ಕಾಬೂಲ್/ ದೆಹಲಿ: ಯುದ್ಧಗ್ರಸ್ತ ದೇಶವಾಗಿರುವ ಆಪ್ಘಾನಿಸ್ತಾನದಿಂದ ಕೆಲವು ಮಂದಿ ಆ.15 ರಂದು ರಾತ್ರಿ ದೆಹಲಿಗೆ ಬಂದಿದ್ದು, ಆಪ್ಘಾನಿಸ್ತಾನದಲ್ಲಿರುವ ತಮ್ಮ ಕುಟುಂಬದ ಸದಸ್ಯರ ಭದ್ರತೆ ಹಾಗೂ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಆಫ್ಘಾನಿಸ್ತಾನದಿಂದ 129 ಪ್ರಯಾಣಿಕರನ್ನು ಹೊತ್ತು ಏರ್ ಇಂಡಿಯಾ ವಿಮಾನ ಭಾರತಕ್ಕೆ ಆಗಮಿಸಿತ್ತು. ದೆಹಲಿಗೆ ಆಗಮಿಸಿದ ಬೆನ್ನಲ್ಲೇ ಕಾಬೂಲ್ ನ ಮಹಿಳೆಯೊಬ್ಬರು ಈ ಬಗ್ಗೆ ಮಾತನಾಡಿದ್ದು, "ಜಾಗತಿಕ ಸಮುದಾಯ ಆಫ್ಘಾನಿಸ್ತಾನವನ್ನು ಕೈಬಿಟ್ಟಿದೆ ಎಂಬುದನ್ನು ನಂಬುವುದಕ್ಕೆ ಸಾಧ್ಯವಾಗುತ್ತಿಲ್ಲ, ನಮ್ಮ ಸ್ನೇಹಿತರು ಅಲ್ಲಿ ಕೊಲ್ಲಲ್ಪಡುತ್ತಾರೆ. ತಾಲೀಬಾನಿಗಳು ನಮ್ಮನ್ನು ಹತ್ಯೆ ಮಾಡುತ್ತಿದ್ದಾರೆ, ನಮ್ಮ ಮಹಿಳೆಯರಿಗೆ ಹಕ್ಕುಗಳು ಇರುವುದಿಲ್ಲ" ಎಂದು ಮಹಿಳೆ ಕಣ್ಣೀರು ಹಾಕಿದ್ದಾರೆ.
ಭಾರತದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳೂ ಭಾನುವಾರ ರಾತ್ರಿ ಭಾರತಕ್ಕೆ ಬಂದಿದ್ದಾರೆ. "ಆಫ್ಘಾನಿಸ್ತಾನ ತಾಲಿಬಾನ್ ವಶವಾಗುತ್ತಿದ್ದಂತೆಯೇ ಜನರು ಬ್ಯಾಂಕ್ ಗಳತ್ತ ಧಾವಿಸುತ್ತಿದ್ದರು. ಹಿಂಸಾಚಾರ ಕಣ್ಣಿಗೆ ಕಾಣದೇ ಇದ್ದರೂ, ಅಲ್ಲಿ ಹಿಂಸಾಚಾರ ಇಲ್ಲ ಎನ್ನುವಂತಿರಲಿಲ್ಲ. ನನ್ನ ಕುಟುಂಬ ಸದಸ್ಯರು ಆಪ್ಘಾನಿಸ್ತಾನದಲ್ಲೇ ಇದ್ದಾರೆ ಎನ್ನುತ್ತಾರೆ ಕಾಬೂಲ್ ನಿಂದ ದೆಹಲಿಗೆ ಬಂದಿರುವ, ಬೆಂಗಳೂರಿನಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿರುವ ಅಬ್ದುಲ್ಲಾ ಮಸೂದಿ.
ಸಾಮಾನ್ಯ ಪ್ರಜೆಗಳನ್ನು ಹೊರತುಪಡಿಸಿ ಆಫ್ಘಾನಿಸ್ತಾನದ ಹಲವು ರಾಜಕಾರಣಿಗಳು ಅಧಿಕಾರಿಗಳೂ ಸಹ ದೆಹಲಿಗೆ ಆಗಮಿಸಿದ್ದಾರೆ. ಆಫ್ಘಾನಿಸ್ತಾನದ ಹಲವು ಪ್ರದೇಶಗಳಲ್ಲಿ ಮೌನ ಆವರಿಸಿದೆ. ಸಚಿವರು ಸೇರಿದಂತೆ ಹಲವು ರಾಜಕಾರಣಿಗಳು ಕಾಬೂಲ್ ನ್ನು ತೊರೆದಿದ್ದಾರೆ. 200 ಮಂದಿ ದೆಹಲಿಗೆ ಬಂದಿದ್ದಾರೆ. "ಹೊಸ ತಾಲೀಬಾನ್ ಮಹಿಳೆಯರಿಗೆ ಕೆಲಸ ಮಾಡಲು ಅವಕಾಶ ನೀಡಲಿದೆ ಎಂದು ಭಾವಿಸುತ್ತೇನೆ" ಎಂದು ಆಪ್ಘಾನಿಸ್ತಾನದಿಂದ ದೆಹಲಿಗೆ ಬಂದಿರುವ ಆಫ್ಘನ್ ಅಧ್ಯಕ್ಷರ ಹಿರಿಯ ಸಲಹೆಗಾರ ರಿಜ್ವಾನುಲ್ಲಾ ಅಹ್ಮದ್ಝೈ ಹೇಳಿದ್ದಾರೆ. ಇನ್ನು ಆಫ್ಘಾನಿಸ್ತಾನದ ಸಂಸದ ಕಾದಿರ್ ಝಝೈ ಕೂಡಾ ಭಾರತಕ್ಕೆ ಆಗಮಿಸಿದ್ದು, "ತಾಲೀಬಾನ್ ಬೆಂಬಲಿಗರ ಪೈಕಿ ಪಾಕಿಸ್ತಾನವೂ ಇದೆ" ಎಂದು ಹೇಳಿದ್ದಾರೆ.