ಲಕನೌ: ಕೊಲೆಯಾದ ಉತ್ತರ ಪ್ರದೇಶದ ಪತ್ರಕರ್ತ ಜಾಗೇಂದ್ರ ಸಿಂಗ್ ಅವರ ಕುಟುಂಬಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಸೋಮವಾರ ೩೦ ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ.
ಕುಟುಂಬ ಸದಸ್ಯರು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಕಳೆದ ವಾರದ ಕೊಲೆಯನ್ನು ವಿವರಿಸಿದ್ದು ರಾಜ್ಯಾದ್ಯಂತ ಜನರನ್ನು ಆಕ್ರೋಶಕ್ಕೆ ಗುರಿ ಮಾಡಿದ್ದ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಈ ಘೋಷಣೆ ಮಾಡಿದ್ದಾರೆ.
ತಾನು ಸಾಯುವುದಕ್ಕೂ ಮುಂಚೆ, ಉತ್ತರ ಪ್ರದೇಶದ ಹಿಂದುಳಿದ ಸಮಾಜ ಕಲ್ಯಾಣ ಸಚಿವ ರಾಮ್ ಮೂರ್ತಿ ವರ್ಮಾ ತನ್ನನು ಕೊಲೆ ಮಾಡಲು ಆದೇಶ ನೀಡಿದ್ದರು ಎಂದು ಮೃತ ಪತ್ರಕರ್ತ ಆರೋಪಿಸಿದ್ದರು.
ಸಚಿವರ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ. ಐದು ಜನ ಪೊಲೀಸರನ್ನು ಕೆಲಸದಿಂದ ವಜಾ ಮಾಡಲಾಗಿದೆ. ಆದರೆ ಬೇರೆ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಕುಟುಂಬ ವರ್ಗ ದೂರಿದೆ.
ಸಚಿವನನ್ನು ಕೂಡಲೆ ಬಂಧಿಸಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿ ಕುಟುಂಬ ಒಂದು ವಾರದವರೆಗೆ ಧರಣಿ ನಡೆಸಿದೆ.
ಆದರೆ ಸಚಿವನನ್ನು ಸಮಾಜವಾದಿ ಪಕ್ಷದ ಹಲವು ಧುರೀಣರು ಬೆಂಬಲಿಸಿದ್ದಾರೆ.