ಢಾಕಾ: ಬಂಗಾಳಕೊಲ್ಲಿಯಲ್ಲಿ ಎದ್ದಿರುವ ಮೊರಾ ಚಂಡಮಾರುತ ಬಾಂಗ್ಲಾದೇಶಕ್ಕೆ ಅಪ್ಪಳಿಸಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ಏತನ್ಮಧ್ಯೆ ಚಂಡಮಾರುತದ ಅಬ್ಬರಕ್ಕೆ ಸಿಲುಕಿ ಅಪಾಯಕ್ಕೆ ಸಿಲುಕಿದ್ದ ಸುಮಾರು 18 ಮಂದಿ ಬಾಂಗ್ಲಾದೇಶಿ ಪ್ರಜೆಗಳನ್ನು ಭಾರತದ ನೌಕಾಪಡೆಯ ಸಿಬ್ಬಂದಿಗಳು ರಕ್ಷಿಸಿದ್ದಾರೆ.
ಭಾರತೀಯ ನೌತಾಪಡೆಯ ನೌಕೆ ಸುಮಿತ್ರಾ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಈ ವರೆಗೂ ಸುಮಾರು 18 ಮಂದಿಯನ್ನು ರಕ್ಷಣೆ ಮಾಡಿದೆ ಎಂದು ತಿಳಿದುಬಂದಿದೆ. ಅಂತೆಯೇ ಇನ್ನೂ 100ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದು, ಅವರ ಹುಡುಕಾಟಕ್ಕಾಗಿ ತೀವ್ರ ಶೋಧ ನಡೆಸಲಾಗುತ್ತಿದೆ. ಮೊರಾ ಚಂಡಮಾರುತ ಅಪ್ಪಳಿಸಿದ ಪರಿಣಾಮ ದಕ್ಷಿಣ ಚಿತ್ತಗಾಂಗ್ ನ ಸಮಾರು 150ಕ್ಕೂ ಅಧಿಕ ಮಂದಿ ಸಮುದ್ರದಲ್ಲಿ ನಾಪತ್ತೆಯಾಗಿದ್ದರು. ಕರಾವಳಿ ತೀರಕ್ಕೆ ಚಂಡಮಾರುತ ಅಪ್ಪಳಿಸಿದ್ದರಿಂದ ನೀರ ಮತ್ತು ಗಾಳಿಯ ರಭಸಕ್ಕೆ ಜನ ಕೊಚ್ಚಿ ಹೋಗಿದ್ದರು.
ಹೀಗಾಗಿ ಸಮೀಪದಲ್ಲಿದ್ದ ಭಾರತೀಯ ನೌಕಾಪಡೆಯನ್ನು ಬಾಂಗ್ಲಾದೇಶ ಸರ್ಕಾರ ಸಂಪರ್ಕಿಸಿ ವಿಚಾರ ತಿಳಿಸಿತ್ತು. ಕೂಡಲೇ ಕಾರ್ಯಾಚರಣೆಗೆ ಇಳಿದ ನೌಕಾಪಡೆಯ ಸುಮಿತ್ರಾ ನೌಕೆ ಇವರೆಗೂ ಸುಮಾರು 18 ಮಂದಿಯನ್ನು ರಕ್ಷಣೆ ಮಾಡಿದೆ. ಅಂತೆಯೇ ನಾಪತ್ತೆಯಾದವರ ರಕ್ಷಣೆಗಾಗಿ ಕಾರ್ಯಾಚರಣೆ ಮುಂದುವರೆಸಿದೆ.