ದೈವಗಳ ಕೋಲ, ದೇವರ ಆರಾಧನೆ ಏನೇ ಇರಲಿ... ಅಂದೊಮ್ಮೆ ಹನ್ನೆರಡು ಮಾಗಣೆಗಳಿಗೆ ಆಸ್ರಣ್ಣರು ಎಲ್ಲರ ಮನೆಗಳಿಗೂ ಪುರೋಹಿತರು. ಅಳದಂಗಡಿಯ ಆಳರಸರಿಂದ ದೊರೆತ ಅಧಿಕಾರ ಅದು. ಹಾಗೆಯೇ ಈ ಗ್ರಾಮಗಳಲ್ಲಿ ಕೌಟುಂಬಿಕ ಕಲಹಗಳಿರಲಿ ಯಾವುದೇ ವಿವಾದಗಳಿರಲಿ, ಕೋರ್ಟ್ ಕಚೇರಿಯ ಅಲೆದಾಟವಿಲ್ಲ. ಆಸ್ರಣ್ಣರ ಮನೆಯ ಬೋದಿಗೆ ಕಂಬಗಳ ಜಗುಲಿಯಲ್ಲಿ ಕುಳಿತು ಆಸ್ರಣ್ಣರು ಹೇಳುವ ನ್ಯಾಯ ತೀರ್ಮಾನಕ್ಕೆ ತಲೆಬಾಗುತ್ತಿದ್ದರು. ಇಂಥ ಪದ್ಧತಿಗಳೆಲ್ಲ ಇಂದು ಅಗೋಚರವಾಗಿದ್ದರೂ ಹಳೆಯ ತಲೆಮಾರಿನ ಆ ಮನೆ ಮಾತ್ರ ಹೊಸ ಕಳೆಯಿಂದ ಮಿರುಗುತ್ತ ಭದ್ರವಾಗಿ ಉಳಿದುಕೊಂಡಿದೆ.
ಇದು ವೇಣೂರಿನ ಬಳಿಯ ಆಲಂಪುರಿಯಲ್ಲಿರುವ ಮಹಾಗಣಪತಿ ದೇವಾಲಯದ ಅರ್ಚಕ ಚಂದ್ರಶೇಖರ ಆಸ್ರಣ್ಣರ ಮನೆ. 140 ವರ್ಷಗಳ ಹಿಂದೆ ಅವರ ಅಜ್ಜ ಕಟ್ಟಿಸಿದ ಮನೆಯಲ್ಲಿ ಈಗ ಅವರ ಐದನೇ ತಲೆಮಾರು ಬೆಳೆಯುತ್ತಿದೆ. ವೇಣೂರಿನ ಅಜಿಲ ಅರಸರ ಕಾಲದಲ್ಲಿ ಘಟ್ಟದ ಮೇಲಿಂದ ಇಲ್ಲಿಗೆ ಬಂದು ರಾಮ ಆಸ್ರಣ್ಣರು ಭದ್ರವಾಗಿಯೇ ಮನೆ ನಿರ್ಮಿಸಿದ್ದಾರೆ. ಹೊರಗಿನ ಗೋಡೆಗಳಿಗೆ ಕೆಂಪುಕಲ್ಲು ಬಳಸಿದ್ದರೆ, ಒಳಗಿನ ಗೋಡೆಗಳನ್ನು ಹದ ಮಾಡಿದ ಮಣ್ಣಿನಿಂದ ಕಟ್ಟಿದ್ದಾರೆ. ಸ್ಥಳೀಯ ಮರಗಳನ್ನು ಇಡಿಯಾಗಿಯೇ ತೊಲೆಗಳನ್ನಾಗಿ ಮಾಡಿರುವುದರಿಂದ ಇನ್ನೊಂದು ಶತಮಾನಕ್ಕೂ ಜಗ್ಗುವ ಭಯವಿಲ್ಲ. ಒಂದೂವರೆ ಶತಮಾನದ ಹಿಂದಿನ ಮಂಗಳೂರು ಹೆಂಚುಗಳು ಇಂದಿಗೂ ಮಾಸಿಲ್ಲ.
ಮನೆಯ ಚಾವಡಿಯಲ್ಲಿ ಕಲಾತ್ಮಕವಾದ ಬೋದಿಗೆ ಕಂಬಗಳಿವೆ. ಮನಮೋಹಕ ಕುಸುರಿ ಕೆಲಸ. ಮಣ್ಣಿನಿಂದಲೇ ನಿರ್ಮಿಸಿರುವ ಮಹಡಿ. ಅಲ್ಲಿ ಮೂರು ಕೋಣೆಗಳು. ಕೆಳಗೆ ದೇವರ ಕೋಣೆಯಿದೆ. ದಿನವೂ ದುರ್ಗಾಪೂಜೆಯಿದೆ. ಶುಕ್ರವಾರ ಇನ್ನೂ ವಿಶೇಷ. ವಾರ್ಷಿಕ ಸತ್ಯನಾರಾಯಣ ಪೂಜೆ, ದುರ್ಗಾಹೋಮ, ಗಣಪತಿ ಹೋಮ ಇದೆಲ್ಲದರಿಂದ ನಡೆಯುವ ಅತಿಥಿ ಸತ್ಕಾರ ಹಳೆಮನೆಯಲ್ಲಿ ಹೊಸಕಳೆ ಬೀರುತ್ತಿದೆ. ಹಿಂದೆ ಧರ್ಮಸ್ಥಳಕ್ಕೆ ಕಾಲ್ನಡಿಗೆಯಿಂದ ಹೋಗುತ್ತಿದ್ದ ಯಾತ್ರಿಕರಿಗೆ ಇದು ಧರ್ಮ ಛತ್ರವಾಗಿತ್ತು ಎಂದು ಮನೆಯ ಯಜಮಾನಿ ಗಿರಿಜಕ್ಕ ಸ್ಮರಿಸುತ್ತಾರೆ. ಇಪ್ಪತ್ತು ವರ್ಷಗಳಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿವಿಧ ಸ್ಥಾನಗಳಲ್ಲಿ ಜನಸೇವೆ ಮಾಡುತ್ತ ಮಂಗಳೂರು ವಿಭಾಗದ ಕಾರ್ಯವಾಹಿಕೆಯಾಗಿರುವ ಅವರಿಗೆ ಸಂಸ್ಕೃತಿಯ ಮೇಲಿರುವ ಅಪಾರ ಕಾಳಜಿಯೇ ಮನೆಯ ಜೀವಂತಿಕೆಗೆ ಕಾರಣ.
ಹಿಂದೆ ಇಲ್ಲಿ ಆಗಾಗ ಯಕ್ಷಗಾನ ಬಯಲಾಟ ತಾಳಮದ್ದಲೆಗಳು ಆಗುತ್ತಲೇ ಇದ್ದವು. ಬಂದವರಿಗೆ ಆತಿಥ್ಯೋಪಚಾರ. ಆಗ ಹಿಟ್ಟು ರುಬ್ಬಲು ಬಳಸುತ್ತಿದ್ದ ಬೃಹತ್ ಕಡೆಯುವ ಕಲ್ಲು ಮಿಸುಕಾಡದೆ ಮೂಲೆ ಸೇರಿದೆ. ದೈವಗಳ ಬೆಳ್ಳಿಯ ಆಭರಣಗಳನ್ನು ಸಂಗ್ರಹಿಸುತ್ತಿದ್ದ ಮರದ ಭಾರಿ ಪೆಟ್ಟಿಗೆ ಕಲೆಂಬಿ ಮಹಡಿಯ ಕತ್ತಲಲ್ಲಿದೆ. ಹಿತ್ತಾಳೆಯ ತೊಟ್ಟಿಲು ನಾಲ್ಕು ತಲೆಮಾರಿನ ಮಕ್ಕಳನ್ನೂ ತೂಗಿ ಸಾಕಾಗಿ ವಿಶ್ರಾಂತವಾಗಿದೆ. ಮಣ್ಣಿನ ಪಾತ್ರೆಗಳು ಬಳಸುವವರಿಲ್ಲದೆ ನೇಪಥ್ಯಕ್ಕೆ ಸರದಿವೆ. 'ಯು' ಆಕಾರದ ಈ ಮನೆಯಲ್ಲಿ ಕಿಟಕಿ ಕಪಾಟು ಎರಡೂ ಆಗಬಲ್ಲ ಮರದ ರಚನೆಗಳು ಹಳೇ ಕಾಲದ ಬಡಗಿಗಳ ಕೌಶಲಕ್ಕೆ ಸಾಕ್ಷಿ.
ಮನೆಯಲ್ಲಿ ಗಿರಿಜಕ್ಕ, ಅವರ ಪತಿ, ಮಗ, ಸೊಸೆ, ಮೊಮ್ಮಕ್ಕಳು ಸೇರಿ ಇರುವವರು ಆರು ಮಂದಿ. ಹೊಸಮನೆಯ ಕನಸಿಲ್ಲದೆ ಹಳೇಮನೆಯಲ್ಲೇ ಬದುಕಿನ ಬಂಗಾರವನ್ನು ಬೊಗಸೆಯಲ್ಲಿ ತುಂಬಿಕೊಂಡವರು. ಹಿಂದಿನ ವಾಸ್ತುಕೌಶಲಕ್ಕೆ ಸಾಕ್ಷಿಯಾಗಬಲ್ಲ ಮನೆ ತುಳುನಾಡಿನ ಸಂಸ್ಕೃತಿಯ ಪ್ರತಿಬಿಂಬವೂ ಹೌದು. (ದೂರವಾಣಿ- 9448691449)
- ಪ. ರಾಮಕೃಷ್ಣ ಶಾಸ್ತ್ರಿ