ಬೀಜಿಂಗ್: ಪಠಾಣ್ ಕೋಟ್ ದಾಳಿಯ ಮಾಸ್ಟರ್ ಮೈಂಡ್ ಹಾಗೂ ಜೆಇಎಂ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ ನನ್ನು ಜಾಗತಿಕ ಭಯೋತ್ಪಾದಕ ಎಂದು ವಿಶ್ವಸಂಸ್ಥೆಯಲ್ಲಿ ಘೋಷಿಸುವ ಅಮೆರಿಕದ ಪ್ರಸ್ತಾವನೆಯನ್ನು ತಡೆಹಿಡಿದಿರುವ ನಿರ್ಧಾರವನ್ನು ಚೀನಾ ಗುರುವಾರ ಸಮರ್ಥಿಕೊಂಡಿದೆ.
ಮಸೂದ್ ನನ್ನು ವಿಶ್ವಸಂಸ್ಥೆಯ ಭಯೋತ್ಪಾದಕರ ಪಟ್ಟಿಗೆ ಸೇರ್ಪಡೆ ಮಾಡುವ ಮೂರನೇ ಪ್ರಯತ್ನಕ್ಕೂ ಚೀನಾ ಮತ್ತೆ ಅಡ್ಡಗಾಲು ಹಾಕಿದೆ. ಮಸೂದ್ ಅಜರ್ ನನ್ನು ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರ್ಪಡೆ ಮಾಡುವ ಅಮೆರಿಕಾದ ಕ್ರಮವನ್ನು ಬೆಂಬಲಿಸಲು ಪ್ರಸ್ತುತ ಪರಿಸ್ಥಿತಿ ಪೂರಕವಾಗಿಲ್ಲ. ಹಾಗಾಗಿ ತಾಂತ್ರಿಕ ತಡೆ ನೀಡಲಾಗಿದೆ ಎಂದು ಚೀನಾ ಸ್ಪಷ್ಟನೆ ನೀಡಿದೆ.
ಮಸೂದ್ ನಿಷೇಧಕ್ಕೆ ತಡೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಲು.ಕಾಂಗ್ ಅವರು, ಮಸೂದ್ ನನ್ನು ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರಿಸಲು ಪ್ರಯತ್ನ ನಡೆಸುತ್ತಿರುವ ಸಂಬಂಧಪಟ್ಟ ರಾಷ್ಟ್ರಗಳು ಒಮ್ಮತಾಭಿಪ್ರಾಯಕ್ಕೆ ಬರುವಂತೆ ಅವಕಾಶ ಕಲ್ಪಿಸಲು ಸಲುವಾಗಿ ಚೀನಾ ಈ ಬಾರಿಯೂ ಬೆಂಬಲವನ್ನು ನೀಡಿಲ್ಲ ಎಂದು ತಿಳಿಸಿದ್ದಾರೆ.
ಕಳೆದ ವರ್ಷ ವಿಶ್ವಸಂಸ್ಥೆಯ ಭದ್ರಯಾ ಮಂಡಳಿಯ 1267 ದಿಗ್ಬಂಧನ ಸಮಿತಿಯು ಮಸೂದ್ ನನ್ನು ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರ್ಪಡೆ ಮಾಡುವ ವಿಷಯವನ್ನು ಚರ್ಚೆ ನಡೆಸಿತ್ತು. ಆದರೆ, ಇದಕ್ಕೆ ಸಂಬಂಧಿಸಿದ ರಾಷ್ಟ್ರಗಳಲ್ಲಿ ಭಿನ್ನಾಭಿಪ್ರಾಯಗಳು ವ್ಯಕ್ತವಾದ ಹಿನ್ನಲೆಯಲ್ಲಿ ಒಮ್ಮತ ಅಭಿಪ್ರಾಯಗಳು ಮೂಡಿರಲಿಲ್ಲ ಎಂದು ಲುಕಾಂಗ್ ಹೇಳಿದ್ದಾರೆ.