ಪ್ರಧಾನ ಸುದ್ದಿ

ಬಿಪಿಎಲ್ ಕಾರ್ಡುದಾರರಿಗೆ ವಸ್ತ್ರಭಾಗ್ಯ

Srinivasamurthy VN

ಬೆಂಗಳೂರು: ತಮಿಳುನಾಡು ಸರ್ಕಾರದ ಮಾದರಿಯಲ್ಲಿ ರಾಜ್ಯದ ಬಡವರಿಗೆ ಸೀರೆ, ಪಂಚೆ, ಅಂಗಿ ವಿತರಿಸಲು ರಾಜ್ಯ ಸರ್ಕಾರ ಯೋಜನೆ ರೂಪಿಸುತ್ತಿದೆ. ಈ ಯೋಜನೆಗೆ ‘ವಸ್ತ್ರಭಾಗ್ಯ’ ಎಂದು ಹೆಸರಿಡಲು ಕೈಮಗ್ಗ ಮತ್ತು ಜವಳಿ ಇಲಾಖೆ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡ ರಾಜ್ಯ ಜವಳಿ ಸಚಿವ ಬಾಬುರಾವ್ ಚಿಂಚನಸೂರ ಅವರು, ‘ರಾಜ್ಯದಲ್ಲಿ ಬಿಪಿಎಲ್‌ ಚೀಟಿ ಹೊಂದಿರುವ ಎಲ್ಲ ಕುಟುಂಬಗಳ ಸದಸ್ಯರಿಗೆ ವಸ್ತ್ರ ನೀಡುವ ಯೋಜನೆ ಕುರಿತು ಚಿಂತನೆ ನಡೆಸಲಾಗುತ್ತಿದೆ. ಮಹಿಳೆಯರಿಗೆ ಸೀರೆ ಮತ್ತು ರವಿಕೆ, ಪುರುಷರಿಗೆ ಪಂಚೆ, ಶಲ್ಯ ಮತ್ತು ಅಂಗಿ ನೀಡುವ ಕುರಿತು ಶೀಘ್ರದಲ್ಲಿಯೇ ತೀರ್ಮಾನ ಕೈಗೊಳ್ಳಲಾಗುವುದು. ಆದರೆ ಇವುಗಳನ್ನು ‍ಪ್ರಮುಖ ಹಬ್ಬದ ಸಂದರ್ಭದಲ್ಲಿ ವಿತರಿಸಬೇಕು ಎಂದು ಅವರು ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿಂಚನಸೂರ ಅವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಅನುಸಾರ ಈ ಯೋಜನೆ ರೂಪಿಸಲಾಗುತ್ತಿದೆ. ವಸ್ತ್ರಳನ್ನು ಬಡವರಿಗೆ ರಿಯಾಯಿತಿ ದರದಲ್ಲಿ ನೀಡಬೇಕೋ ಅಥವಾ ಸಂಪೂರ್ಣ ಉಚಿತವಾಗಿ ನೀಡಬೇಕೋ ಎಂಬುದನ್ನು ಇನ್ನೂ ನಿರ್ಧರಿಸಿಲ್ಲ ಎಂದರು.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಜವಳಿ ಅಭಿವೃದ್ಧಿ ಆಯುಕ್ತ ಡಾ.ಆರ್. ರಾಜು ಅವರು, ಮುಂದಿನ ಬಜೆಟ್‌ ವೇಳೆಗೆ ಯೋಜನೆಯ ರೂಪುರೇಷೆಗಳು ಅಂತಿಮಗೊಳ್ಳಲಿದೆ. ಅಂದಾಜು ರು. 100 ಕೋಟಿ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಒಂದು ಕುಟುಂಬಕ್ಕೆ ವರ್ಷಕ್ಕೆ ಎಷ್ಟು ಜೊತೆ ವಸ್ತ್ರ ವಿತರಿಸಬೇಕು ಎಂಬುದು ತೀರ್ಮಾನವಾಗಿಲ್ಲ. ಪ್ರಸ್ತುತ ತಮಿಳುನಾಡಿನಲ್ಲಿ ಉಚಿತವಾಗಿ ವಸ್ತ್ರ ವಿತರಿಸಲಾಗುತ್ತಿದೆ’ ಎಂದು ತಿಳಿಸಿದರು.

‘‌ಈ ಹಿಂದೆ ಒಟ್ಟು ರು. 1ಕೋಟಿ ಅನುದಾನದಲ್ಲಿ ಮಹಿಳೆಯರಿಗೆ ಸೀರೆ ವಿತರಿಸಲಾಗುತ್ತಿತ್ತು. ಆದರೆ ಹೀಗೆ ಸೀರೆ ವಿತರಿಸುವ ಪದ್ಧತಿ ಬೇಡ. ವಸ್ತ್ರವನ್ನು ಬಿಪಿಎಲ್‌ ಕುಟುಂಬದ ಎಲ್ಲ ಸದಸ್ಯರಿಗೆ ಹಂಚಲು ಸೂಕ್ತ ಮಾದರಿಯನ್ನು ರೂಪಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದ್ದಾರೆ. ವಸ್ತ್ರವನ್ನು ಹೊರ ರಾಜ್ಯಗಳಿಂದ ತರಿಸಿಕೊಳ್ಳುವ ಬದಲು, ನಮ್ಮ ನೇಕಾರರಿಂದಲೇ ಸಿದ್ಧಪಡಿಸಬೇಕು ಎಂಬುದು ನಮ್ಮ ಉದ್ದೇಶವಾಗಿದೆ’ ಎಂದು ರಾಜು ಹೇಳಿದರು.

ರಾಜ್ಯದಲ್ಲಿ ಪ್ರಸ್ತುತ 1.25 ಲಕ್ಷ ವಿದ್ಯುತ್ ಮಗ್ಗಗಳಿದ್ದು, 75 ಸಾವಿರ ಕೈ ಮಗ್ಗಗಳಿವೆ. ಜವಳಿ ಉಧ್ಯಮದಲ್ಲಿ ಕಳೆದ 2 ವರ್ಷದಲ್ಲಿ 50 ಸಾವಿರ ಉದ್ಯೋಗ ಸಷ್ಟಿಯಾಗಿದ್ದು, 2 ವರ್ಷದಲ್ಲಿ ಜವಳಿ ಉಧ್ಯಮದಲ್ಲಿ ಒಟ್ಟು 1,300 ಕೋಟಿ ಹೂಡಿಕೆಯಾಗಿದೆ. ಇನ್ನು ಸರ್ಕಾರ ಕೂಡ 2013ರ ನಂತರ ಜವಳಿ ಉಧ್ಯಮಕ್ಕೆ ಸುಮಾರು 200 ಕೋಟಿ ರು. ಸಹಾಯಧನ ನೀಡಿದೆ ಎಂದು ಅವರು ತಿಳಿಸಿದರು.

SCROLL FOR NEXT