ಬೀಜಿಂಗ್: ಚೀನಾದಲ್ಲಿ ಹಾಗಾಗ ಚಿತ್ರ ವಿಚಿತ್ರ ಘಟನೆಗಳು ವರದಿಯಾಗುತ್ತಿರುತ್ತವೆ. ಈಗ ನಟೋರಿಯಸ್ ಟಾಯ್ಲೆಟ್ ಪೇಪರ್ ಕಳ್ಳನೊಬ್ಬ ಒಂದು ವಾರದಲ್ಲಿ ಬರೊಬ್ಬರಿ 1,500 ಟಾಯ್ಲೆಟ್ ಪೇಪರ್ ರೋಲ್ ಗಳನ್ನು ಕಳ್ಳತನ ಮಾಡಿದ್ದು, ಕಳ್ಳನ ಗುರುತು ಪತ್ತೆಗಾಗಿ ಚೀನಾ ಸರ್ಕಾರ ಚೆಂಗ್ಡು ನಗರದ ಸಾರ್ವಜನಿಕ ಶೌಚಾಲಯದಲ್ಲಿ ಕ್ಯಾಮರಾ ಅಳವಡಿಸಿದೆ.
ಟಾಯ್ಲೆಟ್ ಪೇಪರ್ ಕಳ್ಳತನ ತಪ್ಪಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ. ಮುಖ ಗುರುತಿಸುವ ತಂತ್ರಾಂಶವುಳ್ಳ ಕ್ಯಾಮರಾ ಇದಾಗಿದೆ. ಚೆಂಗ್ಡುನ ಶೌಚಾಲಯಗಳಲ್ಲಿ ಈ ಕ್ಯಾಮರಾ ಅಳವಡಿಸಲಾಗಿದೆ ಎಂದು ಚೆಂಗ್ಡು ಬ್ಯುಸಿನೆಸ್ ಡೈಲಿ ವರದಿ ಮಾಡಿದೆ.
ಗೋಡೆಗೆ ಅಳವಡಿಸಲಾಗಿರುವ ಈ ಕ್ಯಾಮರಾವನ್ನು ಶೌಚಾಲಯಕ್ಕೆ ಬಂದ ವ್ಯಕ್ತಿ ಎದುರಿಸಬೇಕಾಗಿದೆ. ಟಾಯ್ಲೆಟ್ ಪೇಪರ್ ತೆಗೆದುಕೊಂಡ ವ್ಯಕ್ತಿಯ ಮುಖವನ್ನು ತಂತ್ರಜ್ಞಾನ ನೆನಪಿಟ್ಟುಕೊಂಡಿರುತ್ತದೆ. ಅದೇ ವ್ಯಕ್ತಿ ನಿರ್ಧಿಷ್ಟ ಅವಧಿಯಲ್ಲಿ ಮತ್ತೆ ಕಾಣಿಸಿಕೊಂಡರೆ ಪೇಪರ್ ನೀಡಲು ತಂತ್ರಜ್ಞಾನ ನಿರಾಕರಿಸುತ್ತದೆ.
ಕಳೆದ ಒಂದು ವಾರದಲ್ಲಿ ಭಾರಿ ಪ್ರಮಾಣದಲ್ಲಿ ಟಾಯ್ಲೆಟ್ ಪೇಪರ್ ಕಳ್ಳತನವಾಗುತ್ತಿದ್ದು, ನಟೋರಿಯಸ್ ಕಳ್ಳ ಒಂದು ಗಂಟೆಯಲ್ಲಿ 30 ಟಾಯ್ಲೆಟ್ ರೂಂಗಳಿಂದ ಟಾಯ್ಲೆಟ್ ಪೇಪರ್ ಕದ್ದಿರುವುದು ತನಿಖೆಯ ವೇಳೆ ಪತ್ತೆಯಾಗಿದೆ ಎಂದು ಅಧಿಕಾರಿಳು ತಿಳಿಸಿರುವುದಾಗಿ ವರದಿ ಮಾಡಲಾಗಿದೆ.
ಚೀನಾದಲ್ಲಿ ಶೌಚಾಲಯದಲ್ಲಿ ಟಾಯ್ಲೆಟ್ ಪೇಪರ್ ಕಳ್ಳತನ ಜೋರಾಗಿದ್ದು, ಸಾರ್ವಜನಿಕ ಶೌಚಾಲಯದ ಟಾಯ್ಲೆಟ್ ಪೇಪರನ್ನು ಸಾರ್ವಜನಿಕರು ಮನೆಗಳಲ್ಲಿ ಉಪಯೋಗಿಸುತ್ತಿದ್ದಾರೆ ಎನ್ನಲಾಗುತ್ತಿದೆ.