ಬಿಡುಗಡೆ
ಹೇಮಳ್ಳಿ ಎಂಬ ಊರಿತ್ತು. ಅಲ್ಲಿ ಗೋಪಣ್ಣ ಎಂಬ ವ್ಯಾಪಾರಿ ಕಿರಾಣಿ ಅಂಗಡಿ ಇಟ್ಟುಕೊಂಡಿದ್ದ. ಬಂದ ಅಷ್ಟಿಷ್ಟು ಲಾಭದಲ್ಲಿ ಅವನ ಜೀವನ ಸಾಗುತ್ತಿತ್ತು. 'ಪ್ರಾಮಾಣಿಕ, ಮೋಸ ಮಾಡದ ವರ್ತಕ' ಎಂಬ ಖ್ಯಾತಿಯೂ ಆತನಿಗಿತ್ತು. ಅವನ ಹೆಂಡತಿ ಹೇಮಾವತಿ ಅಕ್ಷರಶಃ ಧರ್ಮಪತ್ನಿಯೇ ಆಗಿದ್ದಳು. ಪತಿಯ ಕಷ್ಟ ಸುಖದಲ್ಲಿ ಭಾಗಿಯಾಗಿದ್ದಳು. ಹೆಚ್ಚಿನ ಲಾಭಕ್ಕೆ ಆಸೆ ಪಡುವುದು ಬೇಡ. ದುರಾಸೆಯಿಂದ ಕೇಡೇ ಹೊರತು ಏಳಿಗೆಯಂತೂ ಸಾಧ್ಯವಿಲ್ಲ ಎನ್ನುವುದನ್ನು ದಂಪತಿ ಅರಿತಿದ್ದರು.
ಒಂದು ದಿನ ಗೋಪಣ್ಣ ಸಂತೆಯಲ್ಲಿ ದಿನಸಿ ಪದಾರ್ಥಗಳನ್ನು ಖರೀದಿಸಿ, ಹೆಗಲ ಮೇಲೆ ಹೊತ್ತು ಬೇಮಳ್ಳಿಯತ್ತ ನಡೆದಿದ್ದ. ಹೇಳಿಕೇಳಿ ಗೋಧೂಳಿ ಮುಹೂರ್ತ. ಹಾದಿಯ ಇಕ್ಕೆಲದಲ್ಲೂ ದಟ್ಟವಾಗಿ ಬೆಳೆದ ಗಿಡಮರಗಳು, ಇದ್ದಕ್ಕಿದ್ದಂತೆ ದಢೂತಿ ಮನುಷ್ಯಾಕೃತಿ ಗೋಚರಿಸಿತು. 'ಅರೇ! ಗೋಪಣ್ಣ ನಿಂಗೊಂದು ಭಾರಿ ಒಳ್ಳೆ ಸುದ್ದಿ. ನಾಳೆ ಬೆಳಗ್ಗೆ ಮನೆಯ ಹಿತ್ತಲಿನಲ್ಲಿ ಏಳು ಮಡಕೆಗಳು ನಿನಗೆ ಸೇರುತ್ತವೆ. ಆರು ಮಡಕೆಗಳ ಭರ್ತಿ ಚಿನ್ನದ ನಾಣ್ಯಗಳಿರುತ್ತವೆ. ಒಂದು ಮಡಕೆಯಲ್ಲಿ ಅರ್ಧ ಮಾತ್ರವೆ ಚಿನ್ನದ ನಾಣ್ಯಗಳಿರುತ್ತವೆ. ಎಲ್ಲವನ್ನೂ ಒಪ್ಪಿಸಿಕೊ. ನಿನ್ನ ಇಷ್ಟು ದಿನಗಳ ನಿಯತ್ತಿನ ವ್ಯಾಪಾರಕ್ಕೆ ಸಂದ ಉಡುಗೊರೆ ಇವು' ಎಂದಿದ್ದೆ ಆ ಆಕೃತಿ ಕ್ಷಿಪ್ರವಾಗಿ ಅದೃಶ್ಯವಾಯಿತು.
ಮನೆಗೆ ಬಂದು ಗೋಪಣ್ಣ ಪತ್ನಿಗೆ ಈ ಸಂತೋಷದ ಸಮಾಚಾರ ತಿಳಿಸಿದ. ಹೇಮಾವತಿ ಹಿಗ್ಗಿ 'ನೋಡಿದಿರಾ ಇದು ನಮ್ಮ ಪ್ರಾಮಾಣಿಕತೆಗೆ ದೇವರು ಕೊಟ್ಟ ಕೊಡುಗೆ' ಎಂದಳು. ಮರುದಿನ ಸೂರ್ಯೋದಯಕ್ಕೆ ಮೊದಲೇ ಗೋಪಣ್ಣ ಮತ್ತು ಹೇಮಾವತಿ ಹಿತ್ತಲಿನಲ್ಲಿ ಆರು ಮಡಕೆಗಳಲ್ಲಿ ಭರ್ತಿ ಚಿನ್ನದ ನಾಣ್ಯಗಳು, ಏಳನೆಯದರಲ್ಲಿ ಅರ್ಧ ತುಂಬಿದ ಚಿನ್ನದ ನಾಣ್ಯ ಕಂಡರು. ಎಷ್ಟಾದರೂ ಚಿನ್ನ, ಯಾರೂ ನೋಡಬಾರದು. ಸರಸರನೆ ಆ ಏಳೂ ಮಡಕೆಗಳನ್ನು ದಂಪತಿ ಮನೆಯ ಉಗ್ರಾಣಕ್ಕೆ ಸಾಗಿಸಿದರು. ಕಪಾಟಿನಲ್ಲಿ ಭದ್ರವಾಗಿರಿಸಿದರು. ಗೋಪಣ್ಣನಿಗೆ ಒಂದು ಯೋಚನೆ ಬಂತು. 'ಆ ಏಳನೇ ಮಡಕೆಯಲ್ಲಿ ಅರ್ಧದಷ್ಟು ಮಾತ್ರವೇ ಚಿನ್ನದ ನಾಣ್ಯಗಳಿವೆ. ಅದರಲ್ಲೂ ಪೂರ್ತಿ ಚಿನ್ನದ ನಾಣ್ಯಗಳಿದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು'.
ಹೇಮಾವತಿ ಪತಿಯ ಇಂಗಿತ ಅರ್ಥಮಾಡಿಕೊಂಡಳು. 'ನೀವು ಹೇಳುವುದು ಸರಿಯಾಗಿದೆ. ನಾವು ಈಗ ಮಾಡುತ್ತಿರುವ ವ್ಯಾಪಾರವನ್ನು ಇನ್ನೂ ಚೆನ್ನಾಗಿ ಮಾಡೋಣ. ಲಾಭಕ್ಕೆ ಲಾಭ ಬರುತ್ತದೆ. ಕಾಸಿಗೆ ಕಾಸು ಕೂಡಿಸಿದರೆ ದಟ್ಟವಾಗಿ ಏಳನೆಯ ಮಡಿಕೆ ಚಿನ್ನದ ನಾಣ್ಯಗಳಿಂದ ಭರ್ತಿಯಾದೀತು' ಎಂದಳು. ಎರಡು ತಿಂಗಳು ಉರುಳಿದವು. ವ್ಯಾಪಾರದಲ್ಲಿ ಲಾಭವೇನೋ ಹೆಚ್ಚಾಯಿತು. ಆದರೆ ಮಡಕೆ ಚಿನ್ನದಿಂದ ತುಂಬಲಿಲ್ಲ. ಗೋಪಣ್ಣ ಸಾಲ ಮಾಡಿ ಒಂದಷ್ಟು ಹಣ ತಂದ. ಆಗಲೂ ಮಡಕೆ ತುಂಬಲಿಲ್ಲ. ಇರುವ ಜಮೀನಿನ ಅರ್ಧ ಭಾಗ ಮಾರಿದ್ದಾಯಿತು ಇಲ್ಲ... ಇಲ್ಲ ಆಗಲೂ ಮಡಕೆ ತುಂಬುವುದಿರಲಿ ಅರ್ಧ ಅಂಗುಲದಷ್ಟೂ ನಾಣ್ಯಗಳು ವೃದ್ಧಿಸಲಿಲ್ಲ. ಈಗೇನು ಮಾಡುವುದು. ನಮ್ಮ ಸಂತೋಷ ತಾನೆ ಮುಖ್ಯ. ಉಳಿದಿರುವ ಅರ್ಧ ಜಮೀನನ್ನು ಯಾರಿಗಾದರೂ ಬಿಕರಿ ಮಾಡಿದರೇನು ತಪ್ಪು ಎಂದುಕೊಂಡರು ಈ ದಂಪತಿ. ಸರಿ ಹಾಗೆ ಮಾಡಿದರೂ ಮಡಕೆ ತುಂಬಲಿಲ್ಲ. ಇನ್ನು ಬಾಕಿಯಿರುವುದು ಚಿಲ್ಲರೆ ಅಂಗಡಿ. ಅದನ್ನೂ ಮಾರಿದರೆ ಜೀವನಕ್ಕೇನು ಗತಿ?
ಗೋಪಣ್ಣ, ಹೇಮಾವತಿ ಚಿಂತಾಕ್ರಾಂತರಾಗಿ ಮನೆಯ ಜಗಲಿ ಮೇಲೆ ಕುಳಿತಿದ್ದರು. ಒಬ್ಬ ಸನ್ಯಾಸಿ ಅತ್ತ ಬಂದ. 'ನಿಮ್ಮ ಗೃಹ ಚಿಂತೆ ನನಗೆ ಅರ್ಥವಾಗಿದೆ. ಮಡಕೆಯೊಂದನ್ನು ಚಿನ್ನದ ನಾಣ್ಯಗಳಿಂದ ತುಂಬಿಸಲು ಹೆಣಗಾಡುತ್ತಿದ್ದೀರಿ ತಾನೆ? ಅಯ್ಯೋ. ಅದು ಅಸಾಧ್ಯ. ಮನುಷ್ಯನ ಆಸೆಗೆ ಕೊನೆ ಎನ್ನುವುದಿಲ್ಲ. ನನಗೂ ಆ ಆಕೃತಿ ನಿಮಗೆ ನೀಡಿದಂತೆಯೇ ಏಳು ಮಡಕೆಗಳನ್ನು ನೀಡಿತ್ತು. ಆರು ಮಡಕೆಯಲ್ಲೂ ಭರ್ತಿ ಚಿನ್ನದ ನಾಣ್ಯಗಳು, ಏಳನೆಯದರಲ್ಲಿ ಅರ್ಧ ಮಾತ್ರ ಚಿನ್ನದ ನಾಣ್ಯಗಳು. ನಾನೂ ನಿಮ್ಮ ಹಾಗೆಯೇ ಏಳನೆಯ ಮಡಕೆ ತುಂಬಿಸುವ ಸಲುವಾಗಿ ಸಾಲ ಸೋಲ ಮಾಡಿದೆ. ಇರುವ ಆಸ್ತಿಯನ್ನು ಕಳೆದುಕೊಂಡೆ. ಕಡೆಗೆ ಎಲ್ಲ ಮಡಕೆಗಳನ್ನೂ ಆ ಆಕೃತಿಗೆ ಮರಳಿಸಿದೆ. ಈಗ ನಾನು ನಿಶ್ಚಿಂತ' ಅಂತ ವಿವರಿಸಿದ. ಒಡನೆಯೇ ಗೋಪಣ್ಣ, ಹೇಮಾವತಿ ಆ ಏಳೂ ಮಡಕೆಗಳನ್ನು ತಮ್ಮ ಹೆಗಲ ಮೇಲೆ ಹೇರಿಕೊಂಡು ಸಂತೆ ಹಾದಿಯ ಗಿಡಮರಗಳತ್ತ ಹೋದರು. ಒಂದಡೆ ಹಳ್ಳ ತೋಡಿ ಅವನ್ನು ಹೂತು ನಿರಾಳವಾಗಿ ಮನೆಗೆ ವಾಪಸಾದರು.
-ಬಿಂಡಿಗನವಿಲೆ ಭಗವಾನ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.