ವಿದೇಶ

ನೈಜೀರಿಯಾ ಸೇನೆ ಎಡವಟ್ಟು: ಗುರಿ ತಪ್ಪಿದ ಡ್ರೋನ್ ದಾಳಿ, 85 ಮಂದಿ ನಾಗರಿಕರ ಸಾವು

Srinivasamurthy VN

ಅಬುಜಾ: ವಾಯುವ್ಯ ನೈಜೀರಿಯಾದಲ್ಲಿ (Nigeria) ಸೇನೆಯ ಡ್ರೋನ್‌ ದಾಳಿ ಗುರಿ ತಪ್ಪಿ, 85 ಮಂದಿ ನಾಗರಿಕರು ದಾರುಣ ಸಾವಿಗೀಡಾಗಿದೆ.

ನೈಜೀರಿಯಾದ ಕಡುನಾ ರಾಜ್ಯದ ತುಡುನ್‌ ಬಿರಿ ಗ್ರಾಮದ ಬಳಿ ಭಯೋತ್ಪಾದಕರನ್ನು ಗುರಿಯಾಗಿಸಿ ದಾಳಿ ನಡೆಸಲಾಗಿತ್ತು. ಆದರೆ ಸೇನೆ ಹಾರಿಸಿದ್ದ ಡ್ರೋನ್ ಗುರಿ ತಪ್ಪಿದ್ದು, ನಾಗರಿಕರ ಮೇಲೆ ದಾಳಿ ಮಾಡಿದೆ. ನೈಜೀರಿಯಾದ ಸಂಘರ್ಷದ ವಲಯದಲ್ಲಿ ನಡೆದ ಮಾರಣಾಂತಿಕ ದಾಳಿ ಬಗ್ಗೆ ತನಿಖೆ ನಡೆಸಲು ದೇಶದ ಅಧ್ಯಕ್ಷರು ಆದೇಶ ಹೊರಡಿಸಿದ್ದಾರೆ.

ಮೂಲಗಳ ಪ್ರಕಾರ ದಾಳಿಯಲ್ಲಿ ಮಕ್ಕಳು, ಮಹಿಳೆಯರು ಮತ್ತು ವೃದ್ಧರು ಸೇರಿದಂತೆ 85 ಮಂದಿ ಮೃತಪಟ್ಟಿದ್ದರೆ, ಕನಿಷ್ಠ 66ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ರಾಷ್ಟ್ರೀಯ ತುರ್ತು ನಿರ್ವಹಣಾ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ. ದಾಳಿಯಲ್ಲಿ ಸಿಲುಕಿರುವ ಸಂತ್ರಸ್ತರಿಗಾಗಿ ಶೋಧಕಾರ್ಯ ನಡೆಯುತ್ತಿದೆ. ನೈಜೀರಿಯಾದ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ತೌರೀದ್ ಲಗ್ಬಾಜಾ ಅವರು ಮಂಗಳವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ. 

ಈ ವೇಳೆ ಮಾತನಾಡಿದ ಅವರು ಡ್ರೋನ್ ದಾಳಿಗೆ ಕ್ಷಮೆಯಾಚಿಸಿದ್ದು, ಈ ಕುರಿತು ತನಿಖೆ ನಡೆಸಲಾಗುತ್ತಿದೆ. ತಪ್ಪಾದ ಲೆಕ್ಕಾಚಾರದ ವೈಮಾನಿಕ ದಾಳಿಯ ಘಟನೆಗಳು ದೇಶದಲ್ಲಿ ಆತಂಕಕಾರಿ ಆಯಾಮವನ್ನು ಪಡೆದುಕೊಳ್ಳುತ್ತಿದೆ ಎಂದು ನೈಜೀರಿಯಾದ ಮಾಜಿ ಉಪಾಧ್ಯಕ್ಷ ಮತ್ತು ಈ ವರ್ಷದ ಚುನಾವಣೆಯಲ್ಲಿ ಪ್ರಮುಖ ವಿಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಅತಿಕು ಅಬುಬಕರ್ ಅಭಿಪ್ರಾಯಪಟ್ಟಿದ್ದಾರೆ.
 

SCROLL FOR NEXT