ನವದೆಹಲಿ: ಭಾರತೀಯ ಮೂಲದ ವೈದ್ಯರ ಪುತ್ರ ಐರ್ಲೆಂಡ್ ಪ್ರಧಾನಿಯಾಗುವ ಸಾಧ್ಯತೆ ಇದೆ. ಭಾರತೀಯ ಮೂಲದ ಲಿಯೋ ವರಾದ್ಕರ್ 22 ವರ್ಷದವರಾಗಿದ್ದಾಗಲೇ ಐರಿಶ್ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದರು. 27 ನೇ ವಯಸ್ಸಿಗೆ ಸಂಸತ್ ಗೂ ಆಯ್ಕೆಯಾಗಿದ್ದರು. ಈಗ 38 ನೇ ವಯಸ್ಸಿನಲ್ಲಿ ಐರ್ಲೆಂಡ್ ನ ಪ್ರಧಾನಿಯಾಗಿ ಆಯ್ಕೆಗೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಐರ್ಲೆಂಡ್ ಗೆ ವಲಸೆ ಹೋದ ಭಾರತೀಯ ಮೂಲದ ವೈದ್ಯ ಹಾಗೂ ಐರಿಷ್ ತಾಯಿಯ ಪುತ್ರನಾಗಿರುವ ಲಿಯೋ ವರಾದ್ಕರ್ ಪ್ರಸ್ತುತ ಐರ್ಲೆಂಡ್ ನ ಸಾಮಾಜಿಕ ಭದ್ರತೆ ಖಾತೆಯ ಸಚಿವರಾಗಿದ್ದಾರೆ. ಈಗ ಪ್ರಧಾನಿಯಾಗುವುದಕ್ಕೆ ಸಿದ್ಧತೆ ನಡೆಸಿದ್ದಾರೆ.
2011 ರಿಂದ ಪ್ರಧಾನಿಯಾಗಿರುವ ಟಾವೊಯಿಸಚ್ ಎಂಡಾ ಕೆನ್ನಿ ಅಧಿಕಾರದಿಂದ ನಿರ್ಗಮಿಸುವುದಾಗಿ ಘೋಷಿಸಿದ್ದು, ಟಾವೊಯಿಸಚ್ ಎಂಡಾ ಕೆನ್ನಿ ಉತ್ತರಾಧಿಕಾರಿಯಾಗಿ ಲಿಯೋ ವರಾದ್ಕರ್ ನೇಮಕವಾಗುವ ಸಾಧ್ಯತೆ ಹೆಚ್ಚಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಐರ್ಲೆಂಡ್ ನ ಹೌಸಿಂಗ್ ಮಿನಿಸ್ಟರ್ ಸೈಮನ್ ಕವೆನಿ ವರಾದ್ಕರ್ ಗೆ ಇರುವ ಏಕೈಕ ಪ್ರತಿಸ್ಪರ್ಧಿಯಾಗಿದ್ದಾರೆ. ಒಂದು ವೇಳೆ ವರಾದ್ಕರ್ ಪ್ರಧಾನಿಯಾಗಿ ಆಯ್ಕೆಯಾಗಿದ್ದೇ ಆದಲ್ಲಿ ಐರ್ಲೆಂಡ್ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಪ್ರಧಾನಿಯಾಗಲಿದ್ದಾರೆ. ವರಾದ್ಕರ್ ಅವರ ತಂದೆ ಅಶೋಕ್ ಮುಂಬೈ ನ ವೈದ್ಯರಾಗಿದ್ದು ತಾಯಿ ಮಿರಿಯಮ್ ವಾಟರ್ಫೊಲ್ಡ್ ನ ಮೂಲದವರಾಗಿದ್ದಾರೆ. ಡಬ್ಲಿನ್ ನಲ್ಲಿ ಹುಟ್ಟಿ ಬೆಳೆದಿರುವ ವರಾದ್ಕರ್ 2007 ರಲ್ಲಿ ಐಲೆಂಡ್ ಸಂಸತ್ ಗೆ ಆಯ್ಕೆಯಾಗಿದ್ದರು.