ಢಾಕಾ: ಬಾಂಗ್ಲಾದೇಶ ರಾಜಧಾನಿ ಢಾಕಾದಲ್ಲಿ ಶುಕ್ರವಾರ ನಡೆದಿದ್ದ ಭಯೋತ್ಪಾಕ ದಾಳಿ ಅಂತ್ಯವಾಗಿದ್ದು, ದಾಳಿಯನ್ನು ಪ್ರಧಾನಿ ಶೇಖ್ ಹಸೀನಾ ತೀವ್ರ ಖಂಡಿಸಿದ್ದಾರೆ.
ಉಗ್ರ ದಾಳಿ ಕುರಿತಂತೆ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಶೇಖ್ ಹಸೀನಾ ಅವರು, ದಾಳಿ ಮೂಲಕ ಭಯೋತ್ಪಾದನೆ ವಿರುದ್ಧ ಬಾಂಗ್ಲಾದೇಶದ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಉಗ್ರ ವಿರುದ್ಧದ ಹೋರಾಟಕ್ಕೆ ಬಾಂಗ್ಲಾದೇಶ ಬದ್ಧವಾಗಿದ್ದು, ಯಾವುದೇ ಕಾರಣಕ್ಕೂ ಹೋರಾಟದಿಂದ ತಾನು ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದಾರೆ.
ಅಲ್ಲದೆ, ಪವಿತ್ರ ರಂಜಾನ್ ಮಾಸದಲ್ಲಿ ಉಗ್ರರು ಇಂತಹ ನೀಚ ಕೃತ್ಯ ಮಾಡಿದ್ದು, ನಿಜಕ್ಕೂ ಅವರು ಮನುಷ್ಯರೇ ಅಲ್ಲ ಎಂದು ಟೀಕಿಸಿದ್ದಾರೆ. ಇದೇ ವೇಳೆ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಒತ್ತೆಯಾಳುಗಳನ್ನು ರಕ್ಷಿಸಿದ ಬಾಂಗ್ಲಾ ಯೋಧರನ್ನು ಹಸೀನಾ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಇನ್ನು ನಿನ್ನೆ ರಾತ್ರಿ ಢಾಕಾದ ರೆಸ್ಟೋರೆಂಟ್ ಮೇಲೆ ದಾಳಿ ನಡೆಸಿದ್ದ ಉಗ್ರರು ಸುಮಾರು 25ಕ್ಕೂ ಹೆಚ್ಚು ಮಂದಿಯನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದರು. ಘಟನೆಯಲ್ಲಿ 6 ಮಂದಿ ಉಗ್ರರು ಹತರಾಗಿದ್ದು, ಇಬ್ಬರು ಭದ್ರತಾ ಸಿಬ್ಬಂದಿಗಳು ಗುಂಡೇಟಿನಿಂದ ಸಾವನ್ನಪ್ಪಿದ್ದಾರೆ. ಉಳಿದಂತೆ ಹಲವರಿಗೆ ಗುಂಡೇಟುಗಳಾಗಿವೆ.