ಇಸ್ಲಾಮಾಬಾದ್: ವರುಣಾಘಾತದಿಂದ ಪಾಕಿಸ್ತಾನ ನಲುಗಿದ್ದು, ಮೃತರ ಸಂಖ್ಯೆ 38 ಕ್ಕೆ ಏರಿಕೆಯಾಗಿದೆ. 63 ಮಂದಿ ಗಾಯಗೊಂಡಿದ್ದು, ಮುಂಗಾರು ಪೂರ್ವ ಮಳೆಯು ದೇಶದ ವಿವಿಧ ಭಾಗಗಳಲ್ಲಿ ಅಪಾರ ಹಾನಿಯನ್ನುಂಟುಮಾಡುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜೂನ್ 26 ರಿಂದ ಪ್ರಾರಂಭವಾದ ಮುಂಗಾರು ಪೂರ್ವ ಮಳೆ ದೇಶದ ವಿವಿಧ ಭಾಗಗಳಲ್ಲಿ ಮುಂದುವರೆದಿದ್ದು, ಭಾರಿ ಮಳೆಯಾಗುತ್ತಿದೆ. ವಾಯುವ್ಯದಲ್ಲಿರುವ ಖೈಬರ್-ಪಖ್ತುಂಕ್ವಾ (ಕೆಪಿ) ಪ್ರಾಂತ್ಯದಲ್ಲಿ ಹೆಚ್ಚು ಹಾನಿಯಾಗಿದೆ.
ಖೈಬರ್-ಪಖ್ತುಂಖ್ವಾದ ಸ್ವಾತ್ ಪ್ರದೇಶದಲ್ಲಿ ಶುಕ್ರವಾರ ಸಂಭವಿಸಿದ ಪ್ರವಾಹದಲ್ಲಿ ಒಂದೇ ಕುಟುಂಬದ ಕನಿಷ್ಠ 19 ಜನರು ಸಾವನ್ನಪ್ಪಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (NMDA)ಮಾಹಿತಿ ನೀಡಿದೆ.
ಕುಟುಂಬಕ್ಕೆ ನೆರವಾಗುವಲ್ಲಿ ಪಾಕಿಸ್ತಾನ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಪ್ರಾಂತೀಯ ಸರ್ಕಾರ ವಿಫಲವಾಗಿದೆ ಎಂದು ಅಪಾರ ಟೀಕೆ ವ್ಯಕ್ತವಾಗುತ್ತಿದೆ. ಪಂಜಾಬ್‌ನಲ್ಲಿ ಇನ್ನೂ 12 ಜನರು ಮತ್ತು ಸಿಂಧ್ ಪ್ರಾಂತ್ಯಗಳಲ್ಲಿ ಏಳು ಜನರು ಮಳೆ ಸಂಬಂಧಿತ ಘಟನೆಗಳಲ್ಲಿ ಸಾವನ್ನಪ್ಪಿದ್ದಾರೆ. ಪ್ರತ್ಯೇಕ ಘಟನೆಗಳಲ್ಲಿ ಪಂಜಾಬ್‌ನಲ್ಲಿ 41 ಜನರು, ಸಿಂಧ್‌ನಲ್ಲಿ 16 ಮತ್ತು ಖೈಬರ್-ಪಖ್ತುಂಖ್ವಾದಲ್ಲಿ ಆರು ಜನರು ಗಾಯಗೊಂಡಿದ್ದಾರೆ.
ದೇಶಾದ್ಯಂತ 63 ಮನೆಗಳು ಹಾನಿಗೊಳಗಾಗಿವೆ ಮತ್ತು 30 ಜಾನುವಾರುಗಳು ಸಾವನ್ನಪ್ಪಿವೆ. ಮಳೆ ಮತ್ತು ಪ್ರವಾಹದಲ್ಲಿ ರಸ್ತೆಗಳು ಮತ್ತು ಸೇತುವೆಗಳು ಸಹ ಹಾನಿಗೊಳಗಾಗಿವೆ. ಸಂತ್ರಸ್ತರಿಗೆ ನೆರವಾಗಲು ಪುನರ್ವಸತಿ ಪ್ರಯತ್ನಗಳು ನಡೆಯುತ್ತಿವೆ
ಮುಂದಿನ 24 ಗಂಟೆಗಳಲ್ಲಿ ಚದುರಿದಂತೆ ಮಳೆಯನ್ನು ನಿರೀಕ್ಷಿಸಲಾಗಿದೆ ಮತ್ತು ಮುಂದಿನ 24 ರಿಂದ 48 ಗಂಟೆಗಳಲ್ಲಿ ಪಾಕಿಸ್ತಾನದ ವಿವಿಧ ಪ್ರದೇಶಗಳಲ್ಲಿ ಹಠಾತ್ ಪ್ರವಾಹದ ಬಗ್ಗೆ ಎಚ್ಚರಿಕೆ ನೀಡಲಾಗಿದೆ ಎಂದು NDMA ತಿಳಿಸಿದೆ.