ಬೆಂಗಳೂರು: ದಕ್ಷ ಐಎಎಸ್ ಅಧಿಕಾರಿ ಡಿ.ಕೆ.ರವಿ ನಿಗೂಢ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ತೀವ್ರ ಹೋರಾಟ ನಡೆಸುತ್ತಿವೆ. ಆದರೆ ಪ್ರತಿಪಕ್ಷಗಳ ಬೇಡಿಕೆಗೆ ಬಗ್ಗದ ಸಿಎಂ ಸಿದ್ದರಾಮಯ್ಯ, ವೈಯಕ್ತಿಕ ಕಾರಣದಿಂದ ರವಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೊದಲಿನಿಂದಲೂ ಹೇಳುತ್ತಾ ಬಂದಿದ್ದಾರೆ. ಇದಕ್ಕೆ ಪುಷ್ಠಿ ನೀಡುವಂತೆ, ರವಿ ಸಾವಿಗೂ ಮುನ್ನ ಮಹಿಳಾ ಸಹೋದ್ಯೋಗಿಯೊಬ್ಬರಿಗೆ ಕೊನೆಯ ಮೆಸೇಜ್ ಮಾಡಿ, ಮುಂದಿನ ಜನ್ಮದಲ್ಲಿ ಭೇಟಿಯಾಗೋಣ ಎಂದು ಹೇಳಿದ್ದಾರೆ. ಅಲ್ಲದೆ ಸಾವಿಗೂ ಮುನ್ನ ಆ ಮಹಿಳಾ ಐಎಎಸ್ ಅಧಿಕಾರಿಗೆ ಕರೆ ಮಾಡಿ, 16 ಸೆಕೆಂಡ್‌ಗಳ ಕಾಲ ಮಾತಾಡಿರುವ ರವಿ, 'ನಾನು ಡ್ರಾಸ್ಟಿಕ್ ಸ್ಟೆಪ್ ತೆಗೆದುಕೊಳ್ಳುತ್ತಿದ್ದೇನೆ' ಎಂದಿದ್ದಾರೆ. ಇದನ್ನು ನಂಬದ ಆ ಮಹಿಳಾ ಅಧಿಕಾರಿ 'ಆರ್ ಯು ಕಿಡ್ಡಿಂಗ್' ಎಂದು ಪ್ರಶ್ನಿಸಿದ್ದಾರೆ. ಇವೆರಡೂ ಡಿ.ಕೆ.ರವಿ ಮಾಡಿದ ಕೊನೆಯ ಕರೆ ಮತ್ತು ಮೆಸೇಜ್ ಎಂದು ರಾಷ್ಟ್ರೀಯ ಆಂಗ್ಲ ದಿನಪತ್ರಿಕೆಯೊಂದು ವರದಿ ಮಾಡಿದೆ.
ರವಿ ಸಾಯುವ ಮುನ್ನ ತನ್ನ ಕುಟುಂಬದ ಯಾರೊಬ್ಬರಿಗೂ ಪೋನ್ ಮಾಡಿಲ್ಲ. ಮೆಸೇಜ್ ಮಾಡಿಲ್ಲ. ಬದಲಾಗಿ ತನ್ನನ್ನು ಮದುವೆಯಾಗಲು ನಿರಾಕರಿಸಿದ ಐಎಎಸ್ ಬ್ಯಾಚ್‌ಮೆಟ್ ಹಾಗೂ ಮಂಡ್ಯ ಜಿಲ್ಲಾ ಪಂಚಾಯ್ತಿ ಸಿಇಒ ರೋಹಿಣಿ ಸಿಂಧೂರಿ ಅವರಿಗೆ ಕರೆ ಮಾಡಿ, ಕೊನೆಯ ನಿರ್ಧಾರವನ್ನು ಹೇಳಿದ್ದಾರೆ. ಇದೆಲ್ಲ ನಡೆದಾಗ ರವಿ ತಮ್ಮ ಫ್ಲಾಟ್‌ನಲ್ಲೇ ಇದ್ದರು ಎಂಬುದನ್ನು ಮೊಬೈಲ್ ಟವರ್ ದಾಖಲೆಗಳು ಸ್ಪಷ್ಟಪಡಿಸುತ್ತವೆ.
ಮುಖ್ಯ ಕಾರ್ಯದರ್ಶಿಗೆ ಮಾಹಿತಿ ನೀಡಿದ ರೋಹಿಣಿ
ರವಿ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಬೆಂಗಳೂರಿಗೆ ದೌಡಾಯಿಸಿದ ರೋಹಿಣಿ ಸಿಂಧೂರಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರನ್ನು ಭೇಟಿ ಮಾಡಿ, ರವಿ ಹಾಗೂ ತಮ್ಮ ನಡುವಿನ ಸಂಬಂಧದ ಕುರಿತ ಊಹಾಪೋಹಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಗಂಡನನ್ನು ತೊರೆದು ತನ್ನನ್ನು ಮದುವೆಯಾಗುವಂತೆ ರವಿ ಪದೇಪದೇ ಅಂಗಲಾಚುತ್ತಿದ್ದರು. ಇದಕ್ಕಾಗಿ 'ಸಹಕರಿಸುವಂತೆ' ಕೇಳುತ್ತಲೇ ಇದ್ದರು ಎಂದು ಮುಖರ್ಜಿಗೆ ತಿಳಿಸಿದ್ದಾರೆ. ಅಲ್ಲದೆ ಸಾವಿಗೂ ಮುನ್ನ ರವಿ ಕಳುಹಿಸಿದ ಎಲ್ಲಾ ಮೆಸೇಜ್, ಹಾಗೂ ಮೇಲ್‌ಗಳನ್ನು ಕೌಶಿಕ್ ಮುಖರ್ಜಿ ಅವರಿಗೆ ಫಾರ್ವರ್ಡ್ ಮಾಡಿದ್ದಾರೆ. ರೋಹಿಣಿ ಅವರ ಪತಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು, ಈಗ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ.
ಸಾಯುವ ದಿನ ರವಿ ರೋಹಿಣಿಗೆ ಹಲವು ಬಾರಿ ದೂರವಾಣಿ ಕರೆ ಮಾಡಿದ್ದು, ತನಗೆ ಸಹಕಾರ ನೀಡದಿದ್ದರೆ ಸಾಯುವುದಾಗಿ ಹಲವು ಬಾರಿ ಬೆದರಿಕೆ ಹಾಕಿದ್ದರು. ಆದರೆ ತಮ್ಮ ವಿವಾಹವನ್ನು ಮುರಿಯದಿರಲು ರೋಹಿಣಿ ಕಟಿಬದ್ಧರಾಗಿದ್ದರು.
ರವಿ ಸಾವಿನ ತನಿಖೆಯ ವೇಳೆ ಪೊಲೀಸ್ ಅಧಿಕಾರಿಗಳಿಗೆ ಸಹಕಾರ ನೀಡುವುದಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ರೋಹಿಣಿ ಹೇಳಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ಡಿ.ಕೆ.ರವಿ ಅವರದ್ದು ಒನ್ ವೇ ಲವ್ ಆಗಿದ್ದು, ವಿಷಯ ರವಿ ಅವರ ಪತ್ನಿ ಕುಸುಮಾ ಅವರಿಗೆ ಗೊತ್ತಾಗಿ, ವೈವಾಹಿಕ ಸಂಬಂಧದ ಮೇಲೆ ಪರಿಣಾಮ ಬೀರಿತ್ತು. ಇದರಿಂದ ಕುಟುಂಬದಲ್ಲಿ ಆಗಾಗ ಜಗಳಗಳು ಆಗುತ್ತಿದ್ದವು.
ಒಂದು ಹಂತದಲ್ಲಿ ಕುಸುಮಾ ಹಾಗೂ ಅವರ ಹತ್ತಿರದ ಸಂಬಂಧಿಯೊಬ್ಬರು ರವಿ ವಿರುದ್ಧ ವರದಕ್ಷಿಣೆ ಕಿರುಕುಳದ ಕೇಸ್ ಹಾಕುವುದಾಗಿ ಬೆದರಿಸಿದ್ದರು ಎನ್ನಲಾಗಿದೆ. ಇದರಿಂದ ಈಗಾಗಲೇ ದಕ್ಷ ಅಧಿಕಾರಿ ಎಂದು ಹೆಸರು ಪಡೆದಿದ್ದ ರವಿ ಅವರ ಗೌರವಕ್ಕೆ ಧಕ್ಕೆ ಉಂಟಾಗುತ್ತಿತ್ತು.
ಮಾಧ್ಯಮಗಳ ವರದಿ ಏನೇ ಇರಬಹುದು. ನಿಷ್ಪಕ್ಷಪಾತ ತನಿಖೆಯಿಂದ ಮಾತ್ರ ಸತ್ಯ ಹೊರಬರಲು ಸಾಧ್ಯ.