ವಿದೇಶ

ಕಲಾದನ್ ಯೋಜನೆಯನ್ನು ಪೂರ್ಣಗೊಳಿಸಬಹುದು ಭಾರತದೊಂದಿಗೆ ನಮಗೆ ಯಾವುದೇ ಸಮಸ್ಯೆ ಇಲ್ಲ: ಅರಾಕನ್ ಸೇನೆ ವಕ್ತಾರ

Srinivas Rao BV

ನವದೆಹಲಿ: ಮ್ಯಾನ್ಮಾರ್ ನಲ್ಲಿ ಸೇನಾ ಸರ್ವಾಧಿಕಾರವನ್ನು ಕೊನೆಗಾಣಿಸುವ ಉದ್ದೇಶದಿಂದ ಹೋರಾಡುತ್ತಿರುವ ಅರಾಕನ್ ಸೇನೆ ಭಾರತದೊಂದಿಗೆ ನಮಗೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದೆ.

ಭಾರತದ ಸುದ್ದಿ ಸಂಸ್ಥೆಯೊಂದಕ್ಕೆ ಇದೇ ಮೊದಲ ಬಾರಿಗೆ ಸಂದರ್ಶನ ನೀಡಿರುವ ಯುನೈಟೆಡ್ ಲೀಗ್ ಆಫ್ ಅರಾಕನ್ ಸೇನೆಯ ವಕ್ತಾರರು, ಬಂಗಾಳ ಕೊಲ್ಲಿಯಿಂದ ಮ್ಯಾನ್ಮಾರ್ ಗೆ ಸಂಪರ್ಕ ಕಲ್ಪಿಸುವ ಭಾರತದ ಮಹತ್ವಾಕಾಂಕ್ಷಿ ಯೋಜನೆಯಾದ ಕಲಾದನ್ ಮಲ್ಟಿಮೋಡಲ್ ಟ್ರಾನ್ಸಿಟ್ ಟ್ರಾನ್ಸ್‌ಪೋರ್ಟ್ ಪ್ರಾಜೆಕ್ಟ್ (KMMTTP) ಬಗ್ಗೆ ಮಾತನಾಡಿದ್ದು, ಈ ಯೋಜನೆಗೆ ಯಾವುದೇ ತಕರಾರಿಲ್ಲ, ಈ ಯೋಜನೆಗೆ ಯಾವುದೇ ಹಾನಿ ಮಾಡುವುದಿಲ್ಲ ಹಾಗೂ ಅದು ಸುರಕ್ಷಿತವಾಗಿರಲಿದೆ, ನಮಗೆ ಭಾರತದೊಂದಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ.

ಒಮ್ಮೆ ಮ್ಯಾನ್ಮಾರ್ ನಲ್ಲಿ ಸೇನಾ ಸರ್ವಾಧಿಕಾರ ಅಂತ್ಯಗೊಂಡ ಬಳಿಕ ಪ್ರತಿ ಪ್ರಾಂತ್ಯದಲ್ಲಿರುವ ಜನಾಂಗೀಯ ಗುಂಪುಗಳು ತಮ್ಮ ಭವಿಷ್ಯ ಹೇಗಿರಬೇಕೆಂಬುದನ್ನು ಅವರೇ ನಿರ್ಧರಿಸುತ್ತಾರೆ ಎಂದು ವಕ್ತಾರರು ಮಾಹಿತಿ ಹಂಚಿಕೊಂಡಿದ್ದಾರೆ.

ನಾವು ಕಲಾದನ್ ಹಾಗೂ ಲೆಮ್ರೊ ನದಿ ಮುಖಜ ಭೂಮಿಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಬಳಿಕ ಕೆಎಂಎಂಟಿಟಿಪಿ ಯೋಜನೆಯನ್ನು ಅತ್ಯಂತ ಶೀಘ್ರವಾಗಿ ಪೂರ್ಣಗೊಳಿಸಬಹುದು, ನಮಗೆ ಭಾರತದೊಂದಿಗೆ ಯಾವುದೇ ಸಮಸ್ಯೆ ಇಲ್ಲ ಪರಸ್ಪರರ ಹಿತಾಸಕ್ತಿಗಾಗಿ ಸಹಕರಿಸಲು ನಾವು ಸಿದ್ಧರಿದ್ದೇವೆ ಎಂದು ಅರಾಕನ್ ಸೇನೆ ವಕ್ತಾರರು ಸಂದರ್ಶನದಲ್ಲಿ ತಿಳಿಸಿದ್ದಾರೆ.

KMMTP ಭಾರತದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿದೆ. ಇದು ಬಂಗಾಳ ಕೊಲ್ಲಿಯ ಮೂಲಕ ದೇಶವನ್ನು ಮ್ಯಾನ್ಮಾರ್‌ನೊಂದಿಗೆ ಸಂಪರ್ಕಿಸುತ್ತದೆ.

109 ಕಿಮೀ ರಸ್ತೆ (ಮ್ಯಾನ್ಮಾರ್‌ನ ಪಲೇಟ್ವಾದಿಂದ ಮಿಜೋರಾಂನ ಜೊರಿನ್‌ಪುಯಿ ನಡುವೆ) ಹೊಂದಿರುವ ಈ ಯೋಜನೆಯನ್ನು ಆರಂಭದಲ್ಲಿ 2014 ರಲ್ಲಿ ಪೂರ್ಣಗೊಳಿಸುವ ನಿರೀಕ್ಷೆಯಿತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ. ಇತ್ತೀಚಿನ ಗಡುವು ಡಿಸೆಂಬರ್ 2023 ಆಗಿತ್ತಾದರೂ ಮ್ಯಾನ್ಮಾರ್‌ನಲ್ಲಿನ ರಾಜಕೀಯ ಅಸ್ಥಿರತೆಯು ಈ ಯೋಜನೆಗೆ ತೊಡಕಾಗಿ ಪರಿಣಮಿಸಿದೆ.

SCROLL FOR NEXT