ಸತ್ಯ ಪರೀಕ್ಷೆಯಲ್ಲಿ ಗೆದ್ದ ಹರಿಶ್ಚಂದ್ರ
ಇಂದ್ರ ಸಭೆಯೊಂದಿಗೆ ದೃಶ್ಯ ಆರಂಭ. 'ಕೊಣವೇರಡುಂ ಒರೆ ಗಿಡಕ್ಕೆ ಮಿತ್ತೆಂಬಂತೆ' ವಿಶ್ವಾಮಿತ್ರ- ವಶಿಷ್ಟರ ವಾಕ್ ಸಮರ. ಸತ್ಯವನ್ನು ಒರೆಗೆ ಹಚ್ಚುವ ಸಲುವಾಗಿ ವಶಿಷ್ಟರ ಶಿಷ್ಯ ...
ಇಂದ್ರ ಸಭೆಯೊಂದಿಗೆ ದೃಶ್ಯ ಆರಂಭ. 'ಕೊಣವೇರಡುಂ ಒರೆ ಗಿಡಕ್ಕೆ ಮಿತ್ತೆಂಬಂತೆ' ವಿಶ್ವಾಮಿತ್ರ- ವಶಿಷ್ಟರ ವಾಕ್ ಸಮರ. ಸತ್ಯವನ್ನು ಒರೆಗೆ ಹಚ್ಚುವ ಸಲುವಾಗಿ ವಶಿಷ್ಟರ ಶಿಷ್ಯ ಹರಿಶ್ಚಂದ್ರ ಮತ್ತು ಆತನ ಸಂಸಾರ ಋಷಿ ಮುನಿಗಳ ದಾಳವಾಗುತ್ತದೆ. ಈತನಿಂದ ಮಿಥ್ಯೆಯನ್ನು ನುಡಿಸುವ ಸಲುವಾಗಿ ರಾಜಶ್ರೀ ವಿಶ್ವಾಮಿತ್ರ, ಅಡಿಗಡಿಗೆ ಕಾಡಿ ಸಕಲ ರಾಜ್ಯವನ್ನೇ ಕೊಡುವೆನೆಂದ ಹರಿಶ್ಚಂದ್ರನಿಂದ ರಾಜ್ಯ ಕೋಶವನ್ನು ಧಾರೆ ಎರೆಸಿಕೊಂಡು ಆತನ ಸತ್ವ ಪರೀಕ್ಷೆಗೆ ಮುಂದಡಿ ಇಡುತ್ತಾನೆ. ಕಷ್ಟಕ್ಕೆ ಗುರಿಪಡಿಸಿ ಕಾಶಿ ಕ್ಷೇತ್ರದಲ್ಲಿ ಸತಿಸುತರನ್ನು ಅಡವಿಟ್ಟು ತನ್ನನ್ನು ತಾನೇ ಮಾರಿಕೊಂಡು ವೀರಬಾಹುಕನ ಸೇವಕನಾಗಿ ಕೈಹಿಡಿದ ಸತಿಯನ್ನೇ ವಿಧಿಯಾಟಕ್ಕೆ ಒಳಗಾಗಿ ಶಿರಕತ್ತರಿಸುವಲ್ಲಿಗೆ ಮುಂದಾದ ಹರಿಶ್ಚಂದ್ರನಿಗೆ ಕಡೆಯಲ್ಲಿ ಶಿವಸಾಕ್ಷಾತ್ಕಾರವಾಗುತ್ತದೆ. ಇದು ಕಥಾವಸ್ತು.
ಕಥೆಯನ್ನು ರಂಗಕ್ಕೆ ತರುವಲ್ಲಿ ಹವ್ಯಾಸಿ ಕಲಾವಿದರನ್ನು ಚೆನ್ನಾಗಿ ದುಡಿಸಿಕೊಂಡಿದ್ದಾರೆ ರಮೇಶ್ ಬೇಗಾರ್. ಹರಿಶ್ಚಂದ್ರನ ಪಾತ್ರಧಾರಿ ರವಿಕುಮಾರ್ ಜನ ಮೆಚ್ಚುಗೆಗೆ ಪಾತ್ರರಾದರು. ಕಡುಕೋಪಿ ವಿಶ್ವಾಮಿತ್ರ ದರ್ಪ, ದಾಷ್ಟ್ಯದ ನುಡಿಗಳಲ್ಲಿ ಔಚಿತ್ಯ ಮೀರದೆ ನಾಟಕಾಂತ್ಯದವರೆಗೂ ಮನೋಜ್ಞವಾಗಿ ಅಭಿನಯಿಸಿದರು.
ನಕ್ಷತ್ರಿಕನಾಗಿ ಬಂದ ಶೃಂಗೇರಿ ಸುಬ್ಬಣ್ಣ ತಮ್ಮ ಪಾತ್ರಕ್ಕೆ ಕಳೆಕಟ್ಟಿದರು. ಕೆಲವೇ ಕ್ಷಣದಲ್ಲಿ ಮಿಂಚಿಮಾಯವಾದ ವೀರಬಾಹುಕನ ಪಾತ್ರಧಾರಿ ಬಾಲಗಣಪತಿ ಭಟ್ ಪಾತ್ರದ ಚೌಕಟ್ಟಿಗೆ ಭಂಗತಾರದಂತೆ ಅಭಿನಯಿಸಿದರು. ಲೋಹಿತಾಶ್ವನಾಗಿ ಮುಗ್ಧತೆಯಿಂದ ಕಾಣಿಸಿಕೊಂಡ ನಾಗಶ್ರೀ ಬೇಗಾರ್ ಹೃದಯದಲ್ಲಿ ಕೂರುತ್ತಾರೆ. ಪರಾಶರ (ನಾರದ), ವೆಂಕಟೇಶ ಭಟ್ (ವಶಿಷ್ಠ), ನಾಗೇಶ್ ಕಾಮತ್ (ವೃದ್ಧ ಬ್ರಾಹ್ಮಣ), ಪುಷ್ಪಾ ಶ್ರೀಕಾಂತ್ (ಚಂದ್ರಮತಿ), ವೇಣುಗೋಪಾಲ್ (ದೇವೇಂದ್ರ), ಅನನ್ಯ, ಪೂಜಾಹೊಳ್ಳ (ಮಾತಂಗ ಕನ್ಯೆಯರು), ಪದ್ಮಶ್ರೀ (ಬ್ರಾಹ್ಮಣ ಪತ್ನಿ), ಶಿವಣ್ಣ (ಈಶ್ವರ) ಶ್ರದ್ಧೆಯಿಂದ ಅಭಿನಯಿಸಿ ನಾಟಕಕ್ಕೆ ಹೊಳಪುತಂದರು. ಎಂ.ಕೆ. ಶ್ರೀನಿಧಿ ಸಂಗೀತವು ಮಲೆನಾಡಿನ ಮಾಧುರ್ಯದ ಪ್ರತೀಕವಾಗಿತ್ತು.
ಈ ಹಿಂದೆ ಪ್ರದರ್ಶಿಸಿದ ಕರ್ಣ ಮತ್ತು ಹರಿಶ್ಚಂದ್ರ ನಾಟಕಗಳಿಂದ ಪೌರಾಣಿಕ ವಸ್ತು ಮತ್ತು ಆಧುನಿಕ ರಂಗಭಾಷೆ ಇವುಗಳ ಹದವಾದ ಮಿಶ್ರಣದೊಂದಿಗೆ ಹೊಸದೊಂದು 'ಬೇಗಾರ್ ಶೈಲಿ' ದಟ್ಟ ಮಲೆನಾಡಿನ ಕಾನನದ ನಡುವೆ ಸದ್ದಿಲ್ಲದೇ ಪ್ರಾರಂಭಗೊಂಡಿರುವುದು ಒಂದು ಪ್ರಶಂಸಾರ್ಹ ಸಂಗತಿ.
- ದ. ರಾಜಣ್ಣ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.