ಇಸ್ಲಾಮಾಬಾದ್: ಗಡಿಯಲ್ಲಿ ಭಾರತೀಯ ಸೇನೆ ಕದನ ವಿರಾಮ ಉಲ್ಲಂಘನೆ ಮಾಡುತ್ತಿದೆ ಎಂದು ಆರೋಪ ಮಾಡಿರುವ ಪಾಕಿಸ್ತಾನ ಪಾಕಿಸ್ತಾನದಲ್ಲಿರುವ ಭಾರತೀಯ ರಾಯಭಾರಿ ಅಧಿಕಾರಿಗೆ ಶನಿವಾರ ಸಮನ್ಸ್ ಜಾರಿ ಮಾಡಿದೆ ಎಂದು ತಿಳಿದುಬಂದಿದೆ.
ಗಡಿ ನಿಯಂತ್ರಣ ರೇಖೆ ಬಳಿ ಭಾರತೀಯ ಸೇನೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು, ಪರಿಣಾಮ 6 ನಾಗರೀಕರು ಮೃತಪಟ್ಟಿದ್ದಾರೆಂದು ಆರೋಪ ಮಾಡಿರುವ ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ಐಜಾಜ್ ಅಹ್ಮದ್ ಚೌಧರಿಯವರು ಭಾರತದ ಹೈ ಕಮಿಷನರ್ ಗೌತಮ್ ಬಾಂಬಾವಲೆ ಅವರಿಗೆ ಸಮನ್ಸ್ ಜಾರಿ ಮಾಡಿದ್ದಾರೆಂದು ತಿಳಿದುಬಂದಿದೆ.
ಗಡಿಯಲ್ಲಿ ಭಾರತೀಯ ಸೇನೆ ನಡೆಸಿದ್ದ ಅಪ್ರಚೋದಿತ ಗುಂಡಿನ ಗಾಳಿಗೆ ನಾಲ್ಕು ಮಹಿಳೆಯರು ಸೇರಿದಂತೆ 6 ನಂದಿ ನಾಗರೀಕರು ಸಾವನ್ನಪ್ಪಿದ್ದಾರೆ. ಗುಂಡಿನ ದಾಳಿಗೆ 15 ಮಹಿಳೆಯರು ಹಾಗೂ 5 ಮಕ್ಕಳು ಸೇರಿ ಒಟ್ಟು 26 ಮಂದಿ ನಾಗರೀಕರು ಗಾಯಗೊಂಡಿದ್ದಾರೆ. ಇದನ್ನು ಪಾಕಿಸ್ತಾನ ತೀವ್ರವಾಗಿ ಖಂಡಿಸುತ್ತದೆ.
26 ಮಂದಿಯಲ್ಲಿ ಹಲವರು ತೀವ್ರವಾಗಿ ಗಾಯಗೊಂಡಿದ್ದು, ಪರಿಸ್ಥಿತಿ ಚಿಂತಾಜನಕವಾಗಿದೆ. ಉದ್ದೇಶಪೂರ್ವಕವಾಗಿ ನಾಗರೀಕ ಪ್ರದೇಶಗಳನ್ನು ಗುರಿಯಾಗಿರಿಸಿಕೊಂಡು ಭಾರತೀಯ ಸೇನೆ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿರುವುದು ಮಾನವ ಘನತೆ, ಅಂತಾರಾಷ್ಟ್ರೀಯ ಮಾನವ ಹಕ್ಕುಗಳು ಹಾಗೂ ಮಾನವೀಯ ಕಾನೂನುಗಳಿಗೆ ವಿರುದ್ಧದ್ದಾಗಿದೆ.
2003ರ ಅಂತರಾಷ್ಟ್ರೀಯ ಗಡಿ ಹಾಗೂ ಕದನ ವಿರಾಮ ಉಲ್ಲಂಘನೆ ಒಪ್ಪಂದವನ್ನು ಭಾರತ ಗೌರವಿಸಬೇಕು ಪ್ರಸ್ತುತ ಗಡಿಯಲ್ಲಿ ಭಾರತೀಯ ಸೇನೆ ನಡೆಸಿರುವ ಕದನ ವಿರಾಮ ಉಲ್ಲಂಘನೆ ಕುರಿತಂತೆ ತನಿಖೆ ನಡೆಸಬೇಕಿದೆ ಹಾಗೂ ಗಡಿಯಲ್ಲಿ ಶಾಂತಿ ಕಾಪಾಡುವಂತೆ ಹಾಗೂ ಕದನ ವಿರಾಮ ಉಲ್ಲಂಘನೆ ಕುರಿತು ಒಪ್ಪಂದವನ್ನು ಗೌರವಿಸುವಂತೆ ಭಾರತ ತನ್ನ ಸೇನೆಗೆ ಸೂಚಿಸಬೇಕಿದೆ ಎಂದು ಸಮನ್ಸ್'ನಲ್ಲಿ ತಿಳಿಸಿದ್ದಾರೆಂದು ವರದಿಗಳು ತಿಳಿಸಿವೆ.