ಇಸ್ಲಾಮಾಬಾದ್/ನವದೆಹಲಿ: ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಬಲೂಚಿಸ್ತಾನದಲ್ಲಿ ಬಂಧನಕ್ಕೊಳಗಾದ, ಭಾರತದ ಗೂಢಚರ ಎನ್ನಲಾದ ನೌಕಾಪಡೆ ಮಾಜಿ ಅಧಿಕಾರಿ ಕುಲಭೂಷನ್ ಯಾದವ್ "ತಪ್ಪೊಪ್ಪಿಗೆ' ಕುರಿತ ವೀಡಿಯೋವನ್ನು ಭಾರತ ಸರ್ಕಾರ ತಳ್ಳಿ ಹಾಕಿದೆ. ಪಾಕಿಸ್ತಾನ ಮಾಡುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಭಾರತ ಹೇಳಿದೆ. ಕುಲಭೂಷನ್ ಅಪಹರಣವಾಗಿರಬಹುದು ಎಂದು ಕೂಡ ಅದು ಹೇಳಿದೆ.
ಬಲೂಚಿಸ್ತಾನದಲ್ಲಿ ಉಗ್ರ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾಗಿ ಆರು ನಿಮಿಷಗಳ "ತಪ್ಪೊಪ್ಪಿಗೆ' ಇರುವ ವೀಡಿಯೋವನ್ನು ಪಾಕ್ ಸೇನೆಯ ಆಂತರಿಕ ಸಾರ್ವಜನಿಕ ಸಂಪರ್ಕ ಮುಖ್ಯಸ್ಥ ಲೆ.ಜ.ಅಸೀಂ ಬುಜ್ವಾ ಮತ್ತು ಪಾಕ್‌ನ ಮಾಹಿತಿ ಸಚಿವ ಪರ್ವೇಶ್ ರಶೀದ್ ಅವರು ಇಸ್ಲಾಮಾಬಾದ್‌ನಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿ ನಿನ್ನೆ ಬಿಡುಗಡೆ ಮಾಡಿದ್ದರು. ಬಂಧಿತ ಭಾರತೀಯ ಗೂಢಚರ ಕುಲಭೂಷಣ್ ಯಾದವ್ ವೀಡಿಯೋದಲ್ಲಿ ತಾವು ಭಾರತದ ಗೂಢಚರ ಸಂಸ್ಥೆ "ರಾ' ಪರ ಪರ ಕೆಲಸ ಮಾಡುತ್ತಿದ್ದು, ಬಲೂಚಿಸ್ತಾನದಲ್ಲಿ ತೊಂದರೆ ನೀಡಲು ಕೆಲಸ ಮಾಡುತ್ತಿದ್ದುದಾಗಿ ಮತ್ತು ತಾನು ಈಗಲೂ ಭಾರತೀಯ ನೌಕಾಪಡೆಯಲ್ಲಿದ್ದು, 2022ಕ್ಕೆ ನಿವೃತ್ತಿ ಹೊಂದುವುದಾಗಿ ಹೇಳಿದ್ದಾರೆ ಎಂದು ರಶೀದ್ ತಿಳಿಸಿದ್ದಾರೆ. ಈ ವಿಡಿಯೋದಿಂದ ಪಾಕ್‌ನ ವಿಚಾರದಲ್ಲಿ ಭಾರತ ಮೂಗುತೂರಿಸುತ್ತಿದೆ ಎಂಬುದಕ್ಕೆ ನೇರ ಸಾಕ್ಷ್ಯ ಎಂದವರು ಹೇಳಿದ್ದಾರೆ.
ಆದರೆ ಇತ್ತ ಪಾಕ್‌ನ ವೀಡಿಯೋ ಬಿಡುಗಡೆಯನ್ನು ಭಾರತ ತಳ್ಳಿಹಾಕಿದ್ದು, ತನ್ನ ನೆಲದಲ್ಲಿನ ಭಯೋತ್ಪಾದನೆ ಸಮಸ್ಯೆಯನ್ನು ಮರೆಮಾಚುವ ಕೆಲಸಗಳನ್ನು ಪಾಕ್ ಮಾಡುತ್ತಿದೆ ಎಂದು ಟೀಕಿಸಿದೆ.