ಕೊನೆಗೂ ಹಾರತೊಡಗಿದ್ದೆ ಕೋಶ ಬಿಟ್ಟು...
ಅವನು ನಾನೆಂದರೆ ನಾನು, ಅಲ್ಲವೆಂದುಕೊಂಡರೆ ಅಲ್ಲ. ನನ್ನೊಳಗೇ ಆವರಿಸಿಕೊಂಡ ಆವರಣ. ನನ್ನೊಳಗಿಂದ ಹೊರ ಬಂದು ನನ್ನ ಸುತ್ತ ಆವರಿಸಿಕೊಂಡ ವಿಚಿತ್ರ ಪ್ರಭಾವಳಿ. ...
ಅವನು ನಾನೆಂದರೆ ನಾನು, ಅಲ್ಲವೆಂದುಕೊಂಡರೆ ಅಲ್ಲ. ನನ್ನೊಳಗೇ ಆವರಿಸಿಕೊಂಡ ಆವರಣ. ನನ್ನೊಳಗಿಂದ ಹೊರ ಬಂದು ನನ್ನ ಸುತ್ತ ಆವರಿಸಿಕೊಂಡ ವಿಚಿತ್ರ ಪ್ರಭಾವಳಿ. ಮೊದಲು ನನ್ನೊಳಗೆ ಅವನು, ಈಗ ಅವನೊಳಗೆ ನಾನು. ನಾನು ಅವನು ಬೇರಲ್ಲದಿದ್ದರೂ ಅವನು ನಾನು ಅಲ್ಲ. ಏಕೆಂದರೆ ಅವನಿಗೆ ಬೇರೆಯದೇ ಆದ ಆಕಾರ, ಅಸ್ತಿತ್ವ ಇದೆ. ಅವನೊಳಗಿನ ನನಗೆ ನನ್ನದೇ ಆದ ವ್ಯಕ್ತಿತ್ವ, ಅಸ್ತಿತ್ವಗಳುಂಟು. ಹೀಗಾಗಿ ನಾವು ಬೇರೆ ಬೇರೆ. ಆದರೂ ನಾವಿಬ್ಬರೂ ಒಂದೇ. ಅದಕ್ಕೂ ಕಾರಣಗಳುಂಟು. ನನಗೆ ಜೀವಂತಿಕೆ ಇದೆ. ಅವನಿಗಿಲ್ಲ ಎನ್ನುವಂತಿಲ್ಲ. ಏಕೆಂದರೆ ಅವನೊಳಗೇ ನಾನಿರುವುದು. ನನ್ನೊಳಗಿರುವ ಜೀವ ಅವನಿಗೂ ಅನ್ವಯವಾಗುತ್ತದಾದರೆ, ಈಗ ನಾನೂ ಒಂದು ರೀತಿಯಲ್ಲಿ ನಿರ್ಜೀವವೇ. ಅವನು ನನ್ನ ಸುತ್ತ ಆವರಿಸಿಕೊಂಡು ವಿಶಿಷ್ಟ ಬಂಧವನ್ನು ಕಲ್ಪಿಸಿರುವುದರಿಂದ ನಾನೂ ಈಗ ಚಲಿಸಲಾರೆ, ನೆಗೆಯಲಾರೆ. ಬೇರಾವುದೇ ಸ್ಥಿತ್ಯಂತರಕ್ಕೆ ಸಾಧ್ಯವೇ ಇಲ್ಲವನ್ನುವಷ್ಟರಮಟ್ಟಿಗೆ ನನ್ನನ್ನು ಅವನು ತನ್ನ ಬಿಗಿ ಹಿಡಿತದಲ್ಲಿ ನಿಲ್ಲಿಸಿಬಿಟ್ಟಿದ್ದಾನೆ. ಆ ಹಿಡಿತದಿಂದ ಹೊರಬರಲು ಸದ್ಯಕ್ಕಂತೂ ಸಾಧ್ಯವಿಲ್ಲ ಎನ್ನುವುದಕ್ಕಿಂತ ನನಗದು ಬೇಕಿಲ್ಲ. ಏಕೆಂದರೆ ನಾನೇ ಬಯಸೀ ಬಯಸಿ ಕಟ್ಟಿಕೊಂಡ ಕೋಟೆಯದು. ಹಾಗೆಂದು ನನ್ನೊಳಗಿನ ಮಿಡಿತ ನಿಂತಿಲ್ಲ. ಕನಸುಗಳು ಕಮರಿಲ್ಲ. ಆಸೆಗಳು ಬತ್ತಿಲ್ಲ. ನನ್ನಲ್ಲಿನ ತ್ರಾಣ ಬತ್ತಿಲ್ಲ. ಆದರೂ ಹೀಗೆ ಚಲಿಸಲಾರದೇ, ಹೊರಬರಲಾರದೇ ನನಗೆ ನಾನೇ ಮುಸುಕು ಹೊದ್ದು ಕುಳಿತಿದ್ದಾದರೂ ಏಕೆ?
ಏನೊಂದೂ ಅರ್ಥವಾಗುತ್ತಿಲ್ಲ. ಒಂದು ರೀತಿಯಲ್ಲಿ ನನ್ನದೀಗ ಸಮಾಧಿ ಸ್ಥಿತಿ. ಅದು ಯಾವ ಕ್ಷಣದಲ್ಲಿ ನನ್ನ ಸುತ್ತಲೂ ಬಣ್ಣಿಸಲಾಗದ ಇಂಥದ್ದೊಂದು ಮನೋಮಯ ಕೋಶದ ನಿರ್ಮಾಣವಾಯಿತೋ ನನಗೇ ಅರಿವಿಲ್ಲ. ಒಂದಲ್ಲಾ ಒಂದು ದಿನ ನಾನು ಹೀಗೆ ಅಜ್ಞಾತವಾಗಿ ಕುಳಿತುಬಿಡುತ್ತೇನೆ; ಸುತ್ತಲಿನ ಎಲ್ಲ ಸಂಪರ್ಕಗಳನ್ನೂ ಕಡಿದುಕೊಳ್ಳುತ್ತೇನೆ ಎಂಬ ನಿರೀಕ್ಷೆ ನನಗಿರಲೇ ಇಲ್ಲ. ನಿಜಕ್ಕೂ ಹಿಂದಿನ ನನ್ನ ಅವಸ್ಥೆಯನ್ನು ನೆನೆದರೆ ಅಚ್ಚರಿಯಾಗುತ್ತದೆ. ಸುತ್ತಲಿನ ಆಕರ್ಷಣೆಗಳೆಲ್ಲಾ ನನಗಾಗಿಯೇ, ನನ್ನ ಸುಖಕ್ಕಾಗಿಯೇ ಮೀಸಲೆಂಬ ಹಮ್ಮಿನಿಂದ ಮುನ್ನುಗ್ಗುತ್ತಿದ್ದೆ. ಎಷ್ಟು ಅನುಭವಿಸಿದರೂ ತೀರದ ಆಸೆಯ ದಿನಗಳವು. ಹಸಿವು, ಹಸಿವು, ಹಸಿವುಗಳದ್ದಷ್ಟೇ ಚಿಂತೆ. ಎಲ್ಲ ರೀತಿಯ ಹಸಿವನ್ನು ಕೆದಕಿಕೊಂಡು, ಮೇಯುವುದೊಂದೇ ಗುರಿಯಲ್ಲಿ ಹೊರಟಿದ್ದೆ. ಚೆಂದವೆಂಬುದನ್ನು ಯಾವುದನ್ನೂ ಬಿಟ್ಟಿಲ್ಲ. ಎಲ್ಲವನ್ನೂ ಹೀರುತ್ತಾ, ನಲುಗಿಸುತ್ತಾ, ನಾ ಮಾತ್ರ ನಲಿಯುತ್ತಾ ಬದುಕೆಂದರೆ ಅದೇ ಎಂದುಕೊಂಡು ನಡೆದಿದ್ದೆ. ಈಗಷ್ಟೇ ಚಿಗುರಿದ ಚೆಲುವೆ, ಕಣ್ಣು ಕೋರೈಸುತ್ತಿದ್ದ ಕನ್ನಿಕೆ, ದಷ್ಟ ಪುಷ್ಟವಾಗಿ ಬಲಿತು ನಿಂತಿದ್ದ ಜವ್ವನೆ, ಅಡಗಿ ಕುಳಿತ ಆಕೆ, ಬೆತ್ತಲೆದೆಯ ಬಜಾರಿ, ಸ್ನಿಗ್ಧತೆಯ ಸ್ಮಿತೆ, ಮನೋಹರ ಮುಖದ ಮುಗುದೆ... ಎಲ್ಲರೂ ನನ್ನನ್ನು, ನನ್ನ ಹಸಿವನ್ನು ಪರಿಪರಿಯಾಗಿ ಬಣ್ಣಿಸಿದವರೇ. ನಾನು ಮಾತ್ರ ಕೊಬ್ಬುತ್ತಲೇ ಇದ್ದೆ. ಆದರೂ ಅತೃಪ್ತಿ. ಆಸೆ ತಣಿಸಿಕೊಳ್ಳದ ಹಂಬಲ ಇರುವವರೆಗೆ ಇಂಥ ಹತಾಶೆ ಇದ್ದದ್ದೇ. ಆ ಹಂಬಲವೂ ಒಂದು ರೀತಿಯಲ್ಲಿ ಸುಖವೆನಿಸಿದ್ದರಿಂದ ಆಸೆ ಮುಂದುವರಿದೇ ಇತ್ತು. ಆದರೆ ಸುಖ ಕೊನೆಯಾದಾಗ ಹತಾಶೆ, ನೋವುಗಳು ಮುಕ್ಕರಿಸಿಕೊಂಡವು. ಸ್ವಾರ್ಥ ಪ್ರಜ್ಞೆ ನನ್ನನ್ನು ನನಗೇ ಗೊತ್ತಿಲ್ಲದಂತೆಯೇ ಒಂಟಿಯಾಗಿಸಿತ್ತು. ಬೇರೆಯಾಗಿಯೇ ನಿಲ್ಲಿಸಿತ್ತು. ಆ ಹಂತದಲ್ಲೇ ನನ್ನೊಳಗಿನ ತೀರದ ಆಸೆ, ಹಂಬಲಗಳು ದ್ರವಿಸಿ, ಸ್ರವಿಸಿ ಅದೇ ಎಳೆಗಳಾಗಿ ನನ್ನ ಸುತ್ತಲ ಕೋಟೆ ನಿರ್ಮಾಣಗೊಳ್ಳತೊಡಗಿದ್ದು. ನನ್ನೊಳಗೆ ಉಳಿದ್ದು ಹತಾಶೆ ಮಾತ್ರ ಎಂಬ ಸತ್ಯ ಅರಿವಾಗತೊಡಗಿದಾಗ ಮನಸ್ಸು ಸ್ಥಗಿತಗೊಂಡಿತ್ತು. ಮತ್ತೆ ಹೊರಗಿನ ಲೋಕಕ್ಕೆ ತೆರೆದುಕೊಳ್ಳುವುದೇ ಬೇಡವೆನಿಸತೊಡಗಿತು. ಮನಸ್ಸು ಮಾತ್ರ ಯಾವುದೇ ಪಲಾಯನ ಬಯಸದ ಸ್ಥಿತಿಯಲ್ಲಿ ಸ್ಥಿತಪ್ರಜ್ಞತೆಗೆ ಜಾರಿತ್ತು. ಇಂಥ ಸ್ಥಿತಿಯಲ್ಲಿ ಮಾತ್ರವೇ ನಾನು ಎಲ್ಲರಿಂದ ಭಿನ್ನವಾಗಿ, ಎಲ್ಲ ಬಂಧನದಿಂದ ಬಿಡುಗಡೆ ಹೊಂದಿ ಎತ್ತರೆತ್ತರಕ್ಕೆ ಹಾರಲು ಸಾಧ್ಯ ಎಂಬುದು ಮನವರಿಕೆಯಾಗಿತ್ತು. ಅದು ಒಂದು ರೀತಿಯಲ್ಲಿ ಆತ್ಮಾವಲೋಕನವೇ. ಯಾವುದೂ ಹೀಗೇ ಎಂಬ ಪೂರ್ವಗ್ರಹ ಇಲ್ಲದ, ಯಾವುದನ್ನೂ ಇದು ಇಷ್ಟೇ ಎಂಬ ಕೀಳ ಭಾವನೆಯೂ ಇಲ್ಲದ, ಮುಕ್ತ ಪರಿಶೋಧನೆಯ ಸ್ಥಿತಿಯದು. ಇದರ್ರಿದ ಮಾತ್ರ ಗೊತ್ತಿಲ್ಲದುದುರ ಬಗ್ಗೆ ಒಳ ಹೊಕ್ಕು ನೋಡಲು ಸಾಧ್ಯ ಎಂಬುದು ಅರ್ಥವಾಯಿತು. ನಾನು ಈವರೆಗೆ ಅನುಭವಿಸಿದ್ದು ಕೇವಲ ಮೇಲ್ಮೈನ ಸುಖವನ್ನಷ್ಟೇ. ಬುಡದ ಭೋಗವನ್ನಷ್ಟೇ. ಎತ್ತರದಲ್ಲಿ, ತುತ್ತ ತುದಿಯ ಶಿಖರದಲ್ಲಿ ನಾನು ಕಾಣದ ನನ್ನ ಸಾಮರ್ಥ್ಯಕ್ಕೆ ಎಟುಕದ ಅವ್ಯಕ್ತ ಸಿಹಿಯೊಂದಿದೆ. ಅದನ್ನು ಹೀರಿ ಹಾರುವುದರಲ್ಲಿನ ಗಾಢತೆ, ಅರ್ಥವಂತಿಕೆಯನ್ನು ನಾನಿನ್ನೂ ಗಳಿಸಿಯೇ ಇಲ್ಲ ಎಂಬುದು ಗೋಚರಿಸುತ್ತಿದ್ದಂತೆಯೇ ಮತ್ತಷ್ಟು ಅಂತರ್ಮುಖಿಯಾದೆ. ಅದಿಲ್ಲದಿದ್ದರೆ ನಾನು ಭೌತಿಕ ಸುಖದಲ್ಲಿಯೇ ಮುಳುಗಿ ಹೋಗುತ್ತೇನೆ ಎಂದು ಅನ್ನಿಸತೊಡಗಿತ್ತು.
ಹಿಂದಿನ ಎಲ್ಲದರ ಮೇಲೆ, ತೀರದ ವಾಂಛೆಯ ವಾರಿಧಿಯ ಮೇಲೆ ಮರೆವಿನ ದಟ್ಟ ಹೊದಿಕೆ ನಿರ್ಮಾಣವಾಗಿತ್ತು ಮನದಲ್ಲಿ. ಅಷ್ಟೇ ನನಗೇ ಗೊತ್ತಿಲ್ಲದಂತೆ ನನ್ನಲ್ಲಿ ಭಾರೀ ಬದಲಾವಣೆಯಾಗಿತ್ತು. ಬದಲಾವಣೆಯೆಂದರೆ ಅದು ಸಾಮಾನ್ಯದ್ದಲ್ಲ. ನನ್ನ ಗುರುತೇ ನನಗೆ ಸಿಗದಷ್ಟು ನಾನು ಬದಲಾಗಿದ್ದೆ; ಒಳ- ಹೊರಗೆ ಸೇರಿದಂತೆ. ಮೈ ಮನಸ್ಸುಗಳು ಹಗುರಾದ ಅನುಭವ. ನೂರಾರು ಶಕ್ತಿಯ ಪ್ರವಾಹಗಳು ಒಗ್ಗೂಡಿ ನನ್ನೊಳಗೆ ನುಗ್ಗಿದಂತೆ. ಅಧ್ಯಾತ್ಮ ಅನುಭೂತಿಯ ಪರಾಕಾಷ್ಠೆಯದು. ಪಕ್ಕೆಗಳಿಗೆ ರೆಕ್ಕೆ ಮೂಡಿದ ಭಾವ. ಮೊದಲಿನ ನನ್ನ ವಿಕೃತಿ ಮನದಲ್ಲಿ ಈಗಿಲ್ಲ. ಹಾಗೆಯೇ ಮೈಯಲ್ಲಿ ಅಂದಿನ ಭೀತಿ ಹುಟ್ಟಿಸಬಲ್ಲ ಭೀಕರ ಕುರೂಪವೂ. ರಕ್ಕಸೀ ಪ್ರವೃತ್ತಿಯ ಮುಳ್ಳು ಕಳಕೊಂಡು ಮೈ ಮನಸ್ಸುಗಳು ನಯವಾಗಿದ್ದವು. ದೇಹ ಮನಸ್ಸುಗಳಿಗೆ ರಂಗು ತುಂಬಿತ್ತು. ಹೊಸ ಬೆಳಗಿನ ಸೂಚನೆಗೆ ಎಳೆ ಕಿರಣಗಳು ಕೋಶವನ್ನು ಭೇದಿಸಿ ಒಳ ನುಗ್ಗ ತೊಡಗಿದ್ದವು. ಈವರೆಗೆ ನನ್ನ ಬಿಗಿಯಾಗಿ ಹಿಡಿದಿಟ್ಟಿದ್ದ ಶಕ್ತಿ ನಿಧಾನಕ್ಕೆ ಸಡಿಲಗೊಳ್ಳುತ್ತಿರುವ ಅನುಭವ. ಹೊಂಗಿರಣಗಳತ್ತ ತಲೆ ತೂರಿಸಿ ಮುಖ ಮಾಡಿ ನಿಂತೆ. ಎಂಥದ್ದೋ ಉತ್ಸಾಹ. ಸುತ್ತೆಲ್ಲ ಬಗೆಬಗೆಯ ಹೂವುಗಳು ಅರಳಿ ಆಕರ್ಷಿಸುತ್ತಿದ್ದವು. ಅದರಿಂದ ಹೊರ ಹೊಮ್ಮುವ ಸುವಾಸನೆ ಮನವನ್ನು ಕೆರಳಿಸಿತ್ತು. ಆದರೆ ಈ ಬಾರಿ ಹಿಂದಿನ ವಿಕೃತ ಬಯಕೆಗಳಿಲ್ಲ. ಸ್ವಾರ್ಥದ ಲೇಪನವಿಲ್ಲ. ಸಾರ್ಥಕದ ಸಂಯೋಜನೆಗಾಗಿ ಚಿಟ್ಟೆ ಹಾರತೊಡಗಿತ್ತು, ಕೋಶ ಬಿಟ್ಟು.
- ರಾಧಾ ಸೋಚನಿ
abhyagatha@yahoo.co.in
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.