ವಾಷಿಂಗ್ಟನ್ : ಎಫ್–16 ಯುದ್ಧ ವಿಮಾನಗಳ ಖರೀದಿಗೆ ಸಬ್ಸಿಡಿ ನೀಡಲಾಗುವುದಿಲ್ಲ. ಅಗತ್ಯ ಮೊತ್ತವನ್ನು ರಾಷ್ಟ್ರೀಯ ನಿಧಿಯಿಂದ ಹೊಂದಿಸಿಕೊಳ್ಳಬೇಕು ಎಂದು ಅಮೆರಿಕ ಪಾಕಿಸ್ತಾನಕ್ಕೆ ಹೇಳಿದೆ. ಇದಕ್ಕೆ ಉತ್ತರಿಸಿದ ಪಾಕ್ ಪೂರ್ತಿ ಮೊತ್ತ ಪಾವತಿಸಲು ತನ್ನಿಂದ ಸಾಧ್ಯವಾಗದು ಎಂದಿದೆ.
ಅಮೆರಿಕದಿಂದ ರು. 4.69 ಲಕ್ಷ ಕೋಟಿ ಮೊತ್ತದಲ್ಲಿ ಎಂಟು ಯುದ್ಧ ವಿಮಾನಗಳ ಖರೀದಿ ಸಂಬಂಧ ಒಡಂಬಡಿಕೆ ಮಾಡಿಕೊಂಡಿದ್ದ ಪಾಕಿಸ್ತಾನಕ್ಕೆ ಈ ಮೂಲಕ ಭಾರಿ ಮುಖಭಂಗವಾಗಿದೆ.
ಪಾಕ್‌ಗೆ ಎಂಟು ಎಫ್–16 ಯುದ್ಧ ವಿಮಾನಗಳನ್ನು ಮಾರಾಟ ಮಾಡುವ ಸಂಬಂಧ ಅಮೆರಿಕ ಕಾಂಗ್ರೆಸ್ ಒಪ್ಪಿಗೆ ನೀಡಿದೆ. ಆದರೆ ಕೆಲವು ಸೆನೆಟರ್‌ಗಳು ವಿದೇಶಿ ಸೇನೆಗೆ ಹಣಕಾಸು ನೆರವು (ಎಫ್‌ಎಂಎಫ್) ನೀಡುವುದನ್ನು ತೀವ್ರವಾಗಿ ವಿರೋಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಾಕ್ ತನ್ನ ರಾಷ್ಟ್ರೀಯ ನಿಧಿಯನ್ನು ಬಳಸಿ ಪೂರ್ತಿ ಮೊತ್ತವನ್ನು ಪಾವತಿಸಬೇಕು ಎಂದು ಸ್ಪಷ್ಟಪಡಿಸಿದ್ದೇವೆ ಎಂದು ವಿದೇಶಾಂಗ ವಕ್ತಾರ ಜಾನ್ ಕಿರ್ಬಿ ಅವರು ಸುದ್ದಿಗಾರರಿಗೆ ತಿಳಿಸಿದರು.
ಅಂದಾಜು 700 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ಎಂಟು ಎಫ್–16 ಯುದ್ಧ ವಿಮಾನಗಳನ್ನು ಪಾಕಿಸ್ತಾನಕ್ಕೆ ಮಾರಾಟ ಮಾಡುವ ತೀರ್ಮಾನವನ್ನು ಅಮೆರಿಕವು ತನ್ನ ಸೆನೆಟರ್‌ಗಳ ಮುಂದೆ ಫೆಬ್ರವರಿ 11ರಂದು ಪ್ರಕಟಿಸಿತ್ತು. ಭಾರತ ಇದನ್ನು ತೀವ್ರವಾಗಿ ವಿರೋಧಿಸಿತ್ತು. ಅಲ್ಲದೆ ಭಾರತದಲ್ಲಿನ ಅಮೆರಿಕದ ರಾಯಭಾರಿಗೆ ನೋಟಿಸ್ ಜಾರಿ ಮಾಡಿತ್ತು.
ಪಾಕಿಸ್ತಾನವು ಯುದ್ಧ ವಿಮಾನಗಳನ್ನು ಉಗ್ರ ನಿಗ್ರಹಕ್ಕೆ ಬಳಸುವ ಬದಲು ಭಾರತದ ಮೇಲೆ ಪ್ರಯೋಗಿಸುವ ಸಾಧ್ಯತೆ ಹೆಚ್ಚಿದೆ ಎಂದು ಕಳೆದ ವಾರ ಅಮೆರಿಕ ಕಾಂಗ್ರೆಸ್‌ನಲ್ಲಿ ನಡೆದ ವಿಚಾರಣೆ ವೇಳೆ ಕೆಲವು ಉನ್ನತ ಮಟ್ಟದ ಜನಪ್ರತಿನಿಧಿಗಳು ಆತಂಕ ವ್ಯಕ್ತಪಡಿಸಿದ್ದರು.
ಅಮೆರಿಕ ಮುಂದಿಟ್ಟಿರುವ ಹೊಸ ಪ್ರಸ್ತಾವಕ್ಕೆ ಪ್ರತಿಕ್ರಿಯಿಸಲು ಪಾಕ್‌ಗೆ ಮೇ ತಿಂಗಳು ಕೊನೆಯವರೆಗಷ್ಟೇ ಕಾಲಾವಕಾಶವಿದೆ. ಒಂದು ವೇಳೆ ತನ್ನ ಅಂತಿಮ ನಿರ್ಧಾರವನ್ನು ಪ್ರಕಟಿಸಲು ಪಾಕಿಸ್ತಾನ ವಿಳಂಬ ಮಾಡಿದರೆ ಯುದ್ಧ ವಿಮಾನಗಳ ಬೆಲೆಯಲ್ಲಿ ಹೆಚ್ಚಳವಾಗಲಿದೆ ಎಂದು ಹೆಸರು ಹೇಳಲಿಚ್ಛಿಸದ ಪಾಕಿಸ್ತಾನದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.