಶ್ಗೆ ಗೆಳೆಯ ರಾಯಣ್ಣನೂ ತನ್ನಂತೆ ಸಂಕಟಿಸುತ್ತಿದ್ದಾನೆಂಬ ಸುಳಿವು ಸಿಕ್ಕಿದ್ದು 'ಂಣಡ್ಟ್ಠಜ ಛಡ ಠಟಜಟಿಡಿಣ ್ಟಜಿ ್ಛಛಟಟ ್ಜ್ಝ್ಠಟಡ' ಎಂಬ ಅವನ ಮಾತನ್ನು ಕೇಳಿ. 'ಏನು ರೇಟು, ಎಲ್ಲಿ ಸಿಗುತ್ತಾರೆ?'. 'ಅತ್ಯುತ್ತಮ ಹುಡುಗಿ ನಲ್ವತ್ತು ರುಪಾಯಿಗೂ ಸಿಗುತ್ತಾಳೆ' ಎಂದ ರಾಯಣ್ಣ. ಆದರೆ, ವೇಶ್ಯೆ ಲಭ್ಯವಿರುವ ಹೋಟೆಲ್ಲು ಇಬ್ಬರಿಗೂ ಗೊತ್ತಿಲ್ಲ. ಇಸ್ತ್ರಿ ಮಾಡಿದ ಶರ್ಟು, ಪ್ಯಾಂಟು ಹೊದ್ದು, ತಾವು ರಾಯಲ್ ಎಂದು ತೋರಿಸಿಕೊಳ್ಳಲು ಒಂದು ಟೈ ಅನ್ನೂ ಕಟ್ಟಿಕೊಂಡು, ಜೇಬಿನಲ್ಲಿ ಇನ್ನೂರು ರುಪಾಯಿ ಇಟ್ಟುಕೊಂಡು, ಇಬ್ಬರೂ ಕಾಮದ ದೇಗುಲ ಅರಸಿ ಹೊರಟರು.
ದಾರಿ ಮಧ್ಯ ಹುಡುಗಿಯರ ಸೌಂದರ್ಯದ ವರ್ಣನೆಯ ಕಮ್ಮಟವೇ ನಡೆಯಿತು. ರಾಯಣ್ಣನಿಗಿಂತ ತನ್ನ ಕಲ್ಪನಾ ಸುಂದರಿ ಸೆಕ್ಸಿಯಾಗಿ ಆಕ್ರಮಿಸಿಕೊಂಡಿರುವುದು ಲಂಕೇಶ್ಗೆ ಒಂಥರಾ ಬಿಡಿಸಿ ಹೇಳಲಾಗದ ಖುಷಿ.
ವೇಶ್ಯೆ ಇರಲಿ, ಅಂಥವರ ಕಾಂಟ್ಯಾಕ್ಟ್ ಕಲ್ಪಿಸುವ ಏಜೆಂಟುಗಳನ್ನು ಹೇಗೆ ಹುಡುಕುವುದು? ಇಬ್ಬರೂ ಅಂಥವರನ್ನು ಇದುವರೆಗೂ ಕಂಡವರಲ್ಲ. ಆದರೂ, ಲಂಕೇಶ್ ತಕ್ಕಮಟ್ಟಿಗೆ ಕಲ್ಪಿಸಿಕೊಂಡಿದ್ದರು. 'ಕಣ್ಣಿನಲ್ಲಿ ಅಪಾರ ಕಥೆಗಳನ್ನು ಕೂಡಿ ಹಾಕಿಕೊಂಡು, ಗೆರೆ ಮೀಸೆಬಿಟ್ಟು, ಕತ್ತಿನ ಸುತ್ತಾ ಕೆಂಪು ಕರ್ಚೀಫು ಸುತ್ತಿ, ನಯವಾದ ಮಾತುಗಳನ್ನಾಡುತ್ತಾನೇನೋ?' ಅಂದುಕೊಂಡಿದ್ದರು. ಆದರೂ ಅದನ್ನೇನು ಬಾಯ್ಬಿಡಲು ಹೋಗಲಿಲ್ಲ. ಏಕೆಂದರೆ, ರಾಯಣ್ಣ ತನಗೆಲ್ಲ ಗೊತ್ತು ಎಂಬಂತೆಯೇ ನಟಿಸುತ್ತಾ ಲಂಕೇಶರನ್ನು ಕರೆದೊಯ್ದಿದ್ದ.
ಮೊದಲು ಉಡುಪಿ ಹೋಟೆಲ್ಲಿಗೆ ಹೋದರು. ಅಲ್ಲೊಂದು ಸೈಡಿನಲ್ಲಷ್ಟೇ ಕಾಫಿ ತಿಂಡಿಯ ವ್ಯವಸ್ಥೆ. ಉಳಿದಂತೆ ಅಲ್ಲಿ ಲಾಡ್ಜಿಂಗ್ ಇತ್ತು. 'ರೆಸ್ಟೋರೆಂಟ್ ಇರೋದು ಕೇವಲ ನೆಪಕ್ಕೆ. ಮುಖ್ಯ ಬಿಸಿನೆಸ್ಗಳೆಲ್ಲ ರೂಮುಗಳಲ್ಲೇ' ಲಂಕೇಶರ ಕಿವಿಗೆ ಪಿಸುಗುಟ್ಟಿದ ರಾಯಣ್ಣ. ಇರಬಹುದು ಅಂದುಕೊಂಡರು ಲಂಕೇಶ್. ಸುಮ್ಮನೆ ಅಲ್ಲೇ ಸ್ವಲ್ಪ ಹೊತ್ತು ಸುಳಿದಾಡಿದರು. ಆಮೇಲೆ, ಇದು ಪುಳಿಚಾರು. ಪ್ರಯೋಜನವಿಲ್ಲವೆನಿಸಿತು. ರಾಯಣ್ಣ ಬೇರೊಂದು ಹೋಟೆಲ್ಲಿಗೆ ಕರೆದೊಯ್ದ.
ಅಲ್ಲೊಬ್ಬ ಸಕಲೇಶಪುರದವ ಸಿಕ್ಕ. 'ಇಂಥ ಹೋಟೆಲ್ಲಿಗೆ ಹೋಗಿ ಎಲ್ಲ ವ್ಯವಸ್ಥೆ ಇರುತ್ತೆ' ಮಾರ್ಗದರ್ಶನ ನೀಡಿದ. ಕೊನೆಗೂ ಬಹುದಿನದ ಆಸೆ ಈಡೇರುವುದೆಂದು ಇಬ್ಬರೂ ಟಾಂಗಾ ಏರಿ ಒಂದು ಹೋಟೆಲ್ಲಿಗೇ ಬಂದಿಳಿದರು. ಕಲ್ಪನೆಗೂ ವಾಸ್ತವದ ಉಸಿರು ತುಂಬಿ ಹೇಳುತ್ತಿದ್ದ ರಾಯಣ್ಣ, ತನಗೆ ಸ್ನೇಹಿತನಾಗಿ ಸಿಕ್ಕಿರುವುದೇ ಧನ್ಯ ಎಂದುಕೊಂಡರು ಲಂಕೇಶ್.
ಆ ಹೋಟೆಲ್ಲಿಗೆ ಬಂದಾಕ್ಷಣವೇ 'ಓ ಬನ್ನಿ ಬನ್ನಿ. ಕೂತ್ಕೊಳ್ಳಿ. ವಿಷಯ ಎಲ್ಲ ಗೊತ್ತಾಯ್ತು. ನೀವು ಮೈಸೂರಿನಲ್ಲಿ ಎಲ್ಲಿ ವಾಸವಿದ್ದೀರಿ? ವಯಸ್ಸೆಷ್ಟು? ನೀವು ಸ್ಟೂಡೆಂಟ್ಸಾ? ನಿಮಗಿವತ್ತು ಇದು ಬೇಕೇ ಬೇಕಾ?' ಎಂಬ ಪ್ರಶ್ನೆ- ವಿಚಾರಣೆಗಳ ನಡುವೆ ಭವ್ಯ ಸ್ವಾಗತ ದೊರೆಯಿತು. 'ರಾಬಿನ್, ಇವರನ್ನು ಕರ್ಕೊಂಡ್ ಹೋಗಿ ಮಾಲ್ ತೋರಿಸು' ಎಂಬ ಆಜ್ಞೆಯೂ ಎದುರಿಗಿದ್ದ ವ್ಯಕ್ತಿಯಿಂದ ಬಂತು.
ರಾಬಿನ್ ತೋರಿಸಿದ. ಅಲ್ಲಿ ನಾಲ್ಕು ಜನ ಖಾಕಿ ಹೊದ್ದ ಪೊಲೀಸರಿದ್ದರು!
ಇದು ಲಂಕೇಶರ ಮೊದಲ ಲೈಂಗಿಕ ಸಾಹಸ. ಅವರ ಆತ್ಮಕತೆ 'ಹುಳಿಮಾವಿನ ಮರ'ದಲ್ಲಿ ಇದು ಇನ್ನೂ ರುಚಿಕಟ್ಟಾಗಿದೆ. ಆತ್ಮಕಥೆಗಳ ಮೇಲೆ ಸಾಮಾನ್ಯವಾಗಿ 'ಆತ್ಮರತಿ'ಯ ಆಪಾದನೆ ಹೊರಿಸುವುದುಂಟು. ಆದರೆ, ಈ ಮರದಲ್ಲಿ ಕಾಣುವ 'ರತಿ'ಗಳೇ ಬೇರೆ. ಅವರ ಕಾಮದಾಹದ ಬಗ್ಗೆ ಹೇಳಿದೆ ಅಂತ ವೈನು, ಸಿಗರೇಟು, ಇಸ್ಪೀಟು ಸಿಟ್ಟಾದರೂ ಆದಾವು! ಯಾವುದಕ್ಕೂ ಡೆಫೋ ಸೃಷ್ಟಿಸಿದ ಗಿಳಿಯೊಂದು ಮೈಸೂರಲ್ಲಿ ಇರಬೇಕಿತ್ತು! ಝೂವಲ್ಲಾದರೂ!
- ಕೀರ್ತಿ
kolgarkeerthi@gmail.com