ಕೆಲವು ನಿಯಮಗಳು ಅನ್ವಯವಾಗುತ್ತವೆ
ಕೆಲವು ನಿಯಮಗಳು ಅನ್ವಯವಾಗುತ್ತವೆ
ಶ್ರೀಶಾಂತ್ ಅಡಿಗ, ಉಡುಪಿ
ನಾನು ಮನೆ ಕಟ್ಟಲು ಬೇಕಾದ ವಸ್ತುಗಳನ್ನು ಮಾರಾಟ ಮಾಡುವ ಹೋಲ್ಸೇಲ್ ಅಂಗಡಿಯಲ್ಲಿ ಕಳೆದ ಒಂಬತ್ತು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ನನಗೀಗ ಐವತ್ತೆಂಟು ವರ್ಷ ವಯಸ್ಸಾಗಿದೆ. 2014ಕ್ಕೆ ನನಗೆ ಅರವತ್ತು ವರ್ಷ ವಯಸ್ಸಾಗುತ್ತದೆ. ಆಗ ಕೆಲಸದಿಂದ ಬಿಡುಗಡೆಯಾದರೆ ನನಗೆ ಅಥವಾ ನನ್ನಂತೆ ನಿವೃತ್ತಿಯಾದವರಿಗೆ ಹಣಕಾಸಿನ ಸೌಲಭ್ಯ ಕಾನೂನಿನಂತೆ ದೊರೆಯುತ್ತದೆಯೇ?
- ಬೋನಸ್ ಕಾಯ್ದೆ 1965ರನ್ವಯ ನೀವು ಕೆಲಸ ಮಾಡುವ ಅಂಗಡಿಯಲ್ಲಿ ಇಪ್ಪತ್ತು ಜನರಿಗೆ ಕಮ್ಮಿಯಿಲ್ಲದಷ್ಟು ಕೆಲಸಗಾರರಿದ್ದರೆ ವಾರ್ಷಿಕ ಕನಿಷ್ಠ ಶೇಕಡ 33ರಷ್ಟು ಮತ್ತು ಗರಿಷ್ಠ ಶೇಕಡ 20ರಷ್ಟು ಎಲ್ಲರಿಗೂ ಬೋನಸ್ ನೀಡಲೇಬೇಕು. ಕನಿಷ್ಠ ವೇತನ ಕಾಯ್ದೆ 1948ರ ಕಲಂ 4ರಂತೆ ರಾಜ್ಯ ಸರ್ಕಾರ ನಿಗದಿಪಡಿಸಿದ ಕನಿಷ್ಠ ವೇತನ ನೀಡಬೇಕು.
ಕನಿಷ್ಠ ಹತ್ತು ಜನ ಕೆಲಸ ಮಾಡುತ್ತಿದ್ದರೆ ಅವರು ಐದು ವರ್ಷಕ್ಕಿಂತ ಕಮ್ಮಿ ಇಲ್ಲದಂತೆ ಕೆಲಸ ಮಾಡಿದ್ದರೆ ಗ್ರ್ಯಾಚುಯಿಟಿಯನ್ನು ಕಲಂ 4ರ ಗ್ರ್ಯಾಚುಯಿಟಿ ಕಾಯ್ದೆ 1972ರಂತೆ ನೀಡಬೇಕು. ಪ್ರತಿ ವರ್ಷ ಸೇವೆಗೆ 15 ದಿನಗಳ ಸಂಬಳ ಕೊಡಬೇಕು. ಹೆಚ್ಚಿನ ಮಾಹಿತಿಯನ್ನು ನಿಮ್ಮ ಸ್ಥಳೀಯ ಕಾರ್ಮಿಕ ಉಪಆಯುಕ್ತರ ಕಚೇರಿಯಲ್ಲಿ ನೀವು ಪಡೆದುಕೊಳ್ಳಬಹುದು.
ದಾವಾ ಹಾಕಲು ವಾಯ್ದೆ ಮೀರಿದೆ
ಎಸ್.ಬಿ. ಸುರೇಶ್ಕುಮಾರ್, ಕುಣಿಗಲ್
ನಮ್ಮ ಅಜ್ಜನ ಆಸ್ತಿಯನ್ನು (ಅವಿಭಕ್ತ ಕುಟುಂಬ) ಅವರ ಹಿರಿಯ ಸಹೋದರನ ಮಕ್ಕಳು ಹಾಗೂ ನನ್ನ ತಂದೆ 1954ರಲ್ಲಿಯೇ ಮಾರಾಟ ಮಾಡಿದ್ದಾರೆ. ಆಗ ಅವರ ಹೆಸರಿನಲ್ಲಿ ಖಾತೆ ಇರಲಿಲ್ಲ. ಈಗ ಅದನ್ನು ನಾವು ಮರಳಿ ಪಡೆಯಬಹುದೇ?
- ಲಿಮಿಟೇಷನ್ ಕಾಯ್ದೆಯ ಆರ್ಟಿಕಲ್ 65ರಂತೆ ನೀವು 12 ವರ್ಷದೊಳಗೆ ದಾವಾ ಹಾಕಬೇಕಾಗಿತ್ತು. ಈಗ ಅವಧಿ ಮೀರಿದೆ. ಈಗ ದಾವಾ ಹಾಕುವುದರಿಂದ ಏನೂ ಪ್ರಯೋಜನವಾಗದು. ವಾಯ್ದೆ ಮೀರಿರುವುದರಿಂದ ನಿಮ್ಮ ಆಸ್ತಿ ನಿಮಗೆ ಮರಳಿ ಸಿಗುವುದಿಲ್ಲ.
ಈಗ ಹೆಣ್ಣುಮಕ್ಕಳಿಗೂ ಪಾಲಿದೆ
ಸುಧೀಂದ್ರಕುಮಾರ್, ಕೊರಟಗೆರೆ
1956ಕ್ಕಿಂತ ಮೊದಲು ಹೆಣ್ಣುಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲಿತ್ತೋ ಹೇಗೆ? ಈಗ ಹೆಣ್ಣುಮಕ್ಕಳಿಗೆ ಕಾನೂನಿನ ಪ್ರಕಾರ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲಿದೆಯೇ?
- 1956ಕ್ಕಿಂತ ಮೊದಲು ಮಿತಾಕ್ಷರ ಸೂತ್ರದಂತೆ ಪಿತ್ರಾರ್ಜಿತ ಆಸ್ತಿ ಹಂಚಿಕೆಯಾಗುತ್ತಿತ್ತು. ಆಗ ಹೆಣ್ಣುಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕಿರಲಿಲ್ಲ. ಆದರೆ ಈಗ 9.9.2005ರಿಂದ ಹಿಂದೂ ಉತ್ತರಾಧಿಕಾರ ಕಾಯ್ದೆಯ ಕಲಂ 6ಎ ರಂತೆ ಹೆಣ್ಣುಮಕ್ಕಳಿಗೂ ಗಂಡುಮಕ್ಕಳಂತೆಯೇ ಆಸ್ತಿಯಲ್ಲಿ ಸಮಪಾಲು ಕೊಡಲೇಬೇಕಾಗಿದೆ.
ಕಾನೂನಿನಂತೆ ಪಾಲು ಕೊಡಬೇಕಾಗುತ್ತದೆ
ಮಂಜುನಾಥ ನಾಯ್ಕ್, ಹಿರೇಗುತ್ತಿ
ನನ್ನ ತಂದೆಗೆ ನನ್ನ ತಾತನವರು, ಅಂದರೆ ನನ್ನ ತಂದೆಯ ತಂದೆ 1956ರಲ್ಲಿ ವಿಲ್ ಮೂಲಕ ಒಂದು ಮನೆ ಬರೆದು ಕೊಟ್ಟಿದ್ದಾರೆ. ನನ್ನ ತಂದೆಯವರು ನನಗೆ ಆ ಮನೆಯನ್ನು ವಿಲ್ ಮೂಲಕ ಕೊಟ್ಟಿದ್ದು, ಆ ಮನೆಯ ಬಾಡಿಗೆ ಹಣವು ನನ್ನ ತಾಯಿಗೆ ಸೇರಬೇಕೆಂದು ಬರೆದಿದ್ದಾರೆ. ನನಗೆ ಒಬ್ಬಳು ಸಹೋದರಿ ಇದ್ದು, ಆಕೆಗೆ ಆ ಮನೆಯಲ್ಲಿ ಯಾವ ಪಾಲೂ ಕೊಟ್ಟಿಲ್ಲ. ಸಮಸ್ಯೆಯೆಂದರೆ ಈ ವಿಲ್ ನೋಂದಣಿಯಾಗಿಲ್ಲ. 20 ವರ್ಷಗಳ ನಂತರ ಈಗ ನನ್ನ ಸಹೋದರಿ ಪಾಲು ಕೇಳುತ್ತಿದ್ದಾರೆ. ಕಾನೂನಿನ ಪ್ರಕಾರ ಅವರಿಗೆ ಕೊಡಬೇಕಾಗುತ್ತದೆಯೇ?
- ತಂದೆಗೆ ಬಂದ ಆಸ್ತಿ ಪಿತ್ರಾರ್ಜಿತ. ಆದ್ದರಿಂದ ನಿಮ್ಮ ಸಹೋದರಿಗೂ ಈ ಆಸ್ತಿಯಲ್ಲಿ ಹಕ್ಕಿದೆ. ವಿಲ್ ನೋಂದಣಿಯಾಗಿಲ್ಲದೇ ಇರುವುದರಿಂದ ಹಿಂದೂ ಉತ್ತರಾಧಿಕಾರ ಕಾಯ್ದೆ, 1956ರ ಕಲಂ 6(5)ರ ವಿವರಣೆಯ ಪ್ರಕಾರ ಅದು ಸಿಂಧುವಾಗುವುದಿಲ್ಲ. ಆದ್ದರಿಂದ ನಿಮ್ಮ ಸಹೋದರಿಗೆ ಆ ಮನೆಯಲ್ಲಿ ಪಾಲು ಕೊಡಲೇಬೇಕಾಗುತ್ತದೆ.
- ಎಚ್.ಆರ್. ಕಸ್ತೂರಿರಂಗನ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.