ವಿದೇಶ

ಉಗ್ರ ಪಟ್ಟಿಗೆ ಮಸೂದ್ ಸೇರ್ಪಡೆಗೆ ಚೀನಾ ಅಡ್ಡಿ: ಸಂಯಮದಿಂದ ಪ್ರಯತ್ನ ಮುಂದುವರೆಸುತ್ತೇವೆ ಎಂದ ಭಾರತ

Srinivasamurthy VN
ನವದೆಹಲಿ: ಜೈಶ್ ಇ ಮೊಹಮದ್ ಉಗ್ರ ಸಂಘಟನೆ ಮುಖ್ಯಸ್ಥ ಹಾಗೂ ಪುಲ್ವಾಮ ಉಗ್ರ ದಾಳಿಯ ರೂವಾರಿ ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರಿಸಲು ಚೀನಾ ಅಡ್ಡಿ ಮುಂದುವರೆದಿರುವಂತೆಯೇ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾರತ, ತಮ್ಮ ಪ್ರಯತ್ನ ಮುಂದುವರೆಯಲಿದ್ದ, ಸಂಯಮದಿಂದ ಕಾಯುತ್ತೇವೆ ಎಂದು ಹೇಳಿದೆ.
ಇದೇ ವೇಳೆ ಉಗ್ರ ಸಂಘಟನೆಗಳ ವಿರುದ್ಧ ಪಾಕಿಸ್ತಾನ ಸರ್ಕಾರ ಕೈಗೊಂಡಿರುವ ಕ್ರಮಗಳು ಕೇವಲ ಕಣ್ಣೊರೆಸುವ ತಂತ್ರ ಎಂದು ಟೀಕಿಸಿರುವ ಭಾರತ, ಪಾಕಿಸ್ತಾನ ಸರ್ಕಾರ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದೆ. ಅಂತೆಯೇ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರಿಸುವ ತನ್ನ ಪ್ರಯತ್ನ ಮುಂದುವರೆಯಲಿದ್ದು, ಈ ಸಂಬಂಧ ಅಗತ್ಯ ರಾಜತಾಂತ್ರಿಕ ಯೋಜನೆ ರೂಪಿಸುವುದಾಗಿ ಹೇಳಿದೆ. ಅಂತೆಯೇ ಈ ಸಂಬಂಧ ಯಾವುದೇ ಆತುರದ ನಿರ್ಧಾರ ಕೈಗೊಳ್ಳದೇ ಸಂಯಮದಿಂದ ಕಾಯುತ್ತೇವೆ ಎಂದೂ ಭಾರತ ಹೇಳಿದೆ.
ಚೀನಾ ಪಾಕಿಸ್ತಾನದೊಂದಿಗೆ ಕೆಲ ವಿಚಾರಗಳ ಕುರಿತು ಸ್ಪಷ್ಟನೆ ಪಡೆಯಬೇಕು ಎಂದು ಬಯಸಿದೆ. ಬಹುಶಃ ಸ್ಪಷ್ಟನೆ ಸಿಕ್ಕ ಬಳಿಕ ಈ ಸಂಬಂಧ ಪರಿಣಾಮಕಾರಿ ನಿರ್ಧಾರ ಕೈಗೊಳ್ಳುವ ವಿಶ್ವಾಸ ತಮಗಿದೆ ಎಂದೂ ಭಾರತ ವಿಶ್ವಾಸ ವ್ಯಕ್ತಪಡಿಸಿದೆ.
ಕಳೆದ ಬುಧವಾರ ನಡೆದಿದ್ದ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರಿಸುವ ಭಾರತದ ಪ್ರಯತ್ನಕ್ಕೆ ಚೀನಾ ಮತ್ತೆ ಅಡ್ಡಗಾಲು ಹಾಕಿತ್ತು. ಈ ಸಂಬಂಧ ಚೀನಾ ನಡೆಯನ್ನು ಭಾರತ ಮಾತ್ರವಲ್ಲದೇ ಅಮೆರಿಕ, ಫ್ರಾನ್ಸ್, ಬ್ರಿಟನ್ ದೇಶಗಳೂ ವಿರೋಧಿಸಿದ್ದವು. 
SCROLL FOR NEXT