ಚೀನಾದ ಜಗತ್ತಿನ ಅತಿ ದೊಡ್ಡ ಉಭಯಚರ ವಿಮಾನದ ಚೊಚ್ಚಲ ಹಾರಾಟ ಯಶಸ್ವಿ
ಚೀನಾ ವಿಮಾನಯಾನ ಕ್ಷೇತ್ರದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಯಾದ ನೆಲ-ಜಲ ಎರಡರ ಮೇಲೂ ಲ್ಯಾಂಡಿಂಗ್, ಟೇಕ್ ಆಫ್ ಆಗುವ ಸಾಮರ್ಥ್ಯದ ವಿಶೇಷ ವಿಮಾನ ತಯಾರಿಕೆ ಯಶಸ್ವಿಯಾಗಿದ್ದು, ಈ ಉಭಯಚರ ವಿಮಾನವನ್ನು ಭಾನುವಾರ ಯಶಸ್ವಿಯಾಗಿ ಚಲಾಯಿಸಲಾಯಿತು.
ಬೀಜಿಂಗ್: ಚೀನಾ ವಿಮಾನಯಾನ ಕ್ಷೇತ್ರದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಯಾದ ನೆಲ-ಜಲ ಎರಡರ ಮೇಲೂ ಲ್ಯಾಂಡಿಂಗ್, ಟೇಕ್ ಆಫ್ ಆಗುವ ಸಾಮರ್ಥ್ಯದ ವಿಶೇಷ ವಿಮಾನ ತಯಾರಿಕೆ ಯಶಸ್ವಿಯಾಗಿದ್ದು, ಈ ಉಭಯಚರ ವಿಮಾನವನ್ನು ಭಾನುವಾರ ಯಶಸ್ವಿಯಾಗಿ ಚಲಾಯಿಸಲಾಯಿತು.
ನೆಲ, ಜಲಗಳೆರಡರಲ್ಲೂ ಹಾರಾಟ ಮಾಡಬಲ್ಲ ಜಗತ್ತಿನ ಅತಿ ದೊಡ್ಡ ಉಭಯಚರ ವಿಮಾನವೆಂಬ ದಾಖಲೆಗೆ ಪಾತ್ರವಾಗಿರುವ ಚೀನಾದ ಸ್ವದೇಶಿ ನಿರ್ಮಿತ ಎಜಿ600, ಭಾನುವಾರ ತನ್ನ ಚೊಚ್ಚಲ ಹಾರಾಟವನ್ನು ಯಶಸ್ವಿಯಾಗಿ ನಡೆಸಿದೆ. ಈ ವಿಶೇಷ ವಿಮಾನಕ್ಕೆ "ಕುನ್‌ಲೊಂಗ್" ಎಂಬ ಸಂಕೇತನಾಮ ನೀಡಲಾಗಿದ್ದು, ಈ ವಿಮಾನವನ್ನು ದಕ್ಷಿಣದ ಝುಹಾಯಿ ನಗರದಿಂದ ಯಶಸ್ವಿಯಾಗಿ ಹಾರಾಟ ಮಾಡಲಾಯಿತು. ಸುಮಾರು ಒಂದು ಗಂಟೆಯ ಹಾರಾಟದ ಬಳಿಕ ವಿಮಾನವು ಭೂಸ್ಪರ್ಶ ಮಾಡಿದೆ.
ಈ ಉಭಯಚರ ವಿಭಾಗದ ಅತ್ಯಂತ ದೊಡ್ಡ ವಿಮಾನ ಎಂಬ ಕೀರ್ತಿಗೆ ಭಾಜನವಾಗಿರುವ ಕುನ್ ಲೊಂಗ್, 127 ಅಡಿ ರೆಕ್ಕೆಯನ್ನು ಹೊಂದಿದ್ದು, ನಾಲ್ಕು ಟರ್ಬೊಪ್ರೊಪ್ ಎಂಜಿನ್‌ಗಳನ್ನು ಅಳವಡಿಸಿಕೊಂಡಿದೆ. ಈ ವಿಶೇಷ ವಿಮಾನದಲ್ಲಿ ಒಟ್ಟು 50 ಮಂದಿ ಪ್ರಯಾಣಿಕರು ಪ್ರಯಾಣಿಸ ಬಹುದಾಗಿದೆ. ಅಂತೆಯೇ ಸುಮಾರು 12 ತಾಸುಗಳ ಕಾಲ ಅದು ಗಗನದಲ್ಲಿ ಹಾರಾಡಬಲ್ಲದು ಎಂದು ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.
ಈ ವಿಮಾನ ಹಾರಾಟ ಯಶಸ್ವಿಯಾದ ಬೆನ್ನಲ್ಲೇ ಮಾತನಾಡಿದ ಎಜಿ600 ವಿಮಾನದ ಮುಖ್ಯವಿನ್ಯಾಸಕಾರ ಹುವಾಂಗ್ ಲಿಂಗ್ಸಾಯಿ ಅವರು, "ಈ ಯಶಸ್ವಿ ಚೊಚ್ಚಲ ಹಾರಾಟದೊಂದಿಗೆ ಚೀನಾವು ಬೃಹತ್ ಉಭಯಚರ ವಿಮಾನವನ್ನು ಅಭಿವೃದ್ಧಿಪಡಿಸುವ ಸಾಮರ್ಥ್ಯವಿರುವ ಜಗತ್ತಿನ ಕೆಲವೇ ರಾಷ್ಟ್ರಗಳ ಸಾಲಿಗೆ ಸೇರ್ಪಡೆಗೊಂಡಿದೆ’’ಎಂದು ಹೇಳಿದ್ದಾರೆ.
ಈ ಉಭಯಚರ ವಿಮಾನದಲ್ಲಿ ಸೇನಾ ಉಪಕರಣಗಳಿದ್ದು, ಅದನ್ನು ಅಗ್ನಿಶಾಮಕ ಹಾಗೂ ನೌಕಾ ರಕ್ಷಣೆ ಕಾರ್ಯಾಚರಣೆಗಳಲ್ಲಿ ಬಳಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವಿಮಾನದ 4500 ಕಿ.ಮೀ.ವರೆಗಿನ ಕಾರ್ಯಾಚರಣೆ ಸಾಮರ್ಥ್ಯ ಹೊಂದಿದ್ದು, ಅದನ್ನು ಚೀನಾದ ಕೃತಕ ದ್ವೀಪಗಳಲ್ಲಿ ನಿಯೋಜಿಸಲು ಯೋಗ್ಯವಾಗುವಂತೆ ನಿರ್ಮಾಣ ಮಾಲಾಗಿದೆ ಎಂದು ಸಿಂಗಾಪುರದ ನಾನ್ಯಾಂಗ್ ತಾಂತ್ರಿಕ ವಿವಿಯ ಸೇನಾ ವಿಶ್ಲೇಷಕ ಜೇಮ್ಸ್ ಚಾರ್ ತಿಳಿಸಿದ್ದಾರೆ.