ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ಕೃತಿ ಎಸಗಿದ ಕೃತ್ಯಗಳು ವಿವಾದಗಳ ಗುಂಡಿ

Mainashree
Updated On : 31 Aug 2013, 3:24 am

ಆತ್ಮಕಥೆಗಳನ್ನು ಬರೆಯಲು ಒಂದು ಮುಖ್ಯ ಕಾರಣ, ತನ್ನ ನಂತರ ಅಥವಾ ತಾನು ಸತ್ತ ಬಳಿಕ ಯಾರೂ ತನ್ನ ಬಗ್ಗೆ ಇಲ್ಲಸಲ್ಲದ್ದನ್ನು ಸೇರಿಸಿ ಕಥೆ ಕಟ್ಟಬಾರದು; ಅವರ ಮೂಗಿನ ನೇರಕ್ಕೆ ಬರೆದು, ತನ್ನ ನೈಜತೆಯ ಬುಡ ಅಲುಗಾಡಿಸಬಾರದು ಎಂಬುದು. ಬಹುಶಃ 'ಗಣಪತಿ'ಯೂ ಆತ್ಮಕಥೆ ಬರೆದಿಟ್ಟು ಹೋಗಿದ್ದಿದ್ದರೆ, ಇಂದು ಯೋಗೇಶ್ ಮಾಸ್ಟರ್ 'ಢುಂಢಿ' ಬರೆದು ಗಣಪನನ್ನು ಕುಡುಕ ಎನ್ನುತ್ತಿರಲಿಲ್ಲ. ಪಾರ್ವತಿಯೊಂದಿಗೆ ರತಿಗೆಳೆಸಿ ಇಡೀ ಕಾದಂಬರಿಗೆ 'ರತಿವಿಜ್ಞಾನ'ದ ನಶೆ ತರುತ್ತಿರಲಿಲ್ಲ.
ಇದು ಹೊಸತಲ್ಲ. ಆದರೆ, ಇಷ್ಟು ಅತಿರೇಕ ಕನ್ನಡ ಕಂಡಿರಲಿಲ್ಲ. ಹಿಂದೆಯೂ ಅನೇಕ ವಿವಾದಗಳು ಕನ್ನಡದ ಬಾಗಿಲು ತಟ್ಟಿದ್ದವು. ಇದರಲ್ಲಿ ತೀರಾ ಗಂಭೀರ, ಸಿಲ್ಲಿ ಸಂಗತಿಗಳ ಸಹಭಾಗಿತ್ವವೂ ಇತ್ತು. ಆದರೆ, ವಿವಾದಿತ ವಿಚಾರಗಳಲ್ಲಿ ಅನೇಕವು ಅಧ್ಯಯನಕ್ಕೆ ಹಾದಿ ಮಾಡಿಕೊಟ್ಟವೇ ವಿನಾ ಮನಸುಗಳನ್ನು ಇರಿದು ದ್ವೇಷದ ಧಗೆ ಎಬ್ಬಿಸಲಿಲ್ಲ. ಹಾಗೆನೋಡಿದರೆ, ಈ ವಿವಾದಗಳೂ ಒಂದು ಚಟವೇ!
ಅಂದಹಾಗೆ, ಕೃತಿಗಳು ಕೇವಲ ಧಾರ್ಮಿಕ ಸೂಕ್ಷ್ಮತೆಯ ಕಾರಣಕ್ಕೂ ವಿವಾದಗಳಾಗವು. ಅನ್ಯ ಕಾರಣಗಳು ಕೆಲವೊಮ್ಮೆ ಅವನ್ನು ಅಟ್ಟಿಸುತ್ತವೆ. ದುರಂತವೆಂದರೆ, ಕನ್ನಡದ ಮೊದಲ ಕೃತಿ 'ಕವಿರಾಜಮಾರ್ಗ'ದಲ್ಲೇ ವಿವಾದ ನಮ್ಮನ್ನು ಅಡ್ಡ ಹಾಕಿತು. ಅದನ್ನು ಬರೆದವ ನೃಪತುಂಗನೋ ಅಥವಾ ಇನ್ನಾರೋ ಎಂಬ ಉತ್ತರ ಸಂಶೋಧಕರನ್ನು ಎರಡು ದಾರಿಗೆ ಕೊಂಡೊಯ್ದಿತ್ತು. 'ನೃಪತುಂಗದೇವಾನುಮತಮಪ್ಪ ಕವಿರಾಜಮಾರ್ಗಂ...' ಎಂಬ ಏಕೈಕ ಸಾಲಿನ ಕಾರಣಕ್ಕಾಗಿ ನಮ್ಮ ಐತಿಹ್ಯ ದಾಖಲೆಗಳಲ್ಲಿ ನೃಪತುಂಗನೇ ಸೇರಿಹೋದ. ಮತ್ತೆ ಚರ್ಚೆ ತಾರಕಕ್ಕೇರಿ 'ಶ್ರೀವಿಜಯ'ನಿಗೆ ಕರ್ತೃಪಟ್ಟ ಕಟ್ಟಿದೆವು. ಈಗ ಉತ್ತರ ಪತ್ರಿಕೆ ಮುಂದೆ ಆಯ್ಕೆಗಳನ್ನು ಹರವಿ ಕುಳಿತ ಕೆಎಎಸ್ ಹುಡುಗ ಪೆನ್ನಿನ ಕ್ಯಾಪನ್ನು ಅರ್ಧ ಕಚ್ಚಿ ತಿನ್ನುತ್ತಿದ್ದಾನೆ!
ಯಾರ ಗಂಟೇನೂ ಖರ್ಚಾಗದು. ಕಾವ್ಯನಾಮದಲ್ಲೂ ಬರೆಯಿರಿ. ಆದರೆ, ನಮ್ಮ ಬಯೋಡೇಟಾವನ್ನು ಒಂದಿಷ್ಟು ಮಂದಿಗೆ ಹೇಳುವುದೊಳಿತು. ಇಲ್ಲದಿದ್ದರೆ ಮುದ್ದಣ್ಣನ ಗತಿ ಆದೀತು. 20ನೇ ಶತಮಾನದವನಾದರೂ ಹಳೆಗನ್ನಡದಲ್ಲೇ ಪ್ರಕಾರಗಳನ್ನು ಸೃಷ್ಟಿಸಿದ ಈತ ಸಲ್ಲಾಪ ಸಾಹಿತ್ಯದ ಅವಧೂತ. ಆದರೆ, ಈ ಮುದ್ದಣನ ಅಂಚೆ ವಿಳಾಸ ಯಾವುದು? ನಂದಳಿಕೆ ಲಕ್ಷ್ಮಿನಾರಣಪ್ಪ ಎಂಬ ವ್ಯಾಯಾಮ ಮೇಷ್ಟ್ರೇ 'ಮುದ್ದಣ' ಎಂದು ತಿಳಿಯಲು ತೆಗೆದುಕೊಂಡ ಸಮಯವೂ ಸುದೀರ್ಘವೇ. ಅಷ್ಟರೊಳಗೆ ಎದ್ದ ವಾಗ್ಸಮರಗಳ ಲೆಕ್ಕವನ್ನು ಯಾವ ಆಡಿಟರೂ ಕೇಳಿಲ್ಲ. ಇನ್ನೊಬ್ಬರ ಹೆಸರಲ್ಲಿ ಕೃತಿಗಳನ್ನು ಬರೆದು ಪ್ರಕಾಶಕರ ಕೈಗಿಟ್ಟ ಈ ಮುದ್ದಣ್ಣನ ಹುಚ್ಚು, ಕರ್ವಾಲೋದ ಮುಗ್ಧ ಮಂದಣ್ಣನಂತೆ!
ಇನ್ನು ವೈಮನಸ್ಸುಗಳು ಅನೇಕರನ್ನು ವಿವಾದದ ಬುಟ್ಟಿಗೆಸೆದಿವೆ. ಈಗಲೂ ಎಸೆಯುತ್ತಲೇ ಇವೆ.  ಬಿchi- ಜಿ.ಪಿ. ರಾಜರತ್ನಂ ಲೇಖನಿಯಲ್ಲೇ ಬಡಿದಾಡಿಕೊಂಡು, ಸಾರಾಯಿ ತೇವದಲ್ಲಿ ಸಾಹಿತ್ಯದ ಹೂವೂ ನೆಟ್ಟವರು. ಬಿchiಯುವರ ಬಾಯಿಗೆ ರತ್ನಂ ನಂಬಿದ್ದ ಸಾಯಿಬಾಬಾ ಸಿಲುಕಿ ಬೊಬ್ಬೆ ಹೊಡೆದ. ಇವರ 'ಭಯಾಗ್ರಫಿ'ಗೆ ಪ್ರತ್ಯುತ್ತರವಾಗಿ ರಾಜರತ್ನಂ 'ನಿರ್ಭಯಾಗ್ರಫಿ' ತಂದು ಮೂಗ್ನಲ್ ಸಮರ ಸಾರಿ ಬದಿಗೆ ಸರಿದರು.
ಇನ್ನು ನಮ್ಮ 'ಕನ್ನಡದ ಆಸ್ತಿ'? ಅದೂ ವಿವಾದದಲ್ಲೇ ಇದೆಯಲ್ಲ! ಮಾಸ್ತಿಯವರ ಐತಿಹಾಸಿಕ 'ಚೆನ್ನಬಸವ ನಾಯಕ' ಕಾದಂಬರಿಯನ್ನು ಬಸವಣ್ಣನ ಅನುಯಾಯಿಗಳು ಇವತ್ತಿಗೂ ಒಪ್ಪಿಕೊಳ್ಳುವುದಿಲ್ಲ. ಜ್ಞಾನಪೀಠ ಬಂದಾಗಲೂ ಅವರನ್ನು ಟೀಕೆಗಳಿಂದ ಬಂಧಿಸಲಾಯಿತು. ಅವರ ಸರಳ ಕಥಾ ಧಾಟಿಗೆ ಧಿಕ್ಕಾರ ಕೂಗಿದವರು ಅನೇಕರು. ಹಾ.ಮಾ. ನಾಯಕರು ಅಂದು ಮಾಸ್ತಿಯವರನ್ನು ಒಪ್ಪಿಸದೇ ಇದ್ದಿದ್ದರೆ ಇಂದು ಕನ್ನಡದ ಪಾಲಿಗೆ ಏಳು ಜ್ಞಾನಪೀಠ ಮಾತ್ರವೇ!
ವಿಶ್ವಕರ್ಮರ ಕೋಪಕ್ಕೆ ಗುರಿಯಾದ 'ಗಾಂಧಿ ಬಂದ', ಲಿಂಗಾಯತರನ್ನು ರೊಚ್ಚಿಗೇಳಿಸಿದ 'ಆನುದೇವ ಹೊರಗಣವನು...', 'ಮಹಾಚೈತ್ರ', ಡಂಕಿನ್ ಝಳಕಿ ಅವರ ಪಿಎಚ್‌ಡಿ ಪ್ರಬಂಧ, ಪಿ.ವಿ. ನಾರಾಯಣರ 'ಧರ್ಮಕಾರಣ', ಕಲ್ಬುರ್ಗಿಯವರ 'ಮಾರ್ಗ', ಸೀತೆಯ ಪಾವಿತ್ರ್ಯವನ್ನು ಪ್ರಶ್ನಿಸಿದ ಪೋಳಂಕಿ ರಾಮಮೂರ್ತಿ ಅವರ 'ಸೀತಾಯಣ'- ಇವೆಲ್ಲ ಸಂಪ್ರದಾಯಗಳ ಸೂಕ್ಷ್ಮಗಳನ್ನು ಬೆತ್ತಲಾಗಿಸಿ, ನಂಬಿಕೆಯನ್ನು ಪ್ರಶ್ನಿಸುವ ಧೈರ್ಯ ಮಾಡಿದಂಥವು. ಕೆಲವು ನಿಷೇಧಗಳಿಗೆ ಗುರಿಯಾದವು.
ಗೌರೀಶ್ ಕಾಯ್ಕಿಣಿ 'ವಾಲ್ಮೀಕಿ ತೂಕಡಿಸಿದಾಗ' ಬರೆದಾಗ 'ರಾವಣ ವಂಶದವರು' ಎಂದೂ ಕೇಳಬೇಕಾಯಿತು. ಎಸ್.ಎಲ್. ಭೈರಪ್ಪ 'ಪರ್ವ' ಬರೆದಾಗ ಹಿಂದೂಗಳಿಗೆ, 'ಆವರಣ' ಬರೆದಾಗ ಮುಸ್ಲಿಮರಿಗೂ ಕಸಿವಿಸಿಯಾಯಿತು. ಆಳ ಅಧ್ಯಯನವಿಲ್ಲದೆ ಭೈರಪ್ಪ ಯಾವುದನ್ನೂ ಬರೆಯರು ಎಂಬ ಸತ್ಯ ಗೊತ್ತಿದ್ದರೂ ಮೂಲಭೂತವಾದಿಗಳಿಗೆ ಆ ಕಾದಂಬರಿಗಳನ್ನು ಒಪ್ಪಿಕೊಳ್ಳುವುದು ಕಷ್ಟವೇ ಆಯಿತು. ಅಕ್ಕ- ತಮ್ಮನ ಸಂಬಂಧವನ್ನೇ ವಿಶಿಷ್ಟವಾಗಿ ಅರ್ಥೈಸಿದ ಕಾರ್ನಾಡರ 'ಅಂಜುಮಲ್ಲಿಗೆ', ಬ್ರಾಹ್ಮಣರ ಮಡಿವಂತಿಕೆಗೆ ಧಿಕ್ಕಾರ ಕೂಗಿದ ಅನಂತಮೂರ್ತಿಯವರ 'ಸಂಸ್ಕಾರ' ಸಾರ್ವಕಾಲಿಕವಾಗಿ ಚರ್ಚೆಗೆ ಕಾರಣವಾಗುವಂಥವು.
ಅಂದಹಾಗೆ, ಈ 'ಢುಂಢಿ' ಬರುವುದಕ್ಕೂ ಮೊದಲು ಕೆ.ವೈ. ನಾರಾಯಣ ಸ್ವಾಮಿ ಅವರ 'ಚಕ್ರರತ್ನ'ದ ಬಗ್ಗೆ ವಿವಾದಗಳು ಎದ್ದಿದ್ದವು. ಅಲ್ಲಿ ಬಾಹುಬಲಿಯನ್ನು 'ಚಮ್ಮಾರ'ನನ್ನಾಗಿ ಚಿತ್ರಿಸಲಾಗಿದೆ ಎಂಬುದು ಆರೋಪ. ಕುವೆಂಪು ಅವರ 'ಜಲಗಾರ'ನಿಂದ ಪ್ರೇರಣೆಗೊಂಡ ಪಾತ್ರ ಇದು. ಜಿನಮೂರ್ತಿಯ ಸ್ಥಾಪನೆ ಬಗೆಗಿನ ಚಾವುಂಡರಾಯನ ಇಂಗಿತ ಈಡೇರಿಸಲು ಅರಿಷ್ಟನೇಮಿ ಬೃಹತ್ ಬಂಡೆಗಾಗಿ ಹನ್ನೆರಡು ವರುಷ ಎಲ್ಲೆಲ್ಲೂ ಹುಡುಕಾಡಿ ಸೋತಿರುತ್ತಾನೆ. ದಾರಿ ಮಧ್ಯ ಸಿಗುವ ಚಮ್ಮಾರ ಅಂಥ ಬಂಡೆ ಇರುವ ಸ್ಥಳ ಸೂಚಿಸುತ್ತಾನೆ. ಅರಿಷ್ಟನೇಮಿಗೆ ಆ ಬಂಡೆಯೇನೋ ಸಿಗುತ್ತದೆ. ಆದರೆ, ಉಳಿ ತಾಗಿಸಿದಾಗ ಬಂಡೆಯಿಂದ ರಕ್ತ ಚಿಮ್ಮಲು ಶುರುವಾಗುತ್ತದೆ. ಅರಿಷ್ಟನೇಮಿಗೆ ಆಗಲೂ ಪರಿಹಾರವಾಗಿ ಕಾಣುವುದು ಚಮ್ಮಾರನೇ. ಬಾಹುಬಲಿಯೇ ಚಮ್ಮಾರ ಎಂಬುದು ಅಂತಿಮವಾಗಿ ದರ್ಶನವಾಗುವ ಸತ್ಯ. 'ಚಪ್ಪಲಿ ಹೊಲಿಯುವವ ಬೇರೆಯಲ್ಲ, ಗಾಯ ಹೊಲಿಯುವವ ಬೇರೆಯಲ್ಲ' ಎಂಬ ಸಂಗತಿಯನ್ನು ರೂಪಕಗಳಲ್ಲಿ ಹಿಡಿದಿಟ್ಟು ತೋರಿಸಿರುವ 'ಚಕ್ರರತ್ನ', ಕೆವೈಎನ್ ಕೆತ್ತಿದ ಅದ್ಭುತ ಕಲಾಸೃಷ್ಟಿಯೇ. ಆದರೆ, ಜೈನರು ಇದನ್ನು ಸಹಿಸಿಕೊಳ್ಳುವುದು ಕಷ್ಟ.
ಅಂದಹಾಗೆ, ಈ ಎಲ್ಲ ಕೃತಿಗಳನ್ನು ವಿವಾದಗಳಿಗಾಗಿಯೇ ಬರೆದಿದ್ದು ಎಂದು ಆರೋಪಿಸುವಂತೂ ಇಲ್ಲ. ಇದರ ಹಿಂದೆ ಆಸಕ್ತಿಗಳು ಕೆಲಸ ಮಾಡಿರಬಹುದು. ಇಲ್ಲವೇ ನಂಬಿದ ಸಿದ್ಧಾಂತಗಳು ಲೇಖಕನನ್ನು ಈ ಹಾದಿಗೆ ಸೆಳೆದಿರಬಹುದು.
ಅಷ್ಟಕ್ಕೂ, ಈ ವಿವಾದದ ಚಟ ಕನ್ನಡಕ್ಕಷ್ಟೇ ಎಡತಾಕುವುದಿಲ್ಲ. ವಿಶ್ವ ಸಾಹಿತ್ಯಕ್ಕೂ ಈ ಚಟ ಅತಿಥಿ. ಡ್ಯಾನ್ ಬ್ರೌನ್‌ನ 'ಡ ವಿಂಚಿ ಕೋಡ್‌', ಷೇಕ್ಸ್‌ಪಿಯರ್‌ನ 'ಮ್ಯಾಕ್‌ಬೆತ್‌', 'ಮರ್ಚೆಂಟ್ ಆಫ್ ವೆನಿಸ್‌', 'ಕಿಂಗ್‌ಲಿಯರ್‌', 'ಹ್ಯಾಮ್ಲೆಟ್‌', ಮಾರ್ಕ್ ಟ್ವೈನ್‌ನ 'ಅಡ್ವೆಂಚರ್ಸ್ ಆಫ್ ಟಾಮ್ ಸಾಯೆರ್‌', ಆಸ್ಕರ್ ವೈಲ್ಡ್‌ನ 'ಟೆಲೆನಿ', ಅರ್ನೆಸ್ಟ್ ಹೆಮಿಗ್‌ವೇನ 'ದಿ ಸನ್ ಆಲ್ಸೋ ರೈಸಸ್‌', ಸಲ್ಮಾನ್ ರಶ್ದಿಯ 'ಸತಾನಿಕ್ ವರ್ಸಸ್‌', ತಸ್ಲೀಮಾ ನಸ್ರೀನಳ 'ಲಜ್ಜಾ'... ಈ ಘಟಾನುಘಟಿಗಳ ಕೃತಿ ಒಂದಲ್ಲಾ ಒಂದು ಕಾರಣಕ್ಕೆ ವಿವಾದಕ್ಕೆ ಮತ್ತು ನಿಷೇಧಕ್ಕೆ ಒಳಗಾದವೇ. ಆ ವಿವಾದಗಳ ಗುಂಡಿಗೆ ಈಗ 'ಢುಂಢಿ' ಬಿದ್ದಿದೆಯಷ್ಟೇ.
ಈ ನಡುವೆ ಮೊನ್ನೆ ಹನಿದೊರೆ ಡುಂಡಿರಾಜರಿಗೂ ಕೆಲವು ಬೆದರಿಕೆ ಬಂದಿವೆಯಂತೆ. ಈಗವರು 'ಗಣಪತಿ'ರಾಜ್ ಎಂದು ಹೆಸರಿಟ್ಟುಕೊಳ್ಳಲು ಹೊರಟಿದ್ದಾರಂತೆ. ಗಣೇಶ ಚತುರ್ಥಿಗೇ ನಾಮಕರಣ! 

= ಕೀರ್ತಿ
    kolgarkeerthi   @gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments