ಸಂವಾದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ 
ವಿದೇಶ

ಯಾರಿಗೆ ಯಾವ ಭಾಷೆಯಲ್ಲಿ ಉತ್ತರಿಸಬೇಕೆಂದು ತಿಳಿದಿದೆ: ಸರ್ಜಿಕಲ್ ಸ್ಟ್ರೈಕ್ ಕುರಿತು ಲಂಡನ್ ನಲ್ಲಿ ಪ್ರಧಾನಿ

ಉಗ್ರವಾದವನ್ನೇ ತಮ್ಮ ಬಂಡವಾಳ ಮಾಡಿಕೊಂಡಿರುವವರಿಗೆ ಅವರದೇ ಭಾಷೆಯಲ್ಲಿ ತಿರುಗೇಟು ನೀಡಲು ಮೋದಿಗೆ ತಿಳಿದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಲಂಡನ್ ನಲ್ಲಿ ಹೇಳಿದ್ದಾರೆ.

ಲಂಡನ್: ಉಗ್ರವಾದವನ್ನೇ ತಮ್ಮ ಬಂಡವಾಳ ಮಾಡಿಕೊಂಡಿರುವವರಿಗೆ ಅವರದೇ ಭಾಷೆಯಲ್ಲಿ ತಿರುಗೇಟು ನೀಡಲು ಮೋದಿಗೆ ತಿಳಿದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಲಂಡನ್ ನಲ್ಲಿ ಹೇಳಿದ್ದಾರೆ.
ಅನಿವಾಸಿ ಭಾರತೀಯರೊಂದಿಗೆ ಲಂಡನ್ ನಲ್ಲಿ ನಡೆದ 'ಭಾರತ್ ಸಬ್ ಕೇ ಸಾಥ್' ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ಮೋದಿ, ಪಾಕಿಸ್ತಾನದ ವಿರುದ್ಧ ನೇರ ಆಕ್ರೋಶ ವ್ಯಕ್ತಪಡಿಸಿದರು. 'ಭಾರತ ಎಂದಿಗೂ ಯಾವುದೇ ಕಾರಣಕ್ಕೂ ತನ್ನ ನೆರೆ ರಾಷ್ಟ್ರಗಳ ಭೂಮಿಯನ್ನು ಆಕ್ರಮಿಸಿಕೊಳ್ಳಲು ಯತ್ನಿಸಿಲ್ಲ. ಅಂತೆಯೇ ಇತರರು ತನ್ನ ಭೂಮಿಗೆ ನುಸುಳಲೂ ಬಿಡುವುದಿಲ್ಲ. ಎರಡೂವರೆ ಲಕ್ಷ ಭಾರತೀಯ ಸೈನಿಕರು ವಿಶ್ವಯುದ್ಧದಲ್ಲಿ ಪಾಲ್ಗೊಂಡಿದ್ದರು. ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲಿ ಭಾರತೀಯ ಸೇನೆಯ ತುಕಡಿಗಳೂ ಕೂಡ ಇವೆ. ಶಾಂತಿ ಪಾಲನೆಗಾಗಿ ಭಾರತ ಸದಾ ಸಿದ್ಧವಿದೆ.
ಆದರೆ ಕೆಲವರು ಭಯೋತ್ಪಾದನೆಯನ್ನು ತಮ್ಮ ಉದ್ಯಮ ಮಾಡಿಕೊಂಡಿದ್ದು, ಇಂತಹವರಿಗೆ ಹೇಗೆ ತಿರುಗೇಟು ನೀಡಬೇಕು ಎಂದು ಮೋದಿಗೆ ತಿಳಿದಿದೆ. ನನ್ನ ಭಾರತೀಯ ಸೇನೆಯ ಬಗ್ಗೆ ನನಗೆ ಹೆಮ್ಮೆ ಇದೆ. 2016ರಲ್ಲಿ ಉರಿ ಸೆಕ್ಟರ್ ನಲ್ಲಿ ಕೆಲ ಹೇಡಿಗಳು ಗಡಿಯಲ್ಲಿನ ಟೆಂಟ್ ನಲ್ಲಿ ಮಲಗಿದ್ದ ನಮ್ಮ ಸೈನಿಕರ ಮೇಲೆ ದಾಳಿ ಮಾಡಿ ಸುಮಾರು 19 ಸೈನಿಕರನ್ನು ಬಲಿ ಪಡೆದಿದ್ದರು. 19 ಜನ ಸೈನಿಕರ ಬಲಿಯಾದ ಬಳಿಕವೂ ನಾವು ಶಾಂತವಾಗಿರಬೇಕಿತ್ತೇ? ಇಂತಹ ಹೀನ ಕೃತ್ಯಗಳಿಗೆ ನಾವು ಕಠಿಣವಾಗಿಯೇ ಉತ್ತರಿಸಬೇಕಿತ್ತು. 
ಇದು ಮೋದಿ, ಯಾರಿಗೆ ಯಾವ ಭಾಷೆಯಲ್ಲಿ ಉತ್ತರಿಸಬೇಕು ಎಂದು ನನಗೆ ಚೆನ್ನಾಗಿ ತಿಳಿದಿದೆ. ಇಡೀ ಸರ್ಜಿಕಲ್ ಸ್ಟ್ರೈಕ್ ಪೂರ್ವ ನಿಗದಿತ ಯೋಜನೆಯಾಗಿತ್ತು. ಅಲ್ಲದೆ ರಹಸ್ಯ ಯೋಜನೆ ಕೂಡ ಆಗಿತ್ತು. ಭಾರತೀಯ ಸೇನೆ ತಾನೇ ಖುದ್ಧು ಸುದ್ದಿಗೋಷ್ಠಿ ಕರೆದು ಮಾಹಿತಿ ನೀಡುವವರೆಗೂ ಈ ಮಾಹಿತಿ ಯಾರಿಗೂ ತಿಳಿದಿರಲಿಲ್ಲ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಬೀಡು ಬಿಟ್ಟಿದ್ದ ಉಗ್ರರ ಮೇಲೆ ಸೇನೆ ದಾಳಿ ನಡೆಸಿತ್ತು. ಈ ವೇಳೆ ನೂರಾರು ಉಗ್ರರು ಹತರಾಗಿದ್ದರು. ಶೇ.100 ಕಾರ್ಯಾಚರಣೆ ಯಶಸ್ವಿಯಾಗಿತ್ತು.
ನಮ್ಮ ಸೈನಿಕರು ಪೂರ್ವ ಯೋಜನೆಯಂತೆ ಯಶಸ್ವಿಯಾಗಿ ಕಾರ್ಯಾಚರಣೆ ಪೂರ್ಣಗೊಳಿಸಿ, ಸೂರ್ಯೋದಯದ ಒಳಗೆ ಸುರಕ್ಷಿತರಾಗಿ ವಾಪಸ್ ಆಗಿದ್ದರು. ಕಾರ್ಯಾಚರಣೆ ಬಳಿಕ ಪಾಕಿಸ್ತಾನ ಸರ್ಕಾರಕ್ಕೆ ಕಾರ್ಯಾಚರಣೆ ಕುರಿತು ಮಾಹಿತಿ ನೀಡುವಂತೆ ನಾನು ಸೇನಾಧಿಕಾರಿಗಳಿಗೆ ಸೂಚನೆ ನೀಡಿದ್ದೆ. ಆ ಬಳಿಕವೇ ನಾವು ಮಾಧ್ಯಮಗಳಿಗೆ ತಿಳಿಸಿದ್ದು. ಭಯೋತ್ಪಾದಕರ ಉತ್ಪಾದಕರಿಗೆ ಭಾರತ ಬದಲಾಗಿದೆ ಎಂಬ ಸಂದೇಶ ರವಾನೆ ಮಾಡಬೇಕಿತ್ತು. ಹೀಗಾಗಿ ಸೆಪ್ಟೆಂಬರ್ 28 ಮತ್ತು 29ರ ನಡುವಿನ ರಾತ್ರಿ ಕಾರ್ಯಾಚರಣೆ ನಡೆಸಲಾಯಿತು. ಕಾರ್ಯಾಚರಣೆ ಬಳಿಕ ಬೆಳಗ್ಗೆ 11ರವರೆಗೂ ನಾವು ಪಾಕಿಸ್ತಾನಕ್ಕೆ ಈ ವಿಚಾರ ತಿಳಿಸಲು ಪ್ರಯತ್ನಿಸಿದೆವು. ಆದರೆ ಅವರು, ನಮ್ಮ ಕರೆ ಸ್ವೀಕರಿಸಲು ಹೆದರಿದ್ದರು. ಹೀಗಾಗಿ ಪಾಕಿಸ್ತಾನಿ ಸೇನೆಗೆ ವಿಚಾರ ತಿಳಿಸುವಂತೆ ಅಧಿಕಾರಿಗಳಿಗೆ ಹೇಳಿದೆ. ಮಧ್ಯಾಹ್ನದ ಬಳಿಕ ಅವರು ನಮ್ಮ ಕರೆ ಸ್ವೀಕರಿಸಿದರು ಎಂದು ಪ್ರಧಾನಿ ಮೋದಿ ಹೇಳಿದರು.
ಇದೇ ವೇಳೆ ಪಾಕಿಸ್ತಾನದ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ಭಯೋತ್ಪಾದನೆಯನ್ನು ಒಂದು ಉದ್ಯಮವಾಗಿ ಬೆಳೆಸುತ್ತಿರುವ ಮತ್ತು ಭಾರತೀಯರನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವವರನ್ನು ಭಾರತ ಎಂದಿಗೂ ಸಹಿಸುವುದಿಲ್ಲ. ಅವರಿಗೆ ಎದುರಿಗೆ ಬಂದು ಯುದ್ಧ ಮಾಡುವ ತಾಕತ್ತಿಲ್ಲ, ಹೀಗಾಗಿ ಉಗ್ರ ದಾಳಿ ಮೂಲಕ ಬೆನ್ನಿಗೆ ಚೂರಿ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಕಾರ್ಯಕ್ರಮದಲ್ಲಿ ಹಲವು ವಿಚಾರಗಳ ಕುರಿತು ಪ್ರಧಾನಿ ಮೋದಿ ಮಾತನಾಡಿದ್ದು, ನೋಟು ನಿಷೇಧ, ತಮ್ಮ ರಾಜಕೀಯ ಮತ್ತು ವೈಯುಕ್ತಿಕ ಜೀವನ, ಭಾರತೀಯ ರೈಲ್ವೇ, ಮಹಿಳೆಯರ ಸುರಕ್ಷತೆ, ಕೇಂದ್ರದ ಆಯುಷ್ಮಾನ್ ಭಾರತ್ ಯೋಜನೆ, ಭಗವಾನ್ ಶ್ರೀ ಬಸವೇಶ್ವರ, ಅಭಿವೃದ್ಧಿ, ಉದ್ಯೋಗ ಸೃಷ್ಟಿ ಸೇರಿದಂತೆ ಹಲವು ವಿಚಾರಗಳ ಕುರಿತು ತೂರಿಬಂದ ಪ್ರಶ್ನೆಗಳಿಗೆ ಉತ್ತರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

ಮತ ಬೇಟೆ ತಡೆಯಲು 'ಕೈ' ಕಲಿಗಳ ಮಾಸ್ಟರ್ ಪ್ಲ್ಯಾನ್: ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ, ಬೂತ್ ಮಟ್ಟದಲ್ಲಿ ಸಮರಕ್ಕೆ ಸಜ್ಜು..!

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ

ಕೋಟಿ ಕೋಟಿ ಲೂಟಿ: ಅರಣ್ಯ ಇಲಾಖೆ ಮಾಜಿ ಅಧಿಕಾರಿಗೆ ಕೋರ್ಟ್ ಶಾಕ್; ಬರೋಬ್ಬರಿ 1.38 ಕೋಟಿ ದಂಡ, 3 ವರ್ಷ ಜೈಲು ಶಿಕ್ಷೆ..!