ದೆಹಲಿ ವಿಶ್ವವಿದ್ಯಾಲಯ ಪ್ರಾಧ್ಯಾಪಕಿ ನಂದಿನಿ ಸುಂದರ್
ನವದೆಹಲಿ: ಛತ್ತೀಸಘರ್ ನ ಸುಕ್ಮಾ ಜಿಲ್ಲೆಯಲ್ಲಿ ಕೊಲೆಯಾಗಿರುವ ಆದಿವಾಸಿ ಸಮುದಾಯಕ್ಕೆ ಸೇರಿದ ಶಮಂತ್ ಬಘೇಲ್ ಅವರ ಕೊಲೆ ಆರೋಪ ಪ್ರಕರಣದಲ್ಲಿ ಹೆಸರಿಸಲಾಗಿರುವ ದೆಹಲಿ ವಿಶ್ವವಿದ್ಯಾಲಯ ಪ್ರಾಧ್ಯಾಪಕಿ ನಂದಿನಿ ಸುಂದರ್ ಅವರನ್ನು ಬಂಧಿಸುವುದಿಲ್ಲ ಎಂದು ಛತ್ತೀಸಘರ್ ಸರ್ಕಾರ ಶುಕ್ರವಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.
ನವೆಂಬರ್ ೪ ರಂದು ಮಾವೋವಾದಿಗಳು ಕೊಲೆ ಮಾಡಿದ್ದಾರೆ ಎಂಬ ಈ ಪ್ರಕರಣದಲ್ಲಿ ಸುಂದರ್ ಮತ್ತು ಇತರ ನಾಗರಿಕ ಸಾಮಾಜಿಕ ಕಾರ್ಯಕರ್ತರನ್ನು ಹೆಸರಿಸುವ ಎಫ್ ಐ ಆರ್ ಗೆ ತಡೆ ನೀಡುವ ಸಾಧ್ಯತೆಯಿದೆ ಎಂದು ನ್ಯಾಯಾಧೀಶ ಮದನ್ ಬಿ ಲೋಕುರ್ ಮತ್ತು ನ್ಯಾಯಾಧೀಶ ಆದರ್ಶ್ ಕುಮಾರ್ ಗೋಯಲ್ ಒಳಗೊಂಡ ನ್ಯಾಯಪೀಠ ಸೂಚಿಸಿದ ಹಿನ್ನಲೆಯಲ್ಲಿ ಛತ್ತೀಸಘರ್ ಸರ್ಕಾರ ಈ ಸ್ಪಷ್ಟನೆ ನೀಡಿದೆ.
ಸುಂದರ್ ವಿರುದ್ಧ ಯಾವುದೇ ಒತ್ತಾಯಪೂರ್ವಕ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಕೋರ್ಟ್ ಗೆ ತಿಳಿಸಿರುವ ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಮುಂದಿನ ವಿಚಾರಣೆ ನವೆಂಬರ್ ೧೫ ರೊಳಗೆ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸುವುದಾಗಿ ಹೇಳಿದ್ದಾರೆ.
ಈ ಕೊಲೆ ಪ್ರಕರಣದಲ್ಲಿ ಸುಂದರ್ ಅವರನ್ನು ಹೆಸರಿಸಿರುವ ಬಗ್ಗೆ ಪ್ರಶ್ನಿಸಿದ ಕೋರ್ಟ್ "ನೀವು ಪರಿಸ್ಥಿತಿಯನ್ನು ಹೆಚ್ಚು ಜಟಿಲಗೊಳಿಸುತ್ತಿದ್ದೀರಿ. ನೀವು ಪರಿಸ್ಥಿತಿಯ ಬಗ್ಗೆ ವಿವೇಚನೆಯ ದೋರಣೆ ತಳೆದು, ಸರಿಯಾದ ಉತ್ತರಗಳನ್ನು ಕಂಡುಹಿಡಿಯಯಬೇಕು" ಎಂದು ತಿಳಿಸಿದೆ.