ಉಕ್ರೇನ್: ಉಕ್ರೇನ್ ನಲ್ಲಿ ಕೊರೋನಾ ವೈರಸ್ ನ 5 ತಳಿಗಳು ಸಕ್ರಿಯವಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಹೆಚ್ಒ) ಎಚ್ಚರಿಕೆ ನೀಡಿದೆ.
ಈ ದೇಶದ 9 ಪ್ರದೇಶಗಳಲ್ಲಿ 50 ಪರೀಕ್ಷೆ ಸ್ಯಾಂಪಲ್ ಗಳನ್ನು ಸಂಗ್ರಹಿಸಿ ಪ್ರಕರಣಗಳು ದೃಢಪಟ್ಟ ಹಿನ್ನೆಲೆಯಲ್ಲಿ ಡಬ್ಲ್ಯುಹೆಚ್ಒ ಈ ಮಾಹಿತಿಯನ್ನು ಬಹಿರಂಗಪಡಿಸಿದೆ.
ಉಕ್ರೇನ್ ನಲ್ಲಿ ಹರಡುತ್ತಿರುವ ವೈರಾಣು ಜಾಗತಿಕ ಜೆನೆಟಿಕ್ ಲೈನ್ ಬಿ ಗೆ ಸೇರಿದ್ದಾಗಿದ್ದು, ಚೀನಾ ಮೂಲವನ್ನು ಹೊಂದಿದೆ. ಇದರ ಮುಂದುವರೆದ ಭಾಗವಾಗಿ : B1; B1.1; B1.1.1; V1.5 ಹಾಗೂ V2 ಪ್ರಬೇಧಗಳು ಕಂಡುಬಂದಿವೆ.
ಚೀನಾದಲ್ಲಿ ಕಳೆದ ವರ್ಷ ಹರಡಿದ್ದ ಕೊರೋನಾ ವೈರಾಣು ಈಗಾಗಲೇ ಹಲವು ದೇಶಗಳಲ್ಲಿ ರೂಪಾಂತರಗೊಂಡಿದ್ದು, ಹೊಸ ಆತಂಕ ಸೃಷ್ಟಿಸಿದೆ. ದಕ್ಷಿಣ ಆಫ್ರಿಕಾ, ಬ್ರಿಟನ್ ಗಳಲ್ಲಿ ಪ್ರಮುಖವಾಗಿ ಈ ಹೊಸ ಸೋಂಕು ಕಂಡುಬಂದಿರುವ ಬೆನ್ನಲ್ಲೆ ಉಕ್ರೇನ್ ನಲ್ಲಿ ಹೊಸ ತಳಿಗಳು ಪತ್ತೆಯಾಗಿವೆ.