ಪ್ರಧಾನ ಸುದ್ದಿ

ಭೂಸ್ವಾಧೀನ ಕಾಯ್ದೆಯನ್ನು ವಿರೋಧಿಸುತ್ತೇವೆ; ಅಣ್ಣಾ ಹಜಾರೆಗೆ ಪತ್ರ ಬರೆದ ಸೋನಿಯಾ

Guruprasad Narayana

ನವದೆಹಲಿ: ಎನ್ ಡಿ ಎ ಸರ್ಕಾರದ ಭೂಸ್ವಾಧೀನ ಕಾಯ್ದೆ ಸುಗ್ರೀವಾಜ್ಞೆಯ ಬಗ್ಗೆ ಗಾಂಧಿವಾದಿ ಅಣ್ಣಾ ಹಜಾರೆ ಅವರ ಆತಂಕಕ್ಕೆ ಸಹಮತ ವ್ಯಕ್ತಪಡಿಸಿರುವ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ, ಈ ಕಾಯ್ದೆಯನ್ನು ಎಲ್ಲ ಸಮಯದಲ್ಲೂ ವಿರೋಧಿಸುವುದಾಗಿ ವಚನ ನೀಡಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರಿಗೆ ಪತ್ರ ಬರೆದಿರುವ ಸೋನಿಯಾ ಗಾಂಧಿ, ಈ ವಿವಾದದ ಹಿನ್ನಲೆಯಲ್ಲಿ ೧೪ ಪಕ್ಷಗಳು ಒಗ್ಗೂಡಿ ರಾಷ್ಟ್ರಪತಿ ಭವನದ ಮುಂದೆ ಪ್ರತಿಭಟನಾ ನಡಿಗೆ ನಡೆಸಿದ್ದನ್ನು ಉಲ್ಲೇಖಿಸಿದ್ದಾರೆ.

ಸೋನಿಯಾ ಗಾಂಧಿ ಮುಂದಾಳತ್ವದಲ್ಲಿ ೧೪ ರಾಜಕೀಯ ಪಕ್ಷಗಳ ನಾಯಕರು ನೆನ್ನೆ ಸಂಸತ್ ಭವನದಿಂದ ರಾಷ್ಟ್ರಪತಿ ಭವನದವರೆಗೆ ಪ್ರತಿಭಟನಾ ರ್ಯಾಲಿ ನಡೆಸಿ, ಭುಸ್ವಾಧೀನ ಸುಗ್ರೀವಾಜ್ಞೆಗೆ ತಿದ್ದುಪಡಿ ತರುವಂತೆ ಆಗ್ರಹಿಸಿದ್ದರು.

"ಭೂಸ್ವಾಧೀನ, ಪುನರ್ವಸತಿ ಮತ್ತು ಪರಿಹಾರ ಕಾಯ್ದೆ ೨೦೧೫ ರಲ್ಲಿ ನಿಜವಾದ ಪರಿಹಾರ ಮತ್ತು ಪಾರದರ್ಶಕತೆಯ ಬಗ್ಗೆ ಸಂದೇಹ ವ್ಯಕ್ತಪಡಿಸಿ ನೀವು ಮಾರ್ಚ್ ೧೪ ರಂದು ಬರೆದ ಪತ್ರ ತಲುಪಿದೆ. ನಿಮ್ಮ ನಿಲುವುಗಳ ಜೊತೆ ನನ್ನ ಸಹಮತವಿದೆ. ಎನ್ ಡಿ ಎ ಸರ್ಕಾರದ ಈ ಕಾಯ್ದೆ ಈಗ ಲೋಕಸಭೆಯಲ್ಲಿ ಒಪ್ಪಿಗೆಗೆ ಬಂದಿದ್ದು ಇದು ರೈತರ ಹಿತಾಸಕ್ತಿಗೆ ವಿರುದ್ಧವಾಗಿದೆ" ಎಂದು ಸೋನಿಯಾ ಗಾಂಧಿ ಬರೆದಿದ್ದಾರೆ.

"ಈ ನಿಟ್ಟಿನಲ್ಲಿ ನಮ್ಮ ಹೋರಾಟ ಮುಂದುವರೆಯಲಿದೆ ಎಂಬುದನ್ನು ನಾನು ತಿಳಿಸಬಯಸುತ್ತೇನೆ" ಎಂದಿದ್ದಾರೆ ಸೋನಿಯಾ.

SCROLL FOR NEXT