ಮೃತಪಟ್ಟವರ ಸಂಬಂಧಿಕರ ಆಕ್ರನಂದನ
ನವದೆಹಲಿ: ಬಾಂಗ್ಲಾದೇಶದ ಢಾಕಾದ ರೆಸ್ಟೋರೆಂಟ್ ವೊಂದರಲ್ಲಿ ವಿದೇಶಿ ನಾಗರಿಕರನ್ನು ಒತ್ತೆಯಾಳಾಗಿರಿಸಿಕೊಂಡಿದ್ದ ಉಗ್ರರ ದಾಳಿಯಲ್ಲಿ ಓರ್ವ ಭಾರತೀಯ ಯುವತಿ ಮೃತಪಟ್ಟಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಶನಿವಾರ ಖಚಿತಪಡಿಸಿದ್ದಾರೆ.
ಆರ್ಟಿಸನ್ ರೆಸ್ಟೋರೆಂಟ್ ಉಗ್ರ ದಾಳಿಯಲ್ಲಿ 19 ವರ್ಷದ ತರಿಶಿ ಎಂಬ ಯುವತಿ ಮೃತಪಟ್ಟಿದ್ದು, ಢಾಕಾದ ಅಮೆರಿಕನ್ ಸ್ಕೂಲ್ ನಲ್ಲಿ ಪದವಿ ಪಡೆದಿದ್ದ ತರಿಶಿ ಈಗ ಬೆರ್ಕೆಲಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಅಧ್ಯಾಯನ ನಡೆಸುತ್ತಿದ್ದರು.
ಉಗ್ರರು ಭಾರತೀಯ ಯುವತಿ ತರಿಶಿಯನ್ನು ಹತ್ಯೆ ಮಾಡಿರುವುದು ತುಂಬಾ ನೋವಿನ ಸಂಗತಿ ಎಂದು ಸುಷ್ಮಾ ಸ್ವರಾಜ್ ಅವರು ಟ್ವಿಟ್ ಮಾಡಿದ್ದಾರೆ. ಅಲ್ಲದೆ ಆಕೆಯ ತಂದೆ ಸಂಜೀವ್ ಜೈನ್ ಅವರೊಂದಿಗೆ ನಾನು ಮಾತನಾಡಿದ್ದು, ತರಿಶಿ ಸಾವಿಗೆ ಸಂತಾಪ ಸೂಚಿಸಿರುವುದಾಗಿ ಮತ್ತೊಂದು ಟ್ವಿಟ್ ನಲ್ಲಿ ಹೇಳಿದ್ದಾರೆ.
ಉಗ್ರರ ವಿರುದ್ಧದ ಕಾರ್ಯಾಚರಣೆಯನ್ನು ಬಾಂಗ್ಲಾದೇಶ ಭದ್ರತಾ ಪಡೆ ಯೋಧರು ಅಂತ್ಯಗೊಳಿಸಿದ್ದು, ಕಾರ್ಯಾಚರಣೆಯಲ್ಲಿ ಭದ್ರತಾ ಪಡೆ ಸಿಬ್ಬಂದಿ 6 ಉಗ್ರರನ್ನು ಹೊಡೆದುರುಳಿಸಿದ್ದಾರೆ. ಅಲ್ಲದೆ ಓರ್ವ ಉಗ್ರನನ್ನು ಜೀವಂತವಾಗಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆಯಲ್ಲಿ ಓರ್ವ ಭಾರತೀಯ ಯುವತಿ ಸೇರಿದಂತೆ 20 ವಿದೇಶಿ ಒತ್ತೆಯಾಳುಗಳು ಸಾವನ್ನಪ್ಪಿದ್ದಾರೆ ಎಂದು ಸೇನಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಢಾಕಾದ ದೂತವಾಸ ವಲಯದಲ್ಲಿರುವ ರೆಸ್ಟೋರೆಂಟ್ ಮೇಲೆ ಉಗ್ರರ ದಾಳಿ ಹಿನ್ನೆಲೆ ಕಳೆದ ರಾತ್ರಿಯಿಂದ ಕಾರ್ಯಾಚರಣೆ ಕೈಗೊಂಡಿದ್ದ ಭದ್ರತಾ ಪಡೆ ಯೋಧರು ಸತತ 14 ಗಂಟೆಗಳ ನಂತರ ಕಾರ್ಯಾಚರಣೆ ಅಂತ್ಯಗೊಳಿಸಿದ್ದಾರೆ. ಉಗ್ರರು ಒತ್ತೆ ಇರಿಸಿಕೊಂಡಿದ್ದವರ ಪೈಕಿ ಕೆಲವರನ್ನು ರಕ್ಷಿಸಲಾಗಿದ್ದು, ಆಂಬ್ಯುಲೆನ್ಸ್ ಮೂಲಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.