ಮೇಲಿನ ಸಾಲು: ನೀಲಿಮಾ, ನಿರುಪಮಾರಾವ್, ಟಿ.ಕೆ. ಅನುರಾಧಾಕೆಳಗಿನ ಸಾಲು: ಸುನೀತಾ ನಾರಾಯಣ, ಸೈನಾ ನೆಹ್ವಾಲ್, ಇಂದ್ರಾ ನೂಯಿ 
ಮಹಿಳೆ-ಮನೆ-ಬದುಕು

ಮೇಡಂ ಇಂಡಿಯಾ

ಪುರುಷಪ್ರಧಾನ ಸಮಾಜದಲ್ಲಿ ಮಹಿಳೆಯರಿಗೆ ಅನ್ಯಾಯ ತಪ್ಪಿದ್ದಲ್ಲ ಎಂಬುದು ಹಳೆಯ ವಾದ. ಕಾಲ ಬದಲಾದಂತೆ ಪುರುಷರ ಧೋರಣೆ ಕೂಡ ಬದಲಾಗುತ್ತಿದೆ ಎನ್ನುವುದೂ ಅಷ್ಟೇ ಸತ್ಯ!

ಪುರುಷಪ್ರಧಾನ ಸಮಾಜದಲ್ಲಿ ಮಹಿಳೆಯರಿಗೆ ಅನ್ಯಾಯ ತಪ್ಪಿದ್ದಲ್ಲ ಎಂಬುದು ಹಳೆಯ ವಾದ. ಕಾಲ ಬದಲಾದಂತೆ ಪುರುಷರ ಧೋರಣೆ ಕೂಡ ಬದಲಾಗುತ್ತಿದೆ ಎನ್ನುವುದೂ ಅಷ್ಟೇ ಸತ್ಯ! ಊದುಗೊಳವೆ ಹಿಡಿಯುವ ಮಹಿಳೆ ಈಗ ಅಧಿಕಾರದ ಚುಕ್ಕಾಣಿ ಹಿಡಿಯುವ ಮಟ್ಟಕ್ಕೆ ಬೆಳೆದಿದ್ದಾಳೆ. ಹೊಸ್ತಿಲು ದಾಟಿ ಸಾಧನೆಯ ಮೆಟ್ಟಿಲೇರಿ ನಿಂತಿದ್ದಾಳೆ. ಅಂಥ ಹಲವು ಸಾಧಕರು ನಮ್ಮ ಕಣ್ಮುಂದಿದ್ದಾರೆ. ಅವರಲ್ಲಿ ಕೆಲವರ ಪರಿಚಯ ಇಲ್ಲಿದೆ.

ಇಂದ್ರಾ ನೂಯಿ
51 ವರ್ಷದ ಇಂದ್ರಾ ನೂಯಿ ಹುಟ್ಟಿದ್ದು ಚೆನ್ನೈನಲ್ಲಿ. ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಪದವಿ ಮುಗಿಸಿ ಕೋಲ್ಕತಾದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನಲ್ಲಿ ಎಂಬಿಎ ಪದವಿ ಪಡೆದರು. ಬಳಿಕ ಅಮೆರಿಕಕ್ಕೆ ತೆರಳಿ ಯಾಲೇ ವಿವಿಯಲ್ಲಿ ಉನ್ನತ ಶಿಕ್ಷಣ ಪಡೆದು, ವೃತ್ತಿ ಜೀವನ ಆರಂಭಿಸಿದ್ದು ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ನಲ್ಲಿ. ಅದೃಷ್ಟ ಕುಲಾಯಿಸಿದ್ದು 1994ರಲ್ಲಿ. ಪೆಪ್ಸಿ ಕೋಲಾ ಕಂಪನಿ ಸೇರಿ ಅಮೋಘ ಸಾಧನೆ ಮಾಡಿ 2001ರಿಂದ ಆ ಕಂಪನಿಯ ಅಧ್ಯಕ್ಷರಾಗಿದ್ದಾರೆ. ಪೆಪ್ಸಿ ಕಂಪನಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ತಂದು ಕೊಟ್ಟ ಕೀರ್ತಿ ನೂಯಿಗೆ ಸಲ್ಲುತ್ತದೆ. ನೂಯಿಯ ಅದ್ಭುತ ವ್ಯವಹಾರ ಜ್ಞಾನ ಅನೇಕ ಪ್ರಶಸ್ತಿಗಳನ್ನು ಆಕೆಯ ಮುಡಿಗೇರಿವೆ. ಈಗ 'ಪವರ್ಫುಲ್ ವುಮೆನ್' ಪಟ್ಟಿಯಲ್ಲಿ ಇವರೂ ಒಬ್ಬರು ಎಂದರೆ ನಂಬಲೇಬೇಕು.

ಸೈನಾ ನೆಹ್ವಾಲ್
ಮಹಿಳಾ ಬ್ಯಾಡ್ಮಿಂಟನ್ನಲ್ಲಿ ಭಾರತದ ಹೆಸರು ವಿಶ್ವ ಮಟ್ಟದಲ್ಲಿ ಮಿಂಚುವಂತೆ ಮಾಡುತ್ತಿದ್ದಾಳೆ ಸೈನಾ ನೆಹ್ವಾಲ್. ನೋಡಲು ಎಷ್ಟು ಚೆಂದವೋ ಸೈನಾ ಆಟ ಕೂಡ ಅಷ್ಟೇ ಚೆಂದ. ಅಂಗಣದಲ್ಲಿ ಎಲ್ಲರೂ ಹುಬ್ಬೇರುವಂತೆ ಆಡುತ್ತಾಳೆ. ಬ್ಯಾಡ್ಮಿಂಟನ್ನಲ್ಲಿ ಚೀನಿಯರ ಪಾರುಪತ್ಯಕ್ಕೆ ಎದೆಗೊಟ್ಟು ನಿಲ್ಲುವ ತಾಕತ್ತು ಪ್ರದರ್ಶಿಸುತ್ತಿದ್ದಾಳೆ. ವಿಶ್ವದ ಪ್ರಖ್ಯಾತ ಆಟಗಾರರನ್ನು ಸಮರ್ಥವಾಗಿ ಎದುರಿಸಿದ್ದಾಳೆ. ಹಲವು ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡು ಸಾಧನೆಯ ಶಿಖರ ಏರಿ ನಿಂತಿದ್ದಾಳೆ.

ನಿರುಪಮಾರಾವ್
ನಿರುಪಮಾ ರಾವ್ ಎಂದ ತಕ್ಷಣ ನೆನಪಿಗೆ ಬರುವುದು ವಿದೇಶಾಂಗ ವ್ಯವಹಾರ. ಚೋಕಿಲಾ ಅಯ್ಯರ್ ಅವರ ಬಳಿಕ ವಿದೇಶಾಂಗ ಕಾರ್ಯದರ್ಶಿಯಾದ ಎರಡನೇ ಮಹಿಳೆ ನಿರುಪಮಾ. ವಿದೇಶಾಂಗ ವ್ಯವಹಾರ ನಿರ್ವಹಿಸುವುದು ಸುಲಭದ ಮಾತಲ್ಲ. ಆದರೂ ರಾವ್ ಅದನ್ನು ಸಮರ್ಥವಾಗಿ ನಿಭಾಯಿಸಿದ ಕೀರ್ತಿಗೆ ಭಾಜನರಾಗಿದ್ದಾರೆ. 1973ರಲ್ಲಿ ನಾಗರಿಕ ಸೇವಾ ಪರೀಕ್ಷೆ ಪಾಸಾಗಿದ್ದು ಶಿವಶಂಕರ್ ಮೆನನ್ ಅವರ ಬಳಿಕ ವಿದೇಶಾಂಗ ಕಾರ್ಯದರ್ಶಿ ಹುದ್ದೆ ಹೊಣೆ ವಹಿಸಿಕೊಂಡಿದ್ದಾರೆ. ಚೀನಾದಲ್ಲಿ ಭಾರತೀಯ ರಾಯಭಾರಿಯಾಗಿ ಸೇವೆ ಸಲ್ಲಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಕೂಡ ರಾವ್ ಅವರದ್ದು.

ಸುನೀತಾ  ನಾರಾಯಣ
ಜಗತ್ತೆಲ್ಲ 'ತಾಪಮಾನ' ಏರುತ್ತಿದೆ ಎಂದು ತಲೆ ಬಿಸಿ ಮಾಡಿಕೊಳ್ಳುತ್ತಿರುವ ಕಾಲದಲ್ಲೇ ಅದಕ್ಕೆ ಪರಿಸರದಲ್ಲೇ ಪರಿಹಾರ ಇದೆ ಎಂದು ಸಾರಿ ಹೇಳುತ್ತಿರುವುದು ಸುನೀತಾ ನಾರಾಯಣ. ಪರಿಸರ ಉಳಿಸಿ ನಾಡು ಬೆಳೆಸಿ ಎಂದು ಬೊಬ್ಬೆ ಹೊಡೆಯದೆ ಸದ್ದಿಲ್ಲದೆ ಪರಿಸರ ಸಂರಕ್ಷಣೆ ಮಾಡುತ್ತಿದ್ದಾರೆ. 1982ರಿಂದ ವಿಜ್ಞಾನ ಮತ್ತು ಪರಿಸರ ಕೇಂದ್ರದೊಂದಿಗೆ ಜತೆಗೂಡಿ ಪರಿಸರದ ಬಗ್ಗೆ ಎಚ್ಚರಿಕೆ ಮೂಡಿಸುತ್ತಿದ್ದಾರೆ. ಇವರ ಕೈಂಕರ್ಯಕ್ಕೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.

ನೀಲಿಮಾ
ನೀಲಿಮಾ ಮಿಶ್ರ ಸಾಮಾಜಿಕ ಹೋರಾಟಗಾರ್ತಿ. ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯದ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಮಹಾರಾಷ್ಟ್ರ ಮೂಲದ ಮಿಶ್ರಾ 2011ರಲ್ಲಿ ಮ್ಯಾಗ್ಸೆಸ್ಸೆ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುವ ದಬ್ಬಾಳಿಕೆ, ಅಬಲೆಯರ ಉಡುಗಿದ ಧ್ವನಿಗೆ ತಾಕತ್ತು ತುಂಬುತ್ತಿದ್ದಾರೆ. ಗ್ರಾಮೀಣ ಮಟ್ಟದಲ್ಲಿ ನಡೆಯುವ ಅನ್ಯಾಯದ ವಿರುದ್ಧ ಹೋರಾಡಲು ಮಹಿಳೆಯರನ್ನು ಒಟ್ಟುಗೂಡಿಸಿ ನ್ಯಾಯ ಗಿಟ್ಟಿಸಿಕೊಳ್ಳುವಂತೆ ಮಾಡಿದ್ದಾರೆ. ಇವರ ಕಾರ್ಯ ಈಗಲೂ ಮುಂದುವರಿದಿದೆ.

ಟಿ.ಕೆ. ಅನುರಾಧಾ
ಡಾ. ಟಿ.ಕೆ. ಅನುರಾಧಾ ಬೆಂಗಳೂರಿನ ಇಸ್ರೋ ವಿಜ್ಞಾನಿ. ಜಿಸ್ಯಾಟ್-12 ಹಾಗೂ ಪಿಎಸ್ಎಲ್ವಿ ಸಿ-17 ಉಪಗ್ರಹ ನಿರ್ಮಾಣದಲ್ಲಿ ಮುಂಚೂಣಿಯಲ್ಲಿದ್ದವರು. ಉಪಗ್ರಹ ನಿರ್ಮಿಸುವಲ್ಲಿ ಸಕ್ರಿಯವಾದ ದೇಶದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಕೂಡ ಅನುರಾಧಾರದ್ದು. 51 ವರ್ಷದ ಡಾ. ಅನುರಾಧಾ ವಿವಿಧ ಸಂಶೋಧನೆಗಳಲ್ಲಿ ಹೆಸರು ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

42 ಎಸೆತ, 102 ರನ್: ವಿರಾಟ್ ಕೊಹ್ಲಿಯ ಸಾರ್ವಕಾಲಿಕ ದಾಖಲೆಯೇ ಉಡೀಸ್‌ ಮಾಡಿದ ಶ್ರೇಯಸ್ ಅಯ್ಯರ್‌!

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!