ಅಸೀಂ ಮುನೀರ್ ಮತ್ತು ಡೊನಾಲ್ಡ್ ಟ್ರಂಪ್ 
ವಿದೇಶ

ಭಾರತ-ಪಾಕ್ ಘರ್ಷಣೆ; ಇಸ್ರೇಲ್-ಇರಾನ್ ಸಂಘರ್ಷ: ಶ್ವೇತಭವನದಲ್ಲಿ ಪಾಕಿಸ್ತಾನ ಸೇನಾ ಮುಖ್ಯಸ್ಥ ಮುನೀರ್-ಟ್ರಂಪ್ ಔತಣ!

ಮಧ್ಯಪ್ರಾಚ್ಯದಲ್ಲಿ ಇಸ್ರೇಲ್‌ ಮತ್ತು ಇರಾನ್‌ ನಡುವಿನ ಯುದ್ಧದಿಂದ ಉಂಟಾಗಿರುವ ಬಿಕ್ಕಟ್ಟಿನ ಬೆನ್ನಲ್ಲೇ ಕೆನಡಾದಲ್ಲಿ ಆಯೋಜನೆಗೊಂಡಿರುವ ಜಿ7 ರಾಷ್ಟ್ರಗಳ ಶೃಂಗವನ್ನು ಟ್ರಂಪ್‌ ಅರ್ಧಕ್ಕೆ ಮೊಟಕುಗೊಳಿಸಿದ್ದರು.

ವಾಷಿಂಗ್ಟನ್: ಭಾರತ ಮತ್ತು ಪಾಕಿಸ್ತಾನ ನಾಲ್ಕು ದಿನಗಳ ಮಿಲಿಟರಿ ಸಂಘರ್ಷ ಮುಗಿದ ಕೆಲವು ದಿನಗಳ ನಂತರ, ಬುಧವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶ್ವೇತಭವನದಲ್ಲಿ ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರಿಗೆ ಔತಣ ಕೂಟ ಆಯೋಜಿಸಿದ್ದರು.

ಇಸ್ರೇಲ್ ಮತ್ತು ಇರಾನ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆಯೇ ಶ್ವೇತವನದಲ್ಲಿ ಭೋಜನ ಕೂಟ ನಡೆದಿರುವುದು ಕೂತೂಹಲಕ್ಕೆ ಕಾರಣವಾಗಿದೆ. ಇಸ್ಲಾಮಾಬಾದ್ ಟೆಹ್ರಾನ್‌ನೊಂದಿಗಿನ ನಿಕಟ ಸಂಬಂಧಗಳಿಗೆ ಹೆಸರುವಾಸಿಯಾಗಿದೆ. ಶ್ವೇತಭವನದಲ್ಲಿ ಊಟದ ಸಮಯದಲ್ಲಿ ಅಧ್ಯಕ್ಷ ಟ್ರಂಪ್ ಅವರನ್ನು ಮುನೀರ್ ಭೇಟಿಯಾದರು ಎಂದು ಜಿಯೋ ನ್ಯೂಸ್ ವರದಿ ಮಾಡಿದೆ. ಟ್ರಂಪ್ ಮತ್ತು "ಫೀಲ್ಡ್ ಮಾರ್ಷಲ್" ಮುನೀರ್ ನಡುವಿನ ಸಭೆಯಲ್ಲಿ ಏನಾಯಿತು ಎಂಬುದು ತಕ್ಷಣಕ್ಕೆ ತಿಳಿದಿಲ್ಲ.

ಅಮೆರಿಕ ಅಧ್ಯಕ್ಷರು ವಿದೇಶಿ ಸೇನಾ ಮುಖ್ಯಸ್ಥರಿಗೆ ಔತಣ ಕೂಟ ಆಯೋಜಿಸುವುದು ಅಪರೂಪ. ಅಯೂಬ್ ಖಾನ್, ಜಿಯಾ ಉಲ್-ಹಕ್ ಮತ್ತು ಪರ್ವೇಜ್ ಮುಷರಫ್ ಸೇರಿದಂತೆ ಪಾಕಿಸ್ತಾನ ಸೇನಾ ಮುಖ್ಯಸ್ಥರು ಅಂತಹ ಆಹ್ವಾನಗಳನ್ನು ಪಡೆದ ಉದಾಹರಣೆಗಳಿವೆ, ಆದರೆ ಅವರು ಅಧ್ಯಕ್ಷ ಹುದ್ದೆಯನ್ನು ಸಹ ಹೊಂದಿದ್ದರು.

ಶ್ವೇತಭವನದ ಸಂಪುಟ ಕೋಣೆಯಲ್ಲಿ ಅಮೆರಿಕದ ಕಾಲಮಾನ ಪ್ರಕಾರ ಮಧ್ಯಾಹ್ನ 1ಕ್ಕೆ ಭೋಜನಕೂಟ ಆಯೋಜನೆಗೊಂಡಿತ್ತು. ಮಧ್ಯಪ್ರಾಚ್ಯದಲ್ಲಿ ಇಸ್ರೇಲ್‌ ಮತ್ತು ಇರಾನ್‌ ನಡುವಿನ ಯುದ್ಧದಿಂದ ಉಂಟಾಗಿರುವ ಬಿಕ್ಕಟ್ಟಿನ ಬೆನ್ನಲ್ಲೇ ಕೆನಡಾದಲ್ಲಿ ಆಯೋಜನೆಗೊಂಡಿರುವ ಜಿ7 ರಾಷ್ಟ್ರಗಳ ಶೃಂಗವನ್ನು ಟ್ರಂಪ್‌ ಅರ್ಧಕ್ಕೆ ಮೊಟಕುಗೊಳಿಸಿದ್ದರು. ಬುಧವಾರ ಬೆಳಿಗ್ಗೆ ಅವರು ಅಮೆರಿಕಕ್ಕೆ ಮರಳಿದ್ದರು.

ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ಫೋನ್ ಸಂಭಾಷಣೆಯ ಸಮಯದಲ್ಲಿ, ಕೆನಡಾದಿಂದ ಹಿಂತಿರುಗುವ ವೇಳೆ ಅಮೆರಿಕಾಗೆ ಬರಬಹುದೇ ಎಂದು ಟ್ರಂಪ್ ಮೋದಿ ಅವರನ್ನು ಕೇಳಿದರು.

ಆದರೆ, "ಪೂರ್ವ ನಿಗದಿತ ಕಾರ್ಯಕ್ರಮಗಳಿಂದಾಗಿ" ಪ್ರಧಾನಿ ಹಾಗೆ ಮಾಡಲು ಸಾಧ್ಯವಿಲ್ಲ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ತಿಳಿಸಿದ್ದಾರೆ.

ಪಾಕಿಸ್ತಾನಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಭಾರತ ಯಾವುದೇ ಮಧ್ಯಸ್ಥಿಕೆಯನ್ನು ಎಂದಿಗೂ ಒಪ್ಪಿಕೊಂಡಿಲ್ಲ ಮತ್ತು ಎಂದಿಗೂ ಸ್ವೀಕರಿಸುವುದಿಲ್ಲ ಎಂದು ಪ್ರಧಾನಿ ಮೋದಿ ಅಧ್ಯಕ್ಷ ಟ್ರಂಪ್‌ಗೆ ಸ್ಪಷ್ಟಪಡಿಸಿದ್ದರು. ಅಲ್ಲದೆ ಅಂತಹ ಮಧ್ಯಸ್ಥಿಕೆಗಳಿಗೆ ಭಾರತ ಎಂದಿಗೂ ಒಪ್ಪಿಕೊಂಡಿಲ್ಲ ಎಂದು ಅವರು ಪುನರುಚ್ಚರಿಸಿದರು. ಮೋದಿ ಅವರೊಂದಿಗಿನ 35 ನಿಮಿಷಗಳ ಫೋನ್ ಸಂಭಾಷಣೆಯ ಕೆಲವೇ ಗಂಟೆಗಳ ನಂತರ ಟ್ರಂಪ್ ಅವರ ಹೇಳಿಕೆ ಬಂದಿವೆ. ಆ ಸಮಯದಲ್ಲಿ ಮೇ ತಿಂಗಳಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಮಿಲಿಟರಿ ಕಾರ್ಯಾಚರಣೆಗಳನ್ನು ನಿಲ್ಲಿಸುವ ನಿರ್ಧಾರವನ್ನು ಎರಡು ಸೇನೆಗಳ ನಡುವೆ ನೇರವಾಗಿ ತೆಗೆದುಕೊಳ್ಳಲಾಗಿದೆ ಎಂದು ಭಾರತೀಯ ಪ್ರಧಾನಿ ಸ್ಪಷ್ಟಪಡಿಸಿದರು.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ದೂರವಾಣಿ ಕರೆ ಕುರಿತು ಮಾತನಾಡಿದ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ, 'ಕೆನಡಾದಿಂದ ಹಿಂದಿರುಗಿದ ನಂತರ ಮೋದಿ ಅಮೆರಿಕಕ್ಕೆ ಬರಬಹುದೇ ಎಂದು ಟ್ರಂಪ್ ಕೇಳಿದರು. ಆದರೆ ಪೂರ್ವ ನಿಯೋಜಿತ ಕಾರ್ಯಕ್ರಮಗಳಿಂದಾಗಿ ಪ್ರಧಾನಿ ಮೋದಿ ಬರಲು ಸಾಧ್ಯವಿಲ್ಲ. ಆದರೆ ಇಬ್ಬರೂ ನಾಯಕರು ಶೀಘ್ರದಲ್ಲೇ ಭೇಟಿಯಾಗಲು ಒಪ್ಪಿಕೊಂಡರು ಎಂದು ಹೇಳಿದರು.

"ಭಾರತ ಎಂದಿಗೂ ಮಧ್ಯಸ್ಥಿಕೆಯನ್ನು ಒಪ್ಪಿಕೊಂಡಿಲ್ಲ, ಸ್ವೀಕರಿಸುವುದಿಲ್ಲ ಮತ್ತು ಎಂದಿಗೂ ಮಾಡುವುದಿಲ್ಲ" ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಮೋದಿ ಹೇಳಿಕೆ ಉಲ್ಲೇಖಿಸಿ ವರದಿಗಾರರಿಗೆ ತಿಳಿಸಿದರು.

ಅಮೆರಿಕದ ಯಾವುದೇ ಮಧ್ಯಸ್ಥಿಕೆ ಇಲ್ಲದೆ ಭಾರತ ಮತ್ತು ಪಾಕಿಸ್ತಾನ ಕಳೆದ ತಿಂಗಳು ತಮ್ಮ ಮಿಲಿಟರಿ ಕ್ರಮಗಳನ್ನು ನಿಲ್ಲಿಸಿವೆ ಎಂದು ಮೋದಿ ಟ್ರಂಪ್‌ಗೆ ತಿಳಿಸಿದ್ದಾರೆ. ಭಾರತ ಮಧ್ಯಸ್ಥಿಕೆಯನ್ನು "ಎಂದಿಗೂ ಸ್ವೀಕರಿಸುವುದಿಲ್ಲ" ಮತ್ತು ಇಸ್ಲಾಮಾಬಾದ್‌ನ ಕೋರಿಕೆಯ ಮೇರೆಗೆ ಭಾರತ ಮತ್ತು ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳನ್ನು ನಿಲ್ಲಿಸುವ ಕುರಿತು ಚರ್ಚೆಗಳನ್ನು ಪ್ರಾರಂಭಿಸಲಾಗಿದೆ ಎಂದು ಮೋದಿ ದೃಢವಾಗಿ ಹೇಳಿದ್ದಾರೆ ಎಂದು ಮಿಸ್ರಿ ಹೇಳಿದರು.

ಫೀಲ್ಡ್ ಮಾರ್ಶಲ್‌ ಮುನೀರ್ ಅವರನ್ನು ಶ್ವೇತಭವನದ ಔತಣಕೂಟಕ್ಕೆ ಆಹ್ವಾನಿಸಿರುವುದು ಪಾಕಿಸ್ತಾನದ ಪಾಲಿಗೆ ಬಹುದೊಡ್ಡ ರಾಜತಾಂತ್ರಿಕ ಗೆಲುವು ಎಂದು ಪಾಕಿಸ್ತಾನದ ಸುದ್ದಿ ಪತ್ರಿಕೆ ಡಾನ್‌ ವಿಶ್ಲೇಷಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT