ಲಂಡನ್: ಲಂಡನ್ ನಲ್ಲಿ ಭಾನುವಾರ ನಡೆದ ಉಗ್ರ ದಾಳಿಯನ್ನು ಕಟುವಾಗಿ ಟೀಕಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬ್ರಿಟನ್ ಗೆ ಸಕಲ ರೀತಿಯ ನೆರವು ನೀಡಲು ಸಿದ್ಧ ಎಂದು ಹೇಳಿದ್ದಾರೆ.
ಲಂಡನ್ ದಾಳಿ ಕುರಿತ ಸುದ್ದಿ ತಿಳಿಯುತ್ತಿದ್ದಂತೆಯೇ ಹೇಳಿಕೆ ಬಿಡುಗಡೆ ಮಾಡಿರುವ ಡೊನಾಲ್ಡ್ ಟ್ರಂಪ್, ಮಾರ್ಚ್ ನಲ್ಲಿ ಆರಂಭವಾದ ಉಗ್ರ ದಾಳಿ ಇನ್ನೂ ಮುಂದುವರೆದಿದೆ. ಉಗ್ರಾಗಾಮಿಗಳ ಈ ಕೃತ್ಯ ಅವರ ಹೇಡಿತನಕ್ಕೆ ಹಿಡಿದ ಕನ್ನಡಿಯಾಗಿದೆ. ಉಗ್ರಗಾಮಿಗಳ ಕುಕೃತ್ಯಕ್ಕೆ ಅಮಾಯಕ ಜೀವಗಳು ಬಲಿಯಾಗುತ್ತಿದೆ. ಬ್ರಿಟನ್ ಸರ್ಕಾರ ಮನವಿ ಮಾಡಿದ್ದೇ ಆದರೆ ಲಂಡನ್ ಗೆ ಯಾವುದೇ ರೀತಿಯ ನೆರವು ನೀಡಲು ಅಮೆರಿಕ ಸಿದ್ಧವಾಗಿದೆ ಎಂದು ಟ್ರಂಪ್ ಹೇಳಿದ್ದಾರೆ. ಇದೇ ವೇಳೆ ಮುಸ್ಲಿಂ ರಾಷ್ಟ್ರಗಳ ನಾಗರಿಕರಿಕರ ಮೇಲೆ ನಿರ್ಬಂಧ ಹೇರುವ ತಮ್ಮ ವಲಸೆ ನೀತಿಯನ್ನು ಟ್ರಂಪ್ ಸಮರ್ಥಿಸಿಕೊಂಡಿದ್ದಾರೆ.
ಇದೇ ವೇಳೆ ಟ್ವೀಟ್ ಮಾಡಿರುವ ಟ್ರಂಪ್ ವಲಸೆ ನೀತಿಯನ್ನು ಹೊಸ ರಕ್ಷಣಾ ಕ್ರಮದ ಹೊಸ ಹಂತವಾಗಿ ಪರಿಗಣಿಸಬೇಕು ಎಂದು ಹೇಳಿದ್ದಾರೆ. ಅಂತೆಯೇ ಲಂಡನ್ ನಲ್ಲಿರವು ಅಮೆರಿಕ ನಾಗರಿಕರು ತಮ್ಮ ಸುರಕ್ಷತೆಯ ಕುರಿತು ರಾಯಭಾರ ಕಚೇರಿಗೆ ಮಾಹಿತಿ ನೀಡುವಂತೆಯೂ ತಮ್ಮ ಸ್ನೇಹಿತರು ಸಂಬಂಧಿಕರ ಸುರಕ್ಷತೆಯ ಕುರಿತಂತೆ ಮಾಹಿತಿ ಹಂಚಿಕೊಳ್ಳುವಂತೆ ಸಲಹೆ ನೀಡಿದ್ದಾರೆ.