ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟೆಸ್ಲಾ ಸಿಇಒ ಎಲೊನ್ ಮಸ್ಕ್ ವಿರುದ್ಧ ಮತ್ತೊಮ್ಮೆ ಹರಿಹಾಯ್ದಿದ್ದಾರೆ. ಸರ್ಕಾರಿ ಸಬ್ಸಿಡಿಗಳಿಲ್ಲದಿದ್ದರೆ ಟೆಸ್ಲಾ ಸಿಇಒ ಎಲೊನ್ ಮಸ್ಕ್ ಅವರ ಉದ್ಯಮ ಉಳಿಯಲು ಸಾಧ್ಯವಿಲ್ಲ. ಸಬ್ಸಿಡಿಗಳನ್ನು ನೀಡದಿದ್ದರೆ ಮಸ್ಕ್ ಬಹುಶಃ ತಮ್ಮ ಉದ್ಯಮವನ್ನು ಮುಚ್ಚಿ ದಕ್ಷಿಣ ಆಫ್ರಿಕಾಕ್ಕೆ ಮನೆಗೆ ಹೋಗಬೇಕಾಗಿ ಬರಬಹುದು ಎಂದು ಹೇಳಿದ್ದಾರೆ.
ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ತಮ್ಮನ್ನು ಅನುಮೋದಿಸುವ ಮೊದಲೇ ಎಲೆಕ್ಟ್ರಿಕ್ ವಾಹನದ ಬಗ್ಗೆ ತಾನು ಹೊಂದಿದ್ದ ವಿರೋಧ ಬಗ್ಗೆ ಮಸ್ಕ್ ಗೆ ಅರಿವಿತ್ತು. ಎಲೆಕ್ಟ್ರಿಕ್ ವಾಹನ ಒಳ್ಳೆಯದು, ಹಾಗೆಂದು ಪ್ರತಿಯೊಬ್ಬರೂ ಅದನ್ನು ಖರೀದಿಸಬೇಕೆಂದು ಒತ್ತಾಯಿಸಬಾರದು, ಮಸ್ಕ್ ಅವರಿಗೆ ನೀಡಿದ್ದ ಸಬ್ಸಿಡಿ ಬಗ್ಗೆ ಪರಿಶೀಲಿಸುವಂತೆ ಸರ್ಕಾರದ ದಕ್ಷತೆ ಇಲಾಖೆಯನ್ನು ಅವರು ಕೇಳಿಕೊಂಡರು.
ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ಟ್ರೂತ್ ಸೋಶಿಯಲ್‌ನಲ್ಲಿ ಹಂಚಿಕೊಂಡ ಹೇಳಿಕೆಯಲ್ಲಿ ಟ್ರಂಪ್, ಎಲೊನ್ ಮಸ್ಕ್ ಅವರು ಅಧ್ಯಕ್ಷ ಸ್ಥಾನಕ್ಕೆ ನನ್ನನ್ನು ಬಲವಾಗಿ ಬೆಂಬಲಿಸುವ ಮೊದಲೇ, ನಾನು ಇವಿ ಮ್ಯಾಂಡೇಟ್ ನ್ನು ವಿರೋಧಿಸುತ್ತೇನೆ ಎಂದು ಅವರಿಗೆ ತಿಳಿದಿತ್ತು.
ಅದು ನನ್ನ ಅಭಿಯಾನದ ಭಾಗವಾಗಿತ್ತು. ಎಲೆಕ್ಟ್ರಿಕ್ ಕಾರುಗಳು ಪ್ರತಿಯೊಬ್ಬರೂ ಹೊಂದಬೇಕೆಂದು ಬಲವಂತ ಮಾಡಬಾರದು. ಹಿಂದೆ ಅವರು ಎಲ್ಲರಿಗಿಂತ ಹೆಚ್ಚು ಸಬ್ಸಿಡಿ ಪಡೆದಿರಬಹುದು. ಆದರೆ ಇನ್ನು ಮುಂದೆ ಸರ್ಕಾರದಿಂದ ಸಬ್ಸಿಡಿ ಸಿಗದಿದ್ದರೆ ಬಹುಶಃ ಉದ್ಯಮ ಮುಚ್ಚಿ ದಕ್ಷಿಣ ಆಫ್ರಿಕಾಕ್ಕೆ ಹಿಂತಿರುಗಬೇಕಾಗಿ ಬರಬಹುದು. ಇನ್ನು ಮುಂದೆ ರಾಕೆಟ್ ಉಡಾವಣೆಗಳು, ಉಪಗ್ರಹಗಳು ಅಥವಾ ಎಲೆಕ್ಟ್ರಿಕ್ ಕಾರು ಉತ್ಪಾದನೆ ಇರುವುದಿಲ್ಲ ಎಂದರು.
ಅಮೆರಿಕ ಅಧ್ಯಕ್ಷರ ಬಜೆಟ್ ಮಸೂದೆಯನ್ನು ಎಲೊನ್ ಮಸ್ಕ್ ಅವರು ಬಲವಾಗಿ ಟೀಕಿಸಿದ ನಂತರ ಮತ್ತು ಜನರ ಬಗ್ಗೆ ಕಾಳಜಿ ವಹಿಸುವ ಹೊಸ ರಾಜಕೀಯ ಪಕ್ಷ ಉದಯಕ್ಕೆ ಇದು ಸರಿಯಾದ ಸಮಯ ಎಂದು ಒತ್ತಿ ಹೇಳಿದ ನಂತರ ಟ್ರಂಪ್ ಅವರ ಇತ್ತೀಚಿನ ಹೇಳಿಕೆ ಬಂದಿದೆ.