ಹೈದರಾಬಾದ್: ರಾಜ್ಯದ ಯೋಧರಿಗೆ ಹಾಗೂ ಅವರ ಕುಟುಂಬಕ್ಕೆ ನೆರವು ನೀಡುವುದಕ್ಕಾಗಿ ಸೈನಿಕ ಕಲ್ಯಾಣ ನಿಧಿ ಸ್ಥಾಪಿಸುವುದಾಗಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಮಂಗಳವಾರ ಘೋಷಿಸಿದ್ದಾರೆ.
ಸೈನಿಕ ಕಲ್ಯಾಣ ನಿಧಿಗೆ ಪ್ರತಿ ವರ್ಷ ಒಟ್ಟು 80 ಕೋಟಿ ರುಪಾಯಿ ಸಂಗ್ರಹವಾಗಲಿದ್ದು, ಮುಖ್ಯಮಂತ್ರಿ ಹಾಗೂ ಸಚಿವರು ಪ್ರತಿ ವರ್ಷ ತಲಾ 25 ಸಾವಿರ ರುಪಾಯಿ, ಶಾಸಕರು, ವಿಧಾನ ಪರಿಷತ್ ಸದಸ್ಯರು ಮತ್ತು ಸಂಸದರು ತಲಾ 10 ಸಾವಿರ ರುಪಾಯಿಯನ್ನು ಸೈನಿಕ ಕಲ್ಯಾಣ ನಿಧಿಗೆ ನೀಡಲಿದ್ದಾರೆ ಎಂದು ಚಂದ್ರಶೇಖರ್ ರಾವ್ ಅವರು ತಿಳಿಸಿದ್ದಾರೆ. ಅಲ್ಲದೆ ರಾಜ್ಯ ಸರ್ಕಾರದ ನೌಕರರೂ ಸಹ ಪ್ರತಿ ವರ್ಷ ತಮ್ಮ ಒಂದು ದಿನದ ವೇತನವನ್ನು ಸೈನಿಕ ಕಲ್ಯಾಣ ನಿಧಿಗೆ ನೀಡಲಿದ್ದಾರೆ ಎಂದು ಹೇಳಿದ್ದಾರೆ.
ಈ ನಿಧಿಯನ್ನು ಸೇವೆಯಲ್ಲಿರುವ ಸೈನಿಕರಿಗೆ, ಹುತಾತ್ಮ ಯೋಧರಿಗೆ ಹಾಗೂ ಅಂಗವೈಕಲ್ಯಕ್ಕೆ ತುತ್ತಾದ ಯೋಧರಿಗೆ ಮತ್ತು ನಿವೃತ್ತ ಯೋಧರ ನೆರವಿಗೆ ಬಳಸಲಾಗುವುದು ಎಂದು ಚಂದ್ರಶೇಖರ್ ರಾವ್ ಅವರು ವಿಧಾನಸಭೆಗೆ ತಿಳಿಸಿದ್ದಾರೆ.
ವಿವಿಧ ಪದಕ ಹಾಗೂ ಪ್ರಶಸ್ತಿಗಳನ್ನು ಪಡೆದ ಸೈನಿಕರಿಗೂ ಈ ನಿಧಿಯಿಂದ ಬಹುಮಾನ ನೀಡಲಾಗುತ್ತಿದ್ದು, ಪರಮವೀರ ಮತ್ತು ಅಶೋಕ ಚಕ್ರ ಪ್ರಶಸ್ತಿ ವಿಜೇತರಿಗೆ 2.25 ಕೋಟಿ ಬಹುಮಾನ, ಮಹಾವೀರ ಚಕ್ರ ಮತ್ತು ಕೀರ್ತಿ ಚಕ್ರ ಪ್ರಶಸ್ತಿ ವಿಜೇತರಿಗೆ 1.25 ಕೋಟಿ ಹಾಗೂ ಸೇನಾ ಪದಕ ಪ್ರಶಸ್ತಿ ವಿಜೇತರಿಗೆ ತಲಾ 30 ಲಕ್ಷ ರುಪಾಯಿ ಬಹುಮಾನ ನೀಡಲಾಗುವುದು ಎಂದು ಸಿಎಂ ಹೇಳಿದ್ದಾರೆ.