ಹರೆಯ ಕನಸು ಕಟ್ಟುವ ಕಾಲ. ಆದರೆ ಯಾವ ತಪ್ಪೂ ಮಾಡದೆ ತಮ್ಮದಲ್ಲದ ತಪ್ಪಿನಿಂದ ಹುಟ್ಟಿನಿಂದಲೇ ಎಚ್‌ಐವಿ ಪಾಸಿಟಿವ್ ಆದ ಮಕ್ಕಳಿಗೆ ಮಾತ್ರ ಹರೆಯ ಆತಂಕ ಪಡುವ ಕಾಲ. ನಾವು ಎಲ್ಲರಂತಲ್ಲವೇ? ನಮಗೇಕೆ ಹೀಗೆ? ಎನ್ನುವ ಪ್ರಶ್ನೆಗಳು ಕಾಡುತ್ತವೆ...
ಕಮಲಾ ಚೂಟಿ ಹುಡುಗಿ. ಚೆನ್ನಾಗಿ ಓದುತ್ತಿದ್ದಳು. ಪಾಸಿಟಿವ್ ನೆಟ್‌ವರ್ಕ್‌ವೊಂದರ ಆರ್ಥಿಕ ಸಹಾಯದೊಂದಿಗೆ 2ನೇ ಪಿಯುಸಿವರೆಗೂ ಓದಿದಳು. ಅವಳಿಗೆ 18 ವಯಸ್ಸಾದ್ದರಿಂದ ಈವರೆಗೂ ದೊರಕುತ್ತಿದ್ದ ಹಣ ಸಹಾಯ ನಿಂತು ಹೋಯಿತು. ಮುಂದೆ ಎನ್‌ಜಿಒ ಒಂದರಲ್ಲಿ ಕೆಲಸಕ್ಕೆ ಸೇರಿದಳು. ಒಳ್ಳೆಯ ಹೆಸರು ತೆಗೆದುಕೊಂಡಳು. ಆದರೆ ಪ್ರಾಜೆಕ್ಟ್ ಮುಗಿದು ಹೋಗಿದ್ದರಿಂದ ಅವಳು ಕೆಲಸ ಬಿಡಬೇಕಾಯಿತು. ಈಗ ಟೈಲರಿಂಗ್ ಕಲಿತು ಗಾರ್ಮೆಂಟ್ಸ್‌ಗೆ ಹೋಗುತ್ತಿದ್ದಾಳೆ.
ಅಲ್ಲಿ ರಜೆ ಸಿಗುವುದೇ ಇಲ್ಲ. ಪ್ರತಿ ತಿಂಗಳು ಎಆರ್‌ಟಿಗಾಗಿ ರಜೆ ತೆಗೆದುಕೊಳ್ಳಲೇಬೇಕು. ರಜೆಗಾಗಿ ಯಾವ ಕಾರಣ ಹೇಳುವುದು? ಪಾಸಿಟಿವ್ ಎಂದು ಹೇಳಿದರೆ ಕಳಂಕ, ತಾರತಮ್ಯದ ಭಯ. ಹೇಳದಿದ್ದರೆ ರಜೆ ಸಿಕ್ಕುವುದಿಲ್ಲ. ಶ್ರಮದ ಕೆಲಸ ಇವಳಿಗೆ ನಿಭಾಯಿಸಲು ತೊಂದರೆ. ಕೆಲಸ ಬಿಟ್ಟರೆ ಅವಳ ಜೀವನ ಹೇಗೆ? ಮನೆಯಲ್ಲಿ ತಾಯಿ ಪಾಸಿಟಿವ್, ದುರ್ಬಲಳಾಗಿದ್ದಾಳೆ. ತಂದೆ ಇಲ್ಲ. ಬೆನ್ನಲ್ಲಿ ಬಿದ್ದ ತಮ್ಮ ತಂಗಿಯರು. ಈ ವಯಸ್ಸಿನಲ್ಲಿ ಬೇರೆ ಹೆಣ್ಣುಮಕ್ಕಳೆಲ್ಲಾ ಚೆಂದದ ಉಡುಪು ಧರಿಸಿ ಕಾಲೇಜಿಗೆ ಹೋಗುತ್ತಿದ್ದರೆ ಅವರಿಗೆ ಬಟ್ಟೆ ಹೊಲಿಯುವ ಕಷ್ಟದ ಕೆಲಸ ಈ ಹುಡುಗಿಯದು! ಓದಲು ಆಸಕ್ತಿ, ಜಾಣತನವಿದ್ದೂ ಅವಕಾಶವಿಲ್ಲವಾಗಿದೆ. ಇಂಥ ಅನೇಕ ಉದಾಹರಣೆಗಳು ಸಿಗುತ್ತವೆ.
ಹಿಂದೆ ಎಚ್‌ಐವಿ ಪಾಸಿಟಿವ್ ಮಕ್ಕಳು ತುಂಬಾ ವರ್ಷ ಬದುಕುತ್ತಿರಲಿಲ್ಲ. ಈಗ ಮಕ್ಕಳಿಗೆ ಎಆರ್‌ಟಿ ಚಿಕಿತ್ಸೆ ನೀಡುತ್ತಿರುವುದರಿಂದ ಅವರ ಜೀವಿತಾವಧಿ ಹೆಚ್ಚಾಗಿದೆ. ಮಕ್ಕಳು ಹರೆಯಕ್ಕೂ ತಲುಪುತ್ತಿದ್ದಾರೆ. ಹರೆಯ ಕನಸು ಕಟ್ಟುವ ಕಾಲ. ಆದರೆ ಯಾವ ತಪ್ಪೂ ಮಾಡದೆ ತಮ್ಮದಲ್ಲದ ತಪ್ಪಿನಿಂದ ಹುಟ್ಟಿನಿಂದಲೇ ಎಚ್‌ಐವಿ ಪಾಸಿಟಿವ್ ಆದ ಮಕ್ಕಳಿಗೆ ಮಾತ್ರ ಹರೆಯ ಆತಂಕಪಡುವ ಕಾಲ. ನಾವು ಎಲ್ಲರಂತಲ್ಲವೇ? ನಮಗೇಕೆ ಹೀಗೆ? ಎನ್ನುವ ಪ್ರಶ್ನೆಗಳು ಕಾಡುತ್ತವೆ.
ಮನೆಯಲ್ಲಿನ ಅಸಹಾಯಕ ವಾತಾವರಣ, ಬದಲಾವಣೆಯ ಸಮಯ, ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಸಂಕೋಚ. ಹದಿ ಹರೆಯದ ಭಾವನೆಗಳು ಯಾರಿಗೂ ತಪ್ಪಿದ್ದಲ್ಲ. ಹರೆಯದಲ್ಲಿ ಸಹಜ ದೈಹಿಕ ಬದಲಾವಣೆಗಳೊಂದಿಗೆ ಲೈಂಗಿಕ ಆಸಕ್ತಿಯೂ ಮೂಡುತ್ತದೆ. ನಾನು ಮದುವೆಯಾಗಲು ಸಾಧ್ಯವೇ? ಪ್ರೀತಿಸಲು ನಾನು ಅರ್ಹ ಅಲ್ಲವೇ ಎನ್ನುವ ಪ್ರಶ್ನೆಗಳು ಒಂದು ಕಡೆಯಾದರೆ, ದೈಹಿಕ ನಿತ್ರಾಣ, ತೆಗೆದುಕೊಳ್ಳುವ ಔಷಧಿಗಳಿಂದಾಗುವ ಪರಿಣಾಮಗಳು, ಪೌಷ್ಟಿಕ ಆಹಾರದ ಅಗತ್ಯ, ಅವರ ಶಿಕ್ಷಣದ ಜವಾಬ್ದಾರಿ ಎಲ್ಲವೂ ಸಮಸ್ಯೆಗಳಾಗಿ ಎದ್ದು ನಿಲ್ಲುತ್ತವೆ.
ಶಿಕ್ಷಣದ ಗತಿ
ಎಚ್‌ಐವಿ ಪೀಡಿತ ಮಕ್ಕಳಿಗೆ 18 ವರ್ಷ ತಲುಪುವ ತನಕ ದೊರಕುತ್ತಿರುವ ಎನ್‌ಜಿಒ ಮತ್ತು ಸರ್ಕಾರದ ಸಹಾಯ ಆ ನಂತರ ನಿಂತುಹೋಗುತ್ತದೆ. ಆದರೆ ಆ ವಯಸ್ಸಿಗೆ ಅವರು ತಮ್ಮ ಜೀವನವನ್ನು ತಾವೇ ನಡೆಸಲು ಶಕ್ತರಾಗಿರುವುದಿಲ್ಲ. ಇನ್ನೂ ಅವರ ಶಿಕ್ಷಣ ಪೂರ್ಣವಾಗಿರುವುದಿಲ್ಲ. ಜೀವನ ನಿರ್ವಹಣೆಗೆ ಯಾವ ಉದ್ಯೋಗವೂ ದೊರಕಿರುವುದಿಲ್ಲ. ಬೇರೆ ಮಕ್ಕಳು ಇನ್ನೂ ತಂದೆತಾಯಿಯರ ಆಶ್ರಯದಲ್ಲಿ ಸುಖ ಜೀವನ ನಡೆಸುತ್ತಿದ್ದರೆ ಇವರಿಗೆ ಮುಂದೇನು ಎನ್ನುವ ಪ್ರಶ್ನೆ ಸದಾ ಕಾಡುತ್ತಿರುತ್ತದೆ.
ಸವಾಲುಗಳು ಏನು?
ಎಚ್‌ಐವಿ ಪೀಡಿತ ಮಕ್ಕಳಿಗೆ ತಮಗಿರುವ ಅನಾರೋಗ್ಯವನ್ನು ಒಪ್ಪಿಕೊಳ್ಳಲು ಇಷ್ಟಪಡುವುದಿಲ್ಲ. ಸಮಾಜದ ಮತ್ತು ಕುಟುಂಬದ ನಿರಾಕರಣೆಯ ಭಯವಿರುತ್ತದೆ. ಮಾನಸಿಕ ಒತ್ತಡದಿಂದ ತಪ್ಪು ದಾರಿಗೆ ಹೋಗಬಹುದು, ಮಾದಕ ವ್ಯಸನಿಗಳಾಗಬಹುದು, ಲೈಂಗಿಕ ಶೋಷಣೆಗೆ ಗುರಿಯಾಗಬಹುದು. ಬಾಲ್ಯದಿಂದ ಹರೆಯಕ್ಕೆ ಬದಲಾಗುವ ಈ ಹಂತದಲ್ಲಿ ಎಲ್ಲ ರೀತಿಯ ಸಹಕಾರ ಬೆಂಬಲ ಅಗತ್ಯ.
ಅವರಿಗೆ ಏನು ಬೇಕು?