ಕಾವ್ಯ ಯಾಕಿದೆ?
ಮೀನಾ ಅಲೆಕ್ಸಾಂಡರ್, ಅಮೆರಿಕದಲ್ಲಿರುವ ಭಾರತೀಯ ಮೂಲದ ಕವಿ. ಅಲಹಾಬಾದ್ನಲ್ಲಿ ಹುಟ್ಟಿ ಬೆಳೆದ ಈಕೆ ಇಂದು ನ್ಯೂಯಾರ್ಕ್ ನಿವಾಸಿ. ಸೃಜನಶೀಲ ಬರವಣಿಗೆಯ ...
ಮೀನಾ ಅಲೆಕ್ಸಾಂಡರ್, ಅಮೆರಿಕದಲ್ಲಿರುವ ಭಾರತೀಯ ಮೂಲದ ಕವಿ. ಅಲಹಾಬಾದ್ನಲ್ಲಿ ಹುಟ್ಟಿ ಬೆಳೆದ ಈಕೆ ಇಂದು ನ್ಯೂಯಾರ್ಕ್ ನಿವಾಸಿ. ಸೃಜನಶೀಲ ಬರವಣಿಗೆಯ ಬಗ್ಗೆ ಪಾಠ ಹೇಳುವವಳು ಕೂಡ. ಇತ್ತೀಚೆಗೆ ಯೇಲ್ ರಾಜಕೀಯ ಒಕ್ಕೂಟವನ್ನುದ್ದೇಶಿಸಿ ಆಕೆ 'ಕಾವ್ಯದಿಂದೇನು ಉಪಯೋಗ' ಎಂಬ ವಿಷಯದಲ್ಲಿ ಮಾತನಾಡಿದಳು. ಅದನ್ನೇ ಪ್ರಬಂಧವಾಗಿ ವಾಷಿಂಗ್ಟನ್ ಪೋಸ್ಟ್ ಪ್ರಕಟಿಸಿತು. ಕಾವ್ಯದ ದಿಟ್ಟ ಸಮರ್ಥನೆಯಾದ ಅದರ ಕೆಲವು ಸಾಲುಗಳು:
'ಅಧಿಕಾರವುಳ್ಳವರು ಬರೆದದ್ದು, ಬರೆಸಿದ್ದು ಇತಿಹಾಸವೆನಿಸಿತು. ಬಂಧಿತರು, ಹತ್ತಿಕ್ಕಲ್ಪಟ್ಟವರು ಬರೆದ ಭೂಗತ ಸಾಹಿತ್ಯವು ಪರ್ಯಾಯ ಇತಿಹಾಸವಾಯಿತು. ಕಾವ್ಯ, ಈ ಪರ್ಯಾಯ ಇತಿಹಾಸದ ಸಮೀಪ ಸಂಬಂಧಿ.'
'ತೀವ್ರವಾಗಿ ಭಾವಿಸಿದ್ದು ಮತ್ತು ನುಡಿಯಲ್ಲಿ ಹೇಳಲಾಗದುದು ಕಾವ್ಯದ ಮುಖ್ಯ ಅಂಶವಾಗಿದೆ. ಅದು ಕಾವ್ಯ ಹೊರಲೇಬೇಕಾದ ವಿರೋಧಾಭಾಸವೂ ಹೌದು. ಕಲಾವಿದ ಬಣ್ಣಗಳನ್ನು ಉಪಯೋಗಿಸಿದಂತೆ ಕವಿ ಭಾಷೆಯನ್ನು ಉಪಯೋಗಿಸುತ್ತಾನೆ. ಆದರೆ ನಮ್ಮ ದಿನನಿತ್ಯದ ಬದುಕಿನಲ್ಲಿ ಬಳಸುವ ಭಾಷೆಯನ್ನು ಕಾವ್ಯಕ್ಕಿಳಿಸುವ ಮುನ್ನ ನಾವದನ್ನು ಸ್ವಚ್ಛ ಶುದ್ಧಗೊಳಿಸಲೇಬೇಕು.'
'ಕಾವ್ಯದ ಅರ್ಥವು ಅದರ ಶಬ್ದಾರ್ಥದಿಂದ ಆಚೆಗೆ ಜಿಗಿದದ್ದು. ಅದು ನಮ್ಮೊಳಗೆ ಉದ್ದೀಪಿತವಾಗುವಂಥದ್ದು. ಉದ್ದೀಪನೆ ಉಂಟಾಗುವುದು ಸ್ಮರಣೆಯಿಂದ. ಅಭಿನವಗುಪ್ತ ಇದನ್ನು ಸ್ಪಷ್ಟವಾಗಿ ಹೇಳಿದ್ದಾನೆ. ರಸವು ಶಬ್ದಾರ್ಥ ಪದಾರ್ಥಗಳಿಂದ ಮುಟ್ಟಲಾಗದುದು. ಅದು ಹೃದಯಕ್ಕೆ ನೇರವಾಗಿ ತಾಗುವ ಸ್ಮರಣೆಯ ಅಂಶಗಳಿಂದಾಗುವಂಥದು. ಕಾವ್ಯದ ಆತ್ಮವು ಈ ರಸಧ್ವನಿಯೇ ಎಂದವನು ಹೇಳುತ್ತಾನೆ.'
ಈ ಹಿಂಸೆಯ ಕಾಲಘಟ್ಟದಲ್ಲಿ ಕಾವ್ಯ ಯಾಕಿದೆ ಎಂದು ನೀವು ಕೇಳಬಹುದು. ನಮ್ಮೆಲ್ಲರಲ್ಲೂ ಸ್ಮರಣೆಯ ತುಣುಕುಗಳು ಇದ್ದೇ ಇರುತ್ತವಲ್ಲವೆ? ಒಂದು ಮಟ್ಟಿಗೆ, ಕಾವ್ಯದ ಕೆಲಸ ನಮ್ಮೆಲ್ಲರ ಬದುಕುಗಳನ್ನು ಸ್ಮರಣೆ, ಪ್ರೇಮಗಳಿಂದ ಒಂದುಗೂಡಿಸಿ ಲೋಕದ ಚೂರುಗಳನ್ನು ಮತ್ತೆ ಜೋಡಿಸುವುದೇ ಆಗಿದೆ.
ಕೊನೆಯ ಕವಿತೆ
...ಎಲ್ಲಿ ಹುಳ ತಿನ್ನುವುದೋ
ಅಲ್ಲೊಂದು ಕಾಳು ಬೆಳೆಯುವುದು
ಇಷ್ಟದೇವತೆಗಳು
ಕಾಲವ ಅಳೆದಿವೆ
ಗಾಳಿಸಂಚಾರ ಹೋರುಗಳಿಂದ
ಅನಂತವೆಂಬ ಬಹುದೂರಕೆ
...ಮತ್ತು ಸಾವು,
ಅಣಕಿಸಲಾಗದ
ವಿಚಿತ್ರ ಕರೆಯೊಂದಿಗೆ
ಅದು ಬಂದರೆ ಬಾಗಿಲಿಗೆ
ನಗೆನಲಿವುಗಳಿಂದ
ಚಿಮ್ಮುವ ಜೀವನದ
ಎಳೆಜೋಳದ ಕೆಂಪುಗಂಜಿಯ
ಎಳೆಗುರಿಯ ಮಾಂಸದ ಉತ್ಸವದ
ಮನೆಯೊಂದ
ಕಂಡುಕೊಳ್ಳಬಹುದು
- ಇವು ಘಾನಾ ದೇಶದ ಕೋಫಿ ಅವೂನೊರ್ ಎಂಬ ಕವಿ ಬರೆದ 'ನವಮುಂಜಾನೆಯ ಮೂಲಕ' ಎಂಬ ಕವನದ ಸಾಲುಗಳು. ಕವಿಯೂ ಮುತ್ಸದ್ದಿಯೂ ಆಗಿದ್ದ ಈತ, ಮೊನ್ನೆ ನೈರೋಬಿಯ ಮಾಲ್ ಒಂದರಲ್ಲಿ ಉಗ್ರಗಾಮಿಗಳು ನಡೆಸಿದ ದಾಳಿಯಲ್ಲಿ ಹತನಾದ. ಈ ಕವಿತೆ ಈ ಕವಿಯ ಕೊನೆಯ ಕವಿತೆಯೂ ಆಗಿತ್ತು ಅನ್ನುವುದು ವಿಶೇಷ, ವಿಲಕ್ಷಣ.
ಹಾಯಿಕು
ಬೆಳಕು ಹುಡುಕುತ್ತಿದೆ
ಎಂದೂ ಸಿಗದ
ಕತ್ತಲನ್ನು
- ಕೇರ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.