ವಿದೇಶ

ಕೊರೋನಾ ವೈರಸ್ ಗೆ ಚೀನಾ ಕಾರಣ; ಆರೋಪ ಅಲ್ಲಗಳೆದಿದ್ದ ಚೀನಾದಿಂದ ಶ್ವೇತಪತ್ರ ಬಿಡುಗಡೆ!

Srinivasamurthy VN

ಬೀಜಿಂಗ್: ವಿಶ್ವದ 213ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ ಕುರಿತಂತೆ ಚೀನಾ ವಿರುದ್ಧ ಜಾಗತಿಕವಾಗಿ ಕೇಳಿಬರುತ್ತಿರುವ ಆರೋಪಗಳಿಗೆ ಸಂಬಂಧಿಸಿದಂತೆ ತಿರುಗೇಟು ನೀಡಿರುವ ಚೀನಾ ಸರ್ಕಾರ ಇದೀಗ  ಶ್ವೇತಪತ್ರ ಬಿಡುಗಡೆ ಮಾಡಿದೆ.

ಕೊರೊನಾ ವೈರಸ್ ಪ್ರಕರಣಗಳ ಮಾಹಿತಿ ಮತ್ತು ಅಂಕಿ-ಅಂಶಗಳ ಕುರಿತು ವರದಿ ಮಾಡುವಲ್ಲಿ ವಿಳಂಬ ನೀತಿ ಅನುಸರಿಸಿದೆ ಎನ್ನುವ ಜಾಗತಿಕ ಆರೋಪಕ್ಕೆ ಪ್ರತಿಯಾಗಿ ಚೀನಾ ಭಾನುವಾರ ಶ್ವೇತಪತ್ರ ಪ್ರಕಟಿಸಿದ್ದು, ಡಿಸೆಂಬರ್ 27ರಂದು ವುಹಾನ್‌ನಲ್ಲಿ ಮೊದಲ ಬಾರಿಗೆ ನ್ಯುಮೋನಿಯಾ ವೈರಸ್ ಅನ್ನು ಗಮನಿಸಲಾಯಿತು ಮತ್ತು ಮನುಷ್ಯನಿಂದ ಮನುಷ್ಯನಿಗೆ ಇದು ಹರಡಬಲ್ಲದು ಎಂಬುದು ಜನವರಿ 19ರಂದು ತಿಳಿದುಬಂದಿತು. ಇದನ್ನು ನಿಗ್ರಹಿಸಲು ತ್ವರಿತ ಕ್ರಮಗಳನ್ನು ಕೈಗೊಳ್ಳಲಾಯಿತು ಎಂದು ಚೀನಾ ತನ್ನ ಶ್ವೇತಪತ್ರದಲ್ಲಿ ಆಲವತ್ತುಕೊಂಡಿದೆ. 

ಶ್ವೇತಪತ್ರದಲ್ಲಿ ಚೀನಾ ಸರ್ಕಾರ, 'ವುಹಾನ್‌ನಲ್ಲಿ ಡಿಸೆಂಬರ್ 27ರಂದು ಮೊದಲ ಬಾರಿಗೆ ಕೋವಿಡ್‌–19 ಪ್ರಕರಣ ಪತ್ತೆಯಾದ ಬಳಿಕ, ಸ್ಥಳೀಯ ಸರ್ಕಾರವು ರೋಗಿಗಳ ಸ್ಥಿತಿಗತಿ-ಪ್ರಕರಣಗಳ ವಿಶ್ಲೇಷಣೆ, ಸಾಂಕ್ರಾಮಿಕ ರೋಗದ ಪತ್ತೆ ಹಚ್ಚುವಿಕೆ ಮತ್ತು ಪ್ರಾಥಮಿಕ ಪ್ರಯೋಗಾಲಯ ಪರೀಕ್ಷೆಗಳ ಫಲಿತಾಂಶದ ಅಧ್ಯಯನ ನಡೆಸಲು ತಜ್ಞರ ತಂಡವನ್ನು ನಿಯೋಜಿಸಿತ್ತು. ಅಂತಿಮವಾಗಿ ಇದು ವೈರಲ್ ನ್ಯೂಮೊನಿಯಾ ಎನ್ನುವ ನಿರ್ಣಯಕ್ಕೆ ತಂಡ ಬಂದಿತ್ತು.

ರಾಷ್ಟ್ರೀಯ ಆರೋಗ್ಯ ಆಯೋಗ (ಎನ್‌ಎಚ್‌ಸಿ) ಆಯೋಜಿಸಿದ್ದ ಉನ್ನತ ಮಟ್ಟದ ತಜ್ಞರು ಮತ್ತು ಸಂಶೋಧಕರ ತಂಡವು, ಈ ವೈರಸ್ ಮನುಷ್ಯರಿಂದ ಮನುಷ್ಯರಿಗೆ ಹರಡಬಲ್ಲದು ಎಂಬುದನ್ನು ಮೊದಲ ಬಾರಿಗೆ ಜನವರಿ 19ರಂದು ದೃಢಪಡಿಸಿತ್ತು. ವುಹಾನ್‌ನಲ್ಲಿ ಸಮುದಾಯ ಮಟ್ಟದಲ್ಲಿ ವೈರಸ್ ಹರಡುವಿಕೆ ಮತ್ತು ಪ್ರಕರಣಗಳ ಸಂಖ್ಯೆ ಹೆಚ್ಚಾದ ಬಳಿಕ, ಚೀನಾದ ಇತರ ಪ್ರದೇಶಗಳಲ್ಲೂ ದೃಢಪಡಿಸಿದ ಪ್ರಕರಣಗಳು ವರದಿಯಾದವು. ಆಗ ವೈರಸ್‌ ನಗರಗಳಲ್ಲಿ ವಾಹಕಗಳಾಗಿವೆ ಎನ್ನುವ ಅಂಶ ಪತ್ತೆಯಾಯಿತು. ಆ ನಂತರ ಸಾಂಕ್ರಾಮಿಕ ರೋಗ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕುರಿತು ರಾಷ್ಟ್ರವ್ಯಾಪಿ ಕಾರ್ಯಕ್ರಮವನ್ನು ಆರಂಭಿಸಲಾಯಿತು ಎಂದು ಶ್ವೇತ ಪತ್ರದಲ್ಲಿ ಚೀನಾ ಹೇಳಿದೆ.

SCROLL FOR NEXT