ವಿದೇಶ

ಇಸ್ರೇಲ್ ಗೆ ತೈಲ ರಫ್ತು ಸೇರಿದಂತೆ ಎಲ್ಲಾ ರೀತಿ ವ್ಯಾಪಾರ ನಿಲ್ಲಿಸಿ: ಮುಸ್ಲಿಂ ರಾಷ್ಟ್ರಗಳಿಗೆ ಇರಾನ್ ಆಗ್ರಹ

Lingaraj Badiger

ತೆಹ್ರಾನ್: ಹಮಾಸ್ ಉಗ್ರ ದಾಳಿಯ ನಂತರ ಗಾಜಾ ಮೇಲೆ ನಿರಂತರ ಬಾಂಬ್ ದಾಳಿ ನಡೆಸುತ್ತಿರುವ ಇಸ್ರೇಲ್ ದೇಶಕ್ಕೆ ತೈಲ ರಫ್ತು ಸೇರಿದಂತೆ ಎಲ್ಲಾ ರೀತಿಯ ವ್ಯಾಪಾರವನ್ನು ನಿಲ್ಲಿಸುವಂತೆ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು ಬುಧವಾರ ಮುಸ್ಲಿಂ ರಾಷ್ಟ್ರಗಳನ್ನು ಒತ್ತಾಯಿಸಿದ್ದಾರೆ.

ಇಸ್ರೇಲಿ ಅಧಿಕಾರಿಗಳ ಪ್ರಕಾರ, ಅಕ್ಟೋಬರ್ 7 ರಂದು ಹಮಾಸ್ ಬಂದೂಕುಧಾರಿಗಳು ಗಡಿಯುದ್ದಕ್ಕೂ ದಾಳಿ ಮಾಡಿ 1,400 ಕ್ಕೂ ಹೆಚ್ಚು ಜನರನ್ನು ಹತ್ಯೆ ಮಾಡಿದ ನಂತರ ಇಸ್ರೇಲ್, ಗಾಜಾ ಪಟ್ಟಿ ಮೇಲೆ ವೈಮಾನಿಕ ದಾಳಿ ನಡೆಸುತ್ತಿದೆ.

ಹಮಾಸ್ ಆರೋಗ್ಯ ಸಚಿವಾಲಯದ ಪ್ರಕಾರ, ಇಸ್ರೇಲ್ ಬಾಂಬ್ ದಾಳಿಯಲ್ಲಿ 8,500 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಅವರಲ್ಲಿ ಮೂರನೇ ಎರಡರಷ್ಟು ಮಹಿಳೆಯರು ಮತ್ತು ಮಕ್ಕಳಿದ್ದಾರೆ.

ಇಸ್ರೇಲ್ ದೇಶವು ಗಾಜಾ ಮೇಲೆ ನಿರಂತರ ಬಾಂಬ್ ದಾಳಿ ನಡೆಸುತ್ತಿದೆ. ಇದು ಈ ಕೂಡಲೇ ನಿಲ್ಲಬೇಕು. ಯಹೂದಿ ರಾಷ್ಟ್ರಕ್ಕೆ ಮುಸ್ಲಿಂ ದೇಶಗಳಿಂದ ರಫ್ತಾಗುತ್ತಿರುವ ಪೆಟ್ರೋಲಿಯಂ ತೈಲ ಉತ್ಪನ್ನಗಳು ಹಾಗೂ ಆಹಾರ ಉತ್ಪನ್ನಗಳ ಸರಬರಾಜು ನಿಲ್ಲಬೇಕು ಎಂದು ಅಯತೊಲ್ಲಾ ಅಲಿ ಖಮೇನಿ ಆಗ್ರಹಿಸಿದ್ದಾರೆ.

"ಇಸ್ಲಾಮಿಕ್ ಸರ್ಕಾರಗಳು ಅಪರಾಧಗಳನ್ನು ತ್ವರಿತವಾಗಿ ಕೊನೆಗೊಳಿಸಲು ಒತ್ತಾಯಿಸಬೇಕು" ಎಂದಿರುವ ಖಮೇನಿ, ಮುಸ್ಲಿಂ ರಾಷ್ಟ್ರಗಳು, ಇಸ್ರೇಲ್ ಗೆ ಆರ್ಥಿಕವಾಗಿ ಸಹಕರಿಸಬಾರದು. ತೈಲ ಮತ್ತು ಆಹಾರ ರಫ್ತಿನ ಮೇಲೆ ನಿರ್ಬಂಧ ವಿಧಿಸಬೇಕು" ಎಂದು ವಿಶ್ವದ ಮುಸ್ಲಿಂ ರಾಷ್ಟ್ರಗಳಿಗೆ ಕರೆ ನೀಡಿದ್ದಾರೆ.

SCROLL FOR NEXT