ನ್ಯೂಯಾರ್ಕ್: ಅಮೇರಿಕಾ ಅಧ್ಯಕ್ಷೀಯ ಚುನಾವಣೆಯ ಕಾವು ಜೋರಾಗುತ್ತಿದ್ದು, ರಿಪಬ್ಲಿಕನ್ ಅಭ್ಯರ್ಥಿ, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸಂಭಾವ್ಯ ಪ್ರತಿಸ್ಪರ್ಧಿ ಕಮಲಾ ಹ್ಯಾರಿಸ್ ಜೊತೆ ಚರ್ಚೆ ಅಥವಾ ಸಂವಾದಕ್ಕೆ ನಿರಾಕರಿಸಿದ್ದಾರೆ.
ಅಮೇರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭ್ಯರ್ಥಿಗಳ ನಡುವಿನ ಚರ್ಚೆ ಕೇಂದ್ರಬಿಂದುವಾಗಿರಲಿದೆ. ತಮ್ಮ ನಡೆಯನ್ನು ಸಮರ್ಥಿಸಿಕೊಂಡಿರುವ ಡೊನಾಲ್ಡ್ ಟ್ರಂಪ್, ಡೆಮಾಕ್ರಾಟ್ ಗಳು ತಮ್ಮ ಅಧಿಕೃತ ಅಭ್ಯರ್ಥಿ ಬಗ್ಗೆ ನಿರ್ಧಾರ ಕೈಗೊಳ್ಳುವವರೆಗೂ ತಾವು ಕಮಲಾ ಹ್ಯಾರಿಸ್ ಜೊತೆ ಚರ್ಚೆ ನಡೆಸುವುದಿಲ್ಲ ಎಂದು ಹೇಳಿದ್ದಾರೆ.
ಆದರೆ ಇದಕ್ಕೆ ವ್ಯತಿರಿಕ್ತವಾಗಿ ಹಾಲಿ ಉಪಾಧ್ಯಕ್ಷ್ಯೆ ಕಮಲಾ ಹ್ಯಾರಿಸ್ ಮಾತ್ರ ತಾವು ಡೊನಾಲ್ಡ್ ಟ್ರಂಪ್ ಜೊತೆ ಚರ್ಚೆಗೆ ಸಿದ್ಧವಿರುವುದಾಗಿ ತಿಳಿಸಿದ್ದಾರೆ. ಚರ್ಚೆಯ ಬಗ್ಗೆ ನನ್ನನ್ನು ನೀವು ಕೇಳುತ್ತಿದ್ದಿರಿ, ನನೌ ಚರ್ಚೆಗೆ ಸಿದ್ಧ, ಈ ಹಿಂದೆ ನಿಗದಿಯಾಗಿದ್ದಂತೆ ಸೆ.10 ರಂದು ಚರ್ಚೆ ನಡೆಸುವುದಕ್ಕೆ ನಾನು ಸಿದ್ಧಳಿದ್ದೇನೆ ಎಂದು ಕಮಲಾ ಹ್ಯಾರಿಸ್ ಜಾಯಿಂಟ್ ಬೇಸ್ ಆಂಡ್ರ್ಯೂಸ್ ನಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
"ಅವರು (ಟ್ರಂಪ್) ಅದನ್ನು ಹಿಂದೆ ಚರ್ಚೆಗೆ ಒಪ್ಪಿಕೊಂಡಿದ್ದರು. ಈಗ ಇಲ್ಲಿ ಅವರು ಹಿಮ್ಮೆಟ್ಟುತ್ತಿದ್ದಾರೆ ಮತ್ತು ನಾನು ಸಿದ್ಧಳಿದ್ದೇನೆ ಮತ್ತು ಮತದಾರರು ಈ ಚುನಾವಣೆಯ ಅಭ್ಯರ್ಥಿಗಳ ಚರ್ಚೆಯನ್ನು ವೇದಿಕೆಯಲ್ಲಿ ನೋಡಲು ಅರ್ಹರು ಎಂದು ನಾನು ಭಾವಿಸುತ್ತೇನೆ. ಹಾಗಾಗಿ ನಾನು ಚರ್ಚೆಗೆ ಹೋಗಲು ಸಿದ್ಧಳಿದ್ದೇನೆ ಎಂದು "ಹ್ಯಾರಿಸ್ ಹೇಳಿದ್ದಾರೆ.
ಈ ತಿಂಗಳು ಮಿಲ್ವಾಕಿಯಲ್ಲಿ ನಡೆದ ಸಮಾವೇಶದಲ್ಲಿ ಟ್ರಂಪ್ ಅವರನ್ನು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಚುನಾವಣೆ ಅಭ್ಯರ್ಥಿ ಎಂದು ಘೋಷಿಸಲಾಯಿತು, ಆಗಸ್ಟ್‌ನಲ್ಲಿ ಚಿಕಾಗೋದಲ್ಲಿ ನಡೆಯಲಿರುವ ಪಕ್ಷದ ಸಮಾವೇಶದಲ್ಲಿ ಕಮಲಾ ಹ್ಯಾರಿಸ್ ನ್ನು ಡೆಮಾಕ್ರಾಟ್ ಪಕ್ಷದ ಅಭ್ಯರ್ಥಿಯನ್ನಾಗಿ ಘೋಷಿಸಲು ಸಿದ್ಧತೆ ನಡೆದಿದೆ.