ಸಂಚಲನ
ಸಂಸ್ಕೃತ ಅಧ್ಯಾಪಕರಾಗಿರುವ ಗ.ನಾ. ಭಟ್ಟ ಅವರ ವೈಚಾರಿಕ ಲೇಖನಗಳ ಸಂಕಲನ 'ಸಂಚಲನ' ಸಮಾಜದಲ್ಲಿ ಸ್ವಲ್ಪವಾದರೂ ಸಂಚಲನ ಉಂಟುಮಾಡುವ...
ಸಂಸ್ಕೃತ ಅಧ್ಯಾಪಕರಾಗಿರುವ ಗ.ನಾ. ಭಟ್ಟ ಅವರ ವೈಚಾರಿಕ ಲೇಖನಗಳ ಸಂಕಲನ 'ಸಂಚಲನ' ಸಮಾಜದಲ್ಲಿ ಸ್ವಲ್ಪವಾದರೂ ಸಂಚಲನ ಉಂಟುಮಾಡುವ ಉದ್ದೇಶದಿಂದ ಬರೆದವು. ಹಾಗೆಂದು ಭಟ್ಟರೇ ಹೇಳಿಕೊಂಡಿದ್ದಾರೆ. ಇಲ್ಲಿಯ 23 ಬರೆಹಗಳನ್ನು ಗಮನಿಸಿದಾಗ ಅವು ವಿಚಾರ ಪ್ರಚೋದಕವಾಗಿವೆ ಎಂಬುದು ಗೊತ್ತಾಗುತ್ತದೆ. 'ಭಾಷೆಯೊಂದನ್ನು ಉಳಿಸುವುದು ಬೆಳೆಸುವುದು ಅಂದರೆ ಏನು?' ಎಂಬುದನ್ನು ಚರ್ಚಿಸುತ್ತ ಹೊಸ ವಿಚಾರಗಳನ್ನು ಹೇಳಿದ್ದಾರೆ. ಭೈರಪ್ಪನವರ ಕವಲು ಕಾದಂಬರಿಯ ವಿಮರ್ಶೆಯೂ ಇದರಲ್ಲಿದೆ. 'ಇಂದಿನ ಸಭೆ ಸಮಾರಂಭಗಳು ಯಾಕೆ ಹೀಗೆ?' ಎಂಬ ಲೇಖನದಲ್ಲಿ ಸಭೆಯ ಶಿಷ್ಟಾಚಾರದ ಬಗ್ಗೆ ಬರೆದಿರುವ ಅಭಿಪ್ರಾಯವನ್ನು ಸಭೆ ಸಮಾರಂಭ ಏರ್ಪಡಿಸುವವರು ಓದಿದರೆ ಜನರಿಗೆ ಉಪಕಾರವಾಗುತ್ತದೆ. ಧಾರ್ಮಿಕ ಸಂಬಂಧದ ಕೆಲವು ಲೇಖನಗಳು ಇದರಲ್ಲಿವೆ. ಇಲ್ಲಿಯ ಲೇಖನಗಳೆಲ್ಲ ಬೇರೆಬೇರೆ ಪತ್ರಿಕೆಗಳಲ್ಲಿ ಪ್ರಕಟವಾಗಿರುವವೇ.
ಇವರದೇ ಇನ್ನೊಂದು ಕೃತಿ 'ನುಡಿ ಚಿತ್ತಾರ'. ಇದರಲ್ಲಿ ಮಹಾಕವಿ ಪರಮದೇವ, ವೀರಕೇಸರಿ ಸೀತಾರಾಮ ಶಾಸ್ತ್ರಿ, ಸರ್ ಎಂ.ವಿ., ಡಿವಿಜಿ, ಹಾಮಾನಾ ಮೊದಲಾದ 17 ಸಾಧಕರ ನುಡಿಚಿತ್ರಗಳಿವೆ. ಮತ್ತೊಂದು ಕೃತಿ 'ಸುಂದರ ಹೂಗಳು' ಮಕ್ಕಳ ಕಥಾಗುಚ್ಛ. ಇದರಲ್ಲಿ ನೀತಿಬೋಧಕವಾದ 58 ಪುಟ್ಟಪುಟ್ಟ ಕತೆಗಳಿವೆ.
ಕೃತಿ: ಸಂಚಲನ
ಪ್ರಕಾರ: ವೈಚಾರಿಕ ಲೇಖನಗಳು
ಏಕೆ ಓದಬೇಕು?: ಹಲವು ವಿಚಾರ ಅರಿಯಲು
ಪ್ರ: ವಿಸ್ಮಯ ಪ್ರಕಾಶನ, ಮೈಸೂರು, ಪುಟಗಳು 104, ಬೆಲೆ ರು. 100
ಪೊಲೀಸ್ ವೃತ್ತಿ ಕಥಾನಕ
ತಮ್ಮ ಎಲ್ಲ ವೈಫಲ್ಯಗಳಿಗೆ ವ್ಯವಸ್ಥೆಯನ್ನು ದೂರುವವರು ಇದ್ದಾರೆ. ಆದರೆ ಈ ವ್ಯವಸ್ಥೆಯ ಒಳಗೇ ಇದ್ದುಕೊಂಡು ಉತ್ತಮ ಸೇವೆಯನ್ನು ಸಲ್ಲಿಸಿದ ಅಧಿಕಾರಿಗಳು ಇದ್ದಾರೆ. ಅಂಥವರಲ್ಲಿ ಒಬ್ಬರು ಪೊಲೀಸ್ ಅಧಿಕಾರಿಯಾಗಿದ್ದ ಎಂ.ಜಿ. ಗೋವಿಂದರಾಜು. ಸಾಹಿತ್ಯದ ವಿದ್ಯಾರ್ಥಿಯೂ ಆಗಿರುವ ಗೋವಿಂದರಾಜು ತಮ್ಮ ವೃತ್ತಿಜೀವನದ ಅನುಭವಗಳನ್ನು 'ಪೊಲೀಸ್ ಅಧಿಕಾರಿಯೊಬ್ಬನ ವೃತ್ತಿ ಕಥಾನಕ' ಎಂಬ ಕೃತಿಯಲ್ಲಿ ಅತ್ಯಂತ ಸ್ವಾರಸ್ಯಕರವಾಗಿ ಕಟ್ಟಿಕೊಟ್ಟಿದ್ದಾರೆ. ಎಲ್ಲವೂ ಚಿಕ್ಕಚಿಕ್ಕ ಅಧ್ಯಾಯಗಳು. ಸಣ್ಣ ಕತೆಗಳಂತೆ ಸಾಹಿತ್ಯಕ ಗುಣವನ್ನು ಈ ಬರೆಹ ಹೊಂದಿದೆ. ಕರ್ತವ್ಯ ನಿರ್ವಹಣೆಯಲ್ಲಿ ಎದುರಾದ ಅಡ್ಡಿಗಳನ್ನು ತಾವು ಹೇಗೆ ನಿವಾರಿಸಿಕೊಂಡಿದ್ದು ಎಂಬುದನ್ನು ಹೇಳುವಾಗ ಅವರಲ್ಲಿ ಒಂದು ಧನ್ಯತೆಯ ಭಾವ ಇದೆ. ಪ್ರಾಮಾಣಿಕವಾಗಿ ಸೇವೆಸಲ್ಲಿಸುವ ಮನಸ್ಸಿದ್ದರೆ ಅದನ್ನು ಸಾಧಿಸಬಹುದು ಎಂಬುದಕ್ಕೆ ಇದೊಂದು ನಿದರ್ಶನ. ಹೊಸದಾಗಿ ಸರ್ಕಾರಿ ಸೇವೆಗೆ ಸೇರುವವರಿಗೆ ಇದೊಂದು ಮಾರ್ಗದರ್ಶಕ ಕೃತಿ.
ಕೃತಿ: ಪೊಲೀಸ್ ಅಧಿಕಾರಿಯೊಬ್ಬನ ವೃತ್ತಿ ಕಥಾನಕ, ಪ್ರಕಾರ: ಅನುಭವ ಕಥನ
ಏಕೆ ಓದಬೇಕು?: ಓದಿನ ಖುಷಿಗೆ
ಪ್ರ: ಐಬಿಎಚ್ ಪ್ರಕಾಶನ, ಬೆಂಗಳೂರು, ಪುಟಗಳು 100, ಬೆಲೆ ರು. 75
ಸ್ವರಸನ್ನಿಧಿ
ಸಂಗೀತಗಾರ ಬರೆಹಗಾರನೂ ಆದಾಗ ಆ ಬರೆಹದ ಸೊಗಸೇ ಬೇರೆ. ಡಾ. ನಾಗರಾಜರಾವ್ ಹವಾಲ್ದಾರ್ ಅವರು ಸಂಗೀತಗಾರರು. ವಿವಿಧ ಸರ್ಕಾರಿ ಹುದ್ದೆಗಳಲ್ಲಿ ಕೆಲಸ ಮಾಡಿದವರೂ ಹೌದು. ಅವರು ಭಾರತೀಯ ಸಂಗೀತಗಾರರ ನುಡಿಚಿತ್ರವನ್ನು ತಮ್ಮ ಅನುಭವದ ಲೇಪನದೊಂದಿಗೆ 69 ಲೇಖನಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ತಮ್ಮ ಒಡನಾಟವಿದ್ದ ಹಿರಿಯ ಸಂಗೀತಗಾರರ ಬಗ್ಗೆ ಅವರು ಕಟ್ಟಿರುವ ನುಡಿತೋರಣ ಪ್ರೀತಿಯಿಂದ ತುಂಬಿದೆ. ಸಂಗೀತಗಾರರ ಲೋಕವೇ ಬೇರೆ. ಅವರ ಹವ್ಯಾಸಗಳು, ಅವರ ಮೂಡುಗಳು, ಅವರು ಪ್ರೀತಿ ತೋರುವ ಪರಿ, ಅವರ ಅಸಮಾಧಾನಗಳು ಎಲ್ಲವೂ ಸಂಗೀತದ ಸಪ್ತಸ್ವರಗಳ ಹಾಗೆ ಬೇರೆಬೇರೆ ಆರೋಹಣ ಅವರೋಹಣಗಳನ್ನು ಹೊಂದಿರುವಂಥದ್ದು. ಹಲವು ಸ್ವಾರಸ್ಯಕರ ಪ್ರಸಂಗಗಳನ್ನೂ ಹವಾಲ್ದಾರ್ ಅವರು ಇಲ್ಲಿ ದಾಖಲಿಸಿದ್ದಾರೆ. ಸಂಗೀತದ ಬಗ್ಗೆ ಪ್ರೀತಿಹುಟ್ಟಿಸುವ ಬರೆಹ ಇದು. ಇಲ್ಲಿ ಪ್ರಸ್ತಾಪಗೊಂಡ ಸಂಗೀತಗಾರರನ್ನು ಅರಿಯುವುದಕ್ಕೆ ಇದೊಂದು ಚಿಕ್ಕ ಕಿಂಡಿ. ಹವಾಲ್ದಾರರ ಭಾಷೆ ಸೊಗಸಾದುದು. ಸಂಗೀತದಂತೆ ಆರ್ದ್ರವಾದುದು. ಅದು ಈ ಕೃತಿಯ ಪ್ಲಸ್ಪಾಯಿಂಟ್.
ಕೃತಿ: ಸ್ವರಸನ್ನಿಧಿ
ಪ್ರಕಾರ: ನುಡಿಚಿತ್ರ
ಏಕೆ ಓದಬೇಕು?: ಸಂಗೀತದ ಬಗ್ಗೆ ಅರಿಯಲು
ಪ್ರ: ವಸಂತಪ್ರಕಾಶನ, ಬೆಂಗಳೂರು, ಪುಟಗಳು 298 ಬೆಲೆ ರು. 225
ಅಪೂರ್ವ ಭಾಷೆ
ಎಷ್ಟೋ ಸಲ ಯುಗಾದಿ ಮುಟ್ಟಿ ಹೋಗಿದೆ ಮನೆಮುಂದಲ ಬೇವು ಮಾವು ಅರಳಿ ಆಲಗಳ/ ಅದೆಷ್ಟೋ ಕೋಗಿಲೆಗಳ ಕೂಜನ ಏಳೇಳು ಗಿಳಿಹಸಿರು ತೋರಣ ಜೀವ ತಲ್ಲಣದ ಹಸಿ ಹಸಿರು ಅರಳಿ ಅರಳಿ ಮರುಕಳಿಸಿವೆ/ ಎಂಬ ಸಾಲುಗಳನ್ನು ಬರೆದವರ ಕಾವ್ಯ ಸಾಮರ್ಥ್ಯ ಬೇರೆ ವಿವರಣೆ ಇಲ್ಲದೆ ಮನಕ್ಕೆ ತಟ್ಟುವುದು. ಇವುಗಳನ್ನು ಬರೆದವರು ಆರ್. ತಾರಿಣಿ ಶುಭದಾಯಿನಿ. ಅವರ 'ಪೂರ್ವಭಾಷಿ' ಸಂಕಲನದ 'ಪುನರಪಿ' ಕವಿತೆಯ ಸಾಲುಗಳು ಇವು. ವರಕವಿ ಬೇಂದ್ರೆಯವರ ಯುಗಾದಿ ಕವಿತೆಗೆ ಸಂವಾದಿಯಾಗಬಲ್ಲ ಭಾವಶ್ರೀಮಂತಿಕೆ ಇದರಲ್ಲಿದೆ. ಅಪೂರ್ವ ಭಾಷೆ ಇದೆ. ಈ ಸಂಕಲನದಲ್ಲಿ 41 ಕವಿತೆಗಳಿವೆ. ಮೊದಲ ಕವಿತೆ 'ವಿರಹಿಣಿ'ಯಲ್ಲಿ 'ರೂಪವಂತೆಯ ಮನಸ ಯಾರೇನು ಬಲ್ಲರು? ಪ್ರೇಮದ ನೋವಿಗೆ ಯಾರುಂಟು? ದಾಟುವೆ ಹೊಸ್ತಿಲ, ದಿಡ್ಡಿ ಬಾಗಿಲ ಮನೆ ದೂರ ಮನೆ ದೂರ ಮನೆ ದೂರ...' ಎಂಬ ದಿಟ್ಟ ಸಾಲುಗಳು ಬರುತ್ತವೆ. ಹೆಣ್ಣಿನ ಒಳತೋಟಿಗಳನ್ನು ಸಮರ್ಥವಾಗಿ ದಾಖಲಿಸುವ, ಪುರುಷ ಪ್ರಧಾನ ವ್ಯವಸ್ಥೆಯನ್ನು ಧಿಕ್ಕರಿಸುವ ಹಲವು ಕವಿತೆಗಳು ಇಲ್ಲಿವೆ. ಅಂದಹಾಗೆ ಈ ಸಂಕಲನ 2013ರ ಕಡೆಂಗೋಡ್ಲು ಕಾವ್ಯ ಪುರಸ್ಕಾರವನ್ನು ಪಡೆದಿದೆ.
ಕೃತಿ: ಪೂರ್ವಭಾಷಿ, ಪ್ರಕಾರ: ಕಾವ್ಯ, ಏಕೆ ಓದಬೇಕು?: ಓದಿನ ಖುಷಿಗೆ
ಪ್ರ: ಗೀತಾಂಜಲಿ ಪುಸ್ತಕ ಪ್ರಕಾಶನ, ಶಿವಮೊಗ್ಗ, ಪುಟಗಳು 88 ಬೆಲೆ ರು. 50
ಪ್ರಕಾಶಮಾನ
ಕರ್ನಾಟಕದ ಅಪರೂಪದ ರಾಜಕಾರಣಿಗಳಲ್ಲಿ ಎಂ.ಪಿ. ಪ್ರಕಾಶ್ ಅವರು ಒಬ್ಬರು. ಸಮಾಜವಾದಿ ಹಿನ್ನೆಲೆಯ ಪ್ರಕಾಶ್ ರಾಜ್ಯದಲ್ಲಿ ನಡೆದ ಹಲವು ಜನಪರ ಹೋರಾಟಗಳಲ್ಲಿ ಭಾಗಿಯಾದವರು. ಅವರ ಎರಡನೆಯ ಪುಣ್ಯತಿಥಿಯ ಸಂದರ್ಭದಲ್ಲಿ ಎಂ.ಎಂ. ಶಿವಪ್ರಕಾಶ್ ಅವರು 'ಸಾಂಸ್ಕೃತಿಕ ರಾಯಭಾರಿ ಎಂ.ಪಿ. ಪ್ರಕಾಶ್' ಎಂಬ ಕೃತಿಯನ್ನು ತಂದಿರುವರು. ರಾಜಕೀಯ ಪ್ರಕಾಶ್ ಅವರ ಬದುಕಿನ ಒಂದು ಮುಖವಾದರೆ ಸಾಂಸ್ಕೃತಿಕ ಚಟುವಟಿಕೆಗಳ ಇನ್ನೊಂದು ಮುಖವೂ ಅವರಿಗಿತ್ತು. ಅವರು ಲೇಖಕರೂ, ನಟರೂ ಆಗಿದ್ದರು. ರಾಜಕೀಯ ಅಧಿಕಾರದಲ್ಲಿದ್ದಾಗ ಸಂಸ್ಕೃತಿ ಬೆಳವಣಿಗೆಯ ಹಲವು ಯೋಜನೆಗಳನ್ನು ಜಾರಿಗೆ ತಂದರು. ಕಲಾವಿದರಿಗೆ ಗೌರವ ಪ್ರಶಸ್ತಿಗಳು ಸಿಗುವ ಹಾಗೆ ಮಾಡಿದರು. ದೇಶಕ್ಕೆ ರಾಜಕೀಯ ಸ್ವಾತಂತ್ರ್ಯ ಬಂದರಷ್ಟೇ ಸಾಲದು ಇಲ್ಲಿಯ ಜನ ಎಲ್ಲ ರೀತಿಯ ದಾಸ್ಯದಿಂದ ಮುಕ್ತರಾಗಬೇಕು ಎಂದು ಅವರು ಹೇಳುತ್ತಿದ್ದರು. ಪ್ರಕಾಶ್ ಅವರನ್ನು ಹತ್ತಿರದಿಂದ ಕಂಡವರು ಬರೆದ ನುಡಿಚಿತ್ರಗಳೂ ಇದರಲ್ಲಿವೆ. ಪ್ರಕಾಶ್ ಅವರ ರಾಜಕೀಯದಿಂದ ಹೊರತಾದ ಸಾಂಸ್ಕೃತಿಕ ಮುಖವನ್ನು ಜೋಡಿಸಿಕೊಡಲು ಈ ಕೃತಿಯಲ್ಲಿ ಎಂ.ಎಂ. ಶಿವಪ್ರಕಾಶ್ ಯಶಸ್ವಿಯಾಗಿದ್ದಾರೆ.
ಕೃತಿ: ಸಾಂಸ್ಕೃತಿಕ ರಾಯಭಾರಿ ಎಂ.ಪಿ.ಪ್ರಕಾಶ್, ಪ್ರಕಾರ: ನುಡಿಚಿತ್ರ
ಏಕೆ ಓದಬೇಕು?: ಎಂ.ಪಿ. ಪ್ರಕಾಶ್ ಬಗ್ಗೆ ಅರಿಯಲು
ಪ್ರ: ಎಂ.ಪಿ. ಪ್ರಕಾಶ್ ಪ್ರತಿಷ್ಠಾನ, ಹೂವಿನಹಡಗಲಿ, ಪುಟಗಳು 342 ಬೆಲೆ ರು. 200
ಅಮೋಘ ನಾಯಕ
ಆಧುನಿಕ ಭಾರತಕ್ಕೆ ಮಹಾತ್ಮ ಗಾಂಧೀಜಿ ಎಷ್ಟರ ಮಟ್ಟಿಗೆ ಪ್ರಸ್ತುತರು ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿರಬಹುದು. ಗಾಂಧೀಜಿಯ ಬಗ್ಗೆ ಅಸಹನೆಯಿಂದ, ಏನೂ ಗೊತ್ತಿಲ್ಲದೆಯೇ ಮಾತನಾಡುವವರೂ ಇದ್ದಾರೆ. ಗಾಂಧಿ ಏಕೆ ಎಲ್ಲ ಕಾಲಕ್ಕೂ ಸಲ್ಲುವ ವ್ಯಕ್ತಿಯಾಗುತ್ತಾರೆ ಎಂಬ ಕುತೂಹಲ ಹಲವರಲ್ಲಿದೆ. ಗಾಂಧಿ ತನ್ನ ಯುಗದಲ್ಲಿ ಮಾಡಿದ್ದೇನು, ಮುಂದಿನ ಯುಗಕ್ಕೆ ಉಳಿಸಿ ಹೋಗಿದ್ದೇನು ಎಂಬಿತ್ಯಾದಿ ಕುತೂಹಲಗಳಿಗೆ ಪಾಸ್ಕಲ್ ಆಲೆನ್ ನಝರತ್ ಬರೆದ ಕೃತಿಯನ್ನು ಓದಬೇಕು. ಇದನ್ನು ನೀಲತ್ತಹಳ್ಳಿ ಕಸ್ತೂರಿಯವರು 'ಅಮೋಘ ನಾಯಕ ಗಾಂಧಿ' ಹೆಸರಿನಲ್ಲಿ ಕನ್ನಡಕ್ಕೆ ತಂದಿದ್ದಾರೆ. ಮಾರ್ಟಿನ್ ಲೂಥರ್ ಕಿಂಗ್, ಆಲ್ಬರ್ಟ್ ಐನ್ಸ್ಟೀನ್, ಬರ್ನಾಡ್ ಶಾ, ಲಿಯೋ ಟಾಲ್ಸ್ಟಾಯ್ ಮೊದಲಾದವರೇ ಗಾಂಧಿಯನ್ನು ಪ್ರೀತಿಸಿದ್ದಾರೆ. ಗಾಂಧೀಜಿ ಇಪ್ಪತ್ತನೆ ಶತಮಾನದ ಒಂದು ಅದ್ಭುತ. ಗಾಂಧೀಜಿಯವರ ಬದುಕಿನ ಹಲವು ಹೊಸ ಸಂಗತಿಗಳು, ಗಾಂಧೀ ಬದುಕಿನ ಬಗ್ಗೆ ಹೊಸ ಒಳನೋಟಗಳು ಈ ಕೃತಿಯಲ್ಲಿವೆ. ಗಾಂಧೀಜಿಯ ಪ್ರಭಾವವನ್ನು ಈ ಕೃತಿ ಸಮರ್ಥವಾಗಿ ದಾಖಲಿಸಿದೆ.
ಕೃತಿ: ಅಮೋಘ ನಾಯಕ ಗಾಂಧಿ, ಪ್ರಕಾರ: ಗಾಂಧೀ ಚರಿತ್ರ್ರೆ
ಏಕೆ ಓದಬೇಕು?: ಗಾಂಧೀಜಿಯನ್ನು ಅರಿಯಲು
ಪ್ರ: ವಾಸನ್ ಪಬ್ಲಿಕೇಷನ್ಸ್, ಬೆಂಗಳೂರು, ಪುಟಗಳು 248 ಬೆಲೆ ರು. 160
- ಡಾ. ವಾಸುದೇವ ಶೆಟ್ಟಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.